ತಾರರಕ್ಕೇರಿತು ಬಿಜೆಪಿ-ಕಾಂಗ್ರೆಸ್​ ಟ್ವೀಟ್ ಸಮರ: ಬಣ ರಾಜಕೀಯ ಪ್ರಸ್ತಾಪಿಸಿದ ಎರಡೂ ಪಕ್ಷಗಳು

|

Updated on: Mar 24, 2021 | 10:03 PM

ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ಪರಸ್ಪರ ಟ್ವೀಟರ್​​ನಲ್ಲಿ ಬುಧವಾರ ಜಗಳ ಮಾಡಿಕೊಂಡಿವೆ. ಎರಡೂ ರಾಜಕೀಯ ಪಕ್ಷಗಳು ಬಣ ರಾಜಕೀಯವನ್ನೇ ಪ್ರಮುಖವಾಗಿ ಪ್ರಸ್ತಾಪಿಸಿರುವುದು ಹೊಸ ಬೆಳವಣಿಗೆ ಎನಿಸಿದೆ.

ತಾರರಕ್ಕೇರಿತು ಬಿಜೆಪಿ-ಕಾಂಗ್ರೆಸ್​ ಟ್ವೀಟ್ ಸಮರ: ಬಣ ರಾಜಕೀಯ ಪ್ರಸ್ತಾಪಿಸಿದ ಎರಡೂ ಪಕ್ಷಗಳು
ಬಿಜೆಪಿ ಮತ್ತು ಕಾಂಗ್ರೆಸ್ ಟ್ವಿಟರ್ ಪೇಜ್​ಗಳು
Follow us on

ಬೆಂಗಳೂರು: ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ಪರಸ್ಪರ ಟ್ವೀಟರ್​​ನಲ್ಲಿ ಬುಧವಾರ ಜಗಳ ಮಾಡಿಕೊಂಡಿವೆ. ಎರಡೂ ರಾಜಕೀಯ ಪಕ್ಷಗಳು ಬಣ ರಾಜಕೀಯವನ್ನೇ ಪ್ರಮುಖವಾಗಿ ಪ್ರಸ್ತಾಪಿಸಿರುವುದು ಹೊಸ ಬೆಳವಣಿಗೆ ಎನಿಸಿದೆ. ಸಿದ್ದರಾಮಯ್ಯ ಅಭಿಮಾನಿಯೊಬ್ಬರು ‘ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ’ ಎಂದು ಬಾಳೆಹಣ್ಣಿನ ಮೇಲೆ ಬರೆದು ರಥದ ಮೇಲೆ ತೂರಿದ್ದನ್ನು ಬಿಜೆಪಿ ಅಸ್ತ್ರವಾಗಿಸಿಕೊಂಡಿದೆ. ಕಾಂಗ್ರೆಸ್​ ಪಕ್ಷವು ವಿವಿಧ ದಿನಪತ್ರಿಕೆಗಳ ವರದಿಗಳನ್ನು ಬಳಸಿಕೊಂಡು ಬಿಜೆಪಿಯನ್ನು ಲೇವಡಿ ಮಾಡಿದೆ.

ಕಾಂಗ್ರೆಸ್​ನಲ್ಲಿ ಮೂಲ-ವಲಸಿಗ: ಬಿಜೆಪಿ ಟ್ವೀಟ್
ಮುಖ್ಯಮಂತ್ರಿ ಅಭ್ಯರ್ಥಿಯನ್ನು ಕೊನೆಗೂ ಕಾಂಗ್ರೆಸ್ ಪಕ್ಷವು ಅಧಿಕೃತವಾಗಿ ಅಂತಿಮಗೊಳಿಸಿದೆ. ಪಕ್ಷದ ಅಧಿಕೃತ ಟ್ವಿಟ್ಟರ್‌ ಖಾತೆಯಲ್ಲಿ ಸಿದ್ದರಾಮಯ್ಯ ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿ ಎಂಬುದನ್ನು ಸೂಚ್ಯವಾಗಿ ತಿಳಿಸಿದೆ. ಸಿದ್ದರಾಮಯ್ಯ ಬಣವು ಡಿ.ಕೆ.ಶಿವಕುಮಾರ್ ಅವರಿಗೆ ಈ ಟ್ವೀಟ್‌ ಮೂಲಕ ಸ್ಪಷ್ಟ ಸಂದೇಶ ರವಾನಿಸಿದೆ ಎಂದು ಬಿಜೆಪಿ ಹೇಳಿದೆ.

ಕನಕಪುರದ ಬಂಡೆ ಎಂದು ಮೆರೆಯುತ್ತಿದ್ದವರಿಗೆ ಡೈನಾಮೇಟ್ ಇಟ್ಟು ಉಡಾಯಿಸುವ ಮುನ್ಸೂಚನೆಯನ್ನು ಸಿದ್ದರಾಮಯ್ಯ ಬಣ ನೀಡುತ್ತಿದೆಯೇ ಪ್ರಶ್ನಿಸಿರುವ ಬಿಜೆಪಿ, ಪರಮೇಶ್ವರ್‌ರನ್ನು ಸೋಲಿಸಿದವರು ಈಗ ಪಕ್ಷದ ಅಧಿಕೃತ ಟ್ವಿಟರ್‌ ಖಾತೆಯ ಮೂಲಕ ಡಿ.ಕೆ.ಶಿವಕುಮಾರ್​ಗೆ ಸ್ಪಷ್ಟ ಸಂದೇಶ ರವಾನಿಸಿದ್ದಾರೆ. ವಲಸೆ ನಾಯಕರ ಮುಂದೆ ಮೂಲ ಕಾಂಗ್ರೆಸಿಗರು ಶರಣಾದರೇ ಎಂದು ಬಿಜೆಪಿ ಪ್ರಶ್ನಿಸಿದೆ.

‘ಸಿದ್ದರಾಮಯ್ಯ ಅವರನ್ನು ಹೊರತುಪಡಿಸಿ ಬೇರೆ ಯಾವ ಮಹಾನಾಯಕರಿಗೂ ಮುಖ್ಯಮಂತ್ರಿಯಾಗುವ ಅರ್ಹತೆ ಇಲ್ಲವೇ? ಕಾಂಗ್ರೆಸ್ ಪಕ್ಷದ ಅಧಿಕೃತ ಟ್ವಿಟರ್ ಖಾತೆಯನ್ನು ಸಿದ್ದರಾಮಯ್ಯ ಬಣ ನಿಯಂತ್ರಿಸುತ್ತಿದೆಯೇ? ಕೂಸು ಹುಟ್ಟುವ ಮುನ್ನವೇ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಬಣ ಕುಲಾವಿಗೆ ಹೊಡೆದಾಡುತ್ತಿರುವುದು ಹಾಸ್ಯಾಸ್ಪದ’ ಎಂದು ಬಿಜೆಪಿ ಹೇಳಿದೆ. ಈ ಟ್ವೀಟ್​ನಲ್ಲಿ ಬಳಕೆಯಾಗಿರುವ ‘ಮಹಾನಾಯಕ’ ಪದವನ್ನು ರಾಜಕೀಯ ವಿಶ್ಲೇಷಕರು ಹಲವು ಆಯಾಮಗಳಲ್ಲಿ ವ್ಯಾಖ್ಯಾನಿಸುತ್ತಿದ್ದಾರೆ.

‘ಕಾಂಗ್ರೆಸ್ ಪಕ್ಷದಲ್ಲಿ ವ್ಯಕ್ತಿ ಪೂಜೆಯಿಲ್ಲ, ಪಕ್ಷ ಪೂಜೆ ಮುಖ್ಯ ಎನ್ನುತ್ತಿದ್ದ ಡಿ.ಕೆ.ಶಿವಕುಮಾರ್ ಅವರೇ, ಪಕ್ಷದ ಅಧಿಕೃತ ಟ್ವಿಟ್ಟರ್‌ ಖಾತೆಯ ಮೂಲಕ ನಾನೇ ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಸಿದ್ದರಾಮಯ್ಯ ಹೇಳಿಸಿಕೊಂಡಿದ್ದಾರೆ. ವಲಸೆ ನಾಯಕನಿಗೆ ನೋಟಿಸ್‌ ನೀಡುವ ಧೈರ್ಯ ನಿಮಗಿದೆಯಾ’ ಎಂದು ಬಿಜೆಪಿ ಪ್ರಶ್ನಿಸಿದೆ.

ಬಿಜೆಪಿ ಆಡಳಿತದಲ್ಲಿ ಅನುದಾನಗಳ ಮಾರಾಟ: ಕಾಂಗ್ರೆಸ್​ ಕಟುಟೀಕೆ
ಬಿಜೆಪಿ ಸರ್ಕಾರದ ಸಚಿವರಿಗೆ ಲಂಚ, ಮಂಚದ್ದೇ ಚಿಂತೆ ಎಂದು ಹರಿಹಾಯ್ದಿರುವ ಕಾಂಗ್ರೆಸ್, ಬಿಜೆಪಿ ಶಾಸಕರು ತಮ್ಮದೇ ಸರ್ಕಾರದ, ತಮ್ಮದೇ ಸಚಿವರ ವಿರುದ್ಧ ಹೋರಾಡುವ ಸ್ಥಿತಿ ಒದಗಿದ್ದು ಬಿಜೆಪಿ ಅಯೋಗ್ಯತನಕ್ಕೆ ಸಾಕ್ಷಿ. ಅನುದಾನಗಳು ಮಾರಾಟವಾಗುತ್ತಿವೆ ಎಂದು ಸರ್ಕಾರದ ಭ್ರಷ್ಟಾಚಾರವನ್ನು #BJPvsBJP ಕಿತ್ತಾಟದಲ್ಲಿ ಬಯಲು ಮಾಡಿದ್ದಾರೆ ಎಂದು ಕಾಂಗ್ರೆಸ್ ಹೇಳಿದೆ.

ಮತ್ತೊಂದು ಟ್ವೀಟ್​ನಲ್ಲಿ ಸಚಿವರಾದ ಭೈರತಿ ಬಸವರಾತ್ ಮತ್ತು ಆರ್​.ಅಶೋಕ್ ಅವರ ಕಿತ್ತಾಟವನ್ನು ಕಾಂಗ್ರೆಸ್ ಪ್ರಸ್ತಾಪಿಸಿದೆ. ವಲಸಿಗ ಭೈರತಿ ಬಸವರಾಜ್ vs ಅಶೋಕ್ ಕಿತ್ತಾಟದಲ್ಲಿ ಭ್ರಷ್ಟಾಚಾರದ ಬಂಡಾರವೇ ಹೊರಬರುತ್ತಿದೆ. ಭೂ ಹಗರಣವಾಗಿದೆ, ಅದರ ತನಿಖೆಯಾಗಬೇಕು ಎನ್ನುವುದು ಅಶೋಕ್ ಅವರ ಒತ್ತಾಯ. ರಾಜ್ಯದ ಜನತೆ ಹಲವಾರು ಸಮಸ್ಯೆಗಳಲ್ಲಿ ಪರದಾಡುತ್ತಿದ್ದರೆ, ಬಿಜೆಪಿಗರು ಲಂಚ, ಮಂಚ, ಭೂಮಿ ಲೂಟಿಯಲ್ಲಿ ಮುಳುಗಿದ್ದಾರೆ ಎಂದು ಕಾಂಗ್ರೆಸ್ ಲೇವಡಿ ಮಾಡಿದೆ.

‘ಬಿಜೆಪಿ ಪಕ್ಷವು ಯಡಿಯೂರಪ್ಪ ಬಣ, ಸಂತೋಷ್ ಮತ್ತು ಬಾಂಬೆ ಬಾಯ್ಸ್​ ಬಣಗಳ ನಡುವೆ ಹಂಚಿಹೋಗಿದೆ. #BSYmuktaBJP ಮಾಡಲು ಪ್ರಯತ್ನಿಸುವವರು, ಬ್ಲಾಕ್​ಮೇಲ್ ಮಾಡಲು ಯತ್ನಿಸುವವರು, BSY ಪರ ಬ್ಯಾಟಿಂಗ್ ಮಾಡುವವರು, ಎಲ್ಲರೂ ಚುರುಕುಗೊಂಡಿದ್ದಾರೆ. ಆದರೆ ಜನತೆಯನ್ನು ಕೇಳುವವರು ಒಬ್ಬರೂ ಇಲ್ಲವಾಗಿದ್ದಾರೆ ಎಂದು ಮತ್ತೊಂದು ಟ್ವೀಟ್​ನಲ್ಲಿ ಕಾಂಗ್ರೆಸ್ ಟೀಕಿಸಿದೆ.

ಇದನ್ನೂ ಓದಿ: ಸುಧಾಕರ್​ ‘ಏಕಪತ್ನೀವ್ರತಸ್ಥ’ ಹೇಳಿಕೆಗೆ ರೇಣುಕಾಚಾರ್ಯ, ರಮೇಶ್​ಕುಮಾರ್ ಸೇರಿ ವಿವಿಧ ನಾಯಕರ ತೀವ್ರ ಆಕ್ಷೇಪ

ಇದನ್ನೂ ಓದಿ: ವಿವಾದಕ್ಕೀಡಾದ ‘ಏಕಪತ್ನೀವ್ರತಸ್ಥ’ ಹೇಳಿಕೆ; ಸಚಿವ ಡಾ.ಕೆ.ಸುಧಾಕರ್ ವಿಷಾದ