ಕರ್ನಾಟಕದಲ್ಲಿನ ಧರ್ಮ ಸಂಘರ್ಷದಿಂದ ಉದ್ದಿಮೆಗಳಿಗೆ ಹಿನ್ನಡೆ ಆಗುತ್ತೆ ಎಂಬುದು ಸುಳ್ಳು: ಬಸವರಾಜ ಬೊಮ್ಮಾಯಿ

| Updated By: ganapathi bhat

Updated on: Apr 11, 2022 | 9:54 PM

ರಾಜ್ಯದಲ್ಲಿ ಧರ್ಮ ಸಂಘರ್ಷದಿಂದ ಉದ್ದಿಮೆಗಳಿಗೆ ಹಿನ್ನಡೆ ವಿಚಾರವಾಗಿ ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದಾರೆ. ರಾಜ್ಯದ ಐಟಿ ಕಂಪನಿಗಳಿಗೆ ನೆರೆಯ ರಾಜ್ಯಗಳಿಂದ ಆಹ್ವಾನ ವಿಚಾರವಾಗಿ ಉಡುಪಿ ಮಣಿಪಾಲದಲ್ಲಿ ಅವರು ಮಾತನಾಡಿದ್ದಾರೆ.

ಕರ್ನಾಟಕದಲ್ಲಿನ ಧರ್ಮ ಸಂಘರ್ಷದಿಂದ ಉದ್ದಿಮೆಗಳಿಗೆ ಹಿನ್ನಡೆ ಆಗುತ್ತೆ ಎಂಬುದು ಸುಳ್ಳು: ಬಸವರಾಜ ಬೊಮ್ಮಾಯಿ
ಸಿಎಂ ಬಸವರಾಜ ಬೊಮ್ಮಾಯಿ (ಸಂಗ್ರಹ ಚಿತ್ರ)
Follow us on

ಉಡುಪಿ: ರಾಜ್ಯದಲ್ಲಿನ ಪ್ರಸಕ್ತ ಬೆಳವಣಿಗೆಯಿಂದ ಯಾವುದೇ ಸಮಸ್ಯೆಯಾಗಲ್ಲ. ಸಂಘರ್ಷದಿಂದ ಕೈಗಾರಿಕೆಗಳಿಗೆ ಸಮಸ್ಯೆಯಾಗುತ್ತೆ ಎಂಬುದು ಸುಳ್ಳು. ಕರ್ನಾಟಕ ರಾಜ್ಯಕ್ಕೆ ಅತಿಹೆಚ್ಚು ಎಫ್​ಡಿಐ ಹರಿದು ಬರುತ್ತಿದೆ. ತ್ರೈಮಾಸಿಕದಲ್ಲಿ ಶೇಕಡಾ 43ರಷ್ಟು ಹೂಡಿಕೆ ನಮ್ಮ ರಾಜ್ಯಕ್ಕೆ ಬಂದಿದೆ. ವಿಶ್ವದ ಮೂಲೆಮೂಲೆಗಳಿಂದ ಹೂಡಿಕೆದಾರರು ರಾಜ್ಯಕ್ಕೆ ಬರ್ತಿದ್ದಾರೆ. ಕೈಗಾರಿಕೆಗಳು ಕರ್ನಾಟಕ ತೊರೆಯುವ ಪ್ರಶ್ನೆಯೇ ಉದ್ಭವಿಸಿಲ್ಲ ಎಂದು ಕರ್ನಾಟಕ ರಾಜ್ಯದಲ್ಲಿ ಧರ್ಮ ಸಂಘರ್ಷದಿಂದ ಉದ್ದಿಮೆಗಳಿಗೆ ಹಿನ್ನಡೆ ವಿಚಾರವಾಗಿ ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದಾರೆ. ರಾಜ್ಯದ ಐಟಿ ಕಂಪನಿಗಳಿಗೆ ನೆರೆಯ ರಾಜ್ಯಗಳಿಂದ ಆಹ್ವಾನ ವಿಚಾರವಾಗಿ ಉಡುಪಿ ಮಣಿಪಾಲದಲ್ಲಿ ಅವರು ಮಾತನಾಡಿದ್ದಾರೆ.

ಕರ್ನಾಟಕ ರಾಜ್ಯದಲ್ಲಿ ಮಾನವ ಸಂಪನ್ಮೂಲ ಯಥೇಚ್ಛವಾಗಿದೆ. ರಾಜ್ಯದಲ್ಲಿ ಮೂಲಸೌಕರ್ಯದ ಗುಣಮಟ್ಟ ಬಹಳ ಚೆನ್ನಾಗಿದೆ. ಕರ್ನಾಟಕದಲ್ಲಿ 180 ಆರ್ & ಡಿ ಸೆಂಟರ್​ ಇದೆ. ಬೇರೆ ರಾಜ್ಯಗಳಲ್ಲಿ ಬೇಡಿಕೆಯಿಲ್ಲ ಹಾಗಾಗಿ ಆಫರ್​ ಕೊಡ್ತಿದ್ದಾರೆ. ಅಂಗಡಿಗಳಲ್ಲಿ ವ್ಯಾಪಾರ ಆಗದಿದ್ದಾಗ ಆಫರ್ ಕೊಡುತ್ತಾರೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ.

ಪ್ರಮೋದ್ ಮುತಾಲಿಕ್ ಗಡಿಪಾರಿಗೆ ಒತ್ತಾಯ ವಿಚಾರವಾಗಿ ಅವರು ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ. ನಾನು ಈ ವಿವಾದದಲ್ಲಿ ಬೀಳಲು ಬಯಸುವುದಿಲ್ಲ. ಯಾರು ಏನು ಹೇಳಿಕೆ ಕೊಡುತ್ತಾರೆಂಬುದು ಮುಖ್ಯವಲ್ಲ. ರಾಜ್ಯದ ಜನರ ಆಸ್ತಿಪಾಸ್ತಿ ಜೀವ ರಕ್ಷಣೆ ನಮ್ಮ ಕರ್ತವ್ಯ. ಯಾರು ಏನೇ ಹೇಳಿಕೆ ಕೊಟ್ಟರೂ ರಾಜಿ ಇಲ್ಲ. ಶಾಂತಿ-ಸುವ್ಯವಸ್ಥೆ ಕಾಪಾಡುವ ವಿಚಾರದಲ್ಲಿ ರಾಜಿ ಇಲ್ಲ. ಯಾರೇ ಇರಲಿ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳುತ್ತೇವೆ. ಹಲವು ರೀತಿಯ ಒತ್ತಾಯಗಳು ಬರಬಹುದು. ಸುಮ್ಮನೇ ವಿವಾದವನ್ನು ಬೆಳೆಸಲು ಈ ರೀತಿ ಮಾಡುತ್ತಾರೆ. ಸಮಸ್ಯೆ ಪರಿಹಾರ ಮಾಡಲು ದಿಟ್ಟ ಕ್ರಮ ತೆಗೆದುಕೊಳ್ಳುತ್ತೇನೆ ಎಂದು ಸಿಎಂ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ.

ಉಡುಪಿಯ ವಾಸುಕಿ ಸುಬ್ರಹ್ಮಣ್ಯ ದೇಗುಲದ ಬ್ರಹ್ಮಕಲಶೋತ್ಸದಲ್ಲಿ ಸಿಎಂ ಭಾಗಿ ಆಗಿದ್ದಾರೆ. ನಾಗದೇವರ ಸನ್ನಿಧಾನ ನಿರ್ಮಾಣ, ಪುನರ್​ಪ್ರತಿಷ್ಠಾನ ಕಾರ್ಯಕ್ರಮ, ನಾಗದೇವರ ದರ್ಶನದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಭಾಗಿ ಆಗಿದ್ದಾರೆ. ನಾಗ ಪಾತ್ರಿಯಿಂದ ಪ್ರಸಾದ ಸ್ವೀಕರಿಸಿದ್ದಾರೆ. ಇಡೀ ನಾಡಿನ ಸುಭಿಕ್ಷೆಗೆ ದೇವರಲ್ಲಿ ಪ್ರಾರ್ಥನೆ ಮಾಡಿದ್ದೇನೆ. ಈ ನಾಡಿನ ಸೇವೆಮಾಡಲು ಭಗವಂತ ನನಗೆ ಆಶೀರ್ವಾದ ಮಾಡಿದ್ದಾನೆ. ರಾಷ್ಟ್ರದಲ್ಲೇ ಕರ್ನಾಟಕ ಸುಭೀಕ್ಷೆಯ ನಾಡಾಗಬೇಕೆಂದು ಪ್ರಾರ್ಥನೆ ಮಾಡಿದ್ದೇನೆ. ರಾಜ್ಯದಲ್ಲಿ ಮುಂದಿನ ವಿಧಾನಸಭೆ ಚುನಾವಣೆ ತಯಾರಿ ಪ್ರಾರಂಭಿಸಿದ್ದೇವೆ. ನಾಳೆಯಿಂದ ಎಲ್ಲಾ ತಂಡಗಳು ರಾಜ್ಯ ಪ್ರವಾಸ ಮಾಡಲಿವೆ. ಮೂರು ತಂಡಗಳು ಮೂರು ವಿಭಾಗಗಳನ್ನು ಹಂಚಿಕೊಂಡಿವೆ. ಕಾರ್ಯಕಾರಿ ಸಮಿತಿಗೂ ಮುನ್ನ ಒಂಬತ್ತು ಸಭೆ ಮಾಡುತ್ತೇವೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದ್ದಾರೆ.

ಇದನ್ನೂ ಓದಿ: ಉಡುಪಿ: ಡಾ. ವಿ‌ಎಸ್‌ ಆಚಾರ್ಯ ಹೆಸರಿನ ನೂತನ ಬಸ್ ನಿಲ್ದಾಣ ಉದ್ಘಾಟಿಸಿದ ಬಸವರಾಜ ಬೊಮ್ಮಾಯಿ

ಇದನ್ನೂ ಓದಿ: ನೇಕಾರರು, ಮೀನುಗಾರರ ಮಕ್ಕಳಿಗೂ ವಿದ್ಯಾನಿಧಿ ಯೋಜನೆ: ಉಡುಪಿಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಘೋಷಣೆ

Published On - 9:53 pm, Mon, 11 April 22