AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉಡುಪಿಯಲ್ಲಿ ನಡೆಯಿತು ಒಂದು ವಿಶೇಷ ಮದುವೆ; ಸಾಕ್ಷಿಯಾದ ಜಿಲ್ಲಾಧಿಕಾರಿ ಮತ್ತು ಶಾಸಕರು

ಇದೊಂದು ಅಪರೂಪದ ಮದುವೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಈ ಮದುವೆಯ ಪೌರೋಹಿತ್ಯ ವಹಿಸಿಕೊಂಡಿತು. ಈ‌ ಮದುವೆ ನಡೆದದ್ದು ಉಡುಪಿಯ ರಾಜ್ಯ ಮಹಿಳಾ ನಿಲಯದಲ್ಲಿ.

ಉಡುಪಿಯಲ್ಲಿ ನಡೆಯಿತು ಒಂದು ವಿಶೇಷ ಮದುವೆ; ಸಾಕ್ಷಿಯಾದ ಜಿಲ್ಲಾಧಿಕಾರಿ ಮತ್ತು ಶಾಸಕರು
TV9 Web
| Updated By: Rakesh Nayak Manchi|

Updated on:Oct 29, 2022 | 11:08 AM

Share

ಉಡುಪಿ: ವಿವಿಧ ಕೌಶಲ್ಯ ಮತ್ತು ತರಬೇತಿ ಕಲಿತ ಬಳಿಕ ಸಮಾಜದ ಮುಖ್ಯವಾಹಿನಿಗೆ ಬರುವ ಮನಸ್ಸು ಈಕೆಗಾಯ್ತು. ಈ ನಡುವೆ ಅನೇಕ ನೆಂಟಸ್ತಿಕೆಗಳು ಬರಲು ಆರಂಭವಾದವು. ಅದರಂತೆ ಒಂದು ಯುವಕನೊಂದಿಗೆ ಮದುವೆಯ ದಿನಾಂಕ ನಿಗದಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟೂ ಆಯ್ತು. ಅದರಂತೆ ಇದೊಂದು ಅಪರೂಪದ ಹಾಗೂ ವಿಶೇಷ ಮದುವೆ ಎಂದು ಎನಿಸಿಕೊಂಡಿತು. ಜಿಲ್ಲಾಧಿಕಾರಿ ಮತ್ತು ಶಾಸಕರ ಸಮ್ಮುಖದಲ್ಲಿ ಮದುವೆ ನೆರವೇರಿತು ಎಂಬ ಕಾರಣಕ್ಕೆ ಇದು ವಿಶೇಷತೆಯನ್ನು ಪಡೆಯಲಿಲ್ಲ. ಬದಲಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಾಕೆ ಬೆಳೆದ ಪರಿ ಈ ಮದುವೆಯನ್ನು ವಿಶೇಷ ಎನ್ನುವಂತೆ ಮಾಡಿದೆ.

ಉಡುಪಿಯ ಮಹಿಳಾ ನಿಲಯ 10 ವರ್ಷಗಳ ಬಳಿಕ ಇಂತಹದ್ದೊಂದು ಮದುವೆಯನ್ನು ಏರ್ಪಡಿಸಲಾಗಿತ್ತು. ಕೌಟುಂಬಿಕ ಸಮಸ್ಯೆ ಕಾರಣ ಜಯಶ್ರೀ (25) ಎಂಬವರು ಇಲ್ಲಿನ ಸ್ಟೇಟ್ ಹೋಮ್​ನಲ್ಲಿ ಕಳೆದ ನಾಲ್ಕು ವರ್ಷಗಳಿಂದ ವಾಸವಿದ್ದರು. ಇಲ್ಲಿ‌ ನಾಲ್ಕು ವರ್ಷಗಳಲ್ಲಿ ವಿವಿಧ ಕೌಶಲ್ಯ ಮತ್ತು ತರಬೇತಿ ಕಲಿತ ಬಳಿಕ ಸಮಾಜದ ಮುಖ್ಯವಾಹಿನಿಗೆ ಬರುವ ಮನಸ್ಸು ಮಾಡಿದಳು.

ಈ ನಡುವೆ ಮದುವೆ ವಯಸ್ಸಿನ ಈಕೆಗೆ ಹಲವು ನೆಂಟಸ್ತಿಕೆಗಳು‌ ಬಂದಿದ್ದವು. ಮಹಿಳಾ ನಿಲಯದವರು ಒಂದು ಸಮಿತಿ ರಚಿಸಿ ಸೂಕ್ತ ವರನನ್ನು ಹುಡುಕಿತು. ವರನ ಹಿನ್ನೆಲೆ ಮತ್ತು‌ ಪೂರ್ವಾಪರ ಅರಿತು ದಾವಣಗೆರೆಯ ಮಲ್ಲೇಶ್(29) ಜೊತೆ ವಿವಾಹಕ್ಕೆ ವ್ಯವಸ್ಥೆ ಮಾಡಿತು. ಅದರಂತೆ ಅ.28ರಂದು ಮದುವೆ ದಿನಾಂಕ ನಿಗದಿ ಮಾಡಲಾಯಿತು.

ನಿಗದಿ ಮಾಡಿದ ದಿನಾಂಕದಂತೆ ಜಯಶ್ರೀ ಮತ್ತು ಮಲ್ಲೇಶ್ ನಿನ್ನೆ ಹಸೆಮಣೆ ಏರಿ ಸಪ್ತಪದಿ ತುಳಿದರು. ಈ ಮದುವೆಗೆ ಜಿಲ್ಲಾಧಿಕಾರಿ ಕೂರ್ಮಾ ರಾವ್, ಶಾಸಕ ರಘುಪತಿ ಭಟ್ ಸಾಕ್ಷಿಯಾದರು. ಮದುವೆ ಸಮಾರಂಭಕ್ಕೆ ಸೀಮಿತ ಬಂಧುಗಳನ್ನ ಆಹ್ವಾನಿಸಲಾಗಿತ್ತು. ಸರಕಾರದ ಕಡೆಯಿಂದ 15 ಸಾವಿರ ಮತ್ತು ದಾನಿಗಳ ನೆರವಿನಿಂದ 50 ಸಾವಿರದಷ್ಟು ಹಣವನ್ನು ವಧುವಿಗಾಗಿ ಬ್ಯಾಂಕ್​ನಲ್ಲಿ ಠೇವಣಿ ಇರಿಸಲಾಗಿದೆ. ಕೃಷಿಕನಾಗಿರುವ ಮಲ್ಲೇಶ್ ಮತ್ತು ಜಯಶ್ರೀ ದಾಂಪತ್ಯ ಸುಖಕರವಾಗಿರಲಿ ಎಂದು ಮದುವೆಗೆ ಬಂದವರು ಹಾರೈಸಿದರು.

ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:08 am, Sat, 29 October 22