ಉಡುಪಿ: ವೈದ್ಯಕೀಯ ಸೌಲಭ್ಯಗಳಿಗಾಗಿ ರಾಜ್ಯದಲ್ಲಿ ಹೆಸರುವಾಸಿಯಾಗಿರುವ ಉಡುಪಿ ಜಿಲ್ಲೆಯ ಆಸ್ಪತ್ರೆ ಸದ್ಯ ಕೊರೊನಾ ರೋಗಿಗಳಿಂದ ತುಂಬಿ ತುಳುಕುತ್ತಿದೆ. ಅದರಲ್ಲೂ ಕೊರೊನಾ ಸೋಂಕು ಮಿತಿ ಮೀರುವವರೆಗೆ ಮನೆಯಲ್ಲೇ ಕುಳಿತು ಆ ಬಳಿಕ ನೇರವಾಗಿ ಐಸಿಯುಗೆ ಬಂದು ದಾಖಲಾಗುತ್ತಿರುವ ರೋಗಿಗಳ ಸಂಖ್ಯೆ ಹೆಚ್ಚಾಗಿದೆ. ಈ ನಿಟ್ಟಿನಲ್ಲಿ ಪ್ರಾಥಮಿಕ ಹಂತದಲ್ಲಿ ಚಿಕಿತ್ಸೆ ಪಡೆದುಕೊಂಡರೆ ಹೀಗೆ ಬೆಡ್ಗಾಗಿ ಅಲೆಯುವುದು ತಪ್ಪುತ್ತದೆ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ಎಚ್ಚರಿಕೆ ನೀಡಿದ್ದಾರೆ.
ಮಂಗಳವಾರ ಸಂಜೆವರೆಗೆ ಸಾಕಾಗುವಷ್ಟು ಮಾತ್ರ ಆಕ್ಸಿಜನ್ ಜಿಲ್ಲೆಯಲ್ಲಿ ಲಭ್ಯವಿತ್ತು. ಕೊನೆಗೆ ಸಾಕಷ್ಟು ಒದ್ದಾಟ ನಡೆಸಿದ ಬಳಿಕ ಇಂದು 10 ಸಾವಿರ ಲೀಟರ್ ಆಕ್ಸಿಜನ್ ಜಿಲ್ಲೆಗೆ ಬಂದಿದೆ. ಆದರೆ ವೆಂಟಿಲೇಟರ್ ಮತ್ತು ಬೆಡ್ ಕೊರತೆ ಇನ್ನೂ ಕೂಡ ಜಿಲ್ಲೆಯಲ್ಲಿ ಆತಂಕಕ್ಕೆ ಈಡು ಮಾಡುತ್ತಿದೆ. ಈಗಾಗಲೇ ಜಿಲ್ಲೆಯಲ್ಲಿ ಪರಿಸ್ಥಿತಿ ಕೈಮೀರುವ ಹಂತದಲ್ಲಿದೆ. ದಿನೇದಿನೆ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದೆ. ಸಾವಿನ ಸಂಖ್ಯೆಯೂ ಹೆಚ್ಚುತ್ತಿದೆ. ಇಂತಹ ಸಂದರ್ಭದಲ್ಲಿ ಸೋಂಕಿನ ಲಕ್ಷಣ ಇರುವವರು ನಿರ್ಲಕ್ಷ್ಯ ಮಾಡಬಾರದು. ಸಂಬಂಧಿಕರು ಮತ್ತು ಬಂಧುಗಳೇ ಮನೆಗೆ ಬಂದರೂ ಸಾಮಾಜಿಕ ಅಂತರ ಪಾಲಿಸಬೇಕು. ಈ ಸಮಯದಲ್ಲಿ ಸಂಬಂಧಿಕರು ಮನೆಯಲ್ಲಿದ್ದರೂ ಐಸೊಲೇಷನ್ ನಲ್ಲಿರಲಿ. ಮನೆಯ ಒಬ್ಬರಿಗೆ ಬಂದರೆ ಎಲ್ಲರಿಗೂ ಸೋಂಕು ಹರಡುತ್ತದೆ. ಇದರಿಂದ ಸಮಸ್ಯೆ ಬಿಗಡಾಯಿಸುತ್ತದೆ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ಹೇಳಿದ್ದಾರೆ.
ಜಿಲ್ಲಾಧಿಕಾರಿ ಈ ರೀತಿಯಾಗಿ ಹೇಳಿದರೆ ಸ್ಥಳೀಯರು ಈ ಕುರಿತು ಬೇರೆಯೇ ಉತ್ತರ ನೀಡುತ್ತಿದ್ದಾರೆ. ಕೆಲದಿನಗಳ ಹಿಂದೆ ಉಡುಪಿಗೆ ಆಗಮಿಸಿದ ಉಸ್ತುವಾರಿ ಸಚಿವ ಬೊಮ್ಮಾಯಿ ಅವರು ಜಿಲ್ಲೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಬೆಡ್ ಮತ್ತು ವೆಂಟಿಲೇಟರ್ ವ್ಯವಸ್ಥೆ ಇದೆ ಎಂದು ಹೇಳಿದ್ದರು. ಆದರೆ ಕೊರೊನಾ ಹೆಲ್ಪ್ ಸೆಂಟರ್ ಗೆ ಕರೆ ಮಾಡಿದರೆ ಸರಕಾರಿ ವ್ಯವಸ್ಥೆಯಲ್ಲಿರುವ ಎಲ್ಲಾ ಬೆಡ್ಗಳು ಭರ್ತಿಯಾಗಿವೆ ಎಂಬ ಉತ್ತರ ಸಿಗುತ್ತಿದೆ. ಇನ್ನೊಂದು ಕಡೆಯಿಂದ ವ್ಯಾಕಿನ್ಸ್ ಕೊರತೆಯು ಕಾಡುತ್ತಿದೆ. ಮೊದಲ ಡೋಸ್ ಪಡೆದವರಿಗೆ ಎರಡನೇ ಡೋಸ್ ಸಿಗದೆ ಪರದಾಡುವಂತಾಗಿದೆ. ಸದ್ಯ ಜಿಲ್ಲಾಡಳಿತ ಈ ಕಡೆಗೂ ಗಮನ ಹರಿಸಲಿ ಎಂದು ಸ್ಥಳೀಯರಾದ ದಿವಕಾರ್ ತಿಳಿಸಿದ್ದಾರೆ..
ಒಟ್ಟಿನಲ್ಲಿ ದಿನನಿತ್ಯ 500 ರಿಂದ 600 ಪ್ರಕರಣಗಳು ಸರಾಸರಿಯಾಗಿ ಜಿಲ್ಲೆಯಲ್ಲಿ ಪಾಸಿಟಿವ್ ಬರುತ್ತಿದ್ದು, ಕನಿಷ್ಠ 20ರಿಂದ 30 ಜನರು ಆಕ್ಸಿಜನ್ ಪಡೆದುಕೊಳ್ಳುವ ಗಂಭೀರ ಸ್ಥಿತಿಗೆ ತುತ್ತಾಗುತ್ತಿದ್ದಾರೆ. ಈ ಹಂತದಲ್ಲಿ ಖಾಸಗಿ ಆಸ್ಪತ್ರೆಗಳು ಕೂಡ ಕೈಚೆಲ್ಲಿದ್ದು, ಸೋಂಕು ನಿಯಂತ್ರಣಕ್ಕೆ ಬಾರದೆ ಇದ್ದರೆ ಜಿಲ್ಲೆಯಲ್ಲೂ ಮರಣ ಮೃದಂಗ ಮೊಳಗುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.
ಇದನ್ನೂ ಓದಿ:
ಹುಬ್ಬಳ್ಳಿಯಲ್ಲಿ ಐವರು ಕೊರೊನಾ ಸೋಂಕಿಗೆ ಬಲಿ; ಆಕ್ಸಿಜನ್ ಕೊರತೆಯೇ ಸಾವಿಗೆ ಕಾರಣ ಎಂದು ಕುಟುಂಬಸ್ಥರ ಆರೋಪ