ಉಡುಪಿ, ನವೆಂಬರ್ 22: ಮೋಸ್ಟ್ ವಾಂಟೆಡ್ ನಕ್ಸಲ್ ವಿಕ್ರಂ ಗೌಡ ನಕ್ಸಲ್ ನಿಗ್ರಹ ಪಡೆ ಗುಂಡಿಗೆ ಬಲಿಯಾದ ಸಂಸದರ್ಭದಲ್ಲಿ ಆತನ ಜತೆ ಇದ್ದ ಇತರೆ ನಕ್ಸಲರು ಪರಾರಿಯಾಗಿದ್ದರು. ಪರಾರಿಯಾದವರಿಗಾಗಿ ಕರಾವಳಿಯ ಪಶ್ಚಿಮ ಘಟ್ಟದ ದಟ್ಟ ಕಾಡಿನಲ್ಲಿ ಶೋಧ ಕಾರ್ಯ ಮುಂದುವರೆದಿದೆ. ಈ ನಡುವೆ ವಿಕ್ರಂ ಗೌಡ ಎನ್ಕೌಂಟರ್ ನಡೆದ ಜಾಗಕ್ಕೆ ಬೆಂಗಳೂರಿನ ಎಫ್ಎಸ್ಎಲ್ ತಂಡ ಭೇಟಿ ನೀಡಿದೆ.
ವಿಕ್ರಂ ಗೌಡ ಜತೆಗೆ ಬಂದಿದ್ದ ಇತರ ನಕ್ಸಲರು ಪರಾರಿಯಾಗಿರುವುದು ಪೀತಬೈಲ್ ಸೇರಿದಂತೆ ಸುತ್ತಮುತ್ತಲಿನ ಜನರ ಆತಂಕಕ್ಕೆ ಕಾರಣವಾಗಿದೆ. ಹೀಗಾಗಿ ಎಎನ್ಎಫ್ ಕೂಂಬಿಂಗ್ ತೀವ್ರಗೊಳಿಸಿದೆ. ತಪ್ಪಿಸಿಕೊಂಡ ನಕ್ಸಲರ ಜಾಡು ಹಿಡಿದು ಶೋಧ ಕಾರ್ಯ ನಡೆಯುತ್ತಿದೆ. ಹಿರಿಯ ಎಎನ್ಎಫ್ ಅಧಿಕಾರಿಗಳು ಕಬ್ಬಿನಾಲೆ, ಪೀತಬೈಲ್, ನಾಡಪಾಲ್, ಕೂಡ್ಲು ಅರಣ್ಯವ್ಯಾಪ್ತಿಯಲ್ಲೇ ಬೀಡುಬಿಟ್ಟಿದ್ದಾರೆ. ಕಾಡಿಗೆ ಹೋಗದಂತೆ ಸ್ಥಳೀಯ ನಿವಾಸಿಗಳಿಗೆ ಸೂಚಿಸಲಾಗಿದೆ. ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದ ರೀತಿಯಲ್ಲಿದೆ.
ಕಬ್ಬಿನಾಲೆ ಅರಣ್ಯ ವ್ಯಾಪ್ತಿಗೆ ಪ್ರವೇಶಿಸುವ ಮುನ್ನ ನಕ್ಸಲರು ಉಡುಪಿ ಜಿಲ್ಲೆಯ ಈದು ಗ್ರಾಮ ದಕ್ಷಿಣ ಕನ್ನಡ ಜಿಲ್ಲೆಯ ಕುತ್ಲುರು ಮಲೆ ಪ್ರದೇಶ, ಕೊಡುಗು ದಕ್ಷಿಣ ಕನ್ನಡ ಗಡಿ ಪ್ರದೇಶದಲ್ಲಿ ಪ್ರತ್ಯಕ್ಷಗೊಂಡಿದ್ದರು. ಈ ಕಾರಣದಿಂದಾಗಿ ಈ ಭಾಗದ ಕಾಡುಗಳನ್ನೂ ಎಎನ್ಎಫ್ ಅಧಿಕಾರಿಗಳು ನಿಯಂತ್ರಣಕ್ಕೆ ತೆಗೆದುಕೊಂಡಿದ್ದಾರೆ. ನಕ್ಸಲ್ ಚಲನವಲನದ ಮೇಲೆ ಹದ್ದಿನ ಕಣ್ಣಿರಿಸಿದ್ದಾರೆ. ಈ ನಡುವೆ ನಕ್ಸಲರ ಶರಣಾಗತಿಗೂ ಸೂಚನೆ ನೀಡಲಾಗಿದೆ. ಶರಣಾಗದೆ ಹೋದರೆ ಕರಾವಳಿಯ ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ಮತ್ತೆ ಗುಂಡಿನ ಸದ್ದು ಮರುಕಳಿಸುವ ಸಾಧ್ಯತೆ ಇದೆ. ಸರಕಾರ ಕೂಡ ನಕ್ಸಲರ ಶರಣಾಗತಿಗೆ ಸೂಚನೆ ನೀಡಿದೆ.
ಗುರುವಾರ ಕೊಲ್ಲೂರಿಗೆ ಭೇಟಿ ನೀಡಿದ್ದ ಡಿಸಿಎಂ ಡಿಕೆ ಶಿವಕುಮಾರ್ ನಕ್ಸಲ್ ವಿಕ್ರಂ ಗೌಡ ಎನ್ಕೌಂಟರ್ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ರಾಜ್ಯದ ಜನರನ್ನ ರಕ್ಷಣೆ ಮಾಡುವುದು ನಮ್ಮ ಕೆಲಸವಾಗಿದೆ. ಕೇರಳ, ಕರ್ನಾಟಕದಲ್ಲಿ ನಕ್ಸಲ್ ಪ್ಯಾಕೇಜ್ ಘೋಷಣೆ ಮಾಡಿದ್ದೇವೆ. ಎಲ್ಲಾ ಮಾಹಿತಿಗಳನ್ನೂ ಸಾರ್ವಜನಿಕವಾಗಿ ಹಂಚಿಕೊಂಡಾಗಿದೆ. ಪೊಲೀಸರು ಅವರ ಕರ್ತವ್ಯ ಮಾಡಿದ್ದಾರೆ ಎಂದು ಗೃಹ ಇಲಾಖೆಯ ಕಾರ್ಯವನ್ನು ಶ್ಲಾಘಿಸಿದ್ದಾರೆ.
ಇದನ್ನೂ ಓದಿ: ನಕ್ಸಲ್ ವಿಕ್ರಂಗೌಡ ಎನ್ಕೌಂಟರ್ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಡಿಜಿಪಿ ಪ್ರಣಬ್ ಮೊಹಂತಿ
ಒಟ್ಟಿನಲ್ಲಿ, ರಾಜ್ಯದಾದ್ಯಂತ ಸಂಚಲನ ಮೂಡಿಸಿದ್ದ ನಕ್ಸಲ್ ಎನ್ಕೌಂಟರ್ ಮುಗಿದ ಅಧ್ಯಾಯವಲ್ಲ. ಸದ್ಯ ಕಾರ್ಯಚರಣೆ ಇನ್ನಷ್ಟು ತೀವ್ರಗೊಂಡಿದೆ. ಪಶ್ಚಿಮ ಘಟ್ಟದ ತಪ್ಪಲು ಮುಂದೆ ಯಾವ ಬೆಳವಣಿಗೆಗಳಿಗೆ ಸಾಕ್ಷಿಯಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ