ತುಮಕೂರು, ನ.05: ನಿಧಿ ಆಸೆ ತೋರಿಸಿ 16 ಲಕ್ಷ ಹಣ ಪಡೆದಿದ್ದ ಜ್ಯೋತಿಷಿಯನ್ನು ಕಿಡ್ನಾಪ್ (Kidnap) ಮಾಡಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ತುಮಕೂರು ಜಿಲ್ಲೆ ಪಾವಗಡ ಪೊಲೀಸರು ಕಾರ್ಯಾಚರಣೆ ನಡೆಸಿ ಕಿಡ್ನಾಪ್ ಟೀಂ ಬಂಧಿಸಿದ್ದಾರೆ. ಬೆಂಗಳೂರಿನ ಕಮಲಾನಗರದ ಶಿವರಾಜ್(32), ಅನಂತಕೃಷ್ಣ(21), ಆಂಧ್ರ ಮೂಲದ ಕೋತಲಗುಟ್ಟದ ನರೇಶ್(25) ಬಂಧಿತರು. ಮತ್ತೋರ್ವ ಆರೋಪಿಗಾಗಿ ಶೋಧ ಕಾರ್ಯ ನಡೆಯುತ್ತಿದೆ. ಆರೋಪಿಗಳನ್ನು ಅರೆಸ್ಟ್ ಮಾಡಿ ಜ್ಯೋತಿಷಿ ರಾಮಣ್ಣನನ್ನು ರಕ್ಷಿಸಲಾಗಿದೆ.
ಜ್ಯೋತಿಷಿ ರಾಮಣ್ಣನವರು ನಿಧಿ ನಿಕ್ಷೇಪ ತೋರಿಸುವುದಾಗಿ ನಂಬಿಸಿ 16 ಲಕ್ಷ ರೂ. ಹಣ ಪಡೆದುಕೊಂಡಿದ್ದರು. ಆದರೆ ನಿಧಿಯೂ ತೋರಿಸದೇ, ಹಣವೂ ವಾಪಸ್ ನೀಡದೇ ಇದ್ದ ಹಿನ್ನೆಲೆ ಹಣ ಕೊಟ್ಟಿದ್ದವರೇ ಕಿಡ್ನಾಪ್ ಮಾಡಿದ್ದರು. ಬೈಕ್ನಲ್ಲಿ ಹೊರಟಿದ್ದ ಜ್ಯೋತಿಷಿ ರಾಮಣ್ಣರನ್ನ ಎರಡು ಕಾರುಗಳಲ್ಲಿ ಚೇಸ್ ಮಾಡಿ ಪಾವಗಡ ಅರಣ್ಯ ಇಲಾಖೆ ಕಚೇರಿ ಎದುರು ಕಿಡ್ನಾಪ್ ಮಾಡಲಾಗಿತ್ತು. ಬಳಿಕ ರಾಮಣ್ಣನ ಪುತ್ರನಿಗೆ ಕರೆ ಮಾಡಿ 16 ಲಕ್ಷ ಕೊಟ್ಟು ನಿಮ್ಮ ತಂದೆಯನ್ನ ಕರೆದುಕೊಂಡು ಹೋಗಿ ಎಂದು ಬೆದರಿಕೆ ಹಾಕಿದ್ದರು. ನಿಮ್ಮ ತಂದೆ 16 ಲಕ್ಷ ಸಾಲ ಪಡೆದಿದ್ದರು, ಅದನ್ನು ನೀಡಿ ತಂದೆ ಬಿಡಿಸಿಕೊಂಡು ಹೋಗಿ ಎಂದಿದ್ದರು. ಆತಂಕಕ್ಕೊಳಗಾದ ಕುಟುಂಬಸ್ಥರು ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರು ದಾಖಲಿಸಿಕೊಂಡ ಪೊಲೀಸರು ಕಾರ್ಯಾಚರಣೆ ನಡೆಸಿ ಬೆಂಗಳೂರಿನ ಉಳ್ಳಾಲ ಬಳಿ ರಾಮಣ್ಣನ ರಕ್ಷಣೆ ಮಾಡಿದ್ದಾರೆ. ಹಾಗೂ ಆರೋಪಿಗಳನ್ನು ಬಂಧಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಗಣಿ-ಭೂವಿಜ್ಞಾನ ಇಲಾಖೆ ಲೇಡಿ ಅಧಿಕಾರಿಯ ಬರ್ಬರ ಹತ್ಯೆ, ಕಾರಣವೇನು?
ಇನ್ನು ಮತ್ತೊಂದೆಡೆ ಪೊಲೀಸರ ವಶದಲ್ಲಿದ್ದ ವ್ಯಕ್ತಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾರೆ. ತುರುವೇಕೆರೆ ಪೊಲೀಸರ ಕಿರುಕುಳದಿಂದಲೇ ಸಾವು ಸಂಭವಿಸಿರುವ ಆರೋಪ ಕೇಳಿ ಬಂದಿದೆ. ಅ.23ರಂದು ಪೊಲೀಸ್ ವಶದಲ್ಲಿದ್ದ ಕುಮಾರ್ ಆಚಾರ್(48) ಸಾವನ್ನಪ್ಪಿದ್ದಾರೆ. ವಿಠಲದೇವರಹಳ್ಳಿ ಬಳಿ ಇಸ್ಪಿಟ್ ಆಡುತ್ತಿದ್ದರೆಂದು ಪೊಲೀಸರು ದಾಳಿ ನಡೆಸಿದ್ದರು. ಈ ವೇಳೆ ನಾಲ್ವರನ್ನ ವಶಕ್ಕೆ ಪಡೆದು ಪೊಲೀಸ್ ಠಾಣೆಗೆ ಕರೆದುಕೊಂಡು ಬರುವಾಗ ಕುಮಾರ್ ಆಚಾರ್ ಮೃತಪಟ್ಟಿದ್ದರು. ಪೊಲೀಸರೇ ಕುಮಾರ್ ಆಚಾರ್ ಸಾವಿಗೆ ಕಾರಣ ಎಂದು ಸಂಬಂಧಿಕರು ಹಾಗೂ ಮಾಜಿ ಶಾಸಕ ಮಸಾಲೆ ಜಯರಾಮ್ ಆರೋಪಿಸಿದ್ದಾರೆ. ಆದರೆ ಕುಮಾರ್ ಆಚಾರ್ನ ಸಾವನ್ನ ಸಹಜ ಸಾವು ಎಂದು ಪೊಲೀಸರು ದಾಖಲಿಸಿದ್ದಾರೆ. ಸಾವಿಗೆ ನ್ಯಾಯ ಒದಗಿಸಿ ಪೊಲೀಸರ ವಿರುದ್ಧ ಕ್ರಮ ಜರುಗಿಸಬೇಕೆಂದು ಕುಟುಂಬಸ್ಥರು ಒತ್ತಾಯಿಸಿದ್ದಾರೆ. ತುರುವೇಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 12:52 pm, Sun, 5 November 23