ಕೆಆರ್​ಎಸ್​ ಡ್ಯಾಂ ಬಿರುಕು ವಿವಾದ: ಸಿಬಿಐ ತನಿಖೆ ನಡೆಸುವಂತೆ ಸಿಎಂ ಯಡಿಯೂರಪ್ಪಗೆ ಸುಮಲತಾ ಒತ್ತಾಯ

ಒಬ್ಬ ಸಂಸದರ ಮೇಲೆಯೇ ಒತ್ತಡ ತರಲಾಗುತ್ತಿದೆ ಎಂದಮೇಲೆ ಅಧಿಕಾರಿಗಳ ಮೇಲೆ ಯಾವ ರೀತಿಯ ಒತ್ತಡ ಇರಬಹುದೆಂದು ಊಹಿಸಬಹುದು. ಅಧಿಕಾರಿಗಳ ಮೇಲೆ ಒತ್ತಡ ಹಾಗೂ ದಬ್ಬಾಳಿಕೆ ಇದೆ. ಹೀಗಾಗಿ ಇದಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆ ನಡೆದು ಸತ್ಯ ಹೊರಬರಬೇಕು ಎಂದು ಸುಮಲತಾ ಆಗ್ರಹಿಸಿದ್ದಾರೆ.

ಕೆಆರ್​ಎಸ್​ ಡ್ಯಾಂ ಬಿರುಕು ವಿವಾದ: ಸಿಬಿಐ ತನಿಖೆ ನಡೆಸುವಂತೆ ಸಿಎಂ ಯಡಿಯೂರಪ್ಪಗೆ ಸುಮಲತಾ ಒತ್ತಾಯ
ಸಾಂಕೇತಿಕ ಚಿತ್ರ
Follow us
TV9 Web
| Updated By: ಸಾಧು ಶ್ರೀನಾಥ್​

Updated on:Jul 08, 2021 | 11:27 AM

ಮಂಡ್ಯ: ಅಕ್ರಮ ಗಣಿಯಿಂದ ಕೆಆರ್​ಎಸ್​ ಡ್ಯಾಂಗೆ ತೊಂದರೆಯಾಗಿದೆ, ಡ್ಯಾಂನಲ್ಲಿ ಬಿರುಕು ಕಾಣಿಸಿಕೊಂಡಿದೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆ ನಡೆಸಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಒತ್ತಾಯಿಸುವುದಾಗಿ ಸಂಸದೆ ಸುಮಲತಾ ಹೇಳಿದ್ದಾರೆ. ಒಬ್ಬ ಸಂಸದರ ಮೇಲೆಯೇ ಒತ್ತಡ ತರಲಾಗುತ್ತಿದೆ ಎಂದಮೇಲೆ ಅಧಿಕಾರಿಗಳ ಮೇಲೆ ಯಾವ ರೀತಿಯ ಒತ್ತಡ ಇರಬಹುದೆಂದು ಊಹಿಸಬಹುದು. ಅಧಿಕಾರಿಗಳ ಮೇಲೆ ಒತ್ತಡ ಹಾಗೂ ದಬ್ಬಾಳಿಕೆ ಇದೆ. ಹೀಗಾಗಿ ಇದಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆ ನಡೆದು ಸತ್ಯ ಹೊರಬರಬೇಕು ಎಂದು ಸುಮಲತಾ ಆಗ್ರಹಿಸಿದ್ದಾರೆ.

ಡ್ಯಾಂ ಬಿರುಕು ಬಿಟ್ಟಿಲ್ಲ ಎಂದು ಸ್ವತಃ ಕೆಆರ್​ಎಸ್​ ಇಂಜಿನಿಯರ್​ಗಳು ಸ್ಪಷ್ಟೀಕರಣ ನೀಡಿದರೂ ಅದನ್ನು ಒಪ್ಪಿಕೊಳ್ಳದ ಸುಮಲತಾ ತನಿಖೆಗಾಗಿ ಒತ್ತಾಯಿಸಿದ್ದಾರೆ. ಅಧಿಕಾರಿಗಳ ಮೇಲೆ ಒತ್ತಡ ಹಾಕಿ ಡ್ಯಾಂ ಸುರಕ್ಷಿತ ಎಂಬ ಹೇಳಿಕೆ ಕೊಡಿಸಿರುವ ಸಾಧ್ಯತೆ ಇರುತ್ತದೆ. ಹೀಗಾಗಿ ತಜ್ಞರ ತಂಡ ನೇಮಿಸಿ ಸಿಬಿಐ ತನಿಖೆ ನಡೆಸಿ ವರದಿ ನೀಡಲಿ ಎಂದು ಪಟ್ಟು ಹಿಡಿದಿದ್ದಾರೆ.

ಡ್ಯಾಂ ಬಿರುಕು ಬಿಟ್ಟಿದೆ ಎಂಬ ಹೇಳಿಕೆ ವಿವಾದದ ರೂಪಕ್ಕೆ ತಿರುಗುತ್ತಿದ್ದಂತೆಯೇ ಡ್ಯಾಂ ಸುರಕ್ಷಿತವಾಗಿದೆ, ಬಿರುಕು ಬಿಟ್ಟಿಲ್ಲ ಎಂದು ನೀರಾವರಿ ನಿಗಮದ ಅಧಿಕಾರಿಗಳು, ಜಿಲ್ಲಾ ಉಸ್ತುವಾರಿ ಸಚಿವರಾದಿಯಾಗಿ ಹಲವರು ಹೇಳಿಕೆ ನೀಡಿದ್ದರು. ಆದರೆ, ಅದಕ್ಕೆ ಪ್ರತ್ಯುತ್ತರ ನೀಡಿರುವ ಸುಮಲತಾ, ಡ್ಯಾಂ ಸುರಕ್ಷಿತವಾಗಿದೆ ಎನ್ನುವುದು ತನಿಖೆಯಿಂದಲೇ ಗೊತ್ತಾಗಲಿ. ಆ ವರದಿಯಲ್ಲೂ ಡ್ಯಾಂ ಸುರಕ್ಷಿತ ಎಂದು ಹೇಳಿದರೆ ನಾನು ಖುಷಿಪಡುತ್ತೇನೆ ಎನ್ನುವ ಮೂಲಕ ತಾವು ಪಟ್ಟು ಸಡಿಲಿಸುವುದಿಲ್ಲ ಎಂಬ ಸಂದೇಶ ರವಾನಿಸಿದ್ದಾರೆ.

ಡ್ಯಾಂ ಹಾಗೂ ಗಣಿಗಾರಿಕೆ ವಿಚಾರದಲ್ಲಿ ಜೆಡಿಎಸ್ ನಾಯಕರು ಪ್ರಮುಖ ಪಾತ್ರ ವಹಿಸಿದ್ದಾರೆ ಎಂಬ ಸುದ್ದಿಯಿದ್ದು, ಅವರ ಬಂಡವಾಳ ಬಯಲು ಮಾಡಲು ಸುಮಲತಾ ಶತಾಯುಗತಾಯ ಪ್ರಯತ್ನಿಸುತ್ತಿದ್ದಾರೆ ಎನ್ನಲಾಗಿದೆ. ಕಳೆದ ಲೋಕಸಭಾ ಚುನಾವಣೆ ವೇಳೆಯೂ ಜೆಡಿಎಸ್ ನಾಯಕರ ಹೇಳಿಕೆಗಳು ಸುಮಲತಾ ಪಾಲಿಗೆ ಉತ್ತಮ ರಾಜಕೀಯ ಅಸ್ತ್ರಗಳಾಗಿದ್ದವು. ಇದೀಗ ಮಂಡ್ಯ ಜಿಲ್ಲೆಯ ಭಾವನಾತ್ಮಕ ವಿಷಯವಾದ ಕೆಆರ್​ಎಸ್​ ಡ್ಯಾಂ ಸುಮಲತಾ ಪಾಲಿಗೆ ಅಸ್ತ್ರವಾಗುತ್ತಿದೆ. ಹೀಗಾಗಿ, ಐತಿಹಾಸಿಕ ಅಣೆಕಟ್ಟಿಗೆ ಜೆಡಿಎಸ್ ನಾಯಕರಿಂದಲೇ ಹಾನಿಯಾಗುತ್ತಿದೆ ಎಂದು ಸಾಬೀತುಪಡಿಸಲು ಹೊರಟಿರುವ ಸುಮಲತಾ, ಅಸ್ತಿತ್ವದ ಹೋರಾಟ ಎಂಬಂತೆ ರಾಜಕೀಯ ದಾಳ ಉರುಳಿಸುತ್ತಿದ್ದಾರಾ ಎಂಬ ಪ್ರಶ್ನೆಗಳು ಗರಿಗೆದರಿವೆ.

ಇದನ್ನೂ ಓದಿ: ಕೆಆರ್​ಎಸ್​ನಲ್ಲಿ ಬಿರುಕಿಲ್ಲ ಎಂದು ಇಂಜಿನಿಯರ್​ಗಳೇ ಹೇಳಿದರೂ ಜಗ್ಗದ ಸುಮಲತಾ; ಅಂದು ಟೀಕಿಸಿದ್ದ ಜೆಡಿಎಸ್​ ನಾಯಕರ ವಿರುದ್ಧ ತನಿಖೆ ಅಸ್ತ್ರ? 

ಕುತಂತ್ರಿಗಳು ನಮ್ಮ ಕುಟುಂಬ ಒಡೆಯೋಕೆ ಸಾಧ್ಯವಿಲ್ಲ; ನನ್ನ ರಾಜಕಾರಣವನ್ನು ಮಂಡ್ಯದಲ್ಲೇ ತೋರಿಸುವೆ: ಸುಮಲತಾ ವಿರುದ್ಧ ಕುಮಾರಸ್ವಾಮಿ ಗರಂ

Published On - 11:12 am, Thu, 8 July 21