ತುಮಕೂರು, ಡಿ.21: ಜಿಲ್ಲೆಯಲ್ಲಿ ಸರ್ಕಾರಿ ಶಾಲಾ ಅಭಿಯಾನ ಮುಂದುವರೆದಿದ್ದು, ಬಹುತೇಕ ಹಲವು ಕಡೆ ಸರ್ಕಾರಿ ಶಾಲೆಗಳು ಸಂಪೂರ್ಣ ಅವ್ಯವಸ್ಥೆ ಶೀಥಲಾವ್ಯವಸ್ಥೆಗೊಂಡಿವೆ. ಈ ಪೈಕಿ ಸಹಕಾರಿ ಸಚಿವ ಕೆಎನ್ ರಾಜಣ್ಣ (K.N. Rajanna) ಸ್ವಕ್ಷೇತ್ರದಲ್ಲಿರುವ ಮಧುಗಿರಿ ಪಟ್ಟಣದ (Madhugiri Town) ಗುರುವಡೇರಹಳ್ಳಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯೂ ಒಂದು. ಈ ಶಾಲೆಯಲ್ಲಿ ಶಿಕ್ಷಕರು, ಮಕ್ಕಳು ಭಯದಲ್ಲೇ ದಿನಗಳನ್ನು ಕಳೆಯುತ್ತಿದ್ದಾರೆ. ಒಂದಷ್ಟು ಮಕ್ಕಳು ಶಾಲೆಗೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರ ಆಪ್ತರಾಗಿರುವ ಸಹಕಾರಿ ಸಚಿವ ರಾಜಣ್ಣ ಅವರ ಸ್ವಕ್ಷೇತ್ರದ ಮಧುಗಿರಿ ಪಟ್ಟಣದ ಗುರುವಡೇರಹಳ್ಳಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ದುಸ್ಥಿತಿಗೆ ಬಂದು ವರ್ಷಗಳಾಗಿವೆ. ಈ ಬಗ್ಗೆ ನೂತನವಾಗಿ ಕಟ್ಟಡ ನಿರ್ಮಿಸಲು ಮನವಿ ಮಾಡಿದರೂ ಅಧಿಕಾರಿಗಳು ಮಾತ್ರ ತಲೆ ಕೆಡೆಸಿಕೊಂಡಿಲ್ಲ.
ಈ ಬಗ್ಗೆ ಸ್ವತಃ ಶಾಲಾ ಶಿಕ್ಷಕಿ ಶಾಂತಮ್ಮ ಕೂಡ ಬೇರಸ ವ್ಯಕ್ತಪಡಿಸಿದ್ದು, ಶಾಲೆಯ ಒಳಗೆ ಪಾಠ ಮಾಡಲು ಭಯ ಆಗುತ್ತಿದೆ. ಅಲ್ಲದೆ, ಶಾಲೆಯ ಮೇಲ್ಚಾವಣಿ ಕೂಡ ಬೀಳುವ ಹಂತದಲ್ಲಿ ಇದ್ದು, ಅದರ ಕೆಳಗೆ ಮಕ್ಕಳಿಗೆ ಪಾಠ ಮಾಡಲಾಗುತ್ತಿದೆ ಎಂದರು.
ಇದನ್ನೂ ಓದಿ: ತುಮಕೂರಿನ ಸರ್ಕಾರಿ ಶಾಲೆ, ಅಂಗನವಾಡಿ ಕೇಂದ್ರ ದುಸ್ಥಿತಿ; ಜೀವ ಭಯದಲ್ಲೇ ಪಾಠ ಕೇಳುವ ಮಕ್ಕಳು
ಜೀವಹಾನಿ ಸಂಭವಿಸುವ ಸಾಧ್ಯತೆ ಹಿನ್ನೆಲೆ ಪಕ್ಕದಲ್ಲಿ ಇರುವ ಒಂದು ಕೊಠಡಿಯಲ್ಲೇ ಶಿಕ್ಷಕರು ಕಚೇರಿ ಹಾಗೂ ಮಕ್ಕಳಿಗೆ ಪಾಠ ಮಾಡಲು ವ್ಯವಸ್ಥೆ ಮಾಡಿದ್ದಾರೆ. ಬಡವರ ಮಕ್ಕಳು ಬಹುತೇಕ ಸರ್ಕಾರಿ ಶಾಲೆಗೆ ಬರುತ್ತಾರೆ. ಸದ್ಯ ಇಲ್ಲಿನ ಕೊಠಡಿ ವ್ಯವಸ್ಥೆ ನೋಡಿ ಬರುವ ಮಕ್ಕಳು ಕೂಡ ಬೇರೆಡೆ ಹೋಗಿದ್ದಾರಂತೆ. ಪೋಷಕರು ಕೂಡ ತಮ್ಮ ಮಕ್ಕಳನ್ನ ಶಾಲೆಗೆ ಕಳಿಸಲು ಹಿಂದೇಟು ಹಾಕುತ್ತಿದ್ದು, ಸರ್ಕಾರ ಹೊಸದಾಗಿ ಕಟ್ಟಡ ನೀಡಿದರೆ ಬಡವರ ಮಕ್ಕಳು ಓದಬಹುದು ಎಂದು ಸ್ಥಳೀಯ ನಿವಾಸಿ ವಿಶಾಲಾಕ್ಷಿ ಹೇಳಿದ್ದಾರೆ.
ಮಾಹಿತಿ ಪ್ರಕಾರ, ಮಧುಗಿರಿ ತಾಲೂಕಿನಲ್ಲಿ ಒಟ್ಟು ನೂರಕ್ಕೂ ಹೆಚ್ಚು ಶಾಲೆಗಳು ದುಸ್ಥಿತಿಗೆ ತಲುಪಿದ್ದು ಶಾಲಾ ಮಕ್ಕಳಿಗೆ ಪಾಠ ಮಾಡಲು ತೀವ್ರ ತೊಂದರೆ ಆಗುತ್ತಿದೆ. ಸದ್ಯ ಇನ್ನಾದರೂ ಸರ್ಕಾರ ಹೊಸದಾಗಿ ಕಟ್ಟಡ ನಿರ್ಮಾಣ ಮಾಡುತ್ತಾ ಎಂಬುದನ್ನು ಕಾದುನೋಡಬೇಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:12 am, Thu, 21 December 23