ಚಿಕ್ಕಮಗಳೂರು: ಕುರಿ ಮರಿ ತಿಂದು ಮಲಗಿದ್ದ ಹೆಬ್ಬಾವೊಂದನ್ನ ಜಿಲ್ಲೆಯ ಶೃಂಗೇರಿ ತಾಲೂಕಿನ ಉಳುವೆ ಗ್ರಾಮದಲ್ಲಿ ಸೆರೆ ಹಿಡಿಯಲಾಗಿದೆ. ಎರಡು ದಿನಗಳ ಹಿಂದೆ ರಘು ಎಂಬುವರ ಮನೆಯ ಸಮೀಪ ಕಾಣಿಸಿಕೊಂಡಿದ್ದ ಹೆಬ್ಬಾವನ್ನ ಕಾಫಿ ತೋಟದಲ್ಲಿ ಕೆಲಸ ಮಾಡುವ ಜನರು ಗಮನಿಸಿದ್ದರು. ಆದರೆ ಮತ್ತೆ ಆ ಸ್ಥಳಕ್ಕೆ ಹೋಗಿ ನೋಡುವಾಗ ಹೆಬ್ಬಾವು ಅಲ್ಲಿಂದ ಮಾಯವಾಗಿತ್ತು. ಇದಾದ ಬಳಿಕ ಕುರಿ ಮರಿಯೊಂದು ಕಾಣೆಯಾಗಿತ್ತು. ಇದನ್ನ ಹುಡುಕಿ ಹೊರಟ ರಘು ಮನೆಯವರಿಗೆ ಕಂಡಿದ್ದು ಮತ್ತದೇ ಹೆಬ್ಬಾವು.
ಕುರಿ ಮರಿಯನ್ನ ತಿಂದು ಅದನ್ನ ಜೀರ್ಣಿಸಿಕೊಳ್ಳಲು ಜೋರಾಗಿ ಉಸಿರು ಬಿಡುತ್ತಿದ್ದಾಗ 10 ಅಡಿ ಉದ್ದದ ಹೆಬ್ಬಾವು ಪತ್ತೆಯಾಗಿದೆ. ಕೂಡಲೇ ಉರಗ ತಜ್ಞ ಸ್ನೇಕ್ ಅರ್ಜುನ್ ಎಂಬುವರಿಗೆ ಕರೆ ಮಾಡಿ, ಹೆಬ್ಬಾವನ್ನ ಸೆರೆ ಹಿಡಿಸಿದ್ದಾರೆ. ಈ ವೇಳೆ ಹೆಬ್ಬಾವನ್ನ ಕಂಡು ಪುಳಕಗೊಂಡ ಯುವತಿಯರು, ಸ್ಥಳೀಯರು ಹೆಬ್ಬಾವಿನ ಜೊತೆ ಪೋಟೋ ಕ್ಲಿಕ್ಕಿಸಿಕೊಂಡದ್ದಾರೆ. ರಕ್ಷಣೆ ಮಾಡಿದ ಹೆಬ್ಬಾವನ್ನ ಸ್ನೇಕ್ ಅರ್ಜುನ್, ಕೆರೆಕಟ್ಟೆಯ ಅರಣ್ಯದಲ್ಲಿ ಸುರಕ್ಷಿತವಾಗಿ ಬಿಟ್ಟಿದ್ದಾರೆ.
ಇದು ಶೃಂಗೇರಿಯಲ್ಲಿ ಕುರಿ ಮರಿ ತಿಂದ ಹೆಬ್ಬಾವಿನ ಕಥೆಯಾದರೆ, ಎರಡು ದಿನಗಳ ಹಿಂದೆ ಶೃಂಗೇರಿ ಪಕ್ಕದ ಕೊಪ್ಪ ತಾಲೂಕಿನ ಸೋಮಲಾಪುರ ಗ್ರಾಮದಲ್ಲಿ ಬೃಹತ್ತಾದ ಹೆಬ್ಬಾವನ್ನ ಸೆರೆ ಹಿಡಿಯಲಾಗಿದೆ. ಸುಮಾರು 80 ಕೆಜಿ ತೂಕ, 15 ಅಡಿ ಉದ್ದದ ಹೆಬ್ಬಾವು ಸ್ಥಳೀಯರಿಗೆ ಸಿಕ್ಕಿ ಅಚ್ಚರಿ ಮೂಡಿಸಿದೆ. ಗ್ರಾಮದ ಉಮೇಶ್ ಭಟ್ ಎಂಬುವರ ತೋಟದಲ್ಲಿ ಬೀಡುಬಿಟ್ಟಿದ್ದ ಹೆಬ್ಬಾವಿನ ತಲೆಗೆ ಮಹಿಳೆಯೊಬ್ಬರು ಕಾಲಿಟ್ಟಿದ್ದರು. ಆ ಬಳಿಕ ಅದು ಒದ್ದಾಟ ನಡೆಸುವುದನ್ನು ಕಂಡು ಭಯದಿಂದ ಓಡಿ ಹೋಗಿದ್ದರು. ಕೊನೆಗೆ ಸ್ಥಳಕ್ಕೆ ಬಂದ ಉರಗ ತಜ್ಞ ಹರೀಂದ್ರ ಎಂಬುವವರು ಹೆಬ್ಬಾವನ್ನ ಸೆರೆಹಿಡಿಯುವಲ್ಲಿ ಯಶಸ್ವಿಯಾದರು.
ಈ ಹೆಬ್ಬಾವನ್ನು ನೋಡಿದಾಗ ಅಡ್ಡ ಬಿದ್ದ ತೆಂಗಿನ ಮರದ ರೀತಿ ಕಾಣುತ್ತಿತ್ತು. ಮನುಷ್ಯರು ಯಾರಾದರೂ ಸಿಕ್ಕಿದ್ದರೆ ಸಲೀಸಾಗಿ ನುಂಗುವಂತಿತ್ತು ಎಂದು ಉರಗತಜ್ಞ ಹರೀಂದ್ರ ತಿಳಿಸಿದರು. ಕೊನೆಗೆ ಸೆರೆಸಿಕ್ಕ ಹೆಬ್ಬಾವನ್ನ ಚೀಲಕ್ಕೆ ತುಂಬಿಸಲು ಮೂರು ಜನ ಹರಸಾಹಸ ಪಟ್ಟರು. ಈ ಮಧ್ಯೆಯೂ ಅಪರೂಪದ ಹೆಬ್ಬಾವು ಮುಟ್ಟಿ ಸ್ಥಳೀಯರು ಪೋಟೋ ಕ್ಲಿಕ್ಕಿಸಿಕೊಂಡು ಖುಷಿ ಪಟ್ಟರು. ಕೊನೆಗೆ ಸೆರೆಹಿಡಿದ ಹೆಬ್ಬಾವನ್ನ ಅರಣ್ಯಕ್ಕೆ ಸುರಕ್ಷಿತವಾಗಿ ಬಿಡಲಾಯಿತು.
ಮಹಿಳೆ ಬಚಾವ್
ಶೃಂಗೇರಿಯಲ್ಲಿ ಸೆರೆಸಿಕ್ಕ ಹೆಬ್ಬಾವು ಕುರಿ ಮರಿ ತಿಂದು ಉಸಿರು ಬಿಡುತ್ತಿದ್ದರೆ, ಕೊಪ್ಪದಲ್ಲಿ ಸಿಕ್ಕ 15 ಅಡಿ ಉದ್ದದ, 80 ಕೆ.ಜಿ ತೂಕದ ಹೆಬ್ಬಾವು ಬೇಟೆಗೆ ಸಿದ್ಧವಾಗಿತ್ತು. ಗಿಡಗಳ ನಡುವೆ ಅವಿತುಕೊಂಡಿದ್ದ ಬೃಹತ್ ಗಾತ್ರದ ಹೆಬ್ಬಾವು, ಕೂಲಿ ಕಾರ್ಮಿಕ ಮಹಿಳೆ ತನ್ನ ತಲೆಯ ಮೇಲೆ ಕಾಲಿಟ್ಟಾಗ ಬುಸುಗುಟ್ಟಿದೆ. ತಕ್ಷಣ ಹೆಬ್ಬಾವು ನೋಡಿದ ಮಹಿಳೆ ಅಲ್ಲಿಂದ ಓಡಿದ್ದಾರೆ. ಸ್ವಲ್ಪ ಎಚ್ಚರ ತಪ್ಪಿದ್ದರೂ ಅನಾಹುತ ನಡೆಯುವ ಸಾಧ್ಯತೆ ಹೆಚ್ಚಿತ್ತು.
ಇದನ್ನೂ ಓದಿ
(Two Pythons are captured in Chikkamagaluru)
Published On - 10:42 am, Thu, 8 July 21