ಬಾಗಲಕೋಟೆ: ಆ ಬಾಲಕಿ ದೂರದ ತುಮಕೂರು ಜಿಲ್ಲೆಯವಳು. ಇನ್ನು ಯುವಕ ಇದೇ ಬಾಗಲಕೋಟೆ ನಗರದವನು. ಇಬ್ಬರಿಗೂ ಪ್ರೇಮಾಂಕುರವಾಗಿದೆ. ಈ ಮಧ್ಯೆ ಬಾಲಕಿಗೆ ಬಾಲ್ಯ ವಿವಾಹ ನಿಕ್ಕಿಯಾಗಿದೆ. ಇದರಿಂದ ಬಾಲಕಿಗೆ ನೆಲ ಕುಸಿದಂತಾಗಿ ಸೀದಾ ಬಾಗಲಕೋಟೆಗೆ ಬಂದು ಯುವಕನ ಕೈಹಿಡಿದಿದ್ದಾಳೆ. ಅದರೊಂದಿಗೆ ಬಾಲ್ಯ ವಿವಾಹವನ್ನು ಧಿಕ್ಕರಿಸಿದ್ದಾಳೆ.
ಎಸ್ಪಿ ಕಚೇರಿ ಮುಂಭಾಗ ಬಿಕ್ಕಿಬಿಕ್ಕಿ ಅತ್ತ ಐಶ್ವರ್ಯಾ ತಂದೆ-ಸಹೋದರ
ಇನ್ನು ವಿಷಯ ತಿಳಿದ ಐಶ್ವರ್ಯಾ ತಂದೆ, ಮನೆಬಿಟ್ಟು ಬಂದ ಮಗಳನ್ನು ಕರೆದೊಯ್ಯಲು ಬಾಗಲಕೋಟೆಗೆ ಓಡೋಡಿ ಬಂದಿದ್ದಾರೆ. ಮಗಳನ್ನು ವಿವಾಹವಾಗಿರುವ ಪ್ರಿಯಕರ ಆಕಾಶ್ನ ಕೈಕಾಲು ಹಿಡಿದು ಮಗಳ ಕಳುಹಿಸಿಕೊಡು ಎಂದು ಕಣ್ಣೀರು ಹಾಕಿದ್ದಾರೆ ತಂದೆ ದೇವರಾಜ್. ತಂದೆ ದೇವರಾಜ್ ಜೊತೆಗೆ ಐಶ್ವರ್ಯಾ ಸಹೋದರ ಸಹ ಬಂದಿದ್ದು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯ ಕಚೇರಿ ಮುಂಭಾಗ ಬಿಕ್ಕಿಬಿಕ್ಕಿ ಅತ್ತಿದ್ದಾರೆ.
ಚಿತ್ರದುರ್ಗದ ಕಲ್ಲಿನ ಕೋಟೆಯಲ್ಲಿ ಅರಳಿದ ಪ್ರೇಮ
ಬಾಗಲಕೋಟೆಯ ಮುಚಖಂಡಿ ವೀರಭದ್ರೇಶ್ವರ ದೇವಸ್ಥಾನದಲ್ಲಿ ಐಶ್ವರ್ಯಾ-ಆಕಾಶ್ ಜೋಡಿ ಮದುವೆಯಾಗಿದ್ದಾರೆ. ನಾಲ್ಕು ವರ್ಷದ ಹಿಂದೆ ಚಿತ್ರದುರ್ಗದ ಕೋಟೆಯಲ್ಲಿ ಭೇಟಿಯಾದಾಗ ಇವರಿಬ್ಬರಲ್ಲಿ ಪ್ರೀತಿ ಅರಳಿತ್ತು. ಪೋನ್ ನಲ್ಲಿ ಆಕಾಶ್-ಐಶ್ವರ್ಯಾ ನಿರಂತರ ಸಂಪರ್ಕ ಜಾರಿಯಲ್ಲಿತ್ತು. ಆಗಾಗ ಬಾಲಕಿ ಐಶ್ವರ್ಯಾ ಇದ್ದಲ್ಲಿಗೆ ಹೋಗಿ ಭೇಟಿ ಸಹ ಮಾಡುತ್ತಿದ್ದ ಆಕಾಶ್.
ಈ ಮಧ್ಯೆ.. 17 ವರ್ಷವಿದ್ದಾಗಲೇ ಬಾಲಕಿ ಐಶ್ವರ್ಯಾಳನ್ನು ಬಾಲ್ಯ ವಿವಾಹ ಮಾಡಿಕೊಡಲಾಗಿತ್ತು. ಬಾಲ್ಯ ವಿವಾಹ ಒಪ್ಪದ ಐಶ್ವರ್ಯಾ, ಸೀದಾ ಬಾಗಲಕೋಟೆಗೆ ಬಂದು ತನ್ನ ಇನಿಯನ ಜೊತೆ ಎರಡು ದಿನದ ಹಿಂದೆ ವಿವಾಹವಾಗಿದ್ದಾಳೆ.
ಕುಟುಂಬದಿಂದ ಜೀವ ಬೆದರಿಕೆ ಇದೆ:
ಮನೆಯವರನ್ನು ಧಿಕ್ಕರಿಸಿ ಮದುವೆಯಾಗಿರುವ ಕಾರಣ ‘ನಮಗೆ ಕುಟುಂಬದವರಿಂದ ಜೀವ ಬೆದರಿಕೆ ಇದೆ. ರಕ್ಷಣೆ ನೀಡಿ’ ಎಂದು ಪ್ರೇಮಿಗಳು ಎಸ್ ಪಿ ಮೊರೆ ಹೋಗಿದ್ದಾರೆ. ಆಕಾಶ್ ಹಾಗೂ ಐಶ್ವರ್ಯಾ ಬೇರೆ ಬೇರೆ ಸಮುದಾಯಕ್ಕೆ ಸೇರಿದವರು ಎನ್ನಲಾಗಿದೆ.
Published On - 11:33 am, Wed, 7 October 20