ಬೈಂದೂರಿನ ಈ ಹಳ್ಳಿಯಲ್ಲಿವೆ ಅಪಾಯಕಾರಿ ಕಾಲು ಸಂಕಗಳು; ಮಳೆಗಾಲ ಶುರುವಾಗುತ್ತಿದ್ದಂತೆ ಸ್ಥಳೀಯರಲ್ಲಿ ಭೀತಿ

| Updated By: ಗಣಪತಿ ಶರ್ಮ

Updated on: Jul 01, 2024 | 2:12 PM

ಬೈಂದೂರಿನ ಹಾರ್ಮಣ್ ಪ್ರದೇಶದ ಜನರಿಗೆ ಮಳೆಗಾಲ ಬಂತೆಂದರೆ ಸಾಕು, ಎದೆ ಢವ ಢವ ಹೊಡೆಯಲಾರಂಭವಾಗುತ್ತದೆ. ಕಾರಣ ಈ ಊರಿನಲ್ಲಿರುವ ಡೇಂಜರ್ ಕಿರು ಸೇತುವೆಗಳು ಅಥವಾ ಸ್ಥಳೀಯರೇ ನಿರ್ಮಿಸಿಕೊಂಡ ಕಾಲು ಸಂಕಗಳು. ರಣ ಭೀಕರ ಮಳೆ, ಪ್ರವಾಹ ಬಂದಾಗ ಪ್ರಾಣ ಪಣಕ್ಕಿಟ್ಟು ಈ ಕಾಲು ಸಂಕಗಳಲ್ಲಿ ದಾಟಬೇಕಾಗುತ್ತದೆ. ಹೀಗಾಗಿ ಆಡಳಿತ ಸೂಕ್ತ ವ್ಯವಸ್ಥೆ ಕಲ್ಪಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಬೈಂದೂರಿನ ಈ ಹಳ್ಳಿಯಲ್ಲಿವೆ ಅಪಾಯಕಾರಿ ಕಾಲು ಸಂಕಗಳು; ಮಳೆಗಾಲ ಶುರುವಾಗುತ್ತಿದ್ದಂತೆ ಸ್ಥಳೀಯರಲ್ಲಿ ಭೀತಿ
ಬೈಂದೂರಿನ ಈ ಹಳ್ಳಿಯಲ್ಲಿವೆ ಅಪಾಯಕಾರಿ ಕಾಲು ಸಂಕಗಳು; ಮಳೆಗಾಲ ಶುರುವಾಗುತ್ತಿದ್ದಂತೆ ಸ್ಥಳೀಯರಲ್ಲಿ ಭೀತಿ
Follow us on

ಉಡುಪಿ, ಜುಲೈ 1: ಉಡುಪಿ ಜಿಲ್ಲೆಯ ಬೈಂದೂರು ತಾಲೂಕು ಜಿಲ್ಲೆಯಲ್ಲೇ ಅತ್ಯಂತ ಹಿಂದುಳಿದ ತಾಲೂಕುಗಳಲ್ಲಿ ಒಂದು ಎಂದು ಗುರುತಿಸಿಕೊಂಡಿದೆ. ಬೈಂದೂರು ತಾಲೂಕಿನಲ್ಲಿ ಮೂಲಭೂತ ಸೌಕರ್ಯ ಸಮಸ್ಯೆಗಳೇ ಹೆಚ್ಚಾಗಿರುವ ಕಾರಣ ತಾಲೂಕಿಗೆ ಈ ಅಪಖ್ಯಾತಿ ಬಂದಿದೆ. ತಾಲೂಕಿನ ಯಡೂರು ಕುಂಜ್ಞಾಡಿ ಸಮೀಪದ ಹಾರ್ಮಣ್ ಬಳಿ ಮಳೆಗಾಲ ಬಂತೆಂದರೆ ಸಾಕು, ನಿವಾಸಿಗಳು ಸಂಕಷ್ಟಕ್ಕೆ ಒಳಗಾಗುತ್ತಾರೆ. ಇಲ್ಲಿ ಕಾಲು ಸಂಕವೇ ದೈನಂದಿನ ಚಟುವಟಿಕೆಗಳಿಗೆ ಬಹು ಮುಖ್ಯ ಸಂಪರ್ಕ ಸೇತುವೆ. ಬೇಸಿಗೆಯಲ್ಲಿ ಯಾವುದೇ ಸಮಸ್ಯೆ ಇಲ್ಲದೆ ದಿನ ಕಳೆಯುವ ಈ ಭಾಗದ ಜನರು ಮಳೆಗಾಲ ಬಂತಂದರೆ ಭಯದಲ್ಲಿ ದಿನದೂಡುತ್ತಾರೆ. ಪ್ರತಿ ಮಳೆಗಾಲದಲ್ಲೂ ಕೂಡ ಒಂದಲ್ಲ ಒಂದು ಅವಘಡಗಳು ಈ ಕಿರು ಸೇತುವೆಗಳಿಂದ ಆಗುತ್ತಿದೆ. ಆದರೆ ಇದುವರೆಗೆ ಯಾವುದೇ ಸರಕಾರವು ಕೂಡ ಈ ನಿಟ್ಟಿನಲ್ಲಿ ಕ್ರಮ ಕೈಗೊಂಡಿಲ್ಲ.

ಪ್ರತಿ ವರ್ಷ ಕೂಡ ಮಳೆಗಾಲಕ್ಕೂ ಮುನ್ನ ಊರಿನ ಹಿರಿಯರು ಎಲ್ಲ ಸೇರಿ ಅಡಿಕೆ ತೆಂಗು ಮತ್ತು ಸ್ಥಳೀಯವಾಗಿ ಲಭ್ಯವಿರುವ ಮರಗಳನ್ನು ಬಳಸಿ ಪುಟ್ಟ ತೊರೆಗಳಿಗೆ ಕಿರು ಸೇತುವೆಯನ್ನು ನಿರ್ಮಿಸುತ್ತಾರೆ. ಈ ಸೇತುವೆಗಳೇ ಇಲ್ಲಿನ ಜನರ ಸಂಪರ್ಕ ಸಾಧನ. ಮಳೆಗಾಲದಲ್ಲಿ ಜೀವವನ್ನು ಕೈಯಲ್ಲಿ ಹಿಡಿದು ಈ ಮರದ ಸೇತುವೆ ಮೇಲೆ ಸಾಗುತ್ತಾ ದಿನನಿತ್ಯದ ಕೆಲಸ ಕಾರ್ಯಗಳನ್ನು ಮಾಡುತ್ತಾರೆ. ಮಳೆ ಹೆಚ್ಚಾದಲ್ಲಿ ಈ ತೊರೆಗಳು ಉಕ್ಕಿ ಹರಿಯುವ ಹಿನ್ನೆಲೆಯಲ್ಲಿ ಈ ಭಾಗದ ಜನರ ಸಂಪರ್ಕ ಕೊಂಡಿ ಕಡಿತವಾಗುತ್ತದೆ. ಇಂತಹ ಅಪಾಯಕಾರಿಯಾಗಿರುವ ಸಂದರ್ಭದಲ್ಲಿ ಪ್ರಾಣ ಪಣಕ್ಕೆ ಇಟ್ಟು ದಾಟಬೇಕಿದೆ. ಈ ಸಾಹದಸ ವೇಳೆ ಅದೆಷ್ಟೋ ಮಂದಿ ಜೀವ ಕಳೆದುಕೊಂಡ ಉದಾಹರಣೆ ಕೂಡ ಇದೆ.

15 ಮನೆಗಳಿಗೆ ಇಲ್ಲ ರಸ್ತೆ ಸಂಪರ್ಕ

ಹಾರ್ಮಣ್ ಭಾಗದ ಈ ಪುಟ್ಟ ಕಿರು ಸೇತುವೆ ಸ್ಥಳೀಯರು ಬರುವರು ಸ್ವತಃ ತಾವೇ ಸಂಪರ್ಕಗಾಗಿ ನಿರ್ಮಿಸಿಕೊಂಡ ಸೇತುವೆ. ಇಲ್ಲಿನ ಸುತ್ತಮುತ್ತಲಿನ ಸುಮಾರು ಹತ್ತರಿಂದ ಹದಿನೈದು ಮನೆಗಳಿಗೆ ಯಾವುದೇ ರಸ್ತೆ ಸಂಪರ್ಕ ಇಲ್ಲದ ಹಿನ್ನೆಲೆಯಲ್ಲಿ ಈ ಕಿರು ಸೇತುವೆ ಸಂಪರ್ಕಕ್ಕೆ ಕೊಂಡಿ. ಪ್ರತಿನಿತ್ಯ ಶಾಲೆಗೆ ತೆರಳುವ ಪುಟ್ಟ ಪುಟ್ಟ ಮಕ್ಕಳು ಕಾಲೇಜಿಗೆ ತೆರಳುವ ವಿದ್ಯಾರ್ಥಿ ವಿದ್ಯಾರ್ಥಿನಿಯರು ಇದೇ ಕಾಲು ಸಂಕದ ಮೂಲಕ ನಗರದಲ್ಲಿರುವ ವಿದ್ಯಾ ಕೇಂದ್ರಗಳಿಗೆ ತೆರಳಬೇಕಾದ ಅನಿವಾರ್ಯತೆ ಇದೆ. ಇನ್ನು ಈ ಭಾಗದಲ್ಲಿ ಯಾವುದಾದರೂ ಅವಘಡ ಅಥವಾ ಆರೋಗ್ಯ ಸಮಸ್ಯೆ ಕಾಡಿನಲ್ಲಿ ಅಪಾಯವನ್ನ ಹೆಗಲ ಮೇಲೆ ಹಾಕಿಕೊಂಡು ಈ ಕಿರು ಸೇತುವೆ ಮೂಲಕ ದಾಟಿ ತೆರಳಿ ಚಿಕಿತ್ಸೆ ಪಡೆಯಬೇಕಾದ ದುಸ್ಥಿತಿ ಈ ಭಾಗದಲ್ಲಿದೆ.

400ಕ್ಕೂ ಹೆಚ್ಚು ಕಾಲು ಸಂಕ

ಬೈಂದೂರು ಭಾಗದಲ್ಲಿ ಇಂತಹ 400ಕ್ಕೂ ಅಧಿಕ ಕಿರು ಸೇತುವೆಗಳಿದ್ದು ಇದುವರೆಗೆ ಕೆಲವೇ ಕೆಲವು ಕಿರುಸೇತುವೆಗಳನ್ನು ಮಾತ್ರ ಅಭಿವೃದ್ಧಿ ಮಾಡಲಾಗಿದೆ. ಈ ಹಿಂದೆ ನರೇಗಾ ಯೋಜನೆ ಅಡಿ ಕಿರು ಸೇತುವೆಗಳ ನಿರ್ಮಾಣಕ್ಕೆ ಅನುದಾನ ಸಿಗುತ್ತಿತ್ತು. ಆದರೆ ಸದ್ಯ ರಾಜ್ಯ ಸರ್ಕಾರ ಅದನ್ನು ಕೂಡ ಬಂದ್ ಮಾಡಿರುವ ಹಿನ್ನೆಲೆಯಲ್ಲಿ ಈ ಭಾಗದ ಯಾವುದೇ ಕಿರುತೆಗಳು ಅಭಿವೃದ್ಧಿಯಾಗುತ್ತಿಲ್ಲ ಎಂದು ಸ್ಥಳೀಯರಾದ ಸುರೇಶ್ ‘ಟಿವಿ9’ ಸಂಕಟ ತೋಡಿಕೊಂಡಿದ್ದಾರೆ.

ಇದನ್ನೂ ಓದಿ: ಕೆರೆಗೆ ಹಾರಿ ಆತ್ಮಹತ್ಯೆಗೆ ಯತ್ನ; ಇಬ್ಬರು ಮಕ್ಕಳು ಸಾವು, ತಾಯಿ ರಕ್ಷಣೆ

ಒಟ್ಟಾರೆಯಾಗಿ ವಸ್ತು ಸ್ಥಿತಿ ಅರಿಯದ ಆಡಳಿತ ಯಾವುದೋ ಆಲೋಚನೆಯಲ್ಲಿ ಇನ್ಯಾವುದೋ ಯೋಜನೆಗಳಿಗೆ ಬ್ರೇಕ್ ಹಾಕಿರುವುದರಿಂದ ಇನ್ನಷ್ಟು ಸಮಸ್ಯೆಗಳು ಸೃಷ್ಟಿಯಾಗುತ್ತಿದೆ. ಇನ್ನಾದರೂ ಸರಕಾರ ಕಣ್ಣು ತೆರೆದು ಇಲ್ಲಿನ ಜನರ ಸಮಸ್ಯೆಗೆ ಸ್ಪಂದಿಸಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ