ತುಮಕೂರು ವಿಶ್ವ ವಿದ್ಯಾಲಯದ ನೂತನ ಕ್ಯಾಂಪಸ್ (Tumkur University New Campus) ಕಾಮಗಾರಿ ಕುಂಟುತ್ತಾ ಸಾಗುತ್ತಿದೆ. ಏಳು ವರ್ಷಗಳೇ ಕಳೆದರೂ ಸರಿಯಾಗಿ ಸಿಮೆಂಟ್ ಕಲಿಸಿಲ್ಲ, ಕಾಮಗಾರಿ ಪೂರ್ಣಗೊಂಡಿಲ್ಲ! ಈ ಅರೆಬರೆ ಕಾಮಗಾರಿ ನಡುವೆಯೇ ತರಾತುರಿಯಲ್ಲಿ ನಾಲ್ಕು ಬೃಹತ್ ವಿದ್ಯಾರ್ಥಿ ನಿಲಯಗಳ (Hostel) ಉದ್ಘಾಟನೆ ಮಾಡಿದೆ. ವಿಶ್ವವಿದ್ಯಾಲಯದ ಈ ನಡೆಗೆ ತೀವ್ರ ಟೀಕೆಗಳು ಕೇಳಿಬರುತ್ತಿದೆ. ಸುತ್ತಲೂ ಬೆಳೆದು ನಿಂತಿರೋ ನೀಲಗಿರಿ ಮರಗಳು.. ಅಲ್ಲಲ್ಲಿ ನಿರ್ಮಾಣವಾಗ್ತಿರೋ ಬೃಹತ್ ಕಟ್ಟಡಗಳು.. ಮಳೆಯಿಂದ ಕೆಸರು ಗದ್ದೆಯಂತಾಗಿರೋ ರಸ್ತೆಗಳು… ಇದು ತುಮಕೂರಿನ ನಾಗವಲ್ಲಿ ಸಮೀಪದ ಬಿದರಕಟ್ಟೆಯಲ್ಲಿ (Bidarakatte) ಸುಮಾರು 240 ಎಕರೆ ವಿಸ್ತೀರ್ಣದಲ್ಲಿ ನಿರ್ಮಾಣವಾಗ್ತಿರೋ ತುಮಕೂರು ವಿಶ್ವವಿದ್ಯಾನಿಲಯದ ನೂತನ ಕ್ಯಾಂಪಸ್ ನ ಸದ್ಯದ ಪರಿಸ್ಥಿತಿ.
ಅನುದಾನದ ಕೊರತೆ, ಪ್ರಾಧ್ಯಾಪಕರ ಒಲ್ಲದ ಮನಸ್ಸು ಕೂಡ ಕಾರಣವಂತೆ!
ಯೆಸ್…. ಜ್ಞಾನಸಿರಿ ಅನ್ನೋ ಹೆಸರಿನಲ್ಲಿ ನಿರ್ಮಾಣವಾಗ್ತಿರೋ ಈ ಕ್ಯಾಂಪಸ್ ಗೆ 2016ರಲ್ಲಿಯೇ ಭೂಮಿ ಪೂಜೆ ಮಾಡಲಾಗಿತ್ತು. ಎಲ್ಲವೂ ಸರಿಯಾಗಿಯೇ ನಡೆದಿದ್ದಿದ್ರೆ ಇಷ್ಟು ಹೊತ್ತಿಗಾಗಲೇ ಈ ಕ್ಯಾಂಪಸ್ ನಲ್ಲಿ ವಿದ್ಯಾರ್ಥಿಗಳ ಕಲರವ ಕೇಳಿಸಬೇಕಿತ್ತು. ಆದ್ರೆ ಅನುದಾನದ ಕೊರತೆಯಿಂದಾಗಿ ಕಾಮಗಾರಿ ಕುಂಟುತ್ತಲೇ ಸಾಗುತ್ತಿದೆ. ಇನ್ನು ಇಲ್ಲಿ ಯಾವುದೇ ಮೂಲ ಸೌಕರ್ಯಗಳನ್ನ ಅಭಿವೃದ್ಧಿಪಡಿಸಿಲ್ಲ.
ಸರಿಯಾದ ರಸ್ತೆಯೂ ಇಲ್ಲ, ಬಸ್ ವ್ಯವಸ್ಥೆಯಂತೂ ಮೊದಲೇ ಇಲ್ಲ.. ಆದ್ರೆ ಈ ನಿರ್ಜನ ಪ್ರದೇಶದಲ್ಲಿ ನಾಲ್ಕು ಬೃಹತ್ ವಿದ್ಯಾರ್ಥಿ ನಿಲಯಗಳನ್ನ ಉದ್ಘಾಟಿಸಲಾಗಿದ್ದು, ಸದ್ಯಕ್ಕಂತೂ ಇವುಗಳಿಂದ ಯಾರಿಗೂ ಪ್ರಯೋಜನವಿಲ್ಲ. ಅಷ್ಟೇ ಅಲ್ಲ.. ವಿದ್ಯಾರ್ಥಿಗಳಿಲ್ಲದಿದ್ರೆ ಈ ಕಟ್ಟಡಗಳು ಪಾಳು ಬೀಳ್ತವೆ ಅನ್ನೋದು ಸಾರ್ವಜನಿಕರ ಅಭಿಪ್ರಾಯ.
ಸುಮಾರು 7 ವರ್ಷ ಆದರೂ ಕ್ಯಾಂಪಸ್ ಕಾಮಗಾರಿ ಪೂರ್ಣಗೊಂಡಿಲ್ಲ. ಅಂದಿನ ಕುಲಪತಿ ರಾಜಾಸಾಬ್ ಅವರು ಜಾಗ ಗುರುತಿಸಿ ಚಾಲನೆ ಕೊಟ್ಟಿದ್ರು. ನಡುವೆ ಬಂದ ವಿಸಿ ಸಿದ್ದೇಗೌಡರ ಕಾಲದಲ್ಲಿ ಕೋವಿಡ್ ನಿಂದಾಗಿ ಕಾಮಗಾರಿ ಸ್ಥಗಿತಗೊಂಡಿತ್ತು. ಹೀಗೆ ಹಲವು ಅಡ್ಡಿ ಆತಂಕಗಳ ಜೊತೆಗೆ ವಿಶ್ವವಿದ್ಯಾಲಯದ ಪ್ರಾಧ್ಯಾಪಕರ ಒಲ್ಲದ ಮನಸ್ಸು ಕೂಡ ಕಾರಣ ಅಂತೆ.
ಸದ್ಯ ತುಮಕೂರು ನಗರದಲ್ಲೇ ಇರುವ ವಿವಿಯನ್ನು ಸುಮಾರು 16 ಕಿಮಿ ದೂರ ಇರುವ ಗ್ರಾಮಾಂತರಕ್ಕೆ ಶಿಫ್ಟ್ ಆಗೋದು ಪ್ರಾಧ್ಯಾಪಕರು, ಸಿಬ್ಬಂದಿಗಳಿಗೆ ಇಷ್ಟ ಇಲ್ಲವಂತೆ. ದಿನಾಲು ಓಡಾಡಲು ಕಷ್ಟ ಆಗುತ್ತದೆ ಎಂಬ ಕಾರಣಕ್ಕೆ ಬೇರೆ ಬೇರೆ ಮಾರ್ಗಗಳ ಮೂಲಕ ಕ್ಯಾಂಪಸ್ ಕಾಮಗಾರಿ ಕುಂಠಿತಗೊಳ್ಳುವಂತೆ ಮಾಡುತಿದ್ದಾರಂತೆ. ಈ ನಡುವೆ ಜೂನ್ ಜುಲೈ ನಲ್ಲಿ ಕಾಮಗಾರಿ ಪೂರ್ಣಗೊಂಡು ಶಿಫ್ಟ್ ಮಾಡುವ ಪ್ರಯತ್ನ ಮಾಡುತ್ತೇವೆ ಅನ್ನುತ್ತಾರೆ ತುಮಕೂರು ವಿವಿ ನೂತನ ಕುಲಪತಿ ಪ್ರೋ. ವೆಂಕಟೇಶ್ವರಲು.
ವಿಶ್ವ ವಿದ್ಯಾಲಯದ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳ ಒಲ್ಲದ ಮನಸ್ಸು, ಅಧಿಕಾರಿಗಳ ಅಸಡ್ಡೆಯಿಂದ ವಿಶ್ವವಿದ್ಯಾಲಯ ಸುಂದರ ಕ್ಯಾಂಪಸ್ ಕನಸು ಕನಸಾಗಿಯೇ ಉಳಿದಿದೆ. ಯಾವುದೇ ಗೌಜು- ಗದ್ದಲ, ತಂಟೆ-ತಕರಾರು ಇಲ್ಲದೇ ಪ್ರಶಾಂತ ವಾತಾವರಣದಲ್ಲಿ ಶಿಕ್ಷಣ ಕಲಿಬೇಕು ಎಂಬ ವಿದ್ಯಾರ್ಥಿ ಆಸೆಯ ಪೂರೈಕೆಗೆ ಯಾವಾಗ ಕಾಲ ಕೂಡಿಬರುತ್ತದೋ ಕಾದೋ ನೋಡಬೇಕಿದೆ.
ವರದಿ: ಮಹೇಶ್, ಟಿವಿ 9, ತುಮಕೂರು