Malpe Beach: ಪಡುಕೆರೆಯಲ್ಲಿ ಪ್ರವಾಸಿಗರಿಂದ ರಾತ್ರಿ ಕಾಟ; ಕಡಿವಾಣಕ್ಕೆ ಸ್ಥಳೀಯರ ಮಾಸ್ಟರ್ ಪ್ಲಾನ್, ಪೊಲೀಸರ ಸಾಥ್
ಉಡುಪಿ ಜಿಲ್ಲೆಯ ಮಲ್ಪೆಯ ಪಡುಕೆರೆಯಲ್ಲಿ ರಾತ್ರಿ ಹೊತ್ತು ಪ್ರವಾಸಿಗರ ತೊಂದರೆಗಳಿಗೆ ಕಡಿವಾಣ ಹಾಕಲು ಸ್ಥಳೀಯರೇ ಸೇರಿ ಮಾಸ್ಟರ್ ಪ್ಲ್ಯಾನ್ ಹಾಕಿದ್ದು ಇದಕ್ಕೆ ಪೊಲೀಸರು ಸಹ ಸಾಥ್ ನೀಡಿದ್ದಾರೆ..
ಉಡುಪಿ: ಜಿಲ್ಲೆಯ ಪ್ರಖ್ಯಾತ ಮಲ್ಪೆ ಹಾಗೂ ಪಡುಕೆರೆ ಬೀಚ್ ಪ್ರವಾಸಿ ತಾಣಕ್ಕೆ ಸಾಕಷ್ಟು ಮಂದಿ ಪ್ರವಾಸಿಗರು ಭೇಟಿ ನೀಡುತ್ತಾರೆ. ಕೆಲವರು ನಿಸರ್ಗದ ಸೌಂದರ್ಯವನ್ನು ಸವಿದು ವಾಪಾಸದರೆ ಇನ್ನು ಕೆಲವರು ಸ್ಥಳೀಯ ನಿವಾಸಿಗಳಿಗೆ ತೊಂದರೆ ನೀಡಲು ಮುಂದಾಗುತ್ತಾರೆ. ಬೀಚ್ ನೋಡುವ ನೆಪದಲ್ಲಿ ಬರುವ ಕೆಲವರು ಪಡುಕೆರೆಯಲ್ಲಿ ರಾತ್ರಿ ಹೊತ್ತು ಅನೈತಿಕ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ. ಅಲ್ಲದೇ ಎಲ್ಲಿಂದರಲ್ಲಿ ವಾಹನ ಪಾರ್ಕ್ ಮಾಡಿ ಸ್ಥಳೀಯರಿಗೆ ತೊಂದರೆ ನೀಡುವ ಕೆಲಸವೂ ನಡೆಯುತ್ತಿದೆ. ಇದರಿಂದ ಕಿರಿಕಿರಿ ಅನುಭವಿಸಿದ ಸ್ಥಳೀಯರು ಪೋಸ್ಟರ್ ಹಾಕುವ ಒಂದು ನಿರ್ಣಯವನ್ನು ಕೈಗೊಂಡಿದ್ದಾರೆ. ಅದರಂತೆ ರಾತ್ರಿ 8ರಿಂದ ಬೆಳಗ್ಗೆ 6ರ ತನಕ ಈ ಪ್ರದೇಶಕ್ಕೆ ಪ್ರವಾಸಿಗರು ಬಾರದಂತೆ ಅಲ್ಲಲ್ಲಿ ಪೋಸ್ಟರ್ ಹಾಕಿದ್ದಾರೆ.
ಸದ್ಯ ಪ್ರವಾಸಿಗರ ಮಂಗಾಟಗಳಿಗೆ ಸ್ಥಳೀಯರು ಹಾಕಿದ ಪೋಸ್ಟರ್ಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದು ಪ್ರವಾಸಿಗರ ಅನೈತಿಕ ಚಟುವಟಿಕೆಗೆ ಕಡಿವಾಣ ಬಿದ್ದಂತಾಗಿದೆ. ಪಡುಕೆರೆ ಭಾಗದಲ್ಲಿ ನಡೆಯುತ್ತಿರುವ ಅನೈತಿಕ ಚಟುವಟಿಕೆಯ ಬಗ್ಗೆ ಮಲ್ಪೆ ಠಾಣಾಧಿಕಾರಿಯವರಿಗೂ ಸಹ ದೂರನ್ನು ನೀಡಲಾಗಿದ್ದು ಬುಧವಾರ ಸ್ಥಳಕ್ಕೆ ಆಗಮಿಸಿ ಸ್ಥಳೀಯರ ನಿರ್ಧಾರವನ್ನು ಅವರೂ ಕೂಡ ಬೆಂಬಲಿಸಿದ್ದಾರೆ. ಮಾತ್ರವಲ್ಲದೇ ಇನ್ನು ಮುಂದೆ ಪಡುಕೆರೆ ಬೀಚ್ಗೆ ಪ್ರವಾಸಿಗರು ರಾತ್ರಿ 8ರ ಬಳಿಕ ಬಾರದಂತೆ ನಾವೇ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.
ಒಟ್ಟಾರೆಯಾಗಿ ಜಿಲ್ಲೆಯ ಬಹುತೇಕ ಪ್ರವಾಸಿ ಸ್ಥಳಗಳಲ್ಲಿ ಈ ಸಮಸ್ಯೆ ಇದೆ. ಪ್ರವಾಸದ ನೆಪದಲ್ಲಿ ಬರುವ ಕೆಲವರು ಉಳಿದವರಿಗೂ ಅಸಹ್ಯ ಬರುವಂತೆ ನಡೆದುಕೊಳ್ಳುವುದಲ್ಲದೆ ಪರಿಸರವನ್ನು ಹಾಳು ಮಾಡುತ್ತಿದ್ದಾರೆ. ಸದ್ಯ ಮಲ್ಪೆ ಪರಿಸರದವರ ಬುದ್ಧಿವಂತಿಕೆಯಿಂದಾಗಿ ನಿತ್ಯ ಆಗುತ್ತಿದ್ದ ಕಿರಿಕಿರಿಯು ತಪ್ಪಿದಂತಾಗಿದೆ.
ಮತ್ತಷ್ಟು ಜಿಲ್ಲಾವಾರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ