AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನನ್ನ ತಂಗಿಯ ಮದುವೆ ಜೋರು ಜೋರು ಅಂತಾ.. ಸೋದರಿಯ ವಿವಾಹಕ್ಕೋಸ್ಕರ ಕಳ್ಳತನ ಮಾಡಿದ ಅಣ್ಣ ಜೈಲುಪಾಲು!

ಕೆಲವರು ಶೋಕಿಗಾಗಿ, ಕೆಲವರು ಹಣದಾಸೆಗಾಗಿ ಮತ್ತೆ ಕೆಲವರು ಹೊಟ್ಟೆಪಾಡಿಗಾಗಿ ಕಳ್ಳತನ, ದರೋಡೆ ಮಾಡಲು ಮುಂದಾಗುತ್ತಾರೆ. ಆದರೆ, ಇಲ್ಲೊಬ್ಬ ಆಸಾಮಿ ತನ್ನ ತಂಗಿಯ ಮದುವೆಗೆಗಾಗಿ ಮನೆಗಳ್ಳತನ ಮಾಡಿ ಖಾಕಿ ಕೈಗೆ ತಗಲಾಕಿಕೊಂಡಿದ್ದಾನೆ.

ನನ್ನ ತಂಗಿಯ ಮದುವೆ ಜೋರು ಜೋರು ಅಂತಾ.. ಸೋದರಿಯ ವಿವಾಹಕ್ಕೋಸ್ಕರ ಕಳ್ಳತನ ಮಾಡಿದ ಅಣ್ಣ ಜೈಲುಪಾಲು!
ಸೋದರಿಯ ವಿವಾಹಕ್ಕೋಸ್ಕರ ಕಳ್ಳತನ ಮಾಡಿದ ಅಣ್ಣ ಜೈಲು ಪಾಲು
Follow us
KUSHAL V
|

Updated on: Jan 07, 2021 | 10:13 PM

ನೆಲಮಂಗಲ: ಕೆಲವರು ಶೋಕಿಗಾಗಿ, ಕೆಲವರು ಹಣದಾಸೆಗಾಗಿ ಮತ್ತೆ ಕೆಲವರು ಹೊಟ್ಟೆಪಾಡಿಗಾಗಿ ಕಳ್ಳತನ, ದರೋಡೆ ಮಾಡಲು ಮುಂದಾಗುತ್ತಾರೆ. ಆದರೆ, ಇಲ್ಲೊಬ್ಬ ಆಸಾಮಿ ತನ್ನ ತಂಗಿಯ ಮದುವೆಗೆಗಾಗಿ ಮನೆಗಳ್ಳತನ ಮಾಡಿ ಖಾಕಿ ಕೈಗೆ ತಗಲಾಕಿಕೊಂಡಿದ್ದಾನೆ.

ನನ್ನ ತಂಗಿಯ ಉತ್ತಮ ಭವಿಷ್ಯಕ್ಕಾಗಿ ಒಳ್ಳೇ ಹುಡುಗನೊಂದಿಗೆ ಆಕೆ ಮದುವೆ ಮಾಡ್ತಿನಿ. ಕಳ್ಳತನ ಮಾಡಿಯಾದರೂ ನನ್ನ ತಂಗಿಯ ಮದುವೆಯನ್ನು ಜೋರಾಗಿ ಮಾಡ್ತಿನಿ ಅಂತಾ ಅಣ್ಣನೊಬ್ಬ ಮನೆಗಳ್ಳತನ ಮಾಡಿ ಇದೀಗ ಖಾಕಿ ಕೈಗೆ ಸಿಕ್ಕಿಬಿದ್ದಿದ್ದಾನೆ. ತನ್ನ ತಂಗಿಯ ಮದುವೆಯನ್ನು ಅದ್ದೂರಿಯಾಗಿ ಮಾಡಿದ ಈತ ಇದೀಗ ಜೈಲುಪಾಲಾಗಿದ್ದಾನೆ.

ಉದ್ಯಮಿ ಮನೆಯಲ್ಲಿ ಕಳ್ಳತನ ಒಡಹುಟ್ಟಿದ ಅಕ್ಕ ತಂಗಿಯ ಮದುವೆ ಮಾಡಲು ವರ್ಷಾನುಘಟ್ಟಲೆ ದುಡಿದು ಹಣ ಕೂಡಿಡುವವರು ಒಂದು ಕಡೆಯಾದರೆ, ಇತ್ತ ಶೇಖ್ ಸಲ್ಮಾನ್ ಎಂಬಾತ ಕೇವಲ 4 ದಿನ ಕಷ್ಟ ಪಟ್ಟು ಉದ್ಯಮಿಯೊಬ್ಬರ ಮನೆಗೆ ಕನ್ನ ಹಾಕಿ, ದೋಚಿದ ಹಣದಲ್ಲಿ ತನ್ನ ತಂಗಿಯ ಮದುವೆಯನ್ನ ತರಾತುರಿಯಲ್ಲಿ ಆದರೆ ಅದ್ದೂರಿಯಾಗಿ ಮಾಡಿ ಮುಗಿಸಿದ್ದಾನೆ. ಈಗ ಪೊಲೀಸರ ಅತಿಥಿಯಾಗಿರುವ ಶೇಖ್​ ಸಲ್ಮಾನ್​ ಜೊತೆಗೆ ಕೃತ್ಯದಲ್ಲಿ ಭಾಗಿಯಾಗಿದ್ದ ಆತನ ಸ್ನೇಹಿತ ತಬರೇಜ್ ಖಾನ್‌ನನ್ನು ಸಹ ಖಾಕಿ ಪಡೆ ಬಂಧಿಸಿದೆ.

ಆರೋಪಿ ಶೇಖ್ ಸಲ್ಮಾನ್ ತನ್ನ ತಂಗಿ ಮದುವೆ ಮಾಡಲು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ದಾಬಸ್‌ಪೇಟೆಯಲ್ಲಿ ಛಾಯಾ ಶಂಕರ್ ಎಂಬ ಉದ್ಯಮಿ ಮನೆಗೆ ಕನ್ನ ಹಾಕಿದ್ದಾನೆ. ಡಿಸೆಂಬರ್ 9ರಂದ ಮನೆ ಮಾಲೀಕ ಛಾಯಾ ಶಂಕರ್ ಹಿಂದೂಪುರಕ್ಕೆ ತೆರಳಿದ್ದರು. ಈ ವೇಳೆ ಹೊಂಚು ಹಾಕಿದ್ದ ಶೇಖ್ ಸಲ್ಮಾನ್ ಸಂಜೆ ವೇಳೆ ಮನೆಗೆ ನುಗ್ಗಿ 300 ಗ್ರಾಂ ಚಿನ್ನ ಹಾಗೂ ಒಂದೂವರೆ ಕೆ.ಜಿ ಬೆಳ್ಳಿ ವಸ್ತುಗಳು ಸೇರಿದಂತೆ ದೇವರ ವಿಗ್ರಹವನ್ನು ದೋಚಿ ಪರಾರಿಯಾಗಿದ್ದ.

ಇನ್ನು, ಘಟನೆ ಬೆಳಕಿಗೆ ಬರುತ್ತಿದ್ದಂತೆ ಛಾಯಾ ಶಂಕರ್ ದಾಬಸ್‌ಪೇಟೆ ಪೊಲೀಸರಿಗೆ ದೂರು ನೀಡಿದ್ದರು. ಉದ್ಯಮಿ ನೀಡಿದ ದೂರಿನನ್ವಯ ಇನ್​ಸ್ಪೆಕ್ಟರ್​ ಕುಮಾರ್ ನೇತೃತ್ವದಲ್ಲಿ PSI ಮಂಜುನಾಥ್ ಮತ್ತು ತಂಡ ತನಿಖೆ ಆರಂಭಿಸಿ ಆರೋಪಿಗಳ ಶೋಧಕ್ಕಾಗಿ ಹಗಲು ರಾತ್ರಿ ಶ್ರಮಪಟ್ಟರು. ದಾಬಸ್‌ಪೇಟೆ ಆಟೋ ನಿಲ್ದಾಣದ ಬಳಿ ಛಾಯಾ ಶಂಕರ್ ಮನೆ ಇದ್ದ ಕಾರಣ ಮೊದಲು ಎಲ್ಲಾ ಆಟೋ ಚಾಲಕರನ್ನ ಕರೆಸಿ ವಿಚಾರಣೆ ನಡೆಸಿದರು. ಆದ್ರೆ, ಖಾಕಿ ತಂಡಕ್ಕೆ ಯಾವುದೇ ಸುಳಿವು ಸಿಗಲಿಲ್ಲ.

ಮೊಬೈಲ್ ಟವರ್ ಲೊಕೇಷನ್ ಕೊಟ್ಟ ಸುಳಿವು ಬಳಿಕ, ಮೊಬೈಲ್ ಟವರ್ ಲೊಕೇಷನ್ ಸರ್ಚ್ ಮಾಡಿ ಬರೋಬ್ಬರಿ 1,70,000 ಮೊಬೈಲ್ ನಂಬರ್‌ಗಳ ಮಾಹಿತಿ ಕಲೆ ಹಾಕಿದರು. ಎಲ್ಲಾ ನಂಬರ್‌ಗಳನ್ನ ಪರಿಶೀಲಿಸಿದಾಗ ಒಂದು ಮೊಬೈಲ್‌ ನಂಬರ್ ಪ್ರಕರಣ ನಡೆದ ದಿನದಿಂದ ಸ್ವಿಚ್ಡ್ ಆಫ್ ಆಗಿರುವುದು ಕಂಡುಬರುತ್ತೆ. ಹೀಗಾಗಿ, ಈ ಮೊಬೈಲ್​ನ IMEI ಸಂಖ್ಯೆಯನ್ನು ಆಧರಿಸಿ ತನಿಖೆ ನಡೆಸಿದಾಗ ಆರೋಪಿ ಶೇಖ್ ಸಲ್ಮಾನ್ ಸಿಕ್ಕಿಬಿದ್ದಿದ್ದಾನೆ.

ತಂಗಿ ಮದುವೆಗಾಗಿ ಕಳ್ಳತನ ಮಾಡಿದ ಅಣ್ಣ ಆರೋಪಿಯನ್ನ ವಿಚಾರಣೆಗೆ ಒಳಪಡಿಸಿದಾಗ ಸಲ್ಮಾನ್​ ತನ್ನ ತಂಗಿ ಮದುವೆಗೆಗಾಗಿ ದರೋಡೆ ಮಾಡಿರುವುದಾಗಿ ತಿಳಿಸಿದ್ದಾನಂತೆ. ಜೊತೆಗೆ, ಕದ್ದ ಚಿನ್ನಾಭರಣವನ್ನ ಬೆಂಗಳೂರು, ರಾಮನಗರ, ಚನ್ನಪಟ್ಟಣ ಸೇರಿದಂತೆ ವಿವಿಧೆಡೆ ಅಡ ಇಡಲು ತನ್ನ ಸ್ನೇಹಿತ ತಬರೇಜ್‌ ಖಾನ್‌ನ ಸಹಾಯ ಪಡೆದಿರುವುದಾಗಿ ತಿಳಿಸುತ್ತಾನಂತೆ. ಇದಲ್ಲದೆ, ಕಳ್ಳತನ ಮಾಡಲು ನಾಲ್ಕು ದಿನಗಳ ಕಾಲ ಛಾಯಾ ಶಂಕರ್ ಮನೆ ಬಳಿಯಿರುವ ಮಂಜುನಾಥ್ ಬೇಕರಿ ಬಳಿ ನಿಂತು ಮನೆಯವರ ಚಲನವಲನವನ್ನು ಗಮನಿಸಿದ್ದನು ಎಂದು ಸಹ ತಿಳಿದುಬಂದಿದೆ.

ಸದ್ಯ, ಆರೋಪಿಗಳನ್ನ ವಶಕ್ಕೆ ಪಡೆದ ಪೊಲೀಸರು 15 ಲಕ್ಷ ರೂಪಾಯಿ ಮೌಲ್ಯದ 300 ಗ್ರಾಂ ಚಿನ್ನಾಭರಣ, 1,500 ಗ್ರಾಂ ಬೆಳ್ಳಿ, 2 ಕ್ಯಾಮೆರಾ, ದುಬಾರಿ ಮೌಲ್ಯದ 5 ವಾಚ್‌ಗಳನ್ನ ಸಹ ಜಪ್ತಿ ಮಾಡಿದ್ದಾರೆ.

ಒಟ್ಟಾರೆ, ತನ್ನ ತಂಗಿಯ ಮದುವೆಗಾಗಿ ಕಳ್ಳತನಕ್ಕ ಮುಂದಾದ ಸಹೋದರ ಹಾಗೂ ಆತನಿಗೆ ಸಹಕರಿಸಿದ್ದ ಸ್ನೇಹಿತನನ್ನು ಪೊಲೀಸರು ಜೈಲಿಗಟ್ಟಿದ್ದಾರೆ. ಸಾವಿರ ಸುಳ್ಳು ಹೇಳಿ ಮದುವೆ ಮಾಡು ಅನ್ನೋ ಗಾದೆ ಮಾತಿದ್ರೇ, ಈತ ಲಕ್ಷ ಲಕ್ಷ ರೂಪಾಯಿ ದೋಚಿ ಮದುವೆ ಮಾಡಿ ಈಗ ಪಶ್ಚಾತಾಪದ ನುಡಿಗಳನ್ನ ಆಡುತ್ತಿದ್ದಾನೆ. ಮೂರ್ತಿ .ಬಿ