ತುಮಕೂರು: ಜಿಲ್ಲೆಯ ಗುಬ್ಬಿ ತಾಲೂಕಿನ ಮಡೇನಹಳ್ಳಿ ಗ್ರಾಮದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಇಟ್ಟಿದ್ದ ಬೋನಿಗೆ ಹೆಣ್ಣು ಚಿರತೆ ಬಿದ್ದಿದ್ದು, ಹಲವು ದಿನಗಳಿಂದ ಉಪಟಳ ನೀಡುತ್ತಿದ್ದ ಚಿರತೆ ಕೊನೆಗೂ ಸೆರೆಯಾಗಿದೆ. ಇತ್ತೀಚೆಗೆ ಕುರಿ, ಮೇಕೆ, ನಾಯಿ ಮೇಲೆ ದಾಳಿ ಮಾಡಿದ್ದ ಚಿರತೆಯಿಂದ ಬೇಸತ್ತಿದ್ದ ಗ್ರಾಮಸ್ಥರು ಇದೀಗ ಚಿರತೆ ಸೆರೆಯಿಂದ ಕೊಂಚ ನಿರಾಳರಾಗಿದ್ದಾರೆ. ಇನ್ನು ಗುಬ್ಬಿ ವಲಯ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಚಿರತೆಯನ್ನ ಸ್ಥಳಾಂತರ ಮಾಡಿದ್ದಾರೆ.
ಅರೇತಿಪುರ ಗ್ರಾಮದಲ್ಲಿ 3 ಕುರಿಗಳ ಮೇಲೆ ಚಿರತೆ ದಾಳಿ
ಮಂಡ್ಯ: ತಡ ರಾತ್ರಿ ಕೊಟ್ಟಿಗೆಗೆ ನುಗ್ಗಿ 3 ಕುರಿಗಳ ಮೇಲೆ ಚಿರತೆ ದಾಳಿ ಮಾಡಿರುವ ಘಟನೆ ಜಿಲ್ಲೆಯ ಮದ್ದೂರು ತಾಲೂಕಿನ ಅರೇತಿಪುರ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಶ್ರೀನಿವಾಸ ಎಂಬುವರಿಗೆ ಸೇರಿದ ಕುರಿಗಳು ಇದಾಗಿದ್ದು, ಮೂರು ಕುರಿ ಮರಿಗಳನ್ನ ತಿಂದು ಒಂದು ಮರಿಯನ್ನ ಎಳೆದೊಯ್ದಿದೆ. ಬೆಳಗ್ಗೆದ್ದು ಕೊಟ್ಟಿಗೆ ಬಳಿ ಹೋದಾಗ ಪ್ರಕರಣ ಬೆಳಕಿಗೆ ಬಂದಿದೆ. ಕಳೆದೊಂದು ತಿಂಗಳಿನಿಂದ ಹೊಲ ಗದ್ದೆಗಳಲ್ಲಿ ಕಾಣಿಸಿಕೊಂಡು ಆತಂಕ ಸೃಷ್ಠಿಸಿದ್ದ ಚಿರತೆ ಇದೀಗ ಕುರಿಯನ್ನ ತಿಂದುಹಾಕಿದೆ. ಸದ್ಯ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿರುವ ಗ್ರಾಮಸ್ಥರು, ಕೂಡಲೇ ಚಿರತೆಯನ್ನ ಸೆರೆ ಹಿಡಿಯುವಂತೆ ಆಗ್ರಹಿಸಿದ್ದಾರೆ.
ಕಳೆದ ಮೂರು ದಿನಗಳಿಂದ ಬೆಟ್ಟದಲ್ಲಿ ಪ್ರತ್ಯಕ್ಷವಾಗುತ್ತಿರುವ ಚಿರತೆ; ಗ್ರಾಮಸ್ಥರಲ್ಲಿ ಆತಂಕ
ಕೊಪ್ಪಳ: ತಾಲೂಕಿನ ಬಸಾಪುರ ಗ್ರಾಮದ ಬೆಟ್ಟದಲ್ಲಿ ಕಳೆದ ಮೂರು ದಿನಗಳಿಂದ ಚಿರತೆ ಪ್ರತ್ಯಕ್ಷವಾಗುತ್ತಿದ್ದು, ಚಿರತೆ ಕಾಣಿಸಿಕೊಂಡಿದ್ದರಿಂದ ಬಸಾಪುರ ಗ್ರಾಮಸ್ಥರಲ್ಲಿ ಆತಂಕ ಮೂಡಿದೆ. ಸಂಜೆಯಾಗುತ್ತಲೇ ಪ್ರತ್ಯಕ್ಷವಾಗುತ್ತಿರೋ ಚಿರತೆ, ರಾತ್ರಿವೇಳೆ ಅಕ್ಕಪಕ್ಕ ಬೆಟ್ಟದ ಸಮೀಪದ ಗ್ರಾಮಗಳಲ್ಲಿ ಓಡಾಡುತ್ತಿದ್ದು, ಎರಡು ಮೂರು ದಿನಗಳಿಂದ ಕುರಿಮರಿಗಳನ್ನ ಭೇಟೆಯಾಡುತ್ತಿದೆಯಂತೆ. ಚಿರತೆ ಪ್ರತ್ಯಕ್ಷತೆಯಿಂದ ಸ್ಥಳೀಯ ಜನರಲ್ಲಿ ಆತಂಕ ಮೂಡಿದ್ದು, ಕೂಡಲೇ ಚಿರತೆ ಸೆರೆ ಹಿಡಿಯುವಂತೆ ಅರಣ್ಯ ಇಲಾಖೆಗೆ ಗ್ರಾಮಸ್ಥರ ಮನವಿ ಮಾಡಿದ್ದಾರೆ.