
ನವದೆಹಲಿ, ಜನವರಿ 14: ಕೇಂದ್ರ ಸಚಿವ ಪ್ರಲ್ಹಾದ ಜೋಶಿ (Pralhad Joshi) ಅವರು ಕರ್ನಾಟಕದ ಅಭಿವೃದ್ಧಿ ಮತ್ತು ಜನಪರ ಕಾಳಜಿ ತೋರುವಲ್ಲಿ ‘ ಕರ್ನಾಟಕದ ಮೋದಿ’ ಎಂದು UAE ನಲ್ಲಿರುವ ‘ಕನ್ನಡ ಪಾಠಶಾಲೆ’ಯ ಸಂಚಾಲಕ ಶಶಿಧರ್ ನಾಗರಾಜಪ್ಪ ಬಣ್ಣಿಸಿದ್ದಾರೆ. ಯುಎಇನಲ್ಲಿ ಏರ್ಪಡಿಸಿದ್ದ ಸಮಾರಂಭ ಉದ್ದೇಶಿಸಿ ಮಾತನಾಡುತ್ತ, ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಕಲ್ಯಾಣ ಕಾರ್ಯಕ್ಕೆ ಮಿಸಲಾದಂತೆ, ಕರ್ನಾಟಕದಲ್ಲಿ ಪ್ರಲ್ಹಾದ ಜೋಶಿ ಅವರು ಕನ್ನಡಿಗರ ಪಾಲಿನ ಮೋದಿ ಆಗಿದ್ದಾರೆ ಎಂದು ಹೊಗಳಿದರು.
ಕರ್ನಾಟಕದ ಅಭಿವೃದ್ಧಿ ಮತ್ತು ಜನಪರ ಕಾಳಜಿಯ ವಿಷಯದಲ್ಲಿ ‘ಕರ್ನಾಟಕದ ಮೋದಿ’ ಎಂದೇ ಗುರುತಿಸಿಕೊಳ್ಳುವಂತಹ ದಕ್ಷ ನಾಯಕರಾಗಿದ್ದಾರೆ ಸಚಿವ ಪ್ರಲ್ಹಾದ ಜೋಶಿ ಅವರೆಂದು ಅಭಿಮಾನ ವ್ಯಕ್ತಪಡಿಸಿದ ಶಶಿಧರ್, ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿಯ ಯೋಜನೆಗಳನ್ನು ಕರ್ನಾಟಕದಲ್ಲಿ ಅತ್ಯಂತ ಯಶಸ್ವಿಯಾಗಿ ಅನುಷ್ಠಾನಗೊಳಿಸುವಲ್ಲಿ ಸಫಲರಾಗಿದ್ದಾರೆ ಎಂದು ಪ್ರಶಂಸಿಸಿದರು. ಅನಿವಾಸಿ ಭಾರತೀಯರ ಸಮಸ್ಯೆಗಳಿಗೆ ಸ್ಪಂದಿಸುವಲ್ಲಿ ಸಚಿವ ಪ್ರಲ್ಹಾದ ಜೋಶಿ ಅವರ ಕಾರ್ಯವೈಖರಿ ಅಪ್ರತಿಮವಾದದ್ದು. ಸಾಗರೋತ್ತರ ಕನ್ನಡಿಗರ ಮತ್ತು ಅನಿವಾಸಿ ಭಾರತೀಯರ ಶ್ರೇಯೋಭಿವೃದ್ಧಿಗೆ ಸದಾ ಮಿಡಿಯುವ ಸಹೃದಯಿ ಎಂದು ಬಣ್ಣಿಸಿದರು. ಇದೇ ವೇಳೆ ವಿದೇಶದಲ್ಲಿ ಕನ್ನಡ ಪಸರಿಸುವ ಕೈಂಕರ್ಯದಲ್ಲಿ ಅಭೂತಪೂರ್ವ ಪ್ರಯತ್ನ ನಡೆಸಿದ ಯುಎಇ ಕನ್ನಡ ಪಾಠಶಾಲೆಯ ಆಡಳಿತ ಮಂಡಳಿ ಮತ್ತು ಶಿಕ್ಷಕರನ್ನು ಸನ್ಮಾನಿಸಲಾಯಿತು.
ಶಶಿಧರ್ ಹೇಳುವಂತೆ, ಯು.ಎ.ಇ ನಲ್ಲಿ ನಾವು ಕನ್ನಡ ಭಾಷೆ ಮತ್ತು ಸಂಸ್ಕೃತಿ ಉಳಿಸಲು ಹಮ್ಮಿಕೊಂಡಿರುವ ‘ಕನ್ನಡ ಪಾಠಶಾಲೆ’ಯಂತಹ ಪ್ರಯತ್ನಗಳಿಗೆ ಸಚಿವ ಜೋಶಿ ಅವರ ಬೆಂಬಲ, ಮಾರ್ಗದರ್ಶನ ನಮಗೆಲ್ಲಾ ಸ್ಫೂರ್ತಿದಾಯಕ. ಕೇಂದ್ರ ಸಚಿವರಾಗಿ ಅನಿವಾಸಿ ಭಾರತೀಯರ ಸಮಸ್ಯೆಗಳನ್ನು ಆಲಿಸಿ ಸ್ಪಂದಿಸುವ ಅವರ ಔದಾರ್ಯದ ಗುಣ ನಿಜಕ್ಕೂ ಶ್ಲಾಘನೀಯ. ಕನ್ನಡ ನಾಡು, ನುಡಿ ಮತ್ತು ಸಂಸ್ಕೃತಿಯನ್ನು ಜಾಗತಿಕ ಮಟ್ಟದಲ್ಲಿ ಬೆಳೆಸುವ ನಿಟ್ಟಿನಲ್ಲಿ ಪ್ರಲ್ಹಾದ ಜೋಶಿ ಅವರ ದೂರದೃಷ್ಟಿ ಮತ್ತು ಕಾಳಜಿ ನಮಗೆ ಮತ್ತಷ್ಟು ಶಕ್ತಿ ನೀಡಿದೆ.
ಸಮಾರಂಭದಲ್ಲಿ ಸಚಿವ ಪ್ರಲ್ಹಾದ ಜೋಶಿ ಮಾತನಾಡಿ, ಕನ್ನಡ ಭಾಷೆ- ಸಂಸ್ಕೃತಿ ಮತ್ತು ಕನ್ನಡದ ಅಸ್ಮಿತೆಯನ್ನು ಮೆರೆಯುತ್ತ, ವಿದೇಶಿ ನೆಲದಲ್ಲಿ ಕನ್ನಡ ಭಾಷಿಕರನ್ನು ಒಗ್ಗೂಡಿಸಿ, ನಮ್ಮ ಸಾಂಸ್ಕೃತಿಕ ಪರಂಪರೆಯನ್ನು ಪಸರಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದು ಯುಎಇ ಕನ್ನಡ ಪಾಠಶಾಲೆ ಕೈಂಕರ್ಯಕ್ಕೆ ಅಭಿಮಾನ ವ್ಯಕ್ತಪಡಿಸಿದರು. ಯುಎಇಯಲ್ಲಿರುವ ಅನಿವಾಸಿ ಭಾರತೀಯರು ಕನ್ನಡ ಪಾಠಶಾಲೆಯನ್ನು ಆರಂಭಿಸಿ, ಭಾಷೆ ಮತ್ತು ಸಂಸ್ಕೃತಿಯನ್ನು ಸಂರಕ್ಷಿಸುತ್ತ ಹೊರನಾಡ ಕನ್ನಡಿಗರಿಗೆ ಸೂರ್ತಿಯಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಮನ್ ಕೀ ಬಾತ್ ನಲ್ಲಿ ಈ ಬಗ್ಗೆ ಉಲ್ಲೇಖಿಸಿ ಕನ್ನಡ – ಕನ್ನಡಿಗರ ಹಿರಿಮೆಯನ್ನು ಎತ್ತಿ ಹಿಡಿದಿದ್ದಾರೆ ಎಂದು ಸ್ಮರಿಸಿದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.