ವ್ಯಾಕ್ಸಿನ್ ಕ್ಯಾರಿಯರ್ ಆವಿಷ್ಕಾರ; ಲಸಿಕೆ ಪೋಲಾಗುವುದನ್ನು ತಪ್ಪಿಸಲು ಉಡುಪಿ ಯುವಕರ ತಂಡದಿಂದ ವಿನೂತನ ಪ್ರಯೋಗ

|

Updated on: May 30, 2021 | 11:00 AM

ಈ ಕ್ಯಾರಿಯರ್ 2 ಲೀಟರ್ ಸಾಮರ್ಥ್ಯ ಹೊಂದಿದ್ದು, ಇದರೊಳಗೆ 400 ಡೋಸ್ ಲಸಿಕೆ ಸಾಗಿಸಬಹುದು. 25 ವೋಲ್ಟ್ ಪವರ್ ಕನ್ಸಂಪ್ಷನ್ ಮಾಡುವ ಈ ಕ್ಯಾರಿಯರ್ ಶೇಕಡಾ 96 ರಷ್ಟು ವೇಗವಾಗಿ ನಾಲ್ಕರಿಂದ 6 ಡಿಗ್ರಿಗೆ ಇಳಿಯುತ್ತದೆ. ಇದೇ ಈ ಯಂತ್ರದ ವಿಶೇಷ ಎಂದು ತಂಡದ ಸದಸ್ಯ ಮಯೂರ ಶೆಟ್ಟಿ ಹೇಳಿದ್ದಾರೆ.

ವ್ಯಾಕ್ಸಿನ್ ಕ್ಯಾರಿಯರ್ ಆವಿಷ್ಕಾರ; ಲಸಿಕೆ ಪೋಲಾಗುವುದನ್ನು ತಪ್ಪಿಸಲು ಉಡುಪಿ ಯುವಕರ ತಂಡದಿಂದ ವಿನೂತನ ಪ್ರಯೋಗ
ವ್ಯಾಕ್ಸಿನ್ ಕ್ಯಾರಿಯರ್
Follow us on

ಉಡುಪಿ: ಕೊರೊನಾ ಎರಡನೇ ಅಲೆ ತೀವ್ರವಾಗುತ್ತಿದ್ದು, ಸೊಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಪರಿಣಾಮ ಈಗ ಎಲ್ಲಾ ಕಡೆ ಲಸಿಕೆಗಾಗಿ ಹಾಹಾಕಾರ ಶುರುವಾಗಿದ್ದು, ಭಾರತದಂತಹ ಬೃಹತ್ ರಾಷ್ಟ್ರದಲ್ಲಿ 136 ಕೋಟಿ ಜನಸಂಖ್ಯೆಗೆ ಲಸಿಕೆ ನೀಡುವುದು ಒಂದು ದೊಡ್ಡ ಸವಾಲಾಗಿ ಪರಿಣಮಿಸಿದೆ. ಈ ನಿಟ್ಟಿನಲ್ಲಿ ಲಸಿಕೆ ಪೂರೈಸುವ ಒತ್ತಡವನ್ನು ಅರಿತ ಉಡುಪಿ ಜಿಲ್ಲೆಯ ಯುವಕರ ತಂಡವೊಂದು ವ್ಯಾಕ್ಸಿನ್ ಕ್ಯಾರಿಯರ್​ ಅನ್ನು ಆವಿಷ್ಕರಿಸಿದೆ.

ನಮ್ಮ ದೇಶದ ವಾತಾವರಣ ವೈಪರೀತ್ಯದ ಕಾರಣದಿಂದಾಗಿ ಭಾರತದಲ್ಲಿ ಲಸಿಕೆ ವ್ಯಯವಾಗುತ್ತಿದೆ. ಹಾಗಾಗಿ ಲಸಿಕೆ ಪೋಲು ತಪ್ಪಿಸಲು ಮಣಿಪಾಲದ ಬ್ಲ್ಯಾಕ್ ಫ್ರಾಗ್ ಕಂಪನಿಯು ಎಂವೋಲಿಯೋ ಹೆಸರಿನ ವ್ಯಾಕ್ಸಿನ್ ಕ್ಯಾರಿಯರ್​ ಅನ್ನು ಆವಿಷ್ಕರಿಸಿದೆ. ಈ ಯಂತ್ರ, ಗ್ರಾಮೀಣ ಭಾಗಕ್ಕೆ ಲಸಿಕೆ ಕೊಂಡೊಯ್ಯಲು ಬಹಳ ಉಪಕಾರಿ ಆಗಲಿದೆ. ಕೋವ್ಯಾಕ್ಸಿನ್ ಮತ್ತು ಕೋವಿಶೀಲ್ಡ್ ಕೊರೊನಾ ಮಹಾಮಾರಿಯ ವಿರುದ್ಧ ಭಾರತ ಪ್ರಯೋಗ ಮಾಡಿರುವ 2 ಲಸಿಕೆಗಳು. ಈ ಲಸಿಕೆಗಳ ಸಾಗಾಟ ಮತ್ತು ಸಾರ್ವಜನಿಕರಿಗೆ ಲಸಿಕೆ ಹಾಕುವ ಸಂದರ್ಭದಲ್ಲಿ ಬಹಳಷ್ಟು ಪ್ರಮಾಣದಲ್ಲಿ ಚುಚ್ಚುಮದ್ದು ಪೋಲಾಗುತ್ತಿದೆ. ಇದನ್ನು ತಪ್ಪಿಸಲು ಈ ಕ್ಯಾರಿಯರ್ ಅನುಕೂಲಕರವಾಗಿದೆ.

ಈ ಕ್ಯಾರಿಯರ್ 2 ಲೀಟರ್ ಸಾಮರ್ಥ್ಯ ಹೊಂದಿದ್ದು, ಇದರೊಳಗೆ 400 ಡೋಸ್ ಲಸಿಕೆ ಸಾಗಿಸಬಹುದು. 25 ವೋಲ್ಟ್ ಪವರ್ ಕನ್ಸಂಪ್ಷನ್ ಮಾಡುವ ಈ ಕ್ಯಾರಿಯರ್ ಶೇಕಡಾ 96 ರಷ್ಟು ವೇಗವಾಗಿ ನಾಲ್ಕರಿಂದ 6 ಡಿಗ್ರಿಗೆ ಇಳಿಯುತ್ತದೆ. ಇದೇ ಈ ಯಂತ್ರದ ವಿಶೇಷ ಎಂದು ತಂಡದ ಸದಸ್ಯ ಮಯೂರ ಶೆಟ್ಟಿ ಹೇಳಿದ್ದಾರೆ.

ಕೇಂದ್ರ ಸರ್ಕಾರದ ಅನುದಾನ ಬಳಸಿ ಈ ತಂತ್ರಜ್ಞಾನವನ್ನು ತಯಾರು ಮಾಡಲಾಗಿದೆ. ಸೋಲಾರ್ ಮತ್ತು ಬ್ಯಾಟರಿಯಲ್ಲಿ ಕೆಲಸಮಾಡುವ ಎಂವೋಲಿಯೋ ಮಷೀನ್​ನಲ್ಲಿ ಟೆಂಪ್ರೇಚರ್ ಸೆಟ್ ಮಾಡಬಹುದು. ಅಲ್ಲದೆ ಇದರಿಂದಾಗಿ ಗ್ರಾಮಾಂತರ ಪ್ರದೇಶಗಳಲ್ಲೂ ಜನಕ್ಕೆ ಗುಣಮಟ್ಟದ ಲಸಿಕೆ ನೀಡಬಹುದು. ಸೋಲಾರ್ ಪ್ಯಾನಲ್ ಮತ್ತು ವಿದ್ಯುತ್ ಮೂಲಕ ಬ್ಯಾಟರಿ ಚಾರ್ಜ್ ಆಗುತ್ತದೆ. ಈ ಕ್ಯಾರಿಯರ್ 12ರಿಂದ 15 ಗಂಟೆ ಕೆಲಸ ಮಾಡುತ್ತದೆ. ಈಗಾಗಲೇ 5 ರಾಜ್ಯಗಳಲ್ಲಿ ವ್ಯಾಕ್ಸಿನ್ ಕ್ಯಾರಿಯರ್ ಬಳಕೆ ಮಾಡಲಾಗುತ್ತಿದೆ.

ಈ ಕ್ಯಾರಿಯರಿಗೆ 36 ಸಾವಿರ ರೂಪಾಯಿ ವೆಚ್ಚವಾಗುತ್ತದೆ. ಎನ್​ಜಿಒಗಳು, ಖಾಸಗಿ ಆಸ್ಪತ್ರೆಗಳು ಮತ್ತು ಸರ್ಕಾರ ಮಷೀನ್ ಖರೀದಿ ಮಾಡಿ ಬಳಸಿದರೆ ಲಸಿಕೆ ಪೋಲಾಗುವುದನ್ನು ತಪ್ಪಿಸಬಹುದು. 2015 ರಿಂದ ಬ್ಲ್ಯಾಕ್ ಫ್ರಾಗ್ ವ್ಯಾಕ್ಸಿನ್ ಕ್ಯಾರಿಯರ್ ಪ್ರೊಡಕ್ಷನ್ ಮಾಡುತ್ತಿದೆ. 2020 ರಲ್ಲಿ ಕೊರೊನಾ ಸೋಂಕು ತಗುಲಿದಾಗ ಗಂಟಲ ದ್ರವ ತೆಗೆದು ಲ್ಯಾಬ್​ಗೆ ಸಾಗಿಸಲು ಈ ಯಂತ್ರವನ್ನು ಬಳಸಲಾಗಿತ್ತು ಎಂದು ತಂಡದ ಸದಸ್ಯ ಡಾನ್ಸನ್ ಹೇಳಿದ್ದಾರೆ.

ಮಣಿಪುರ, ಅಸ್ಸಾಂ, ಮೇಘಾಲಯ, ಬಿಹಾರ್ ಮತ್ತು ಜಾರ್ಖಂಡ್ ರಾಜ್ಯಗಳಲ್ಲಿ ಈಗಾಗಲೇ ಎಂವೋಲಿಯೋ ವ್ಯಾಕ್ಸಿನ್ ಕ್ಯಾರಿಯರ್​ಗೆ ಅಲ್ಲಿನ ಸರ್ಕಾರ ಖರೀದಿಸಿ ಬಳಸುತ್ತಿವೆ. ಇನ್ನು ಕರ್ನಾಟಕ ಮತ್ತು ತಮಿಳುನಾಡಲ್ಲಿ ವ್ಯಾಕ್ಸಿನ್ ಕ್ಯಾರಿಯರ್​ ಖರೀದಿ ಬಗ್ಗೆ ಮಾತುಕತೆಯ ಹಂತದಲ್ಲಿದೆ. ಈ ತಂಡದಲ್ಲಿ 23 ಜನ ಯುವಕರಿದ್ದು, ಮುಂದಿನ ತಿಂಗಳಿಂದ 1500 ಯೂನಿಟ್ ಪ್ರೊಡಕ್ಷನ್ ಮಾಡುವ ಯೋಚನೆ ಹೊಂದಿದ್ದಾರೆ.

ಇದನ್ನೂ ಓದಿ:

CM Yediyurappa PC: ಕೊರೊನಾದಿಂದ ತಂದೆ ತಾಯಿ ಕಳೆದುಕೊಂಡು ಅನಾಥರಾದ ಮಕ್ಕಳಿಗೆ ಸಿಎಂ ಬಾಲಸೇವಾ ಯೋಜನೆ ಘೋಷಣೆ

ಸಮಾಧಾನಕರ ಸಂಗತಿ: ಸ್ಪುಟ್ನಿಕ್ ಲೈಟ್ ಲಸಿಕೆ ಪ್ರಯೋಗ 3ನೇ ಹಂತಕ್ಕೆ.. ಅಕ್ಟೋಬರ್ ವೇಳೆಗೆ ಭಾರತಕ್ಕೆ 85 ಕೋಟಿ ಡೋಸ್ ಲಭ್ಯ