ಭಾರಿ ಮಳೆ: ದಕ್ಷಿಣ ಕನ್ನಡ ಜಿಲ್ಲೆಯ ಈ ಪ್ರವಾಸಿ ತಾಣಗಳಿಗೆ ನೋ ಎಂಟ್ರಿ

| Updated By: Ganapathi Sharma

Updated on: Jul 04, 2024 | 9:55 AM

ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಾದ್ಯಂತ ಮುಂಗಾರು ಮಳೆಯ ಅಬ್ಬರ ಮುಂದುವರಿದಿದೆ. ದಕ್ಷಿಣ ಕನ್ನಡ ಜಿಲ್ಲೆಯ ಅರಣ್ಯ ಇಲಾಖೆ ವ್ಯಾಪ್ತಿಯ ಹಲವು ಪ್ರವಾಸಿ ತಾಣಗಳಿಗೆ ನಿರ್ಬಂಧ ವಿಧಿಸಲಾಗಿದ್ದು, ಕೆಲವೆಡೆ ಶಾಲೆಗಳಿಗೆ ರಜೆ ನೀಡಲಾಗಿದೆ. ಅತ್ತ ಉಡುಪಿ ಜಿಲ್ಲೆಯಲ್ಲಿಯೂ ಮಳೆ ಅವಾಂತರ ಸೃಷ್ಟಿಸಿದೆ.

ಭಾರಿ ಮಳೆ: ದಕ್ಷಿಣ ಕನ್ನಡ ಜಿಲ್ಲೆಯ ಈ ಪ್ರವಾಸಿ ತಾಣಗಳಿಗೆ ನೋ ಎಂಟ್ರಿ
ನರಸಿಂಹಗಢ (ಗಡಾಯಿಕಲ್ಲು) ಬೆಟ್ಟ
Follow us on

ಮಂಗಳೂರು, ಜುಲೈ 4: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಹಾಗೂ ಉಡುಪಿ ಜಿಲ್ಲೆಯಲ್ಲಿ ಭಾರಿ ಮಳೆಯಾಗುತ್ತಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಕೆಲ ಪ್ರವಾಸಿ ತಾಣಗಳಿಗೆ ನಿರ್ಬಂಧ ವಿಧಿಸಿ ಅರಣ್ಯ ಇಲಾಖೆ ಆದೇಶ ಹೊರಡಿಸಿದೆ. ವನ್ಯಜೀವಿ ವಲಯದ ವ್ಯಾಪ್ತಿಗೆ ಬರುವ ಪ್ರವಾಸಿ ತಾಣಗಳಿಗೆ ನಿರ್ಬಂಧ ವಿಧಿಸಲಾಗಿದೆ. ಬೆಟ್ಟಗಳು, ಜಲಪಾತಗಳ ಬಳಿ ತೆರಳದಂತೆ ಪ್ರವಾಸಿಗರಿಗೆ ಸೂಚನೆ ನೀಡಲಾಗಿದೆ.

ಬೆಳ್ತಂಗಡಿ ತಾಲೂಕಿನ ನರಸಿಂಹಗಢ (ಗಡಾಯಿಕಲ್ಲು) ಬೆಟ್ಟ, ಅರಿಶಿನಗುಂಡಿ, ಕೂಡ್ಲು, ಬರ್ಕಳ, ಹಿಡ್ಲುಮನೆ, ವನಕಬ್ಬಿ, ಬಂಡಾಜೆ ಫಾಲ್ಸ್ ಸೇರಿದಂತೆ ಕೆಲವು ಪ್ರವಾಸಿ ತಾಣಗಳಿಗೆ ನಿರ್ಬಂಧ ವಿಧಿಸಿ ಬೆಳ್ತಂಗಡಿ ಆರ್​ಎಫ್​​ಒಗೆ ಕುದುರೆಮುಖ ಸಿಎಫ್ ಆದೇಶ ಹೊರಡಿಸಿದ್ದಾರೆ.

ಈ ಮಧ್ಯೆ, ಮಂಗಳೂರಿನ ಬಲ್ಮಠ ಪ್ರದೇಶದಲ್ಲಿ ಕಾಮಗಾರಿ ವೇಳೆ ಭೂಕುಸಿತಗೊಂಡು ಮಣ್ಣಿನಡಿ ಸಿಲುಕಿ ಕಾರ್ಮಿಕರೊಬ್ಬರು ಮೃತಪಟ್ಟಿದ್ದಾರೆ. ಮತ್ತೊಬ್ಬರು ಕಾರ್ಮಿಕ ಪವಾಡಸದೃಶ ರೀತಿಯಲ್ಲಿ ಪಾರಾಗಿದ್ದಾರೆ.

ಬೆಳ್ತಂಗಡಿ, ಬಂಟ್ವಾಳದಲ್ಲಿ ಶಾಲೆಗಳಿಗೆ ರಜೆ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿರುವ ಕಾರಣ ಬೆಳ್ತಂಗಡಿ ಹಾಗೂ ಬಂಟ್ವಾಳ ತಾಲೂಕಿನ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ರಜೆ ಘೋಷಿಸಿ ಶಿಕ್ಷಣಾಧಿಕಾರಿ ಆದೇಶ ಹೊರಡಿಸಿದ್ದಾರೆ. ಬೆಳ್ತಂಗಡಿ ತಹಶೀಲ್ದಾರ್ ಪೃಥ್ವಿ ಸಾನಿಕಂ ಸೂಚನೆ ಮೇರೆಗೆ ರಜೆ ಘೋಷಿಸಲಾಗಿದೆ. ಬಂಟ್ವಾಳದಲ್ಲಿಯೂ ಮುಂಜಾಗ್ರತಾ ಕ್ರಮವಾಗಿ ಎಲ್ಲಾ ಶಾಲೆಗಳಿಗೆ ರಜೆ ನೀಡಲಾಗಿದೆ.

ಗಡಾಯಿಕಲ್ಲು ಬೆಟ್ಟದ ಮೇಲ್ಭಾಗ

ಚಾರ್ಮಾಡಿ ಘಾಟ್​ ರಸ್ತೆಯಲ್ಲಿ ಬಿರುಕು


ಚಿಕ್ಕಮಗಳೂರು ಜಿಲ್ಲೆಯಲ್ಲಿ ಕೂಡ ಮಳೆ ಅಬ್ಬರ ಮುಂದುವರಿದಿದ್ದು, ಧಾರಾಕಾರ ಮಳೆಗೆ ಚಾರ್ಮಾಡಿ ಘಾಟ್​ ರಸ್ತೆಯಲ್ಲಿ ಬಿರುಕು ಮೂಡಿದೆ. ಅಲ್ಲದೆ, ರಸ್ತೆ ಕುಸಿಯುವ ಹಂತ ತಲುಪಿದೆ. ಕೆಲವು ದಿನಗಳ ಹಿಂದೆಯಷ್ಟೇ ಇಲ್ಲಿ ರಸ್ತೆ ಕಾಮಗಾರಿ ನಡೆದಿತ್ತು. ಚಾರ್ಮಾಡಿ ಘಾಟ್​, ಕೊಟ್ಟಿಗೆಹಾರ, ಕಳಸ‌ ಭಾಗದಲ್ಲಿ ಭಾರಿ ಮಳೆಯಾಗುತ್ತಿದೆ.

ಉಡುಪಿಯಲ್ಲಿ 27 ಮನೆಗಳಿಗೆ ಹಾನಿ


ಮತ್ತೊಂದೆಡೆ, ಉಡುಪಿಯಲ್ಲಿ ಜುಲೈ 3ರಂದು ಬುಧವಾರ ಸುರಿದ ಭಾರೀ ಗಾಳಿ ಮಳೆಗೆ ಸುಮಾರು 27 ಮನೆಗಳಿಗೆ ತೀವ್ರ ಹಾನಿಯಾಗಿದ್ದು, 1.32 ಕೋಟಿ ರೂ.ನಷ್ಟ ಸಂಭವಿಸಿದೆ. ಜೋರಾದ ಗಾಳಿ ಮತ್ತು ಮಳೆಗೆ ಹಲವಾರು ಮರಗಳು ಮತ್ತು ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ಕಡೆಕಾರ್ ಗ್ರಾಮದಲ್ಲಿ ಹಲವು ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ.

ಇದನ್ನೂ ಓದಿ: ಮಂಗಳೂರಿನಲ್ಲಿ ಮಣ್ಣು ಕುಸಿತ ದುರಂತ: ಓರ್ವ ಸಾವು, ಮತ್ತೋರ್ವ ಪವಾಡಸದೃಶ್ಯ ರೀತಿ ಪಾರು

ಉಡುಪಿಯಲ್ಲಿ 26.4 ಮಿಮೀ, ಕಾರ್ಕಳ ತಾಲೂಕಿನಲ್ಲಿ 20.1 ಮಿಮೀ, ಕುಂದಾಪುರದಲ್ಲಿ 50.01ಮಿಮೀ, ಬೈಂದೂರು 34.3 ಮಿಮೀ, ಬ್ರಹ್ಮಾವರ 30.4 ಮಿಮೀ, ಕಾಪು 14.8 ಮಿಮೀ, ಹೆಬ್ರಿ 42.4 ಮಿಮೀ ಮಳೆಯಾಗಿದೆ.

ಶಾಸಕ ಯಶಪಾಲ್ ಸುವರ್ಣ ಪೀಡಿತ ಪ್ರದೇಶಗಳಿಗೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ, ಪರಿಹಾರದ ಭರವಸೆ ನೀಡಿದ್ದಾರೆ.

ಬೈಂದೂರು ಶಿಕ್ಷಣ ವಲಯ ವ್ಯಾಪ್ತಿಗೆ ರಜೆ

ಪಶ್ಚಿಮ ಘಟ್ಟದ ತಪ್ಪಲು ಪ್ರದೇಶದಲ್ಲಿ ಮಳೆ ಹಿನ್ನೆಲೆಯಲ್ಲಿ ಬೈಂದೂರು ಶಿಕ್ಷಣ ವಲಯ ವ್ಯಾಪ್ತಿಗೆ ರಜೆ ಘೋಷಣೆ ಮಾಡಲಾಗಿದೆ. ಒಂದರಿಂದ ಹತ್ತನೇ ತರಗತಿವರೆಗೆ ರಜೆ ಘೋಷಿಸಲಾಗಿದೆ.

ಬೈಂದೂರು ತಾಲೂಕಿಗೆ ರಜೆ ನೀಡಿಲ್ಲ. ಬೈಂದೂರು ವಲಯಕ್ಕೆ ಮಾತ್ರ ರಜೆ ನೀಡಿದ್ದೇವೆ. ಭೌಗೋಳಿಕವಾಗಿ ತಗ್ಗು ಪ್ರದೇಶದಲ್ಲಿ ಮುನ್ನೆಚ್ಚರಿಕ ಕ್ರಮವಾಗಿ ರಜೆ ನೀಡಲಾಗಿದೆ ಎಂದು ಉಡುಪಿ ಡಿಸಿ ಡಾ. ವಿದ್ಯಾ ಕುಮಾರಿ ‘ಟಿವಿ9’ಗೆ ಮಾಹಿತಿ ನೀಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:47 am, Thu, 4 July 24