ಅದು ಕ್ಷುಲ್ಲಕ ವಿಚಾರಕ್ಕೆ ಆದ ಜಗಳವಾಗಿತ್ತು, ಬೈಕ್ ತಾಗಿತು ಅಂತಾ ಯುವಕರ ಎರಡು ತಂಡಗಳು ಜಗಳವಾಡಿಕೊಂಡಿವೆ. ಅದಾದ ಮೇಲೆ ಒಂದು ಗುಂಪು ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದೆ. ಆದರೆ, ದೂರು ಸ್ವೀಕರಿಸಿದ ಪಿಎಸ್ ಐ ಮಾಡಿದ್ದೇನು ಗೊತ್ತಾ? ಈ ವರದಿ ನೋಡಿ. ಹೌದು ಕೈಗಳು, ತೊಡೆಯ ಭಾಗಗಳಲ್ಲಿಯೂ ಕಪ್ಪು ಕಪ್ಪಾಗಿ ಕಂದಿರುವ ಕಲೆಗಳು ಆ ಯುವಕರ ಮೈಮೇಲೆ ಕಂಡುಬಂದಿವೆ. ನಡೆಯಲು ಸಹ ಆಗದೇ ಇತರರನ್ನು ಅವಲಂಬಿಸಿರುವ ಯುವಕರು. ಇವರು ಎಲ್ಲೋ ಬಿದ್ದು ಗಾಯಗಳನ್ನು ಮಾಡಿಕೊಂಡವರಲ್ಲ. ಬದಲಾಗಿ ದೂರು ಬಂದಿದೆ ಬನ್ನಿ ಅಂತಾ ವಿಚಾರಣೆಗಾಗಿ ಠಾಣೆಗೆ ಕರೆಯಿಸಿ ಮನಬಂದಂತೆ ಪೊಲೀಸಪ್ಪ (PSI) ಥಳಿಸಿದ್ದಾರೆ ಎನ್ನಲಾಗಿದೆ (Allegation).
ಹೌದು. ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ದೊಡ್ಡಹಳ್ಳಿ ಹಾಗೂ ಕೆ ರಾಮಪುರ ಬಳಿ (YN Hosakote) ಯುವಕರ ಎರಡು ಗುಂಪುಗಳ ನಡುವೆ ಪರಸ್ಪರ ಗಲಾಟೆಯಾಗಿತ್ತು. ಬರ್ತ್ ಡೆ ಪಾರ್ಟಿಗೆಂದು ನಾಲ್ವರು ಹೋಗುತ್ತಿರುವಾಗ ದೊಡ್ಡಹಳ್ಳಿ ಗ್ರಾಮದ ಯುವಕ ಬೈಕ್ ಗೆ ಅಡ್ಡ ಬಂದಿದ್ದಾನೆ. ಈ ವೇಳೆ ಸೈಡ್ ಗೆ ಹೋಗಿ ಎಂದಿದ್ದಕ್ಕೆ ಏನೋ ಈವಾಗ? ಹೋಗಲ್ಲ ಅಂತಾ ಜಗಳ ಮಾಡಿಕೊಂಡಿದ್ದಾರೆ. ಈ ವೇಳೆ ಕೆ ರಾಮಪುರದ ಚಿರಂಜೀವಿ, ಅನಿಲ್, ಮಾರುತಿ, ಗುಣಶೇಖರ್, ಮಂಜುನಾಥ ಎಂಬ ನಾಲ್ವರು ಯುವಕರು ಸೇರಿ ಗಲಾಟೆ ಮಾಡಿದ್ದಾರೆ.
Also read:
ಬಳಿಕ ದೊಡ್ಡಹಳ್ಳಿ ಗ್ರಾಮದ ಯುವಕರು ವೈಎನ್ ಹೊಸಕೋಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಕಳೆದ ಶುಕ್ರವಾರ ಘಟನೆ ನಡೆದಿದ್ದು ಶನಿವಾರ ದೂರು ಸ್ವೀಕರಿಸಿದ ಪಿಎಸ್ವೈ ಅರ್ಜನ್ ಗೌಡ ಅವರನ್ನೆಲ್ಲ ಠಾಣೆಗೆ ಕರೆಯಿಸಿಕೊಂಡು, ಮನಬಂದಂತೆ ನಾಲ್ವರನ್ನೂ ಹಿಗ್ಗಾಮುಗ್ಗಾ ಥಳಿಸಿದ್ದಾರೆ ಎನ್ನಲಾಗಿದೆ. ರಾತ್ರಿ 11 ಗಂಟೆಯಿಂದ ಮಧ್ಯರಾತ್ರಿ 1 ಗಂಟೆವರೆಗೂ ಥಳಿಸಿದ್ದಾರಂತೆ! ಅಲ್ಲದೇ ಯಾರೋ ನೀವು? ಯಾವ ಪಕ್ಷದವರೋ? ಕಾಂಗ್ರೆಸ್ಸಾ, ಜೆಡಿಎಸ್ಸಾ? ಕೇಂದ್ರದಲ್ಲಿ ಬಿಜೆಪಿ ಅಧಿಕಾರದಲ್ಲಿದೆ, ಅದಕ್ಕೆ ಮತ ನೀಡಬೇಕು, ಇಲ್ಲಾಂದ್ರೆ ಕೈ ಮುರಿಯುತ್ತೇನೆ ಎಂದು ಧಮ್ಕಿ ಹಾಕಿ ಥಳಿಸಿದ್ದಾರೆ ಎನ್ನಲಾಗಿದೆ.
ಇನ್ನು ಥಳಿತಕ್ಕೊಳಗಾಗಿ ಮನೆಗೆ ವಾಪಸಾಗಿದ್ದ ನಾಲ್ವರನ್ನೂ ಪೋಷಕರು ಸ್ಥಳೀಯರ ನೆರವಿನೊಂದಿಗೆ ಪಾವಗಡ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಘಟನೆಯನ್ನು ಖಂಡಿಸಿ ಗ್ರಾಮಸ್ಥರು ಹಾಗೂ ಪೋಷಕರು ರಾತ್ರಿಯೇ ಜಮಾಯಿಸಿ ವೈ.ಎನ್. ಹೊಸಕೋಟೆ ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ನಡೆಸಿದ್ದಾರೆ. ನಮ್ಮ ಹುಡುಗರನ್ನು ಥಳಿಸಿರುವುದಕ್ಕೆ ಪಿಎಸ್ ಐ ವಿರುದ್ಧ ಕ್ರಮವಾಗಬೇಕು, ಅಲ್ಲದೇ ದೂರು ನೀಡಲು ಬಂದಿದ್ದವರಿಗೆಲ್ಲಾ ಧಮ್ಕಿ ಹಾಕಿ ಬಿಜೆಪಿಗೇ ಮತ ಹಾಕಬೇಕು ಅಂತಾ ಬೆದರಿಸಿ ಕಳಿಸಿದ್ದಾರಂತೆ. ಪಿಎಸ್ ಐ ದಿನನಿತ್ಯ ಮದ್ಯ ಸೇವಿಸಿ ದಾಂಧಲೇ ಮಾಡುವುದು ಸಾಮಾನ್ಯವಾಗಿದೆಯಂತೆ. ಪಿಎಸ್ ಐ ಅರ್ಜುನ್ ಗೌಡ ಹಾಗೂ ಸಿಬ್ಬಂದಿ ಮನಬಂದಂತೆ ಥಳಿಸಿದ್ದಾರಂತೆ. ನ್ಯಾಯ ಸಿಗೋವರೆಗೂ ಹೋಗಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ಹೊರಹಾಕಿದ್ದಾರೆ.
ಒಟ್ಟಾರೆ ಅದೇನೆ ಆಗಿರಲಿ, ಬೈಕ್ ಗೆ ಅಡ್ಡ ಬಂದ ವಿಚಾರಕ್ಕೆ ಆರಂಭವಾಗಿದ್ದ ಜಗಳದ ಬಗ್ಗೆ ಎರಡೂ ತಂಡಗಳನ್ನು ಕರೆಯಿಸಿ ಬುದ್ದಿ ಹೇಳಿ ಕಳಿಸಬೇಕಿದ್ದ ಪಿಎಸ್ವೈ ಅರ್ಜುನ್ ಗೌಡ, ಬಿಜೆಪಿಗೆ ಮತ ಹಾಕಿ ಅಂತಾ ಮನಬಂದಂತೆ ಥಳಿಸಿರುವುದು ತಪ್ಪು. ಬೇಕಿದ್ದರೇ ಕೆಲಸಕ್ಕೆ ರಾಜೀನಾಮೆ ನೀಡಿ ಬಿಜೆಪಿಗೆ ಕೆಲಸ ಮಾಡಲಿ. ಅದು ಬಿಟ್ಟು ಹೀಗೆ ಮಾಡಿದ್ದು ತಪ್ಪು ಎಂದು ಸಾರ್ವಜನಿಕರು ಕೆಂಡವಾಗಿದ್ದಾರೆ.
ವರದಿ: ಮಹೇಶ್ ಟಿವಿ9 ತುಮಕೂರು
ಇನ್ನಷ್ಟು ಕರ್ನಾಟಕ ವಿಧಾನಸಭೆ ಚುನಾವಣೆ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ರಾಜ್ಯ ರಾಜಕಾರಣದ ಕ್ಷಣ ಕ್ಷಣದ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ