ತುಮಕೂರು, ಜುಲೈ 12: ಎಂಜಿಯರೊಬ್ಬರು ಮೃತಪಟ್ಟು ಒಂದು ವರ್ಷವಾದರೂ ಅವರ ಹೆಸರಿನಲ್ಲಿ ಸರ್ಕಾರಿ ಕಡತಗಳಿಗೆ ಸಹಿ ಹಾಕಲಾಗುತ್ತಿದೆ. ಮೃತ ಎಂಜಿನಿಯರ್‌ನ ನಕಲಿ ಸಹಿ, ಸರ್ಕಾರದ ಅನುದಾನ ದುರ್ಬಳಕೆ ಮಾಡಲಾಗುತ್ತಿದೆ ಎಂಬ ಆರೋಪ ತುಮಕೂರಿನಲ್ಲಿ ಕೇಳಿಬಂದಿದೆ. ಈ ಬಗ್ಗೆ ತುಮಕೂರು ಜಿಲ್ಲೆ ಸಿರಾದ ಸರ್ವ ಸದಸ್ಯರ ಸಾಮಾನ್ಯ ಸಭೆಯಲ್ಲಿ ಗಂಭೀರ ಆರೋಪ ಮಾಡಲಾಗಿದೆ. ಜತೆಗೆ, ಭ್ರಷ್ಟಾಚಾರ ಕಡಿವಾಣಕ್ಕೆ ಸಿರಾ ನಗರಸಭೆ ಸದಸ್ಯರು ಒಕ್ಕೊರಲಿನಿಂದ ಆಗ್ರಹಿಸಿದ್ದಾರೆ.
ಎಂಜಿನಿಯರ್ ಸೇತುರಾಂ ಸಿಂಗ್ ಮೃತಪಟ್ಟು ಒಂದು ವರ್ಷ ಕಳೆದಿದೆ. ಆದರೆ, ಸೇತುರಾಂ ಸಿಂಗ್ ಹೆಸರಲ್ಲಿ ಹಳೆಯ ಕಡತಗಳಿಗೆ ನಕಲಿ ಸಹಿ ಹಾಕಿ ಅನುದಾನ ದುರ್ಬಳಕೆಯಾಗಿದೆ. ಸಹಿ ದುರ್ಬಳಕೆ ತಡೆಗೆ ಆಗ್ರಹಿಸಿ ಮೃತ ಎಂಜಿನಿಯರ್ ಪತ್ನಿ ನಗರಸಭೆಗೆ ದೂರು ನೀಡಿದ್ದಾರೆ. ದೂರು ಆಧರಿಸಿ ಕ್ರಮ ಕೈಗೊಳ್ಳುವಂತೆ ನಗರಸಭೆ ಸದಸ್ಯರಾದ ಅಜಯ್ ಕುಮಾರ್, ಲಕ್ಷ್ಮಿಕಾಂತ್, ಕೃಷ್ಣಪ್ಪ ಸೇರಿ ಹಲವು ಸದಸ್ಯರು ಒತ್ತಾಯಿಸಿದ್ದಾರೆ.
ದೆಹಲಿ ವಿಶೇಷ ಪ್ರತಿನಿಧಿ ಶಾಸಕ ಟಿಬಿ ಜಯಚಂದ್ರ, ಎಂಎಲ್‌ಸಿ ಚಿದಾನಂದ್ ಸಮ್ಮುಖದಲ್ಲೇ ನಗರಸಭೆ ಸದಸ್ಯರು ಆರೋಪ ಮಾಡಿದ್ದಾರೆ. ಅಷ್ಟೇ ಅಲ್ಲದೆ, ವಿಧಾನ ಪರಿಷತ್ ಸದಸ್ಯ ಚಿದಾನಂದ್ ಲೋಕಾಯುಕ್ತ ತನಿಖೆಗೆ ಆಗ್ರಹಿಸಿದ್ದಾರೆ. ಸಿರಾ ನಗರಸಭೆ ಅಧ್ಯಕ್ಷೆ ಪೂಜಾ ನೇತೃತ್ವದಲ್ಲಿ ಸರ್ವ ಸದಸ್ಯರ ಸಾಮಾನ್ಯ ಸಭೆ ನಡೆದಿದೆ.
ತುಮಕೂರು ಜಿಲ್ಲೆಯ ಪಾವಗಡ ಪಟ್ಟಣದ ಬಾಲಾಜಿ ಲೇಔಟ್ನಲ್ಲಿ ಗಾಂಜಾ ಸಾಗಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಆಟೋದಲ್ಲಿ ನಿಂತಿದ್ದವರನ್ನು ಗಮನಿಸಿ ಅನುಮಾನಗೊಂಡು ಪರಿಶೀಲನೆ ನಡೆಸಿದಾಗ 800 ಗ್ರಾಂ ಗಾಂಜಾ ಪತ್ತೆಯಾಗಿದೆ. ಗೌಸ್ ಹಾಗೂ ಕುಮಾರ್ ಬಂಧಿತ ಆರೋಪಿಗಳಾಗಿದ್ದಾರೆ. ಆಟೋ ಹಾಗೂ 800 ಗ್ರಾಂ ಗಾಂಜಾ ವಶಕ್ಕೆ ಪಡೆಯಲಾಗಿದೆ.
ವರದಕ್ಷಿಣೆ ಕಿರುಕುಳ ಆರೋಪದ ಬೆನ್ನಲ್ಲೇ ತಿಪಟೂರು ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಕುಮಾರಸ್ವಾಮಿ ಕುಟುಂಬ ನಾಪತ್ತೆಯಾಗಿದೆ. ಕುಮಾರಸ್ವಾಮಿ ಪುತ್ರ ನಿಖಿಲ್ ವಿರುದ್ಧ ವರದಕ್ಷಿಣೆ ಕಿರುಕುಳ ಆರೋಪ ದಾಖಲಾಗಿತ್ತು. ಪ್ರಾಂಶುಪಾಲ ಕುಮಾರಸ್ವಾಮಿ ಹಾಗೂ ಪುತ್ರ ನಿಖಿಲ್ ವಿರುದ್ಧ ಅವರ ಸೊಸೆ ಪುಷ್ಪಾ ದೂರು ನೀಡಿದ್ದರು.
ಇದನ್ನೂ ಓದಿ: ತುಮಕೂರು ಹೆಚ್ಪಿ ಪೆಟ್ರೋಲ್ ಬಂಕ್ನಲ್ಲಿ ವಂಚನೆ, ₹ 110ಕ್ಕೆ ಕೇವಲ 300ಮಿಲೀ ಪೆಟ್ರೋಲ್!
ತಿಪಟೂರು ನಗರದ ಚಂದ್ರಶೇಖರ್ ಪುತ್ರಿ ಪುಷ್ಪ ಜೊತೆ ಸುಮಾರು 40 ಲಕ್ಷ ರೂಪಾಯಿ ಖರ್ಚು ಮಾಡಿ ಮದುವೆ ಮಾಡಲಾಗಿತ್ತು.
ಮದುವೆಯಾದ ದಿನದಿಂದಲೂ ವರದಕ್ಷಿಣೆಗಾಗಿ ಪ್ರಾಂಶುಪಾಲ ಕುಟುಂಬ ಪೀಡಿಸುತ್ತಿತ್ತು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಕಿರಕುಳ ತಾಳಲಾರದೆ ತಿಪಟೂರು ನಗರ ಪೊಲೀಸ್ ಠಾಣೆಗೆ ಪುಷ್ಪಾ ದೂರು ದಾಖಲಿಸಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ