ಪಾರ್ಕ್ ಗುತ್ತಿಗೆ ಪಡೆದವನಿಂದಲೇ ಮರಗಳ ಮಾರಣಹೋಮ; ನಿರ್ವಹಣೆ ಹೆಸರಲ್ಲಿ ಪಾರ್ಕ್‌ನಲ್ಲಿದ್ದ ಮರಗಳಿಗೆ ಕೊಡಲಿಯೇಟು

| Updated By: ಕಿರಣ್ ಹನುಮಂತ್​ ಮಾದಾರ್

Updated on: Jul 02, 2024 | 11:15 PM

ನಗರೀಕರಣದ ಹಿನ್ನೆಲೆಯಲ್ಲಿ ನಿರಂತರವಾಗಿ ರಾಜ್ಯದ ಪ್ರತಿ ಜಿಲ್ಲೆಯಲ್ಲೂ ಕೂಡ ಪರಿಸರ ನಾಶವಾಗುತ್ತಿದೆ. ಅದರಲ್ಲೂ ಉಡುಪಿ ಜಿಲ್ಲೆಯಲ್ಲಿ ಚತುಷ್ಟ ಕಾಮಗಾರಿ ಹಿನ್ನೆಲೆಯಲ್ಲಿ ಲಕ್ಷಾಂತರ ಮರಗಳ ಮಾರಣಹೋಮ ನಡೆದಿದೆ. ಇದರಿಂದ ಜಿಲ್ಲೆಯ ವಾತಾವರಣದ ಉಷ್ಣತೆ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿದೆ. ಇಂತಹ ಸಂದರ್ಭದಲ್ಲಿ ಸುಂದರವಾಗಿ ಬೆಳೆದು ನಿಂತ ಮರಗಳು ಕೊಡಲಿ ಏಟು ಹಾಕುವ ಮೂಲಕ ನಗರದ ಮಧ್ಯದಲ್ಲಿ ಪರಿಸರ ನಾಶಕ್ಕೆ ಮುಂದಾಗಿದ್ದಾರೆ ಗುತ್ತಿಗೆದಾರರು.

ಪಾರ್ಕ್ ಗುತ್ತಿಗೆ ಪಡೆದವನಿಂದಲೇ ಮರಗಳ ಮಾರಣಹೋಮ; ನಿರ್ವಹಣೆ ಹೆಸರಲ್ಲಿ ಪಾರ್ಕ್‌ನಲ್ಲಿದ್ದ ಮರಗಳಿಗೆ ಕೊಡಲಿಯೇಟು
ಉಡುಪಿ ಭುಜಂಗ ಪಾರ್ಕ್​
Follow us on

ಉಡುಪಿ, ಜೂ.02: ನಗರಸಭೆ ವ್ಯಾಪ್ತಿಯ ಅಜ್ಜರಕಾಡು ಭುಜಂಗ ಪಾರ್ಕ್ ಜಿಲ್ಲೆಯ ಪ್ರಮುಖ ಆಕರ್ಷಣೆಗಳಲ್ಲಿ ಒಂದು. ಉಡುಪಿ(Udupi) ನಗರದ ಹೃದಯ ಭಾಗದಲ್ಲಿರುವ ಭುಜಂಗ ಪಾರ್ಕ್(Bhujanga Park ) ಚಿಕ್ಕ ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೂ ಕಾಲ ಕಳೆಯಬಹುದಾದ ಪಾರ್ಕ್​ಗಳಲ್ಲಿ ಒಂದಾಗಿದೆ. 2019ರಲ್ಲಿ ಇದೆ ಭುಜಂಗಪಾರ್ಕ್​ಗೆ 2 ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನ ಮಾಡುವ ಮೂಲಕ ಪಾರ್ಕ್ ನ ಅಂದ-ಚಂದ ಇನ್ನಷ್ಟು ಹೆಚ್ಚಾಗಿತ್ತು. ಬರೀ ಹಸಿರು ಮರಗಳೇ ತುಂಬಿರುವ ಈ ಸುಂದರ ಪಾರ್ಕ್​ನಲ್ಲಿ ಮುಂಜಾನೆ ಮತ್ತು ಸಂಜೆಯ ವೇಳೆಯಲ್ಲಿ ವಾಕಿಂಗ್ ಮಾಡುವುದೆ ಮಜಾ. ಇನ್ನು ಉರಿ ಬಿಸಿಲಿನಲ್ಲೂ ಕೂಡ ಸದಾ ಕಾಲ ನೆರಳು ನೀಡುವ ನೂರಾರು ಮರಗಳು ಹಲವಾರು ವರ್ಷಗಳಿಂದ ಈ ಪಾರ್ಕಿನಲ್ಲಿವೆ. ಸದ್ಯ ಇಂತಹ ಸುಂದರ ಪಾರ್ಕ್‌ನ ಮರಗಳಿಗೆ ಕೊಡಲಿ ಹಾಕುವ ಕೆಲಸ ಗುತ್ತಿಗೆದಾರರು ಮಾಡಿದ್ದಾರೆ. ಇದಕ್ಕೆ ನಗರವಾಸಿಗಳ ವಿರೋಧ ಇದ್ದರೂ ಕೂಡ ಯಾವುದನ್ನು ಲೆಕ್ಕಕ್ಕೆ ತೆಗೆದುಕೊಳ್ಳದೆ ಹಲವು ಮರಗಳಿಗೆ ಕೊಡಲಿ ಹಾಕಲಾಗಿದೆ.

ಇನ್ನು ಮುಂಜಾನೆ ಪಾರ್ಕ್​ನಲ್ಲಿ ವಾಕಿಂಗ್ ಮಾಡಿ ತೆರಳಿದ್ದ ಸ್ಥಳೀಯರಿಗೆ ಪಾರ್ಕ್ ಆವರಣದಲ್ಲಿ ಮರ ಕಡಿಯುವ ಸದ್ದು ಕೇಳಿದೆ. ಏನಾಗುತ್ತಿದೆ ಎಂದು ಗಮನಿಸಲು ಒಳಗೆ ಬಂದ ಸ್ಥಳೀಯರಿಗೆ ಮೂರು ನಾಲ್ಕು ಮರಗಳು ಅದಾಗಲೇ ನೆಲಕ್ಕೆ ಉರುಳಿರುವುದು ಕಂಡು ದಿಗ್ಬ್ರಮೆಯಾಗಿದೆ. ಇನ್ನು ತಕ್ಷಣಕ್ಕೆ ಪ್ರತಿಭಟನೆಗೆ ಇಳಿದ ಸ್ಥಳೀಯರು ಯಾವುದೇ ಮರವನ್ನ ಕಡೆಯದಂತೆ ತಾಕೀತು ಮಾಡಿ ನಗರಸಭೆಗೆ ಸುದ್ದಿ ಮುಟ್ಟಿಸಿದ್ದಾರೆ. ಸ್ಥಳಕ್ಕೆ ಬಂದ ಉಡುಪಿ ನಗರಸಭೆಯ ಪೌರಾಯುಕ್ತ ರಾಯಪ್ಪ ನಡೆದ ಘಟನೆಯನ್ನು ಕೇಳಿ, ಮರ ಕಡಿದ ಗುತ್ತಿಗೆದಾರರನ್ನ ತರಾಟೆಗೆ ತೆಗೆದುಕೊಂಡಿದ್ದಾರೆ. ನಗರ ಸಭೆಗೂ ಕೂಡ ತಿಳಿಸದೆ ಮರ ಕಟಾವು ಮಾಡಿರುವುದಕ್ಕೆ ದಂಡ ಕಟ್ಟುವಂತೆ ಆದೇಶ ಹೊರಡಿಸಿರುವುದಲ್ಲದೆ ಹೆಚ್ಚುವರಿ ಸಸಿ ನೆಡುವಂತೆ ತಾಕೀತು ಮಾಡಿದ್ದಾರೆ.

ಇದನ್ನೂ ಓದಿ:ಕೊಡಗಿನಲ್ಲಿ ಆರ್ದ್ರಾ ಮಳೆ ಆರ್ಭಟಕ್ಕೆ ಕಂಗಾಲಾದ ಜನ; ನೆಲಕ್ಕುರುಳಿದ ವಿದ್ಯುತ್​ ಕಂಬ, ಬೃಹತ್​ ಮರಗಳು

ಒಟ್ಟಾರೆಯಾಗಿ ಹಸಿರೇ ಉಸಿರು ಎನ್ನುವ ಈ ಕಾಲದಲ್ಲಿ ಯಾರು ನೆಟ್ಟು ಬೆಳೆಸಿದ ಮರಕ್ಕೆ ಕೊಡಲಿ ಹಾಕುವವರು ಇನ್ನೂ ಇದ್ದಾರೆ ಎಂದರೆ ನೀವು ಆಶ್ಚರ್ಯ ಪಡಬೇಕಾಗಿಲ್ಲ. ಇನ್ನಾದರೂ ಮರ ಕಡಿಯುವ ಮುನ್ನ, ಪ್ರಕೃತಿಗೆ ಆಗುತ್ತಿರುವ ನಷ್ಟವನ್ನು ಚಿಂತಿಸಬೇಕಾದ ಅಗತ್ಯತೆ ಇದೆ ಎನ್ನುವುದನ್ನು ಅರಿಯಬೇಕಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ