ಉಡುಪಿ: ನೇಕಾರರು, ಮೀನುಗಾರರ ಮಕ್ಕಳಿಗೂ ವಿದ್ಯಾನಿಧಿ ಯೋಜನೆ ಎಂದು ಇಲ್ಲಿನ ಉಚ್ಚಿನ ಮಹಾಲಕ್ಷ್ಮೀ ದೇಗುಲದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಇಂದು (ಏಪ್ರಿಲ್ 11) ಘೋಷಣೆ ಮಾಡಿದ್ದಾರೆ. ಉಡುಪಿ ಜಿಲ್ಲೆ ಕಾಪು ತಾಲೂಕಿನ ಉಚ್ಚಿಲ ಮಹಾಲಕ್ಷ್ಮೀ ದೇಗುಲದಲ್ಲಿ ಮಾತನಾಡಿದ ಅವರು ಸರ್ಕಾರಕ್ಕೆ ಸಮಸ್ಯೆಗಳಿಗೆ ಪರಿಹಾರ ಕೊಡುವ ಸಂಕಲ್ಪ ಬೇಕು. 3 ಜಿಲ್ಲೆಗಳಿಗೆ 5 ಸಾವಿರ ಮನೆ ನೀಡುತ್ತೇವೆ. ಎಲ್ಲಾ ಬಂದರುಗಳಲ್ಲಿ ಹೂಳೆತ್ತುವ ಕೆಲಸ ಮಾಡುತ್ತೇವೆ. ಉಚ್ಚಿಲ ಮಹಾಲಕ್ಷ್ಮೀ ದೇಗುಲ ಅಭಿವೃದ್ಧಿಗೆ 5 ಕೋಟಿ ಅನುದಾನ ನೀಡುತ್ತೇವೆ ಎಂದು ಮುಜರಾಯಿ ಇಲಾಖೆಯಿಂದ 5 ಕೋಟಿ ಅನುದಾನ ಘೋಷಣೆ ಮಾಡಿದ್ದಾರೆ.
ಮೊಗವೀರ ಮಕ್ಕಳಿಗೆ ಹಿಂದುಳಿದ ವರ್ಗಗಳ ಹಾಸ್ಟೆಲ್ ನೀಡಲಾಗುತ್ತದೆ. ಮೀನುಗಾರರಿಗೆ 10 ತಿಂಗಳಿಗೆ ಎರಡು ಲಕ್ಷ ಲೀ. ಸಬ್ಸಿಡಿ ಡೀಸೆಲ್ ಕೊಡಲಾಗುತ್ತದೆ. ಮಹಿಳೆಯರಿಗೆ ಶೂನ್ಯ ಬಡ್ಡಿದರದಲ್ಲಿ ಸಾಲ, ಬ್ಯಾಂಕ್ಗಳ ಜೊತೆ ಮಾತುಕತೆ ಮಾಡಿ ಈ ಯೋಜನೆ ರೂಪಿಸುತ್ತೇನೆ. ದುಡ್ಡೇ ದೊಡ್ಡಪ್ಪ ಅಲ್ಲ ದುಡಿಮೆಯೇ ದೊಡ್ಡಪ್ಪ. ಮೀನುಗಾರರಿಗೆ ನನ್ನ ಮನೆ ಮನಸ್ಸಿನ ಬಾಗಿಲು ಸದಾ ತರೆದಿರುತ್ತದೆ. ನಾನು ಮೊಗವೀರ ಸಮುದಾಯದ ಜೊತೆ ಇದ್ದೇನೆ ಎಂದು ಉಡುಪಿಯ ಉಚ್ಚಿಲದಲ್ಲಿ ಸಿಎಂ ಬೊಮ್ಮಾಯಿ ತಿಳಿಸಿದ್ದಾರೆ. ಉಚ್ಚಿಲ ಮಹಾಲಕ್ಷ್ಮಿ ದೇವಾಲಯಕ್ಕೆ ಸಿಎಂ ಭೇಟಿ ನೀಡಿ ಸಿಎಂ ಬಸವರಾಜ್ ಬೊಮ್ಮಾಯಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ನೂತನ ದೇವಾಲಯ ವೀಕ್ಷಣೆ ಮಾಡಿದ ಸಿಎಂಗೆ ಸಾರಿಗೆ ಸಚಿವ ಶ್ರೀರಾಮಲು ಸಾಥ್ ಕೊಟ್ಟಿದ್ದಾರೆ.
ಸಿಎಂ ಬೊಮ್ಮಾಯಿ ನಾಲಗೆ ಕಳೆದುಕೊಂಡಿದ್ದಾರೆಂಬ ಸಿದ್ದರಾಮಯ್ಯ ಹೇಳಿಕೆಗೆ ಸಿಎಂ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದಾರೆ. ಸಿದ್ದರಾಮಯ್ಯ ಕಾಲದಲ್ಲಿ ಹತ್ತು ಹಲವು ಕೊಲೆಗಳು ಆಯಿತು. ಕೊಲೆ ಮಾಡಿದವರ ಕೇಸನ್ನೇ ವಿತ್ ಡ್ರಾ ಮಾಡಿಕೊಂಡಿದ್ದಾರೆ. ಆಗ ಸಿದ್ದರಾಮಯ್ಯ ಬುದ್ಧಿ ಕಳೆದುಕೊಂಡಿದ್ದರಾ ಎಂದು ಪ್ರಶ್ನೆ ಮಾಡಿದ್ದಾರೆ. ಪ್ರಸಕ್ತ ವಿದ್ಯಮಾನಗಳ ಬಗ್ಗೆ ಯಾರು ಏನೇ ವಿಶ್ಲೇಷಣೆ ಮಾಡಲಿ. ಸಂವಿಧಾನಬದ್ಧವಾಗಿ ಕಾನೂನು ಸುವ್ಯವಸ್ಥೆಗೆ ಆದ್ಯತೆ ನೀಡ್ತೇವೆ. ಕಾನೂನಿನ ಮುಂದೆ ಎಲ್ಲರೂ ಸಮಾನರು ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ.
ಈ ದೃಷ್ಟಿಕೋನ ಇಟ್ಟುಕೊಂಡು ನಾವು ಕೆಲಸ ಮಾಡುತ್ತಿದ್ದೇವೆ. ಅವರವರ ವಿಚಾರ ಪ್ರಚಾರಮಾಡಲು ಏನೂ ತೊಂದರೆ ಇಲ್ಲ. ಹಿಂಸೆಗಿಳಿದರೆ ಸರ್ಕಾರ ಸಹಿಸಲ್ಲ, ಈಗಾಗಲೇ ಸ್ಪಷ್ಟ ಸಂದೇಶ ನೀಡಲಾಗಿದೆ. ಹಿಜಾಬ್ ವಿಚಾರವಾಗಿ ಕೋರ್ಟ್ ನೀಡಿದ ಆದೇಶ ಪಾಲನೆ ಮಾಡಬೇಕು ಎಂದು ಹೇಳಿದ್ದಾರೆ. ಮಂಗಳೂರಲ್ಲಿ ಲವ್ ಜಿಹಾದ್ಗೆ ಹಿಂದೂ ಟಾಸ್ಕ್ ಫೋರ್ಸ್ ಬಗ್ಗೆ ಮಾತನಾಡಿದ ಅವರು ಅವರವರ ರಕ್ಷಣೆ ಹೇಗೆ ಬೇಕೋ ಹಾಗೆ ಮಾಡಿಕೊಳ್ಳುತ್ತಾರೆ. ಕೆಲವೊಂದು ಕಾನೂನುಗಳನ್ನು ಹಿಂದಿನ ಸರ್ಕಾರ ಮಾಡಿದೆ. ನಾವೇನು ಹೊಸದಾಗಿ ಯಾವುದೇ ಕಾನೂನು ಮಾಡಿಲ್ಲ. ಹಿಂದಿನ ಸರ್ಕಾರ ಮಾಡಿದ ಕಾನೂನು ಪ್ರಕಾರ ನಡೆಯುತ್ತಿದೆ ಎಂದು ಉಡುಪಿಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ.
ಉಡುಪಿಯಲ್ಲಿ ಬಸವರಾಜ ಬೊಮ್ಮಾಯಿ, ಡಾ. ಬನ್ನಂಜೆ ಗೋವಿಂದಾಚಾರ್ಯ ಸ್ಮಾರಕ ಗ್ರಂಥಾಲಯ ಲೋಕಾರ್ಪಣೆ ಮಾಡಿದ್ದಾರೆ.ತತ್ವಶಾಸ್ತ್ರ ವಿಭಾಗದ ಡಿಜಿಟಲ್ ಗ್ರಂಥಾಲಯ ಉದ್ಘಾಟನೆ ಮಾಡಲಾಗಿದೆ. ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರ, ಹವಾನಿಯಂತ್ರಿತ ಲೈಬ್ರರಿ ಇದ್ದು, ಅಜ್ಜರಕಾಡು ಪ್ರದೇಶದಲ್ಲಿ ಗೋವಿಂದಾಚಾರ್ಯ ಪುತ್ಥಳಿ ಕೂಡ ಅನಾವರಣ ಮಾಡಲಾಗಿದೆ. ಪೇಜಾವರ ಶ್ರೀ ವಿಶ್ವಪ್ರಸನ್ನ ಸ್ವಾಮೀಜಿ, ಕಾಣಿಯೂರು ವಿದ್ಯಾವಲ್ಲಭತೀರ್ಥ ಶ್ರೀ ಪಾದರು ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದಾರೆ. ಸಚಿವ ಎಸ್.ಅಂಗಾರ, ಕೋಟ ಶ್ರೀನಿವಾಸ ಪೂಜಾರಿ, ಸುನೀಲ್ ಕುಮಾರ್, ಶಾಸಕ ರಘುಪತಿ ಭಟ್ ಉಪಸ್ಥಿತರಿದ್ದರು.
ಇದನ್ನೂ ಓದಿ: ಹರಿಹರ ಪೀಠದ ಸ್ವಾಮೀಜಿ ಬೆನ್ನು ಹತ್ತಿದರೆ ಸಿಎಂ ಬೊಮ್ಮಾಯಿ ಕೂಡ ಸೋಲು ಕಾಣಬೇಕಾಗುತ್ತದೆ: ಯತ್ನಾಳ್ ಹೇಳಿಕೆ
ಇದನ್ನೂ ಓದಿ: ಬಸವರಾಜ ಬೊಮ್ಮಾಯಿ ಸಂಘ ಪರಿವಾರದ ಪುಂಡರ ಕೈಯಲ್ಲಿ ಆಟಿಕೆ ಗೊಂಬೆ: ಸಿದ್ದರಾಮಯ್ಯ ಸರಣಿ ಟ್ವೀಟ್
Published On - 4:28 pm, Mon, 11 April 22