ತುಮಕೂರಿನಲ್ಲಿ ಮೋದಿ ಕಾರ್ಯಕ್ರಮ: ಕುಡಿಯಲು ನೀರು, ಊಟವಿಲ್ಲದೆ ಪರದಾಡಿದ ಪೊಲೀಸ್ ಸಿಬ್ಬಂದಿ
ನಾಳೆ (ಫೆ.6) ಕಲ್ಪತರು ನಾಡು ತುಮಕೂರಿಗೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಲಿರುವ ಹಿನ್ನಲೆ ಬಿಗಿ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದೆ. ತುಮಕೂರು ಎಸ್ಪಿ ಸೇರಿದಂತೆ ಒಟ್ಟು 6 ಎಸ್ಪಿಗಳಗಳು ಭದ್ರತೆ ನೇತೃತ್ವ ವಹಿಸಿದ್ದಾರೆ. ನಾಳೆ ಭದ್ರತೆಗೆ ಒಟ್ಟು 1,600ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.
ತುಮಕೂರು: ನಾಳೆ (ಫೆ.6) ಕಲ್ಪತರು ನಾಡು ತುಮಕೂರಿಗೆ ಪ್ರಧಾನಿ ನರೇಂದ್ರ ಮೋದಿ (PM Narendra Modi) ಆಗಮಿಸುತ್ತಿದ್ದು, ಬಿಗಿ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದೆ. ತುಮಕೂರು (Tumakuru) ಎಸ್ಪಿ ಸೇರಿದಂತೆ ಒಟ್ಟು 6 ಎಸ್ಪಿಗಳು ಭದ್ರತೆ ನೇತೃತ್ವವಹಿಸಿದ್ದು, 19 ಡಿವೈಎಸ್ಪಿ, 119 ಸಿಪಿಐ, 239 ಪಿಎಸ್ಐ, 1202 ಎಎಸ್ಐ, ಹೆಡ್ಕಾನ್ಸ್ಟೇಬಲ್, 400 ಕಾನ್ಸ್ಟೇಬಲ್, ಹೋಮ್ಗಾರ್ಡ್, 14 ಡಿಎಆರ್ ಮತ್ತು 12 ಕೆಎಸ್ಆರ್ಪಿ ತುಕಡಿ ನಿಯೋಜಿಸಲಾಗಿದೆ. ಒಟ್ಟಾರೆಯಾಗಿ 2ಸಾವಿರಕ್ಕೂ ಹೆಚ್ಚು ಪೊಲೀಸರನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ. ರಕ್ಷಣಾ ಕವಚದಂತೆ ಕಾರ್ಯನಿರ್ವಹಿಸುವ ಪೊಲೀಸರಿಗೆ ಸರಿಯಾದ ಊಟದ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಮಾಡಿಲ್ಲ. ಪರಿಣಾಮ ಅನ್ನ ಮತ್ತು ನೀರಿಗಾಗಿ ಸಿಬ್ಬಂದಿ ಪರದಾಡುವಂತಾಯಿತು.
ನಾಳೆ ಬೆಂಗಳೂರಿಗೆ ಆಗಮಿಸಲಿರುವ ಮೋದಿ ಅವರು ಬಿದರೆಹಳ್ಳ ಕಾವಲ್‌ನಲ್ಲಿ ಹೆಚ್‌ಎಎಲ್ ನೂತನ ಘಟಕ ಉದ್ಘಾಟನೆ ಮಾಡಲಿದ್ದಾರೆ. ಈ ಕಾರ್ಯಕ್ರಮದ ಭದ್ರತೆಗಾಗಿ 2 ಸಾವಿರ ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಆದರೆ ಕಾರ್ಯಕ್ರಮದ ಆಯೋಜಕರು ಸಿಬ್ಬಂದಿಗಳಿಗೆ ಊಟ, ನೀರಿನ ವ್ಯವಸ್ಥೆ ಸರಿಯಾಗಿ ಮಾಡದ ಪರಿಣಾಮ ನಿನ್ನೆ ರಾತ್ರಿಯಿಂದಲೂ ಸಿಬ್ಬಂದಿ ಸರಿಯಾಗಿ ಊಟ ಸಿಗದೆ ಪರದಾಟ ನಡೆಸಿದ್ದಾರೆ. ಅಲ್ಲದೆ, ಊಟದ ಪೊಟ್ಟಣ, ನೀರು ಪಡೆಯಲು ಪೊಲೀಸ್ ಸಿಬ್ಬಂದಿ ಮುಗಿಬಿದ್ದರು. ಎರಡು ದಿನದಿಂದ ಭದ್ರತೆಗಾಗಿ ನಿಯೋಜನೆಗೊಂಡಿರುವ ಪೊಲೀಸರು ಬಿಸಿಲಿನಲ್ಲಿ ನಿಂತಿದ್ದರೂ ಕನಿಷ್ಠ ನೀರಿನ ವ್ಯವಸ್ಥೆ ಕೂಡ ಮಾಡದೆ ಆಯೋಜಕರು ನಿರ್ಲಕ್ಷ್ಯ ತೋರಿದ್ದಾರೆ.
ಇದನ್ನೂ ಓದಿ: Chopper Factory: ತುಮಕೂರಿನಲ್ಲಿ ದೇಶದ ಅತಿದೊಡ್ಡ ಹೆಲಿಕಾಪ್ಟರ್ ಫ್ಯಾಕ್ಟರಿ: ಸೋಮವಾರ ಪ್ರಧಾನಿಯಿಂದ ಉದ್ಘಾಟನೆ
ನಾಳೆ ತುಮಕೂರಿಗೆ ಪ್ರಧಾನ ಮಂತ್ರಿ ಆಗಮಿಸುತ್ತಿರುವ ಹಿನ್ನಲೆ ಸಂಚಾರ ಮಾರ್ಗದಲ್ಲಿ ಬದಲಾವಣೆ ಮಾಡಲಾಗಿದೆ. ನಿಟ್ಟೂರು ಕಡೆಯಿಂದ ಸಂಚರಿಸುವ ವಾಹನಗಳು ನಿಟ್ಟೂರು-ಟಿಬಿ ಕ್ರಾಸ್-ತುರುವೇಕೆರೆ ಮಾರ್ಗವಾಗಿ ಕೆಬಿ ಕ್ರಾಸ್ಗೆ ಸಂಚರಿಸುವಂತೆ ಹಾಗೂ ತಿಪಟೂರಿನಿಂದ ಬರುವ ವಾಹನಗಳು ಕೆಬಿ ಕ್ರಾಸ್-ತುರುವೇಕೆರೆ-ಟಿಬಿ ಕ್ರಾಸ್ ಮಾರ್ಗವಾಗಿ ನಿಟ್ಟೂರಿಗೆ ಸಂಚರಿಸುವಂತೆ ಜಿಲ್ಲಾಧಿಕಾರಿ ಸೂಚಿಸಿದ್ದಾರೆ.
ಗುಬ್ಬಿ ತಾಲೂಕಿನ ಬಿದರೆಹಳ್ಳ ಕಾವಲ್ ಎಂಬಲ್ಲಿ 615 ಎಕರೆ ಜಾಗದಲ್ಲಿ ಈ ಹೆಲಿಕಾಪ್ಟರ್ ಘಟಕ ನಿರ್ಮಾಣವಾಗಿದೆ. ಹೆಲಿಪ್ಯಾಡ್, ಫ್ಲೈಟ್ ಹ್ಯಾಂಗಾರ್, ಅಡ್ಮಿನ್ ಕಟ್ಟಡ ಸೇರಿ ಕೆಲವಾರು ಸೌಲಭ್ಯಗಳನ್ನು ಈಗ ನಿರ್ಮಿಸಲಾಗಿದೆ. ಸದ್ಯ ನಾಳೆಯಿಂದ ಮೊದಲ ಹಂತದ ಕಾರ್ಯಾಚರಣೆಗಳು ನಡೆಯುತ್ತವೆ ಎನ್ನಲಾಗಿದೆ. 2016ರಲ್ಲಿ ಪ್ರಧಾನಿಯವರೇ (PM Narendra Modi) ಈ ಘಟಕ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಿದ್ದರು. ಹೆಚ್‌ಎಎಲ್ ಬಳಿ ಭಾರತೀಯ ಮಿಲಟರಿಗೆ ಯುದ್ಧ ಹೆಲಿಕಾಪ್ಟರ್ ನಿರ್ಮಿಸುವ ಬಹಳಷ್ಟು ಯೋಜನೆಗಳಿವೆ. ಬೆಂಗಳೂರಿನಲ್ಲಿರುವ ಹೆಚ್ಎಲ್ನ ಮುಖ್ಯ ತಯಾರಕಾ ಸಂಕೀರ್ಣ ಸಾಕಾಗದೇ ಇರುವುದರಿಂದ ತುಮಕೂರಿನಲ್ಲಿ ಹೊಸದಾದ ಬೃಹತ್ ಘಟಕ ನಿರ್ಮಿಸಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:03 pm, Sun, 5 February 23