ಉತ್ತರ ಪ್ರದೇಶ ಪೊಲೀಸರ ಸಮನ್ಸ್​ ಜಾರಿ ಹಿನ್ನೆಲೆ ಕರ್ನಾಟಕ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದ ಟ್ವಿಟರ್​ ಇಂಡಿಯಾ ಮುಖ್ಯಸ್ಥ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Jun 24, 2021 | 4:15 PM

ಉತ್ತರ ಪ್ರದೇಶದ ಗಾಜಿಯಾಬಾದ್​ ಜಿಲ್ಲೆಯಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬರ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮನೀಶ್ ಅವರ ವಿರುದ್ಧ ಉತ್ತರ ಪ್ರದೇಶ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಹೈಕೋರ್ಟ್ ನ್ಯಾಯಮೂರ್ತಿ ಜಿ.ನಾಗೇಂದ್ರ ಅರ್ಜಿಯ ವಿಚಾರಣೆ ನಡೆಸಲಿದ್ದಾರೆ.

ಉತ್ತರ ಪ್ರದೇಶ ಪೊಲೀಸರ ಸಮನ್ಸ್​ ಜಾರಿ ಹಿನ್ನೆಲೆ ಕರ್ನಾಟಕ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದ ಟ್ವಿಟರ್​ ಇಂಡಿಯಾ ಮುಖ್ಯಸ್ಥ
ಕರ್ನಾಟಕ ಹೈಕೋರ್ಟ್​ ಮತ್ತು ಟ್ವಿಟರ್ ಇಂಡಿಯಾ ಮುಖ್ಯಸ್ಥ ಮನೀಶ್ ಮಹೇಶ್ವರಿ
Follow us on

ಬೆಂಗಳೂರು: ಸಾಮಾಜಿಕ ಜಾಲತಾಣ ಟ್ವಿಟರ್​ ಕಂಪನಿಯ ಭಾರತದ ವ್ಯವಹಾರಗಳನ್ನು ನಿರ್ವಹಿಸುವ ಮುಖ್ಯ ಅಧಿಕಾರಿ ಮನೀಶ್ ಮಹೇಶ್ವರಿ ಕರ್ನಾಟಕ ಹೈಕೋರ್ಟ್​ಗೆ ಟ್ರಾನ್ಸಿಟ್ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾರೆ. ಉತ್ತರ ಪ್ರದೇಶದ ಗಾಜಿಯಾಬಾದ್​ ಜಿಲ್ಲೆಯಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬರ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮನೀಶ್ ಅವರ ವಿರುದ್ಧ ಉತ್ತರ ಪ್ರದೇಶ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಹೈಕೋರ್ಟ್ ನ್ಯಾಯಮೂರ್ತಿ ಜಿ.ನಾಗೇಂದ್ರ ಅರ್ಜಿಯ ವಿಚಾರಣೆ ನಡೆಸಲಿದ್ದಾರೆ.

ಪೊಲೀಸ್ ಠಾಣೆಗೆ ಬಂದು ವಿಚಾರಣೆ ಎದುರಿಸುವಂತೆ ಗಾಜಿಯಾಬಾದ್ ಪೊಲೀಸರು ಮಹೇಶ್ವರಿ ಅವರಿಗೆ ಸಮನ್ಸ್​ ಜಾರಿ ಮಾಡಿದ್ದರು. ಪೊಲೀಸರ ಎದುರು ಹೇಳಿಕೆ ದಾಖಲಿಸಲು 7 ದಿನಗಳ ಕಾಲಾವಕಾಶ ನೀಡಲಾಗಿದೆ. ಈ ಬೆಳವಣಿಗೆಯ ನಂತರ, ನಿನ್ನೆ (ಜೂನ್ 23) ಮನಿಶ್ ಮಹೇಶ್ವರಿ ಹೈಕೋರ್ಟ್ ಮೆಟ್ಟಿಲೇರಿದರು. ಇಂದು ಮುಂಜಾನೆ 10.30ಕ್ಕೆ ಲೊನಿ ಪೊಲೀಸ್ ಠಾಣೆಯಲ್ಲಿ ಮಹೇಶ್ವರಿ ವಿಚಾರಣೆ ಎದುರಿಸಲು ಹಾಜರಾಗಬೇಕಿತ್ತು. ಆದರೆ ಈವರೆಗೆ ಅವರು ಬಂದಿಲ್ಲ ಎಂದು ಸರ್ಕಲ್ ಇನ್​ಸ್ಪೆಕ್ಟರ್ ಅತುಲ್ ಸೊಂಕರ್ ಹೇಳಿದ್ದರು. ತಾವು ವಿಡಿಯೊ ಕಾಲ್ ಮೂಲಕ ವಿಚಾರಣೆ ಎದುರಿಸಲು ಸಿದ್ಧವಿರುವುದಾಗಿ ಮಹೇಶ್ವರಿ ಕಳೆದ ಸೋಮವಾರ ಹೇಳಿದ್ದರು.

ಮಹೇಶ್ವರಿ ಬೇಡಿಕೆಯನ್ನು ಪೊಲೀಸರು ಒಪ್ಪಲಿಲ್ಲ. ಟ್ವಿಟರ್ ಇಂಡಿಯಾದ ಗ್ರಾಹಕ ಸಂಪರ್ಕ ಅಧಿಕಾರಿ ಧರ್ಮೇಂದ್ರ ಚತುರ್ ಅವರನ್ನೂ ಪೊಲೀಸರು ವಿಚಾರಣೆಗೆ ಹಾಜರಾಗಬೇಕೆಂದು ಸೂಚಿಸಿದ್ದಾರೆ. ಜೈ ಶ್ರೀ ರಾಮ್, ವಂದೇ ಮಾತರಂ ಘೋಷಣೆ ಕೂಗುವಂತೆ ಒತ್ತಾಯಿಸಿ ಉತ್ತರ ಪ್ರದೇಶದಲ್ಲಿ ಅಬ್ದುಲ್ ಸಮದ್ ಎಂಬ ವ್ಯಕ್ತಿಯನ್ನು ಥಳಿಸಲಾಗಿದೆ ಎಂಬ ವಿಡಿಯೊ ಈಚೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು. ಈ ಸಂಬಂಧ ಟ್ವಿಟರ್ ಇಂಡಿಯಾ, ಕೆಲ ಪತ್ರಕರ್ತರು ಮತ್ತು ಕಾಂಗ್ರೆಸ್ ನಾಯಕರ ವಿರುದ್ಧ ಕಳೆದ ವಾರ ಎಫ್​ಐಆರ್​ ದಾಖಲಿಸಲಾಗಿತ್ತು.

ಈ ಪ್ರಕರಣದ ಆರೋಪಿಗಳ ಪಟ್ಟಿಯಲ್ಲಿ ಪತ್ರಕರ್ತರಾದ ರಾಣಾ ಅಯುಬ್, ಸಬಾ ನಖ್ವಿ, ಕಾಂಗ್ರೆಸ್ ನಾಯಕರಾದ ಸಲ್ಮಾನ್ ನಿಜಾಮಿ, ಶಮಾ ಮೊಹಮದ್ ಮತ್ತು ಮಸ್ಕೂರ್ ಉಸ್ಮಾನಿ ಇತರರನ್ನು ಹೆಸರಿಸಲಾಗಿತ್ತು. ಇವರೆಲ್ಲರೂ ದಾರಿತಪ್ಪಿಸುವ ಟ್ವೀಟ್​, ವಿಡಿಯೊಗಳ ಜೊತೆಗೆ ಕೋಮು ಭಾವನೆ ಕೆರಳಿಸುವಂಥ ಅಂಶಗಳನ್ನು ಟ್ವೀಟ್ ಮಾಡಿದ್ದರು ಎಂಬ ಆರೋಪವನ್ನು ಇವರ ವಿರುದ್ಧ ಹೊರಿಸಲಾಗಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ರಕರ್ತ ರಾಣಾ ಅಯೂಬ್​ಗೆ ಬಾಂಬೆ ಹೈಕೋರ್ಟ್​ ಈ ವಾರದ ಆರಂಭದಲ್ಲಿ ನಾಲ್ಕು ವಾರಗಳ ಟ್ರಾನ್ಸಿಟ್ ನಿರೀಕ್ಷಣಾ ಜಾಮೀನು ಮಂಜೂರು ಮಾಡಿತ್ತು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲ ಪೋಸ್ಟ್​ಗಳನ್ನು ಡಿಲೀಟ್ ಮಾಡುವಂತೆ ಟ್ವಿಟರ್ ಇಂಡಿಯಾಗೆ ಸರ್ಕಾರಕ್ಕೆ ಸೂಚಿಸಿತ್ತು. ಆದರೆ ಆರಂಭದ ದಿನಗಳಲ್ಲಿ ಟ್ವಿಟರ್​ ಈ ಸೂಚನೆಯನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಈ ವಾರದ ಆರಂಭದಲ್ಲಿ ಸರ್ಕಾರದಿಂದ ಅಧಿಕೃತ ಸೂಚನೆ ಬಂದ ನಂತರ ಟ್ವಿಟರ್​ 50 ಟ್ವೀಟ್​ಗಳನ್ನು ಜನರಿಗೆ ಕಾಣಿಸದಂತೆ ಮರೆಮಾಚಿತು.

ಅಧಿಕಾರಿಗಳ ಸೂಚನೆಯ ನಂತರವೂ ನೀವು ಕೆಲ ಟ್ವೀಟ್​ಗಳನ್ನು ತೆಗೆದುಹಾಕಿಲ್ಲ. ನೀವು ಭಾರತದ ಕಾನೂನು ಅರ್ಥ ಮಾಡಿಕೊಳ್ಳಬೇಕು ಮತ್ತು ಅದಕ್ಕೆ ಬದ್ಧರಾಗಿ ನಡೆದುಕೊಳ್ಳಬೇಕು ಎಂದು ಟ್ವಿಟರ್ ಇಂಡಿಯಾ ಮುಖ್ಯಸ್ಥ ಮನೀಶ್ ಮಹೇಶ್ವರಿಗೆ ಜಾರಿ ಮಾಡಿರುವ ಸಮನ್ಸ್​ನಲ್ಲಿ ಹೇಳಲಾಗಿದೆ. ಗಾಜಿಯಾಬಾದ್ ಪ್ರಕರಣದಲ್ಲಿ ಯಾವುದೇ ಕೋಮು ದೃಷ್ಟಿಕೋನದ ವಿಚಾರ ಇರುವುದನ್ನು ಪೊಲೀಸರು ನಿರಾಕರಿಸಿದ್ದರು. ಹಲ್ಲೆಗೊಳಗಾದ ವ್ಯಕ್ತಿ ಆಮ್ಲೆಟ್ ಮಾರುತ್ತಿದ್ದ. ಅದೇ ವಿಚಾರಕ್ಕೆ ಸಂಬಂಧಿಸಿದಂತೆ ಆತನ ಮೇಲೆ ಹಲ್ಲೆ ನಡೆದಿದೆ. ಹಲ್ಲೆ ಮಾಡಿದವರಲ್ಲಿ ಹಿಂದೂ-ಮುಸ್ಲಿಮರಿಬ್ಬರೂ ಇದ್ದಾರೆ ಎಂದು ಪೊಲೀಸರು ಹೇಳಿದ್ದರು. ಆದರೆ ಹಲ್ಲೆಗೊಳಗಾಗಿದ್ದ ಅಬ್ದುಲ್ ಸಮದ್ ಅವರ ಕುಟುಂಬ ಪೊಲೀಸರ ಹೇಳಿಕೆಯನ್ನು ನಿರಾಕರಿಸಿತ್ತು.

ಆನ್​ಲೈನ್ ಸುದ್ದಿತಾಣಗಳು ಮತ್ತು ಸಾಮಾಜಿಕ ಜಾಲತಾಣಗಳ ನಿಯಂತ್ರಣಕ್ಕೆಂದು ಕೇಂದ್ರ ಸರ್ಕಾರವು ನೂತನ ನಿಯಮಗಳನ್ನು ಹೊರಡಿಸಿದ ನಂತರ ಇದೇ ಮೊದಲ ಬಾರಿಗೆ ಸಾಮಾಜಿಕ ಜಾಲತಾಣವೊಂದರ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

‘ಉತ್ತರ ಪ್ರದೇಶದಲ್ಲಿ ಏನಾಗಿದೆಯೋ ಅದು ಸುಳ್ಳುಸುದ್ದಿಗಳ ವಿರುದ್ಧದ ಹೋರಾಟದ ವಿಚಾರದಲ್ಲಿ ಟ್ವಿಟರ್​ ಹೇಗೆ ವರ್ತಿಸಬಲ್ಲದು ಎನ್ನುವುದಕ್ಕೆ ಉತ್ತಮ ಉದಾಹರಣೆ. ಸತ್ಯ ಪರೀಲನೆ ವಿಚಾರದಲ್ಲಿ ಟ್ವಿಟರ್​ಗೆ ಅತ್ಯುತ್ಸಾಹವಿದೆ. ಹಲವು ಪ್ರಕರಣಗಳಲ್ಲಿ ಇವರಿಂದ ಸೂಕ್ತ ಸಹಕಾರ ಸಿಕ್ಕಿಲ್ಲ’ ಎಂದು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಕಳೆದವಾರ ಹೇಳಿದ್ದರು.

ದಿ ವೈರ್ ಮತ್ತು ಇತರ ಕೆಲ ಸುದ್ದಿತಾಣಗಳ ಪತ್ರಕರ್ತರ ವಿರುದ್ಧ ಟ್ವೀಟ್ ಮಾಡಿದ್ದ ಕಾರಣಕ್ಕೆ ಪ್ರಕರಣ ದಾಖಲಿಸಿರುವುದನ್ನು ಎಡಿಟರ್ಸ್​ ಗಿಲ್ಡ್​ ಖಂಡಿಸಿದೆ. ಉತ್ತರ ಪ್ರದೇಶ ಪೊಲೀಸರು ಪತ್ರಕರ್ತರ ವಿರುದ್ಧ ಹೆಚ್ಚಿನ ಸಂಖ್ಯೆಯಲ್ಲಿ ಪ್ರಕರಣಗಳನ್ನು ದಾಖಲಿಸುತ್ತಿರುವ ವಿಚಾರವನ್ನು ಗಮನಿಸುತ್ತಿದ್ದೇವೆ. ಮುಕ್ತ ವಾತಾವರಣದಲ್ಲಿ ಪತ್ರಕರ್ತರು ಕೆಲಸ ಮಾಡಲು ಅವಕಾಶ ಮಾಡಿಕೊಡಬೇಕು’ ಎಂದು ಎಡಿಟರ್ಸ್​ ಗಿಲ್ಡ್​ ಹೇಳಿದೆ.

(Twitter India Chief Manish Maheshwari Applies Transit Anticipatory Bail Petition in Karnataka High Court)

ಇದನ್ನೂ ಓದಿ: ಗಾಜಿಯಾಬಾದ್​ನಲ್ಲಿ ಹಿರಿಯ ವ್ಯಕ್ತಿ ಮೇಲೆ ಹಲ್ಲೆ ಪ್ರಕರಣ: 50 ಟ್ವೀಟ್​ಗಳನ್ನು ನಿರ್ಬಂಧಿಸಿದ ಟ್ವಿಟರ್ ಇಂಡಿಯಾ

ಇದನ್ನೂ ಓದಿ: Ghaziabad Assault Case: ತನಿಖೆಗೆ ಸಹಕರಿಸುವುದಾಗಿ ಹೇಳಿದ ಟ್ವಿಟರ್ ಇಂಡಿಯಾ, ಉತ್ತರ ತೃಪ್ತಿಕರ ಅಲ್ಲ ಎಂದ  ಪೊಲೀಸರು

Published On - 4:11 pm, Thu, 24 June 21