ಉಡುಪಿ, ಏಪ್ರಿಲ್ 25: ಕಂಚಿನಕಂಠದ -ಪ್ರಯೋಗಶೀಲ ಹಾಡುಗಾರರಾಗಿದ್ದ ಬಡಗುತಿಟ್ಟು ಯಕ್ಷಗಾನ ಭಾಗವತ (bhagavatha) ಸುಬ್ರಹ್ಮಣ್ಯ ಧಾರೇಶ್ವರ (67) (Subrahmanya Dhareshwara) ಅವರು ಇಂದು ಅನಾರೋಗ್ಯದಿಂದ ನಿಧನರಾಗಿದ್ದಾರೆ. ಬೆಂಗಳೂರಿನ ಮಗನ ಮನೆಯಲ್ಲಿ ಮುಂಜಾನೆ 4.30ಕ್ಕೆ ನಿಧನ ಹೊಂದಿದ್ದು, ಇಂದು ಸಂಜೆ ಜಿಲ್ಲೆಯ ಕುಂದಾಪುರ ತಾಲೂಕಿನ ನಾಗನೂರಿನ ಸ್ವಗೃಹದಲ್ಲಿ ಅಂತ್ಯಕ್ರಿಯೆ ನಡೆಲಿದೆ. ಯಕ್ಷಗಾನ ಕ್ಷೇತ್ರದಲ್ಲಿ 46 ವರ್ಷ ಸೇವೆ ಸಲ್ಲಿಸಿರುವ ಸುಬ್ರಹ್ಮಣ್ಯ ಧಾರೇಶ್ವರ, ಕೋಟ ಅಮೃತೇಶ್ವರಿ, ಹಿರೇಮಹಾಲಿಂಗೇಶ್ವರ ಮೇಳ, ಶಿರಸಿ ಮೇಳ, ಪೆರ್ಡೂರು ಮೇಳದಲ್ಲಿ ಭಾಗವತರಾಗಿ ಸೇವೆ ಸಲ್ಲಿಸಿದ್ದಾರೆ.
ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಅವರು ಮೂಲತಃ ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದಲ್ಲಿ ಜನಿಸಿದ್ದರು. ಮೇಳದ ಎಲೆಕ್ಟ್ರೀಷಿಯನ್ ಆಗಿ ಸೇರಿ ಬಳಿಕ ಭಾಗವತರಾದರು. ಅಲ್ಪಕಾಲದ ಅಸೌಖ್ಯದಿಂದ ಬೆಂಗಳೂರಿನ ತಮ್ಮ ಮಗನ ಮನೆಯಲ್ಲಿ ನಿಧನ ಹೊಂದಿದ್ದಾರೆ.
ಇದನ್ನೂ ಓದಿ: ಮತದಾನ ಮಾಡಿ ಕೆಲವೇ ಕ್ಷಣಗಳಲ್ಲಿ ಪ್ರಾಣ ಬಿಟ್ಟ ವಯೋವೃದ್ಧೆ
ಪೌರಾಣಿಕ ಯಕ್ಷಗಾನ ಭಾಗವತರಾಗಿದ್ದ ದಿವಂಗತ ನಾರ್ಣಪ್ಪ ಉಪ್ಪೂರ ಅವರ ಶಿಷ್ಯರಾಗಿದ್ದ ಧಾರೇಶ್ವರ ಅವರು ತಮ್ಮ 21 ನೇ ವಯಸ್ಸಿನಲ್ಲಿ ವೃತ್ತಿಪರ ಗಾಯಕರಾಗಿ ಯಕ್ಷಗಾನ ರಂಗಭೂಮಿಗೆ ಪ್ರವೇಶಿಸಿದರು. ಉತ್ತರ ಕನ್ನಡದ ಗೋಕರ್ಣದ ಬಳಿಯ ಧಾರೇಶ್ವರದಲ್ಲಿ ಅವರ ತಂದೆ ಲಕ್ಷ್ಮೀನಾರಾಯಣ ಭಟ್ ಅವರು ಹವ್ಯಾಸಿ ಯಕ್ಷಗಾನ ಕಲಾವಿದರಾಗಿದ್ದರು. ಹಾಗಾಗಿ ಮಗನಿಗೆ ಚಿಕ್ಕವಯಸ್ಸಿನಲ್ಲೇ ಯಕ್ಷಗಾನದ ಅಭಿರುಚಿ ಬೆಳೆಯಿತು.
ಗಾನ ಮಾಂತ್ರಿಕ, ಕರಾವಳಿ ಭಾಗದ ಸುಪ್ರಸಿದ್ಧ ಯಕ್ಷಗಾನ ಭಾಗವತರಾದ ಸುಬ್ರಹ್ಮಣ್ಯ ಧಾರೇಶ್ವರರ ನಿಧನದ ಸುದ್ದಿ ನೋವುಂಟು ಮಾಡಿದೆ.
ಸುದೀರ್ಘ 45 ವರ್ಷಗಳ ಕಾಲ ತಮ್ಮ ಕಂಠಸಿರಿಯ ಮೂಲಕ ಕಲಾರಸಿಕರನ್ನು ರಂಜಿಸಿದ್ದ ಧಾರೇಶ್ವರರು ಪ್ರಯೋಗಶೀಲ ಭಾಗವತಿಕೆಗೆ ಹೆಸರುವಾಸಿಯಾದವರು.ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ, ಅಭಿಮಾನಿಗಳಿಗೆ ನೋವು ಭರಿಸುವ ಶಕ್ತಿ… pic.twitter.com/pNqoPMWsv2
— Siddaramaiah (@siddaramaiah) April 25, 2024
ಸುಬ್ರಹ್ಮಣ್ಯ ಧಾರೇಶ್ವರ ಅವರು ಸುಮಾರು ನಾಲ್ಕು ದಶಕಗಳ ಕಾಲ ವೃತ್ತಿಪರ ‘ಭಾಗವತ’ರಾಗಿದ್ದರು. ಪೆರ್ಡೂರು ಯಕ್ಷಗಾನ ಮೇಳದಿಂದ ‘ಪ್ರಧಾನ ಭಾಗವತ’ರಾಗಿ ಬಳಿಕ ಇತ್ತೀಚೆಗೆ ನಿವೃತ್ತರಾಗಿದ್ದರು. ನಂತರ ಅವರು ವಿವಿಧ ಯಕ್ಷಗಾನ ಪ್ರದರ್ಶನಗಳಲ್ಲಿ ಹಾಡುತ್ತಿದ್ದರು. ಸುಬ್ರಹ್ಮಣ್ಯ ಧಾರೇಶ್ವರ ಅವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಕೂಡ ಲಭಿಸಿದೆ.
ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದು, ‘ಗಾನ ಮಾಂತ್ರಿಕ, ಕರಾವಳಿ ಭಾಗದ ಸುಪ್ರಸಿದ್ಧ ಯಕ್ಷಗಾನ ಭಾಗವತರಾದ ಸುಬ್ರಹ್ಮಣ್ಯ ಧಾರೇಶ್ವರರ ನಿಧನದ ಸುದ್ದಿ ನೋವುಂಟು ಮಾಡಿದೆ. ಸುದೀರ್ಘ 45 ವರ್ಷಗಳ ಕಾಲ ತಮ್ಮ ಕಂಠಸಿರಿಯ ಮೂಲಕ ಕಲಾರಸಿಕರನ್ನು ರಂಜಿಸಿದ್ದ ಧಾರೇಶ್ವರರು ಪ್ರಯೋಗಶೀಲ ಭಾಗವತಿಕೆಗೆ ಹೆಸರುವಾಸಿಯಾದವರು. ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ, ಅಭಿಮಾನಿಗಳಿಗೆ ನೋವು ಭರಿಸುವ ಶಕ್ತಿ ಕರುಣಿಸಲೆಂದು ದೇವರಲ್ಲಿ ಪ್ರಾರ್ಥಿಸುತ್ತೇನೆ’ ಎಂದು ಸಂತಾಪ ಸೂಚಿಸಿದ್ದಾರೆ.
ಮತ್ತಷ್ಟು ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:57 am, Thu, 25 April 24