ಬೆಂಗಳೂರು: ಕೊರೊನಾ 2ನೆ ಅಲೆ ಹೆಚ್ಚು ವೇಗವಾಗಿದ್ದು ಹೆಚ್ಚು ಜನರನ್ನು ಬಲಿ ಪಡೆಯುತ್ತಿದೆ. ಹೆಣ ಸುಡಲೂ ಹೆಣಗಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ತಮ್ಮವರ ಮೃತ ದೇಹಕ್ಕೆ ಅಂತ್ಯಸಂಸ್ಕಾರವೂ ಮಾಡಲಾಗದೆ. ಕೊನೆ ಕ್ಷಣದಲ್ಲಿ ಅವರನ್ನು ನೋಡಲಾಗದೆ ಕಳಿಸಿಕೊಡುವಂತ ಸ್ಥಿತಿ ಉದ್ಭವವಾಗಿದೆ.
ರಾಜ್ಯದಲ್ಲಿ ನಿನ್ನೆ 29,438 ಜನರಿಗೆ ಕೊರೊನಾ ದೃಢ ಪಟ್ಟಿದೆ. ಸೋಂಕಿನಿಂದ ನಿನ್ನೆ 208 ಜನ ಮೃತಪಟ್ಟಿದ್ದಾರೆ. ಹಾಗೇ, ಬೆಂಗಳೂರಲ್ಲಿ 17,342 ಜನರಿಗೆ ಕೊರೊನಾ ಪಾಸಿಟಿವ್ ಬಂದಿದ್ದು, ಸಿಟಿಯಲ್ಲೇ 149 ಜನರು ಉಸಿರು ಚೆಲ್ಲಿದ್ದಾರೆ. ಈ ಮೂಲಕ, ಕೊರೊನಾಗೆ ಬೆಂಗಳೂರಲ್ಲಿ 5,723 ಮಂದಿ ಬಲಿಯಾಗಿದ್ದಾರೆ.
ಮಧ್ಯರಾತ್ರಿವರೆಗೆ ಕೊವಿಡ್ ಮೃತದೇಹಗಳ ದಹನ
ಮೇಡಿ ಅಗ್ರಹಾರ ಚಿತಾಗಾರದಲ್ಲಿ ತಡರಾತ್ರಿವರೆಗೆ ಅಂತ್ಯಸಂಸ್ಕಾರ ನಡೆದಿದೆ. ನಿನ್ನೆ ಒಂದೇ ದಿನ 27 ಮೃತದೇಹಗಳನ್ನು ದಹನ ಮಾಡಲಾಗಿದೆ. ಈ ಪೈಕಿ 25 ಕೊವಿಡ್ ಹಾಗೂ 2 ನಾನ್ ಕೊವಿಡ್ ಮೃತದೇಹಗಳು. ಮತ್ತೆ ಇಂದು ಬೆಳಗ್ಗೆ 7 ಗಂಟೆಯಿಂದ ದಹನ ಕಾರ್ಯ ಆರಂಭವಾಗಿದೆ. ಆದ್ರೆ ಮೇಡಿ ಅಗ್ರಹಾರದಲ್ಲಿ ಒಂದು ಬರ್ನಿಂಗ್ ಮಿಷನ್ ಕೈ ಕೊಟ್ಟಿದೆ. ಮೇಡಿ ಚಿತಾಗಾರದಲ್ಲಿ ಎರಡು ಬರ್ನಿಂಗ್ ಮಿಷನ್ಗಳ ಪೈಕಿ ಒಂದು ರಿಪೇರಿ. ಹೀಗಾಗಿ ಬೆಳಗ್ಗೆಯಿಂದ ಒಂದೇ ಮಿಷನ್ ನಿಂದ ಬರ್ನಿಂಗ್ ಕಾರ್ಯ ನಡೆಯುತ್ತಿದೆ. ಅಂತ್ಯಸಂಸ್ಕಾರಕ್ಕಾಗಿ ಬೆಳಗ್ಗೆಯಿಂದ ಆ್ಯಂಬುಲೆನ್ಸ್ಗಳು ಮೃತದೇಹದೊಂದಿಗೆ ಕ್ಯೂ
ನಿಂತಿವೆ.
ಕಳೆದ ಅನೇಕ ದಿನಗಳಿಂದ ರಾಜಧಾನಿ ಬೆಂಗಳೂರಿನಲ್ಲಿ ಇದೇ ರೀತಿಯ ಪರಿಸ್ಥಿತಿ ಕಂಡು ಬಂದಿದೆ. ಚಿತಾಗಾರ ಸಿಬ್ಬಂದಿ ಕೊಂಚವೂ ಬಿಡುವಿಲ್ಲದೆ ಮೃತದೇಹಗಳನ್ನು ಸುಡುತ್ತಲೇ ಇದ್ದಾರೆ. ಆದರೂ ಕ್ಯೂ ಮಾತ್ರ ಕಡಿಮೆಯಾಗಲ್ಲ. ಮಧ್ಯರಾತ್ರಿಯ ವರೆಗೂ ದಹನ ಕ್ರಿಯೆ ನಡೆಯುತ್ತಲೇ ಇದೆ.
ಇದನ್ನೂ ಓದಿ: ಮೇಡಿ ಅಗ್ರಹಾರ ಚಿತಾಗಾರ ಕ್ಲೋಸ್.. ಅಂತ್ಯಸಂಸ್ಕಾರಕ್ಕೆ ಗೇಟ್ ಮುಂದೆ ಕಾದು ಕುಳಿತ ಕುಟುಂಬಸ್ಥರು