ರಾಜ್ಯದಲ್ಲಿಂದು ಹೊಸದಾಗಿ 761 ಜನರಿಗೆ ಕೊರೊನಾ ದೃಢವಾಗಿದೆ. ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 9,24,898ಕ್ಕೆ ಏರಿಕೆ ಆಗಿದೆ. ಆರೋಗ್ಯ & ಕುಟುಂಬ ಕಲ್ಯಾಣ ಇಲಾಖೆಯಿಂದ ಮಾಹಿತಿ ನೀಡಿದೆ. ರಾಜ್ಯದಲ್ಲಿ ಇಂದು ಕೊರೊನಾ ಸೋಂಕಿನಿಂದ 7 ಜನರ ಸಾವನಪ್ಪಿದ್ದಾರೆ. ರಾಜ್ಯದಲ್ಲಿ ಇದುವರೆಗೆ ಕೊರೊನಾದಿಂದ 12131 ಜನರ ಸಾವಿಗೀಡಾಗಿದ್ದಾರೆ.
ನಾನು ಸ್ವಲ್ಪ ಒರಟ, ಹಳ್ಳಿ ಭಾಷೆಯಲ್ಲಿ ಮಾತನಾಡುತ್ತೇನೆ. ಟೀಕೆ ಮಾಡಲು ಎಲ್ಲರಿಗೂ ನಾನೊಬ್ಬನೇ ಸಿಕ್ಕಿರುವುದು ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಚಿಕ್ಕಮಗಳೂರು ಜಿಲ್ಲೆ ಕಡೂರಲ್ಲಿ ಸಿದ್ದರಾಮಯ್ಯ ಈ ಹೇಳಿಕೆ ನೀಡಿದ್ದಾರೆ. ಬಿಜೆಪಿ, ಜೆಡಿಎಸ್ನವರು ಎಲ್ಲರೂ ನನ್ನ ಮೇಲೆ ಬೀಳುತ್ತಾರೆ ಎಂದು ಸಿಟ್ಟಾಗಿದ್ದಾರೆ.
ಅಮೆರಿಕ ಸಂಯುಕ್ತ ಸಂಸ್ಥಾನದ ಅಧ್ಯಕ್ಷರಾಗಿ ಜೋ ಬೈಡೆನ್ ಮತ್ತು ಉಪಾಧ್ಯಕ್ಷರಾಗಿ ಕಮಲಾ ಹ್ಯಾರಿಸ್ ಅಧಿಕೃತವಾಗಿ ಘೋಷಣೆಯಾಗಿದ್ದಾರೆ. ಅಮೆರಿಕ ಸಂಸತ್ ಸಭೆಯ ಅಧಿಕೃತ ಘೋಷಣೆ ನಿರ್ಗಮಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
06:31 pm ತೊಗರಿ ರಾಶಿ ಮಾಡುವ ವೇಳೆ ಆಯತಪ್ಪಿ ಯಂತ್ರಕ್ಕೆ ಸಿಲುಕಿದ ಪರಿಣಾಮ ಮಹಿಳೆ ಮೃತಪಟ್ಟ ಘಟನೆ ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ಚಿಕ್ಕಬೇವನೂರು ಗ್ರಾಮದಲ್ಲಿ ನಡೆದಿದೆ. ಜಮೀನಿನಲ್ಲಿ ತೊಗರಿ ರಾಶಿ ಮಾಡುವಾಗ ದುರ್ಘಟನೆ ಸಂಭವಿಸಿದೆ. ಸುಜಾತಾ ಬಗಲಿ ಎಂಬಾಕೆಯೇ ನತದೃಷ್ಟೆಯಾಗಿದ್ದು ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ. ಇಂಡಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿ ಘಟನೆ ಸಂಭವಿಸಿದೆ.
06:26 pm ಜಲ್ಲಿಕಲ್ಲು, ಎಂಸ್ಯಾಂಡ್‌ಗೆ ಅಂತಾರಾಜ್ಯ ತೆರಿಗೆ ರದ್ದುಪಡಿಸಬೇಕೆಂದು ಕರ್ನಾಟಕ ಹೈಕೋರ್ಟ್ ಆದೇಶ ನೀಡಿದೆ. ರಾಜ್ಯಸರ್ಕಾರದ ತಿದ್ದುಪಡಿಯನ್ನು ರದ್ದುಪಡಿಸಿರುವ ಉಚ್ಛನ್ಯಾಯಾಲಯ ಸರ್ಕಾರಕ್ಕೆ ತೆರಿಗೆ ವಿಧಿಸುವ ಅಧಿಕಾರವಿಲ್ಲವೆಂದು ತೀರ್ಪು ನೀಡಿದೆ. 2020ರ ಜೂ.30ರಂದು ಈ ಬಗ್ಗೆ ತಿದ್ದುಪಡಿ ತಂದಿದ್ದ ಸರ್ಕಾರ ಮೆಟ್ರಿಕ್ ಟನ್‌ಗೆ ರೂ.70ರಂತೆ ತೆರಿಗೆ ನೀಡಬೇಕೆಂದು ನಿಯಮ ರೂಪಿಸಿತ್ತು. ಇದನ್ನು ಪ್ರಶ್ನಿಸಿ ಹಲವರು ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದ್ದರು.
06:12 pm ಖರಗ್ಪುರದ ಐಐಟಿ ನಡೆಸುವ ಜೆಇಇ ಅಡ್ವಾನ್ಸ್ಡ್ ಪರೀಕ್ಷೆ ಈ ಬಾರಿ ಜುಲೈ 3ರಿಂದ ನಡೆಯಲಿದೆ ಎಂದು. ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಕ್ರಿಯಾಲ್ ನಿಶಾಂಕ್ ತಿಳಿಸಿದ್ದಾರೆ.
#JEEAdvanced 2021 will be conducted on 3rd July 2021. The exam will be conducted by IIT Kharagpur: Minister of Education Ramesh Pokhriyal Nishank pic.twitter.com/ifsmGj9PEL
— ANI (@ANI) January 7, 2021
06:07 pm ದಾವಣಗೆರೆಯ ಗೋಲ್ಡನ್ ಸ್ಪೂನ್ ಎಂಬ ಹೋಟೆಲ್ ಶಾರ್ಟ್ಸರ್ಕ್ಯೂಟ್ನಿಂದ ಬೆಂಕಿಗೆ ಆಹುತಿಯಾಗಿದೆ. 20 ದಿನಗಳ ಹಿಂದಷ್ಟೇ ಪ್ರಾರಂಭವಾಗಿದ್ದ ಹೋಟೆಲ್ ಧಗಧಗಿಸಿ ಉರಿದಿದ್ದು ಅಪಾರ ನಷ್ಟ ಉಂಟಾಗಿದೆ. ಮಿಥುನ್ ಎಂಬುವವರಿಗೆ ಸೇರಿದ ಗೋಲ್ಡನ್ ಸ್ಪೂನ್ ಹೋಟೆಲ್ ಬೆಂಕಿಯ ಕೆನ್ನಾಲಿಗೆಗೆ ಭಸ್ಮವಾಗಿದ್ದು ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ವಿದ್ಯಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
05:57 pm ರಾಧಿಕಾ ಕುಮಾರಸ್ವಾಮಿಗೆ ಸಿಸಿಬಿಯಿಂದ ನೋಟಿಸ್ ಬಂದಿರುವುದು ನಿಜ. ನಾಳೆ ಸಿಸಿಬಿ ತನಿಖೆಗೆ ಖಂಡಿತಾ ಹಾಜರಾಗ್ತೀವಿ ಎಂದು ರಾಧಿಕಾ ಸಹೋದರ ರವಿರಾಜ್ ಟಿವಿ9ಗೆ ಹೇಳಿಕೆ ನೀಡಿದ್ದಾರೆ. ನಾವು ರಾಧಿಕಾ ಜೊತೆಗಿದ್ದೇವೆ. ತನಿಖೆಯನ್ನೂ ಎದುರಿಸುತ್ತೇವೆ ಎಂದು ಹೇಳಿದ್ದಾರೆ.
05:46 pm ಕಾಂಗ್ರೆಸ್ ತೊರೆದೋರು ಮರಳಿ ಬರ್ತಾರೆ ಎಂಬ ಡಿಕೆಶಿ ಹೇಳಿಕೆಗೆ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್ ತಿರುಗೇಟು ನೀಡಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಎಲ್ಲೋ ಕನಸು ಕಾಣುತ್ತಿದ್ದಾರೆ. ನಾವು ಯಾವ ಕಾರಣಕ್ಕೂ ಪಕ್ಷ ಬದಲಾಯಿಸಲ್ಲ. ನಾವು ಬಿಜೆಪಿ ಚಿಹ್ನೆ ಮೇಲೆ ಗೆದ್ದಿದ್ದು, ಮುಂದೆಯೂ ಬಿಜೆಪಿಯಿಂದಲೇ ಸ್ಪರ್ಧೆ ಮಾಡುತ್ತೇವೆ. ಮತ್ತೆ ಗೆದ್ದು ಮತ್ತೆ ರಾಜ್ಯದಲ್ಲಿ ಅಧಿಕಾರಕ್ಕೆ ಬರುತ್ತೇವೆ ಎಂದು ಬೈರತಿ ಬಸವರಾಜ್ ಹೇಳಿಕೆ ನೀಡಿದ್ದಾರೆ.
05:40 pm ಅಕ್ರಮ ಹಣ ವಹಿವಾಟಿಗೆ ಸಂಬಂಧಿಸಿದಂತೆ ರಾಧಿಕಾ ಕುಮಾರಸ್ವಾಮಿಗೆ ಸಿಸಿಬಿಯಿಂದ ನೋಟಿಸ್ ಜಾರಿಯಾಗಿದೆ. ನಾಳೆ ಬೆಳಗ್ಗೆ 11 ಗಂಟೆಗೆ ವಿಚಾರಣೆಗೆ ಹಾಜರಾಗುವಂತೆ ಸಿಸಿಬಿ ಅಧಿಕಾರಿಗಳು ಸೂಚನೆ ನೀಡಿದ್ದಾರೆ. ನಿನ್ನೆ ಬೆಳಗ್ಗೆ 9 ಗಂಟೆಗೆ ನ್ಯೂಸ್ ಬ್ರೇಕ್ ಮಾಡಿ ರಾಧಿಕಾ ಕುಮಾರಸ್ವಾಮಿ ಕೇಸ್ ಬಯಲಿಗೆಳೆದಿದ್ದ ಟಿವಿ9.
04:59 pm ಸಂಕ್ರಾಂತಿ ಬಳಿಕ ಸಂಪುಟ ವಿಸ್ತರಣೆ ಮಾಡುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ. ನಮ್ಮ ಜೊತೆ ಬಂದ ಆರ್.ಶಂಕರ್, ಎಂಟಿಬಿ ನಾಗರಾಜ್, ಮುನಿರತ್ನ ಮೂವರಿಗೂ ಸಚಿವ ಸ್ಥಾನ ಕೊಡುವುದಾಗಿ ಹೇಳಿದ್ದಾರೆ. ನಮಗೆ ಸಿಎಂ ಬಗ್ಗೆ ನಂಬಿಕೆ ಇದೆ. ಸಿ.ಪಿ.ಯೋಗೇಶ್ವರ ಗೆ ಸಚಿವ ಸ್ಥಾನ ಕೊಡೋದು ಅವರಿಗೆ ಬಿಟ್ಟ ವಿಚಾರ. ಆದರೆ, ನಮ್ಮ ಜೊತೆ ಬಂದವರ ಬಗ್ಗೆ ಮಾತ್ರ ನಾವು ಹೇಳಬಹುದು. ಎಂದು ಬೆಳಗಾವಿಯಲ್ಲಿ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್ ಹೇಳಿಕೆ ನೀಡಿದ್ದಾರೆ. ನಗರಾಭಿವೃದ್ಧಿ ಖಾತೆಯಲ್ಲಿ ನನಗೆ ತುಂಬಾ ತೃಪ್ತಿ ಇದೆ. ಈ ಖಾತೆಯಿಂದ ಬಡವರಿಗೆ ಕೆಲಸ ಮಾಡಿಕೊಡುವ ನೆಮ್ಮದಿ ಸಿಕ್ಕಿದೆ. ಸಿಎಂ ಸಹ ನನಗೆ ತುಂಬಾ ಸಹಕಾರ ಕೊಟ್ಟಿದ್ದು ಅವರಿಗೆ ಧನ್ಯವಾದ ತಿಳಿಸುತ್ತೇನೆ ಎಂದಿದ್ದಾರೆ.
04:52 pm ಹರಿಯಾಣದ ಗುರುಗ್ರಾಮದಲ್ಲಿನ ಕೊರೊನಾ ಲಸಿಕೆ ಕೇಂದ್ರಕ್ಕೆ ವಿಶ್ವ ಆರೋಗ್ಯ ಸಂಸ್ಥೆಯ ತಂಡ ಭೇಟಿ ನೀಡಿದೆ. ಕೊರೊನಾ ಲಸಿಕೆ ಕೇಂದ್ರಪರಿಶೀಲಿಸಿ ಉತ್ತಮ ಅಭಿಪ್ರಾಯ ವ್ಯಕ್ತಪಡಿಸಿರುವ ಅಧಿಕಾರಿಗಳು WHO ಶಿಫಾರಸುಗಳನ್ನು ಕೇಂದ್ರದಲ್ಲಿ ಅನುಸರಿಸಲಾಗಿದೆ ಎಂದು ಹೇಳಿದ್ದಾರೆ.
04:45 pm ಪ್ರಧಾನಿ ಮೋದಿ ರೈತರ ಖಾತೆಗೆ ಹಣ ಹಾಕಿದ್ರೆ ಅದರ ಬಗ್ಗೆಯೇ ಎಲ್ಲರೂ ಮಾತನಾಡ್ತಾರೆ. ₹2000 ಕೊಟ್ಟಿದ್ದನ್ನೇ ಬಿಜೆಪಿಯವರು ದೊಡ್ಡ ವಿಷಯ ಅನ್ನುವಂತೆ ಹೇಳ್ತಾರೆ. ಆದ್ರೆ ನಾನು ಲಕ್ಷ ಲಕ್ಷ ರೈತರ ಸಾಲ ಮನ್ನಾ ಮಾಡಿದ್ದೇನೆ. ಅದರ ಬಗ್ಗೆ ಯಾರೂ ಮಾತನಾಡುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಬೆಂಗಳೂರಿನಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.
04:35 pm ಬಿಜೆಪಿ ಜೊತೆ ಜೆಡಿಎಸ್ ವಿಲೀನವಾಗಲಿದೆ ಎಂಬುದು ಕೇವಲ ವದಂತಿ. ಯಾವುದೇ ಕಾರಣಕ್ಕೂ ಯಾವ ಪಕ್ಷದ ಜೊತೆಯೂ ವಿಲೀನವಾಗುವುದಿಲ್ಲ ಎಂದು ಮಾಜಿ ಸಿಎಂ H.D.ಕುಮಾರಸ್ವಾಮಿ ಬೆಂಗಳೂರಿನಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ. ಬಿಎಸ್‌ವೈ, ಬಿಜೆಪಿ ಬಗ್ಗೆ ನಮಗೆ ಸಾಫ್ಟ್ ಕಾರ್ನರ್ ಇಲ್ಲ. ಸುಮ್ಮನೇ ಈ ಸುದ್ದಿಯನ್ನು ಹಬ್ಬಿಸಲಾಗುತ್ತಿದೆ. ಕೆಲವರು JDSನಿಂದ ಒಳ ಒಪ್ಪಂದ ಎಂದು ಹೇಳುತ್ತಿದ್ದಾರೆ. ಆದರೆ, ಯಾವುದೇ ರೀತಿಯ ಒಪ್ಪಂದವೂ ಇಲ್ಲ. ಈ ಸಂದೇಶ ಇಡೀ ರಾಜ್ಯಕ್ಕೆ ಹೋಗಬೇಕು ಎಂದು ಹೆಚ್.ಡಿ.ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.
03:55 pm ಕೊರೊನಾ ಲಸಿಕೆ ತುರ್ತುಬಳಕೆಗೆ ಅನುಮೋದನೆ ಸಿಕ್ಕಿರುವ ಬೆನ್ನಲ್ಲೇ ಲಸಿಕೆ ವಿತರಣೆಗೆ ಸಿದ್ಧವಾಗುವಂತೆ ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ರಾಜ್ಯಸರ್ಕಾರಗಳಿಗೆ ಸೂಚನೆ ನೀಡಿದ್ದಾರೆ. ಇಂದು ನಡೆದ ಆರೋಗ್ಯ ಸಚಿವರ ಸಭೆಯಲ್ಲಿ ಹರ್ಷವರ್ಧನ್ ಈ ಬಗ್ಗೆ ಮಾತನಾಡಿದ್ದು, ಶೀಘ್ರದಲ್ಲೇ ಲಸಿಕೆ ಪೂರೈಸಲಾಗುತ್ತದೆ. ಲಸಿಕೆ ಸ್ವೀಕರಿಸಲು ರಾಜ್ಯಗಳು ಸಿದ್ಧವಾಗಿರಬೇಕು ಎಂದು ಹೇಳಿಕೆ ನೀಡಿದ್ದಾರೆ.
03:51 pm ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಭಾರೀ ಹೆಚ್ಚಳವಾಗಿರುವುದಕ್ಕೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಿಡಿಮಿಡಿಗೊಂಡಿದ್ದಾರೆ. ಕೇಂದ್ರ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ರಾಹುಲ್, ಮೋದಿ ಸರ್ಕಾರ ಭಾರೀ ತೆರಿಗೆ ವಿಧಿಸುವ ಮೂಲಕ ಸಾರ್ವಜನಿಕರನ್ನು ಲೂಟಿ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ. ಪೆಟ್ರೋಲ್, ಡೀಸೆಲ್ ತೈಲಗಳನ್ನು ಜಿಎಸ್ಟಿ ವ್ಯಾಪ್ತಿಗೆ ಸೇರಿಸದೇ ಜನರನ್ನು ದೋಚುತ್ತಿದ್ದಾರೆ ಎಂದು ಹೇಳಿದ್ದಾರೆ.
03:46 pm ಚಿಕ್ಕಬಳ್ಳಾಪುರದಲ್ಲಿ ಇದ್ದಕ್ಕಿದ್ದಂತೆ ವಲಸೆ ಪಕ್ಷಿಗಳು ಸಾಯುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಚಿಕ್ಕಬಳ್ಳಾಪುರದ ಅಮಾನಿ ಗೋಪಾಲಕೃಷ್ಣ ಕೆರೆಯಲ್ಲಿ ಪಕ್ಷಿಗಳು ಸಾಯುತ್ತಿದ್ದು, ಜನರಲ್ಲಿ ಆತಂಕ ಮೂಡಿಸಿದೆ. ಪಕ್ಷಿಗಳು ಸಾಯುತ್ತಿರುವ ಕಾರಣ ಕೆರೆಯ ಕಡೆ ದನ ಕರು ಮೇಕೆ ಕುರಿಗಳನ್ನು ಬೀಡದಂತೆ ಪಶು ಸೇವಾ ಹಾಗೂ ಪಶು ವೈದ್ಯಕೀಯ ಇಲಾಖೆ ಸಹಾಯಕ ನಿರ್ದೇಶಕ ಶ್ರೀನಿನಾಥ್ ರೆಡ್ಡಿ ಟಿವಿ9 ಮೂಲಕ ಮನವಿ ಮಾಡಿದ್ದಾರೆ. ಪಕ್ಷಿಗಳ ಕಳೆಬರಹ ಸಂಗ್ರಹಿಸಿ ಬೆಂಗಳೂರಿನ ಐ.ಎಚ್.ವಿ.ಬಿ ಸಂಸ್ಥೆಗೆ ರವಾನೆ ಮಾಡಲಾಗಿದ್ದು, ಫಲಿತಾಂಸ ಬಂದ ನಂತರವಷ್ಟೇ ಸಾವಿಗೆ ಕಾರಣ ತಿಳಿಯಲಿದೆ.
03:20 pm ಶಿವಮೊಗ್ಗದ ಸವಳಂಗ ರಸ್ತೆಯ ರೋಟರಿ ಯುವಕೇಂದ್ರ ಹಾಗೂ ಅದರ ಪಕ್ಕದ ಪಾರ್ಕ್ನಲ್ಲಿ ಐದಾರು ಹಕ್ಕಿಗಳು
ಹಕ್ಕಿಗಳು ಸತ್ತು ಬಿದ್ದಿವೆ. ಪಾಲಿಕೆಯ ಆರೋಗ್ಯ ಅಧಿಕಾರಿಗಳು ಮೃತ ಹಕ್ಕಿಗಳ ಪರೀಕ್ಷೆ ನಡೆಸುವುದಾಗಿ ತಿಳಿಸಿದ್ದಾರೆ. ಸದ್ಯ ಸಾವಿಗೆ ಕಾರಣ ತಿಳಿದುಬಂದಿಲ್ಲವಾದರೂ, ಜನರಲ್ಲಿ ಹಕ್ಕಿಜ್ವರದ ಭೀತಿ ಶುರುವಾಗಿದೆ.
03:10 pm ಬ್ರಿಟನ್ ಮತ್ತು ಭಾರತ ನಡುವಿನ ವಿಮಾನ ಸಂಚಾರಕ್ಕೆ ಹೇರಿದ್ದ ನಿರ್ಬಂಧ ತೆರವುಗೊಳಿಸುವುದಾಗಿ ಕೇಂದ್ರ ಸರ್ಕಾರ ಹೇಳಿದೆ. ಆದರೆ, ಕೊರೊನಾ ಸೋಂಕು ತಡೆಗಟ್ಟುವ ದೃಷ್ಟಿಯಿಂದ ಈ ನಿರ್ಧಾರ ಒಳ್ಳೆಯದಲ್ಲ. ಜ.31ರ ತನಕವೂ ನಿರ್ಬಂಧ ಮುಂದುವರೆಸಬೇಕು ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.
03:03 pm ಅಮೆರಿಕಾದ ನೂತನ ಅಧ್ಯಕ್ಷರಾಗಿ ಜೋ ಬೈಡನ್ ಅಧಿಕೃತ ಆಯ್ಕೆಯಾದ ಬೆನ್ನಲ್ಲೇ ನಿಯಮಬದ್ಧವಾಗಿ ಅಧಿಕಾರ ಹಸ್ತಾಂತರ ಮಾಡುವುದಾಗಿ ಟ್ರಂಪ್ ತಿಳಿಸಿದ್ದಾರೆ. ಈ ಚುನಾವಣಾ ಫಲಿತಾಂಶವನ್ನು ನಾನು ಒಪ್ಪುವುದಿಲ್ಲ. ಕಾನೂನುಬದ್ಧ ಮತಗಳನ್ನು ಮಾತ್ರ ಎಣಿಕೆ ಮಾಡಬೇಕಾಗಿತ್ತು. ಅದೇನೇ ಇದ್ದರೂ ಅಧಿಕಾರ ಹಸ್ತಾಂತರ ಮಾಡುತ್ತೇನೆ. ಆಮೆರಿಕಾವನ್ನು ಮತ್ತೆ ಶ್ರೇಷ್ಠವಾಗಿಸುವ ನಮ್ಮ ಹೋರಾಟ ಈಗ ಆರಂಭವಾಗಲಿದೆ ಎಂದು ಹೇಳಿದ್ದಾರೆ.
02:47 pm ಕೊರೊನಾಕ್ಕೆ ಲಸಿಕೆ ಲಭ್ಯವಾಗುವ ಹಂತದಲ್ಲಿರುವಾಗಲೇ ಭಾರತಕ್ಕೆ ಇನ್ನೊಂದು ಸಿಹಿಸುದ್ದಿ ಸಿಕ್ಕಿದೆ. ಕೊರೊನಾ ಸೋಂಕಿನಿಂದ ಗುಣಮುಖರಾಗುತ್ತಿರುವವರ ಸಂಖ್ಯೆ ಭಾರತದಲ್ಲಿ 1 ಕೋಟಿ ದಾಟಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಇಂದು ಮಾಹಿತಿ ನೀಡಿದೆ. ಇದುವರೆಗೆ ಭಾರತದಲ್ಲಿ ಸೋಂಕಿನಿಂದ ಹೊರಬಂದವರ ಸಂಖ್ಯೆ – 1,00,16,859 ಎಂದು ಸಚಿವಾಲಯ ತಿಳಿಸಿದೆ.
02:38 pm ಅಮೆರಿಕದ 46ನೇ ಅಧ್ಯಕ್ಷರಾಗಿ ಜೋ ಬೈಡನ್ ಅಧಿಕಾರ ಸ್ವೀಕರಿಸುವುದು ಖಚಿತವಾಗಿದೆ. ಅಮೆರಿಕದ ಕಾಂಗ್ರೆಸ್ ಜಂಟಿ ಅಧಿವೇಶನದಲ್ಲಿ ಈ ನಿರ್ಣಯ ತೆಗೆದುಕೊಳ್ಳಲಾಗಿದ್ದು, ಉಪಾಧ್ಯಕ್ಷ ಮೈಕ್ಪೆನ್ಸ್ ಈ ವಿಚಾರವನ್ನು ಘೋಷಿಸಿದ್ದಾರೆ. ಜನವರಿ 20ರಂದು ಅಮೆರಿಕಾದ ನೂತನ ಅಧ್ಯಕ್ಷರಾಗಿ ಜೋ ಬೈಡನ್ ಪದಗ್ರಹಣ ಆಗಲಿದೆ. ಜೊತೆಗೆ, ಉಪಾಧ್ಯಕ್ಷರಾಗಿ ಕಮಲಾ ಹ್ಯಾರಿಸ್ ಆಯ್ಕೆಯಾಗಿದ್ದಾರೆ. ಎಲೆಕ್ಟೋರಲ್ ಕಾಲೇಜ್‌ನ 540 ಮತಗಳ ಪೈಕಿ ಜೋ ಬೈಡನ್ಗೆ 306 ಮತ ಹಾಗೂ ನಿರ್ಗಮಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ 232 ಮತಗಳು ಲಭಿಸಿವೆ. ಆಮೆರಿಕಾದ ಅಧ್ಯಕ್ಷರಾಗಲು ಎಲೆಕ್ಟೋರಲ್ ಕಾಲೇಜ್ ನಲ್ಲಿ 270 ಮತ ಪಡೆಯಬೇಕಿದ್ದು, ಜೋ ಬೈಡನ್ ಅಧಿಕ 36 ಮತ ಪಡೆದಿದ್ದಾರೆ.
01:45 pm ನಾಳೆ ದೇಶಾದ್ಯಂತ 2ನೇ ಹಂತದ ಕೊರೊನಾ ಲಸಿಕೆ ತಾಲೀಮು ಕಾರ್ಯಕ್ರಮ ನಡೆಸುತ್ತೇವೆ. ಈ ಹಿಂದೆ ನಾಲ್ಕು ರಾಜ್ಯಗಳಲ್ಲಿ ತಾಲೀಮು ನಡೆಸಿದ್ದೆವು. ಆ ಕುರಿತು ಉತ್ತಮ ಅಭಿಪ್ರಾಯ ಲಭ್ಯವಾಗಿದೆ. ನಾಳೆ ಹರಿಯಾಣ, ಉತ್ತರಪ್ರದೇಶ ಹೊರತುಪಡಿಸಿ ಉಳಿದೆಡೆ ತಾಲೀಮು ನಡೆಸಲಾಗುವುದು ಎಂದು ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ದೆಹಲಿಯಲ್ಲಿ ಹೇಳಿಕೆ ನೀಡಿದ್ದಾರೆ.
01:38 pm ರಾಷ್ಟ್ರೀಯ ಲಸಿಕಾ ದಿನವಾದ ಜನವರಿ 17ರಂದು ಪಲ್ಸ್ ಪೋಲಿಯೋ ಲಸಿಕೆ ಕಾರ್ಯಕ್ರಮ ನಡೆಯಲಿದೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ತಿಳಿಸಿದ್ದಾರೆ. ಕಳೆದ ಹತ್ತು ವರ್ಷಗಳಿಂದ ದೇಶದಲ್ಲಿ ಪೋಲಿಯೋ ವೈರಸ್ ಪತ್ತೆಯಾಗಿಲ್ಲ. ಪೋಲಿಯೋವನ್ನು ನಾವು ದೇಶದಿಂದ ನಿರ್ಮೂಲನೆ ಮಾಡಿದ್ದೇವೆ. ಆದರೂ ಪೋಲಿಯೋ ವಿರುದ್ಧದ ರೋಗ ನಿರೋಧಕ ಶಕ್ತಿಯನ್ನು ಮತ್ತಷ್ಟು ಬಲಗೊಳಿಸುವುದು ಅಗತ್ಯವಿದೆ. ಅಂತೆಯೇ ಕೊರೊನಾ ಲಸಿಕೆ ಕುರಿತಾಗಿಯೂ ದೇಶವ್ಯಾಪಿ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಗುವುದು ಎಂದಿದ್ದಾರೆ.
01:31 am ರಾಜ್ಯ ಕಾನೂನು ಸಚಿವ ಮಾಧುಸ್ವಾಮಿ ಮತ್ತೊಮ್ಮೆ ಅವಾಚ್ಯ ಶಬ್ದ ಬಳಕೆ ಕಾರಣಕ್ಕೆ ಸುದ್ದಿಯಾಗಿದ್ದಾರೆ. ಈ ಹಿಂದೆ ರೈತ ಮಹಿಳೆಗೆ ನಿಂದಿಸಿದ್ದ ಮಾಧುಸ್ವಾಮಿ ಇದೀಗ ತುಮಕೂರು ಜಿ.ಪಂ ಕೆಡಿಪಿ ಸಭೆಯಲ್ಲಿ ಎಇಇ ವಿರುದ್ಧ ಕೂಗಾಡಿದ್ದಾರೆ. ಜೊತೆಗೆ ಅಧಿಕಾರಿಯ ಪತ್ನಿಯನ್ನೂ ನಿಂದಿಸಿದ್ದಾರೆ.
ಪೂರ್ಣ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ
01:24 pm ರಾಜ್ಯದಲ್ಲಿ ಜನವರಿ 11ರವರೆಗೂ ಮಳೆ ವಾತಾವರಣ ಮುಂದುವರೆಯಲಿದೆ ಎಂದು ರಾಜ್ಯ ಹವಾಮಾನ ಇಲಾಖೆ ನಿರ್ದೇಶಕ ಸಿಎಸ್ ಪಾಟೀಲ್ ಮಾಹಿತಿ ನೀಡಿದ್ದಾರೆ. ದಕ್ಷಿಣಕನ್ನಡ, ಉಡುಪಿ, ಉತ್ತರ ಕನ್ನಡ, ಶಿವಮೊಗ್ಗ, ಮೈಸೂರು, ಹಾಸನ, ಚಿಕ್ಕಮಗಳೂರು, ಕೊಡಗು, ಚಾಮರಾಜನಗರ ಜಿಲ್ಲೆಗಳಲ್ಲಿ ಇಂದು ಮತ್ತು ನಾಳೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಬೆಂಗಳೂರಿನಲ್ಲಿ ಇಂದು ನಾಳೆ ಹಗುರದಿಂದ ಸಾಧಾರಣ ಮಳೆಯಾಗಲಿದೆ ಎಂದು ತಿಳಿಸಿದ್ದಾರೆ.
01:23 pm ಕೃಷಿ ತಿದ್ದುಪಡಿ ಕಾಯ್ದೆ ಖಂಡಿಸಿ ಪ್ರತಿಭಟನೆ ನಡೆಸುವ ರೈತರಿಂದ ಕೊರೊನಾ ಹರಡುವ ಕುರಿತು ಸರ್ವೋಚ್ಛ ನ್ಯಾಯಾಲಯ ಕಳವಳ ವ್ಯಕ್ತಪಡಿಸಿದೆ. ರೈತರ ಧರಣಿಯಲ್ಲಿ ಕೊವಿಡ್ ನಿಯಮ ಪಾಲನೆ ಸಾಧ್ಯವಿದೆಯಾ? ರೈತರು ಕೊರೊನಾದಿಂದ ಸುರಕ್ಷಿತವಾಗಿದ್ದಾರಾ? ಎನ್ನುವ ಬಗ್ಗೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಪ್ರಶ್ನೆ ಮಾಡಿದೆ. ಕೊರೊನಾ ನಿಯಮ ಉಲ್ಲಂಘನೆ ಸಂಬಂಧ ಮತ್ತೊಂದು ಕೇಸ್ ದಾಖಲಾಗಿದ್ದು, ತಬ್ಲೀಗ್ ಜಮಾತ್‌ನಂತಹ ಪ್ರಕರಣವಾಗುವ ಸಾಧ್ಯತೆ ಇದೆ ಎಂಬ ಆತಂಕ ವ್ಯಕ್ತವಾಗಿದೆ.
01:21 pm ಪ್ರೊ.ದೇಬಬ್ರತಾ ದಾಸ್ ಅವರನ್ನು ಇಂಟರ್ನ್ಯಾಶನಲ್ ಇನ್ಸ್ಟಿಟ್ಯೂಟ್ ಆಫ್ ಇನ್ಫರ್ಮೇಷನ್ ಟೆಕ್ನಾಲಜಿ ಬೆಂಗಳೂರಿನ (IIITB) ನಿರ್ದೇಶಕರಾಗಿ ನೇಮಕ ಮಾಡಲಾಗಿದೆ. ಈ ಕುರಿತು IIITB ಐಐಐಟಿಬಿ ಗುರುವಾರ ಮಾಹಿತಿ ನೀಡಿದೆ. 21 ವರ್ಷಗಳ ವೃತ್ತಿಪರ ಅನುಭವ ಹೊಂದಿದ ಪ್ರೊ.ದೇಬಬ್ರತಾ ದಾಸ್ 2002ರಲ್ಲಿ IIITB ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಲು ಪ್ರಾರಂಭಿಸಿದ್ದರು.
01:11 pm ನಾಳೆ ದೇಶಾದ್ಯಂತ ನಡೆಯಲಿರುವ ಕೊರೊನಾ ಲಸಿಕೆ ವಿತರಣೆಯ 2ನೇ ಹಂತದ ತಾಲೀಮು ಪ್ರಕ್ರಿಯೆ ಕುರಿತು ಕೇಂದ್ರದ ಆರೋಗ್ಯ ಸಚಿವರು ಮತ್ತು ಎಲ್ಲಾ ರಾಜ್ಯಗಳ ಆರೋಗ್ಯ ಸಚಿವರ ಜತೆ ವಿಡಿಯೋ ಸಂವಾದ ನಡೆಸುತ್ತಿದ್ದಾರೆ. ಸಭೆ ಈಗಾಗಲೇ ಆರಂಭವಾಗಿದ್ದು, ಕರ್ನಾಟಕದ ಪರವಾಗಿ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್, ಹಿರಿಯ ಅಧಿಕಾರಿಗಳಾದ ಜಾವೇದ್ ಅಖ್ತರ್ ಮತ್ತು ಪಂಕಜ್ ಕುಮಾರ್ ಪಾಂಡೆ ಸಭೆಯಲ್ಲಿ ಭಾಗವಹಿಸಿದ್ದಾರೆ.
01:08 pm ಅಮಿತಾಬ್ ಬಚ್ಚನ್ ಧ್ವನಿಯ ಕೊರೊನಾ ಕಾಲರ್ ಟ್ಯೂನ್ ತೆಗೆದು ಹಾಕುವಂತೆ ದೆಹಲಿ ಹೈಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ. ಕರೆ ಮಾಡಿದಾಗ ಕೇಳಿ ಬರುವ ಕೊರೊನಾ ಕಾಲರ್ ಟ್ಯೂನ್ ಕುರಿತು ಈ ಹಿಂದೆಯೂ ಸಾಕಷ್ಟು ಟೀಕೆ ವ್ಯಕ್ತವಾಗಿತ್ತು.
01:02 pm ಕರ್ನಾಟಕದಲ್ಲಿ ಸುಗ್ರೀವಾಜ್ಞೆ ಮೂಲಕ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ತರಲಾಗಿದೆ. ಗೋಹತ್ಯೆ ನಿಷೆಧಿಸಿರುವುದು ಕೇವಲ ಗೋ ಮಾಂಸ ತಿನ್ನುವವರಿಗೆ ಸಂಬಂಧಿಸಿದ್ದಲ್ಲ. ಈ ಕಾಯ್ದೆ ಮೂಲಕ ಕೃಷಿಯಿಂದ ಜಾನುವಾರುಗಳನ್ನು ಬೇರ್ಪಡಿಸುತ್ತಿದ್ದಾರೆ. ರೈತರಿಂದ ಜಾನುವಾರುಗಳನ್ನು ಕಿತ್ತುಕೊಳ್ಳುತ್ತಿದ್ದಾರೆ. ಕೃಷಿ ಪದ್ಧತಿ ಹಾಗೂ ಜಾನುವಾರು ಸಾಕಾಣಿಕೆ ಮೇಲೆ ಇದು ಪ್ರಭಾವ ಬೀರಲಿದೆ. ಭೂ ಸುಧಾರಣೆ ಕಾಯ್ದೆ ಜೊತೆಗೆ ಇದನ್ನೂ ಕೂಡಲೇ ವಾಪಾಸ್ ಪಡೆಯಬೇಕು. ಇಲ್ಲವಾದಲ್ಲಿ ತಜ್ಞರ ಸಲಹೆ ಪಡೆದು ಸಮಾವೇಶ ನಡೆಸುವ ಮೂಲಕ ಮತ್ತೆ ಹೋರಾಟ ಆರಂಭಿಸುತ್ತೇವೆ ಎಂದು ಕೋಡಿಹಳ್ಳಿ ಚಂದ್ರಶೇಖರ್ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
12:49 pm ಕೊಡಗು ಜಿಲ್ಲೆ ಸೋಮವಾರಪೇಟೆ ತಾಲ್ಲೂಕಿನ ವಾಲ್ನೂರು ತ್ಯಾಗತ್ತೂರಿನಲ್ಲಿ ₹1 ಲಕ್ಷ ಮೌಲ್ಯದ ಬೀಟೆ ಮರದ ತುಂಡನ್ನು ಅರಣ್ಯಾಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಕುಶಾಲನಗರ ಉಪವಲಯ ಅರಣ್ಯ ವಿಭಾಗದಲ್ಲಿ ಘಟನೆ ನಡೆದಿದ್ದು, ಅಕ್ರಮ ಸಾಗಾಣಿಕೆಗೆ ಬಳಸುತ್ತಿದ್ದ ಓಮ್ನಿ ವಾಹನ ಮತ್ತು ಮರದ ತುಂಡುಗಳನ್ನು ವಶಕ್ಕೆ ಪಡೆಯಲಾಗಿದೆ. ದಾಳಿ ವೇಳೆ ಆರೋಪಿ ನಿಸಾರ್ ಎಂಬಾತ ನಾಪತ್ತೆಯಾಗಿದ್ದು, ಅರಣ್ಯಾಧಿಕಾರಿಗಳು ಶೋಧಕಾರ್ಯ ಮುಂದುವರೆಸಿದ್ದಾರೆ.
12:28 pm ಮಳೆಯ ಕಾರಣದಿಂದ ಸ್ಥಗಿತಗೊಂಡಿದ್ದ ಇಂಡಿಯಾ – ಆಸ್ಟ್ರೇಲಿಯಾ ನಡುವಿನ ಮೂರನೇ ಟೆಸ್ಟ್ ಪಂದ್ಯ ಈಗ ಸುಗಮವಾಗಿ ಸಾಗುತ್ತಿದೆ. ಸಿಡ್ನಿಯಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಆರಂಭಿಕ ಆಘಾತಕ್ಕೊಳಗಾಗಿದ್ದ ಆಸಿಸ್ ಇದೀಗ ಉತ್ತಮ ಪ್ರದರ್ಶನ ತೋರುತ್ತಿದೆ. ಸದ್ಯ ಆಸಿಸ್ 42 ಓವರ್ಗಳಲ್ಲಿ 2 ವಿಕೆಟ್ ನಷ್ಟಕ್ಕೆ 136 ರನ್ ಬಾರಿಸಿದ್ದು, ಮಾರ್ನಸ್ ಲ್ಯಾಬುಸ್ಚಾಗ್ನೆ 44 ರನ್(105 ಎಸೆತ), ಸ್ಮಿತ್ 24 ರನ್ (30 ಎಸೆತ) ಗಳಿಸಿದ್ದಾರೆ.
12:18 pm ಕರ್ನಾಟಕದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿ ಮಾಡುವ ಮೂಲಕ ನಮ್ಮ ಭಾವನೆಗಳಿಗೆ ಯಡಿಯೂರಪ್ಪ ಸ್ಪಂದಿಸಿದ್ದಾರೆ. ಮಹಾತ್ಮ ಗಾಂಧಿಯಿಂದ ಈ ನೆಲದ ರೈತರವರೆಗೆ ಎಲ್ಲರೂ ಗೋಹತ್ಯೆ ನಿಷೇಧ ಜಾರಿ ಆಗಬೇಕು ಎಂದು ಬಯಸಿದ್ದರು. ಆದ್ದರಿಂದ ಗೋಹತ್ಯೆ ನಿಷೇಧ ಕಾಯ್ದೆ ಕೀರ್ತಿ ಬಿಜೆಪಿಗೆ ಸಲ್ಲುತ್ತದೆ ಎಂದು ಮುಜರಾಯಿ ಇಲಾಖೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಮಂಗಳೂರಿನಲ್ಲಿ ಹೇಳಿದ್ದಾರೆ. ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯರ ತರಬೇತಿ ಉದ್ಘಾಟನೆ ಬಳಿಕ ಕೋಟಾ ಶ್ರೀನಿವಾಸ ಪೂಜಾರಿ ಹೇಳಿಕೆ ನೀಡಿದ್ದಾರೆ.
12:08 pm ಮುಖ್ಯಮಂತ್ರಿ ಬದಲಾವಣೆ ಮಾತುಗಳು ಕೇಳಿ ಬರುತ್ತಿರುವ ಹಿನ್ನೆಲೆಯಲ್ಲೇ ಮುಖ್ಯಮಂತ್ರಿ ಹುದ್ದೆ ಖಾಲಿ ಇಲ್ಲ. ಇನ್ನೂ ಎರಡೂವರೆ ವರ್ಷ ಬಿ.ಎಸ್.ಯಡಿಯೂರಪ್ಪನವರೇ ಸಿಎಂ ಆಗಿರುತ್ತಾರೆ ಎಂದು ಡಿಸಿಎಂ ಗೋವಿಂದ ಕಾರಜೋಳ ದಾವಣಗೆರೆಯಲ್ಲಿ ಹೇಳಿಕೆ ನೀಡಿದ್ದಾರೆ. ಸಿಎಂ ಅವರು ಶಾಸಕರ ಸಭೆಯನ್ನ ಕರೆದಾಗ ಎಲ್ಲಾ ಶಾಸಕರೂ ಹಾಜರಿದ್ದರು. ಕೊರೊನಾ ಕಾರಣ ಶಾಸಕರಿಗೆ ನಿರೀಕ್ಷಿತ ಪ್ರಮಾಣದ ಅನುದಾನ ನೀಡಲು ಸಾಧ್ಯವಾಗಿಲ್ಲ ಎನ್ನುವುದು ಮನದಟ್ಟಾಗಿದೆ ಎಂದು ತಿಳಿಸಿದ್ದಾರೆ. ಪಕ್ಷದ ವಿರುದ್ಧ ಮಾತನಾಡುತ್ತಿರುವ ಯತ್ನಾಳ್ ಕುರಿತು ರಾಜ್ಯಾಧ್ಯಕ್ಷರು, ರಾಜ್ಯ ಉಸ್ತುವಾರಿ ಸಚಿವರು ಮತ್ತು ರಾಷ್ಟ್ರಾಧ್ಯಕ್ಷರಿಗೆ ಮಾಹಿತಿ ಇದೆ ಎಂದು ಹೇಳಿದ್ದಾರೆ.
12:01 pm ಅಮೆರಿಕದ ಕ್ಯಾಪಿಟಲ್ ಕಟ್ಟಡದಲ್ಲಿ ಘರ್ಷಣೆ ಟ್ರಂಪ್ ಬೆಂಬಲಿಗರು ನಡೆಸಿದ ಗಲಾಟೆಯಲ್ಲಿ ಮೃತಪಟ್ಟವರ ಸಂಖ್ಯೆ ನಾಲ್ಕಕ್ಕೇರಿದೆ. ಈ ಬಗ್ಗೆ ಅಮೆರಿಕಾ ಪೊಲೀಸರು ಮಾಹಿತಿ ನೀಡಿದ್ದಾರೆ. ಅಂತೆಯೇ, ಪೊಲೀಸರ ಗುಂಡಿನ ದಾಳಿಯಲ್ಲಿ ಓರ್ವ ಮಹಿಳೆ ಸಾವಿಗೀಡಾಗಿರುವ ಕುರಿತು ವರದಿಗಳು ಲಭ್ಯವಾಗಿವೆ. ಸದ್ಯ ರಾಜಧಾನಿ ವಾಷಿಂಗ್ಟನ್ ಡಿಸಿಯಲ್ಲಿ ಕರ್ಫ್ಯೂ ಜಾರಿ ಮಾಡಲಾಗಿದ್ದು, ಈವರೆಗೆ 52 ಜನರನ್ನು ಬಂಧಿಸಲಾಗಿದೆ. ದಾಳಿಯನ್ನು ಖಂಡಿಸಿರುವ ಟ್ರಂಪ್ ಕ್ಯಾಬಿನೆಟ್ ಸದಸ್ಯರು ಟ್ರಂಪ್ ಪದಚ್ಯುತಿ ಬಗ್ಗೆ ಉಪಾಧ್ಯಕ್ಷ ಮೈಕಲ್ ಪೆನ್ಸ್ ಜೊತೆ ಚರ್ಚೆ ನಡೆಸಿದ್ದಾರೆ.
11:54 am ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಆಫ್ಲೈನ್ ಪರೀಕ್ಷೆ ನಡೆಸಲು ಮುಂದಾಗಿರುವ ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿದ್ಯಾಲಯದ ನಡೆಯನ್ನು ವಿರೋಧಿಸಿ ಮೈಸೂರಿನ ಜೆಎಸ್ಎಸ್ ವಿಜ್ಞಾನ ಮತ್ತು ತಾಂತ್ರಿಕ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಕಾಲೇಜಿನ ಮುಂಭಾಗ ಪ್ರತಿಭಟನೆ ನಡೆಸಿದ್ದಾರೆ. ಆನ್ಲೈನ್ನಲ್ಲಿ ಶಿಕ್ಷಣ ನೀಡಿ ಆಫ್ಲೈನ್ನಲ್ಲಿ ಪರೀಕ್ಷೆ ನಡೆಸುವ ನಿರ್ಧಾರ ಸರಿಯಲ್ಲ ಎಂದಿರುವ ವಿದ್ಯಾರ್ಥಿಗಳು ಆನ್‌ಲೈನ್ ಪರೀಕ್ಷೆ ನಡೆಸುವಂತೆ ಆಗ್ರಹಿಸಿ ಪ್ರಾಂಶುಪಾಲರಿಗೆ ಮನವಿಯನ್ನೂ ಸಲ್ಲಿಸಿದ್ದಾರೆ.
11:49 am ನೂತನ ಕೃಷಿ ಕಾಯ್ದೆ ವಿರೋಧಿಸಿ ನಿರಂತರವಾಗಿ ಪ್ರತಿಭಟಿಸುತ್ತಿರುವ ರೈತರು ದೆಹಲಿ ಗಡಿಭಾಗದಲ್ಲಿ ಟ್ರ್ಯಾಕ್ಟರ್ ಮೆರವಣಿಗೆ ಆರಂಭಿಸಿದ್ದಾರೆ. 3,500ಕ್ಕೂ ಹೆಚ್ಚು ಟ್ರ್ಯಾಕ್ಟರ್ಗಳನ್ನು ಬಳಸಿ ದೆಹಲಿ ಗಡಿಭಾಗದಲ್ಲಿ ಮೆರವಣಿಗೆ ನಡೆಸುತ್ತಿದ್ದಾರೆ. ಇದು ಗಣರಾಜ್ಯೋತ್ಸವ ದಿನಾಚರಣೆಗೆ ಟ್ರೇಲರ್ ಎಂದೂ ಹೇಳಿರುವುದು ಮತ್ತಷ್ಟು ಕುತೂಹಲ ಕೆರಳಿಸಿದೆ.
11:38 am ಕೋಲಾರದ ದೇವರಾಜ ಅರಸು ಮೆಡಿಕಲ್ ಕಾಲೇಜಿನ 28 ವಿದ್ಯಾರ್ಥಿಗಳಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಆ ಪೈಕಿ 27 ವಿದ್ಯಾರ್ಥಿಗಳು ಕೇರಳದಿಂದ ಬಂದಿದ್ದು, ಒಬ್ಬ ಪಶ್ಚಿಮ ಬಂಗಳಾದವನಾಗಿದ್ದಾನೆ. ಸೋಂಕಿತರನ್ನು ಹಾಸ್ಟೆಲ್ನಲ್ಲಿ ಕ್ವಾರಂಟೈನ್ ಮಾಡಲಾಗಿದ್ದು, ಉಳಿದ ವಿದ್ಯಾರ್ಥಿಗಳಿಗೆ ಪರೀಕ್ಷೆ ಮಾಡಲಾಗುತ್ತಿದೆ.
11:20 am ಕೊರೊನಾ ಸೋಂಕು ನಿರ್ವಹಣೆಗೆ ರಾಜ್ಯ ಮತ್ತು ಕೇಂದ್ರ ಸರ್ಕಾರ ನಿರಂತರ ಪ್ರಯತ್ನ ಮಾಡುತ್ತಿದೆ. ರಾಜ್ಯದಲ್ಲಿ ಇದುವರೆಗೆ 11 ಜನರಿಗೆ ಬ್ರಿಟನ್ ಸೋಂಕು ಪತ್ತೆಯಾಗಿದೆ. ಬ್ರಿಟನ್ಗೆ ವಿಮಾನಯಾನ ಸೇವೆ ಪುನರಾರಂಭದ ಕುರಿತು ಸರ್ಕಾರ ನಿರ್ಧರಿಸಲಿದೆ. ನಮ್ಮ ಜನ ಕೊರೊನಾ ನಿಯಮಗಳ ಪಾಲನೆಗೆ ನಿರ್ಲಕ್ಷ್ಯ ತೋರುತ್ತಿರುವುದು ಅಪಾಯಕಾರಿ ಎಂದು ಆರೋಗ್ಯ ಮತ್ತು ವೈದ್ಯಕೀಯ ಸಚಿವ ಡಾ.ಕೆ.ಸುಧಾಕರ್ ಕಳವಳ ವ್ಯಕ್ತಪಡಿಸಿದ್ದಾರೆ.
11:13 am ಕರ್ನಾಟಕದಲ್ಲಿ ಇದುವರೆಗೆ ಹಕ್ಕಿ ಜ್ವರದ ಒಂದೇ ಒಂದು ಪ್ರಕರಣವೂ ದಾಖಲಾಗಿಲ್ಲ. ಕೇರಳ ಗಡಿಭಾಗದಲ್ಲಿರುವ ಜಿಲ್ಲೆಗಳಲ್ಲಿ ವಿಶೇಷ ಗಮನವಹಿಸಿದ್ದೇವೆ. ಗಡಿ ಜಿಲ್ಲೆಗಳಲ್ಲಿ ಕಟ್ಟೆಚ್ಚರ ವಹಿಸಲು ಸೂಚನೆ ಕೊಡಲಾಗಿದೆ. ಜನರು ಜಾಗ್ರತೆವಹಿಸಬೇಕು ಎಂದು ಆರೋಗ್ಯ ಮತ್ತು ವೈದ್ಯಕೀಯ ಸಚಿವ ಡಾ.ಕೆ.ಸುಧಾಕರ್ ಮಾಹಿತಿ ನೀಡಿದ್ದಾರೆ.
11:06 am ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ದರ ದಾಖಲೆ ನಿರ್ಮಿಸಿದೆ. ರಾಜ್ಯದ ತೈಲ ಮಾರಾಟಗಾರರು ಸತತ ಎರಡನೇ ದಿನವೂ ಪೆಟ್ರೋಲ್ ಬೆಲೆ ಏರಿಸಿದ್ದು, ಇಂದಿನ ಮಾರುಕಟ್ಟೆಯಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ ₹84.20ಗೆ ತಲುಪಿದೆ. ಇದರ ಪ್ರಭಾವವಾಗಿ ಮುಂಬೈನಲ್ಲಿ ಪೆಟ್ರೋಲ್ ಇನ್ನೂ ದುಬಾರಿಯಾಗಿದ್ದು ಲೀಟರ್ಗೆ ₹90.83ರಷ್ಟಾಗಿದೆ. ಈ ಹಿಂದೆ 2008ರ ಅಕ್ಟೋಬರ್ 4ರಂದು ದೆಹಲಿಯಲ್ಲಿ ಪೆಟ್ರೋಲ್ ₹84ಕ್ಕೆ ತಲುಪಿದ್ದೇ ಸಾರ್ವಕಾಲಿಕ ದಾಖಲೆಯಾಗಿತ್ತು.
10:58 am ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಕೋಲ್ಕತ್ತಾದ ವುಡ್ಲ್ಯಾಂಡ್ಸ್ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ನನ್ನ ಆರೋಗ್ಯ ಸ್ಥಿತಿ ಈಗ ಸಹಜವಾಗಿದೆ. ನಾನು ಸಂಪೂರ್ಣ ಕ್ಷೇಮವಾಗಿದ್ದೇನೆ ಎಂದು ಹೇಳಿಕೆ ನೀಡಿರುವ ಗಂಗೂಲಿ ಚಿಕಿತ್ಸೆ ನೀಡಿದ ವೈದ್ಯರಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ತಿಳಿಸಿದ್ದಾರೆ.
#WATCH | "I thank the doctors at the hospital for the treatment. I am absolutely fine," says BCCI President Sourav Ganguly after being discharged from Kolkata's Woodlands Hospital. pic.twitter.com/BUwsz5h1FQ
— ANI (@ANI) January 7, 2021
10:49 am ರಾಜ್ಯದಲ್ಲಿ ಮೊದಲ ಹಂತದ ಕೊರೊನಾ ಲಸಿಕೆ ತಾಲೀಮಿನಲ್ಲಿ ಯಾವುದೇ ಲೋಪದೋಷ ಕಂಡುಬಂದಿಲ್ಲ. ನಾಳೆ (ಜ.8) 2ನೇ ಸುತ್ತಿನ ತಾಲೀಮು ನಡೆಸಲಿದ್ದೇವೆ. ಈ ಕುರಿತು ಇಂದು ಮಧ್ಯಾಹ್ನ 12.30 ಕ್ಕೆ ಕೇಂದ್ರ ಸಚಿವರೊಂದಿಗೆ ಸಭೆ. ಕೇಂದ್ರ ಸಚಿವರು ರಾಜ್ಯಗಳಿಗೆ ಒಂದಷ್ಟು ಮಾರ್ಗಸೂಚಿ ಕೊಡಬಹುದು ಎಂಬ ನಿರೀಕ್ಷೆಯಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಸಚಿವ ಡಾ.ಕೆ.ಸುಧಾಕರ್ ಮಾಹಿತಿ ನೀಡಿದ್ದಾರೆ.
10:34 am ನಾಳೆ (ಜ.8) ಕೊರೊನಾ ಲಸಿಕೆಗೆ ಸಂಬಂಧಿಸಿದಂತೆ 2ನೇ ಹಂತದ ತಾಲೀಮು ಪ್ರಕ್ರಿಯೆ ನಡೆಯಲಿದೆ. ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಕೆ.ಆರ್ ಪುರಂ ಆರೋಗ್ಯ ಕೇಂದ್ರ, ಕುಂಬಳಗೋಡು ಆರೋಗ್ಯ ಕೇಂದ್ರ, ಅನೇಕಲ್ ಆಕ್ಸ್ ಫರ್ಡ್ ಮೆಡಿಕಲ್ ಕಾಲೇಜು, ಕಗ್ಗಲೀಪುರ ಪ್ರಾಥಮಿಕ ಆರೋಗ್ಯ ಕೇಂದ್ರ, ಕಣ್ಣೂರು ಪ್ರಾಥಮಿಕ ಆರೋಗ್ಯ ಕೇಂದ್ರ, ಪಾಲನಾಯಕನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ತಾಲೀಮು ನಡೆಯಲಿದೆ. ಇವುಗಳ ಹೊರತಾಗಿ ಇನ್ನೂ ಎರಡು ಸ್ಥಳಗಳಿಗಾಗಿ ಆರೋಗ್ಯ ಇಲಾಖೆ ಹುಡುಕಾಟ ನಡೆಸಿದ್ದು, ಒಟ್ಟು 8 ಕಡೆ ತಾಲೀಮು ಪ್ರಕ್ರಿಯೆ ನಡೆಯಲಿದೆ.
10:28 am ಮಾಜಿ ಪ್ರಧಾನಿ, ಜೆಡಿಎಸ್ ನಾಯಕ ಹೆಚ್.ಡಿ.ದೇವೇಗೌಡ ಅವರ ನಿವಾಸಕ್ಕೆ ಕಾಂಗ್ರೆಸ್ ಎಂಎಲ್ಸಿ ಸಿ.ಎಂ.ಇಬ್ರಾಹಿಂ ಭೇಟಿ ನೀಡಿದ್ದಾರೆ. ಬೆಂಗಳೂರಿನ ಪದ್ಮನಾಭನಗರದಲ್ಲಿರುವ ಹೆಚ್ಡಿಡಿ ನಿವಾಸಕ್ಕೆ ಭೇಟಿ ನೀಡಿರುವ ಇಬ್ರಾಹಿಂ ದೊಡ್ಡಗೌಡರೊಂದಿಗೆ ಚರ್ಚೆ ನಡೆಸಿದ್ದಾರೆ. ಸಿ.ಎಂ.ಇಬ್ರಾಹಿಂ ಜೆಡಿಎಸ್ ಸೇರುತ್ತಾರೆ ಎಂಬ ಮಾತು ಬಲವಾಗಿ ಕೇಳಿ ಬರುತ್ತಿರುವ ಹೊತ್ತಿನಲ್ಲೇ ಹೀಗೆ ಚರ್ಚಿಸಿರುವುದು ಕುತೂಹಲಕ್ಕೆ ಕಾರಣವಾಗಿದೆ.
10:24 am ಕೊರೊನಾ ಲಸಿಕೆ ಹಂಚಿಕೆ ವಿಚಾರ ನನಗೆ ಸಂಬಂಧಿಸಿದ್ದಲ್ಲ. ಆ ಇಲಾಖೆ ನನಗೆ ಸಂಬಂಧಿಸಿದ್ದಲ್ಲ. ಆರೋಗ್ಯ ಮತ್ತು ವೈದ್ಯಕೀಯ ಸಚಿವ ಡಾ.ಕೆ.ಸುಧಾಕರ್ ಅದನ್ನು ನೋಡಿಕೊಳ್ಳುತ್ತಾರೆ ಎಂದು ಜಗದೀಶ್ ಶೆಟ್ಟರ್ ಹೇಳಿದ್ದಾರೆ. ಆರೋಗ್ಯ ಇಲಾಖೆ ಕೊರೊನಾ ಲಸಿಕೆಗೆ ಸಂಬಂಧಿಸಿದ ಸಕಲ ಸಿದ್ಧತೆಗಳನ್ನೂ ಮಾಡಿಕೊಂಡಿದೆ. ಎಲ್ಲವೂ ವ್ಯವಸ್ಥಿತವಾಗಿ ಆಗಲಿದೆ ಎಂದು ಮೈಸೂರಿನಲ್ಲಿ ಅಭಿಪ್ರಾಯಪಟ್ಟಿದ್ದಾರೆ.
10:20 am ವಿರೋಧ ಪಕ್ಷದಲ್ಲಿ ಇರುವ ಮಾತ್ರಕ್ಕೆ ಕಾಂಗ್ರೆಸ್ ಎಲ್ಲದಕ್ಕೂ ವಿರೋಧ ಮಾಡಬಾರದು. ರಚನಾತ್ಮಕ ವಿಚಾರಗಳಿಗೆ ಕೈ ಜೋಡಿಸಬೇಕೇ ಹೊರತು ಟೀಕೆ ಮಾಡುವುದು ಸರಿಯಲ್ಲ. ಅಷ್ಟೆಲ್ಲಾ ಆಪಾದನೆ ಮಾಡುವ ರಾಹುಲ್ ಗಾಂಧಿ ಪರಿಸ್ಥಿತಿ ಏನಾಗಿದೆ ನೋಡಿ. ಅತ್ತ ಅವರು ಟೀಕೆ ಮಾಡುತ್ತಿದ್ದರೆ ಇತ್ತ ಮೋದಿ ಜನಪ್ರಿಯರಾಗಿ ನಂಬರ್ 1 ಸ್ಥಾನದಲ್ಲಿದ್ದಾರೆ ಎಂದು ಜಗದೀಶ್ ಶೆಟ್ಟರ್ ಮೈಸೂರಿನಲ್ಲಿ ಹೇಳಿಕೆ ನೀಡಿದ್ದಾರೆ.
10:07 am ಚೆನ್ನೈನಲ್ಲಿ ಮಂಗಳವಾರ ಸುರಿದಿರುವ ಭಾರೀ ಮಳೆ ಹೊಸ ದಾಖಲೆ ನಿರ್ಮಿಸಿದೆ. ಒಂದೇ ದಿನದಲ್ಲಿ 123 ಮಿ.ಮೀ ಮಳೆ ಸುರಿದಿದ್ದು ಕಳೆದ ನೂರು ವರ್ಷಗಳಲ್ಲಿ ಸುರಿದಿರುವ ಅತ್ಯಧಿಕ ಪ್ರಮಾಣದ ಮಳೆ ಇದು ಎಂಬ ದಾಖಲೆ ಸೃಷ್ಟಿಯಾಗಿದೆ.
10:02 am ದೆಹಲಿ ಗಡಿ ಭಾಗದಲ್ಲಿ ಕೃಷಿ ಕಾಯ್ದೆಗಳನ್ನು ವಿರೋಧಿಸಿ ನಿರಂತರ ಪ್ರತಿಭಟನೆ ನಡೆಸುತ್ತಿರುವ ರೈತರು ಮತ್ತೊಂದು ಹೆಜ್ಜೆ ಮುಂದೆ ಹೋಗಲು ನಿರ್ಧರಿಸಿದ್ದಾರೆ. ಪ್ರತಿಭಟನೆಗಾಗಿ ಹಾಕಿದ್ದ ಟೆಂಟ್ಗಳು ಮಳೆಗೆ ಸಿಕ್ಕು ಕೊಚ್ಚಿ ಹೋಗಿರುವ ಕಾರಣ ತಮ್ಮ ಸೂರನ್ನು ಭದ್ರಪಡಿಸಲು ಯೋಚಿಸಿದ್ದಾರೆ. ಇದಕ್ಕಾಗಿ ಕಲ್ಲು, ಸಿಮೆಂಟ್ ಬಳಸಿ ಮನೆಯನ್ನೇ ಕಟ್ಟುತ್ತೇವೆ.. ಪ್ರತಿಭಟನೆಯನ್ನು ಮಾತ್ರ ಕೈ ಬಿಡುವುದಿಲ್ಲ ಎಂದಿದ್ದಾರೆ.
09:58 am ಕೇಂದ್ರ ಸರ್ಕಾರ ಮತ್ತು ಪ್ರತಿಭಟನಾ ನಿರತ ರೈತರ ನಡುವೆ 8ನೇ ಸುತ್ತಿನ ಮಾತುಕತೆ ಜ.8ರಂದು ನಡೆಯಲಿದೆ. ಇದಕ್ಕೂ ಮೊದಲು ಇಂದು (ಜ.7) ರೈತರು ಟ್ರ್ಯಾಕ್ಟರ್ ಬಳಸಿ ದೆಹಲಿಯ ನಾಲ್ಕು ಗಡಿಪ್ರದೇಶಗಳಲ್ಲಿ ಮೆರವಣಿಗೆ ಮಾಡುವುದಾಗಿ ಹೇಳಿದ್ದಾರೆ. ಇಂದು ನಡೆಯಲಿರುವ ಟ್ರ್ಯಾಕ್ಟರ್ ಮೆರವಣಿಗೆ ಗಣರಾಜ್ಯೋತ್ಸವದಂದು ನಡೆಯಲಿರುವ ಘಟನೆಗೆ ಟ್ರೇಲರ್ ಎಂದೂ ಹೇಳಿದ್ದಾರೆ.
09:45 am ಅಮೆರಿಕಾ ನಿರ್ಗಮಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟ್ವಿಟರ್ ಖಾತೆಯನ್ನು 12 ಗಂಟೆಗಳ ಕಾಲ ಸ್ಥಗಿತಗೊಳಿಸಲಾಗಿದೆ. ಇದೇ ಮೊಟ್ಟ ಮೊದಲ ಬಾರಿಗೆ ಅವರ ಟ್ವೀಟ್ಗಳನ್ನೂ ಡಿಲೀಟ್ ಮಾಡಲಾಗಿದೆ. ಅಮೆರಿಕಾದ ಕಾಂಗ್ರೆಸ್ ವಿರುದ್ಧ ತಿರುಗಿಬಿದ್ದವರನ್ನು ಬೆಂಬಲಿಸಿದ್ದಕ್ಕಾಗಿ ಈ ಕ್ರಮ ಕೈಗೊಳ್ಳಲಾಗಿದ್ದು, ಫೇಸ್ಬುಕ್, ಯೂಟ್ಯೂಬ್ ಸಹ ಅವರ ವೀಡಿಯೋಗಳನ್ನು ಅಳಿಸಿ ಹಾಕಿದೆ. ಫೇಸ್ಬುಕ್ ಟ್ರಂಪ್ ಅವರ ಖಾತೆಯನ್ನು 24 ಗಂಟೆಗಳ ಕಾಲ ನಿಷೇಧಿಸಲು ತೀರ್ಮಾನಿಸಿದೆ.
ಜಗತ್ತಿನೆಲ್ಲೆಡೆಯ ಸುದ್ದಿ ಕ್ಷಣಾರ್ಧದಲ್ಲಿ ಹರಿದು ಬಂದು ಅಂಗೈ ಸೇರುವಾಗ ಯಾವುದರತ್ತ ಕಣ್ಣು ಹಾಯಿಸಬೇಕು ಎಂಬ ಗೊಂದಲ ಸಹಜ.. ಎಷ್ಟೋ ಬಾರಿ ಸುದ್ದಿಯ ಹೆಸರಿನಲ್ಲಿ ಅಪ್ರಸ್ತುತ ಸಂಗತಿಗಳೂ ತೇಲಿ ಬರುತ್ತವೆ. ಅವುಗಳನ್ನು ಸೋಸುವುದೇ ಹರಸಾಹಸ. ನಮ್ಮ ಓದುಗರನ್ನು ಇಂತಹ ಗೊಂದಲಗಳಿಂದ ಪಾರು ಮಾಡಲೆಂದೇ ಪ್ರತಿನಿತ್ಯ Live Blog ಮೂಲಕ ಆಯಾ ಕ್ಷಣದ ಮುಖ್ಯಾಂಶಗಳನ್ನು ನೀಡುವ ಪ್ರಯತ್ನ ಮಾಡುತ್ತಿದ್ದೇವೆ. ಇದು ನಿಮಗಿಷ್ಟವಾಗಿದೆ ಎನ್ನುವ ನಂಬಿಕೆ ನಮ್ಮದು.. ಬನ್ನಿ ಇಂದಿನ ಸುದ್ದಿಯ ಹರಿವನ್ನು ನೋಡೋಣ.
Published On - 8:03 pm, Thu, 7 January 21