ತುಮಕೂರು: ತನ್ನ ಮನೆ ತುಂಬಿಸಿಕೊಂಡ ಅತ್ತೆಯ ಮೇಲೆ ಸೊಸೆಯೊಬ್ಬಳು ಹಲ್ಲೆ ನಡೆಸಿರುವ ಆರೋಪ ಜಿಲ್ಲೆಯ ಕುಣಿಗಲ್ ಪಟ್ಟಣದ ಕೆಆರ್ ಎಸ್ ಅಗ್ರಹಾರದಲ್ಲಿ ಕೇಳಿಬಂದಿದೆ. ಚಿಕ್ಕತಾಯಮ್ಮ (65) ಮೇಲೆ ಸೊಸೆ ಸೌಮ್ಯ ಹಲ್ಲೆ ನಡೆಸಿರುವುದಾಗಿ ಆರೋಪ ಮಾಡಲಾಗಿದೆ. ಸದ್ಯ ಗಾಯಾಳು ಚಿಕ್ಕತಾಯಮ್ಮ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಚಿಕ್ಕತಾಯಮ್ಮಗೆ ಶಂಕರ್ ಹಾಗೂ ಶಿವಕುಮಾರ್ ಇಬ್ಬರು ಗಂಡು ಮಕ್ಕಳಿದ್ದಾರೆ. ಈ ಪೈಕಿ ಶಂಕರ್ ಪತ್ನಿ ಸೌಮ್ಯ ತನ್ನ ಅತ್ತೆಗೆ ಮನೆ ಬಿಟ್ಟು ಹೋಗುವಂತೆ ಪೀಡಿಸಿದ್ದಾಳೆ. ಬೆಂಗಳೂರಿನಲ್ಲಿ ನೆಲೆಸಿರುವ ಶಿವಕುಮಾರ್ ಮನೆಗೆ ಹೋಗು ಇಲ್ಲಿ ಇರಬೇಡವೆಂದು ಗದರಿಸಿ ಕಬ್ಬಿಣದ ರಾಡ್ನಿಂದ ಹಲ್ಲೆಗೈದಿರುವ ಆರೋಪ ಮಾಡಲಾಗಿದೆ. ಘಟನೆಯಲ್ಲಿ ಚಿಕ್ಕತಾಯಮ್ಮ ತಲೆಗೆ ಸಣ್ಣಪುಟ್ಟು ಗಾಯಗಳಾಗಿದ್ದು, ಆದಿಚುಂಚನಗಿರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ಬೆಳ್ಳಂಬೆಳಗ್ಗೆ ಶಿವಮೊಗ್ಗದಲ್ಲಿ ಆರೋಪಿ ಕಾಲಿಗೆ ಪೊಲೀಸರಿಂದ ಫೈರಿಂಗ್
ಶಿವಮೊಗ್ಗ: ಬೆಳ್ಳಂಬೆಳಗ್ಗೆ ಶಿವಮೊಗ್ಗದಲ್ಲಿ ಪೊಲೀಸರ ಗನ್ ಸದ್ದು ಮಾಡಿದ್ದು, ಒಂಬತ್ತು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿಯ ಕಾಲಿಗೆ ಗುಂಡು ಹಾರಿಸಿ ಬಂಧಿಸಲಾಗಿದೆ. ಪ್ರಕರಣವೊಂದರಲ್ಲಿ ಚೋರ್ ಅಸ್ಲಾಂನನ್ನು ಬಂಧಿಸಲು ತೆರಳಿದ್ದ ದೊಡ್ಡಪೇಟೆ ಠಾಣೆಯ ಸಬ್ ಇನ್ಸ್ಪೆಕ್ಟರ್ ವಸಂತ್ ಮತ್ತು ತಂಡದ ಮೇಲೆ ಚಾಕುವಿನಿಂದ ಹಲ್ಲೆ ನಡೆಸಲು ಮುಂದಾಗಿದ್ದಾನೆ. ಈ ವೇಳೆ ವಸಂತ್ ಅವರು ಅಸ್ಲಾಂ ಕಾಲಿಗೆ ಗುಂಡು ಹಾರಿಸಿದ್ದಾರೆ. ಶಿವಮೊಗ್ಗ ಹೊರವಲಯದ ಗುರುಪುರ ಬಳಿ ಆರೋಪಿಯನ್ನು ಬಂಧಿಸಲಾಗಿದೆ. ಸದ್ಯ ಆರೋಪಿಗೆ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಲಾಗುತ್ತಿದ್ದು, ಬಳಿಕ ಠಾಣೆಗೆ ಕೊಂಡೊಯ್ಯಲಿದ್ದಾರೆ. ಆರೋಪಿ ವಿರುದ್ಧ ವಿವಿಧ ಠಾಣೆಗಳಲ್ಲಿ ಒಂಬತ್ತು ಪ್ರಕರಣಗಳು ದಾಖಲಾಗಿವೆ.
ಕಳೆದ ಅಕ್ಟೋಬರ್ 30 ರಂದು ಅಶೋಕ್ ಪ್ರಭು ಎಂಬುವರಿಗೆ ರಾಯಲ್ ಆರ್ಕೀಡ್ ಹೋಟೆಲ್ ಬಳಿ ಹರಿತವಾದ ವಸ್ತುವಿನಿಂದ ಅಸ್ಲಾಂ ಹಲ್ಲೆ ಮಾಡಿದ್ದ. ಪ್ರಕರಣದಲ್ಲಿ ಚೋರ್ ಅಸ್ಲಾಂ ಮೊದಲ ಆರೋಪಿಯಾಗಿದ್ದಾನೆ. ಈ ಪ್ರಕರಣ ಸೇರಿದಂತೆ ಬೈಕ್ ಕಳ್ಳತನ, ಪಿಕ್ ಪಾಕೆಟ್ ಸಂಬಂಧಿತ ಹಲವು ಕೇಸ್ಗಳಲ್ಲಿ ಅಸ್ಲಾಂ ಪೊಲೀಸರಿಗೆ ಬೇಕಾಗಿದ್ದ.
ಟ್ರಕ್-ಆಟೋ ಮುಖಾಮುಖಿ; ಮೃತರ ಸಂಖ್ಯೆ 7ಕ್ಕೆ ಏರಿಕೆ
ಬೀದರ್: ಟ್ರಕ್ ಮತ್ತು ಆಟೋ ನಡುವೆ ನಡೆದ ಅಪಘಾತದಲ್ಲಿ ಗಾಯಗೊಂಡಿದ್ದ ಮತ್ತೋರ್ವ ಮಹಿಳೆ ಸಾವನ್ನಪ್ಪುವ ಮೂಲಕ ಮೃತರ ಸಂಖ್ಯೆ 7 ಏರಿಕೆಯಾಗಿದೆ. ಶುಕ್ರವಾರ ಜಿಲ್ಲೆಯ ಚಿಟಗುಪ್ಪಾ ತಾಲೂಕಿನ ಬೆಮ್ಮಳಖೇಡ ಬಳಿ ನಡೆದ ಈ ದುರ್ಘಟನೆಯಲ್ಲಿ ಓರ್ವ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದರೆ ಐವರು ಜಿಲ್ಲಾ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು. ಇದೀಗ ಮತ್ತೋರ್ವ ಮಹಿಳೆ ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ನಿಧನಹೊಂದಿದ್ದಾರೆ. ಮೃತಪಟ್ಟ 7 ಮಹಿಳೆಯರು 10 ಜನ ಗಾಯಾಳುಗಳು ಉಡಮನಳ್ಳಿ ಗ್ರಾಮದವರಾಗಿದ್ದಾರೆ.
ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:48 am, Sat, 5 November 22