ಕೊಡಗಿನಲ್ಲಿ ಆರ್ದ್ರಾ ಮಳೆ ಆರ್ಭಟಕ್ಕೆ ಕಂಗಾಲಾದ ಜನ; ನೆಲಕ್ಕುರುಳಿದ ವಿದ್ಯುತ್ ಕಂಬ, ಬೃಹತ್ ಮರಗಳು
ಕೊಡಗಿನಲ್ಲಿ ಆರ್ದ್ರಾ ಮಳೆ ಆರ್ಭಟ ಜೋರಾಗಿದೆ. ಪ್ರವಾಹ, ಗುಡ್ಡ ಕುಸಿತ, ಮರ, ವಿದ್ಯುತ್ ಕಂಬ ಧರಾಶಾಹಿ, ಪ್ರವಾಸಿತಾಣಕ್ಕೆ ಎಂಟ್ರಿ ನಿರ್ಬಂಧ. ಹೀಗೆ ಮಳೆಯೂ ಇನ್ನಿಲ್ಲದ ಅವಾಂತರವನ್ನೇ ಸೃಷ್ಟಿಸಿದೆ.
ಕೊಡಗು, ಜೂ.27: ಜಿಲ್ಲೆಯಲ್ಲಿ ಮಳೆ ಅವಾಂತರಕ್ಕೆ ಭಾಗಮಂಡಲ(Bhagamandala) ತ್ರಿವೇಣಿ ಸಂಗಮ ಜಲಾವೃತವಾಗಿದೆ. ಪವಿತ್ರ ಸ್ನಾನ ಘಟ್ಟ ಮುಳುಗಿ, ಭಕ್ತರು ಪರದಾಡುವಂತಾಗಿದೆ. ಸ್ನಾನಘಟ್ಟದ ಮುಖ್ಯ ದ್ವಾರದವೆರಗೂ ನೀರಿನ ಮಟ್ಟ ಏರಿಕೆಯಾಗಿದ್ದು, ದ್ವಾರದಲ್ಲೇ ಪಿಂಡ ಪ್ರಧಾನ ಮಾಡುವ ಅಂದರ್ಭ ಒದಗಿ ಬಂದಿದೆ. ಇನ್ನು ಭಾಗಮಂಡಲ ನಾಪೋಕ್ಲು ರಸ್ತೆಯ ಮೇಲೆ ಪ್ರವಾಹ ಬಂದಿದ್ದು, ಸಧ್ಯ ನೂತನ ಫ್ಲೈ ಓವರ್ ನಿರ್ಮಾಣ ಆಗಿರುವುದರಿಂದ ವಾಹನಗಳ ಓಡಾಟಕ್ಕೆ ಯಾವುದೇ ಸಮಸ್ಯೆ ಆಗಿಲ್ಲ.
ಕಾರಿನ ಮೇಲೆ ಬಿದ್ದ ವಿದ್ಯುತ್ ಕಂಬ
ಇನ್ನು ವಿರಾಜಪೇಟೆ ತಾಲ್ಲೂಕಿನ ಅಮ್ಮತ್ತಿ ಗ್ರಾಮದಲ್ಲಿ ಚಲಿಸುತ್ತಿದ್ದ ಕಾರಿನ ಮೇಲೆ ವಿದ್ಯುತ್ ಕಂಬ ಉರುಳಿ ಬಿದ್ದು ಕಾರಿಗೆ ಹಾನಿಯಾಗಿದೆ. ಬೃಹತ್ ಮರ ವಿದ್ಯುತ್ ಕಂಬದ ಮೇಲೆ ಉರುಳಿ ಬಿದ್ದಿದ್ದರಿಂದ ವಿದ್ಯುತ್ ಕಂಬ ತುಂಡಾಗಿ ಕಾರಿನ ಮೇಲೆ ಬಿದ್ದಿದೆ. ಈ ಸಂದರ್ಭ ವಿದ್ಯುತ್ ಇಲ್ಲದ್ದರಿಂದ ಯಾವುದೇ ಅನಾಹುತ ಆಗಿಲ್ಲ. ಮತ್ತೊಂದೆಡೆ, ಮಡಿಕೇರಿ ನಗರದ ತ್ಯಾಗರಾಜ ಕಾಲೋನಿಯಲ್ಲಿ ಮನೆಯ ತಡೆಗೋಡೆ ಕುಸಿದು ಮೂರು ಮನೆಗಳಿಗೆ ಹಾನಿಯಾಗಿದೆ.
ಇದನ್ನೂ ಓದಿ:ಕೊಡಗಿನಲ್ಲಿ ಮುಂಗಾರು ಮಳೆ ಆರ್ಭಟ; ಅಪಾಯಕಾರಿ ರಸ್ತೆಯಲ್ಲೇ ವಾಹನಗಳ ಓಡಾಟ
ಕಳೆದ ರಾತ್ರಿ ಭಾರೀ ಮಳೆಯಿಂದಾಗಿ ಈ ಘಟನೆ ಸಂಭವಿಸಿದೆ. ಇನ್ನೊಂದೆಡೆ ಮಡಿಕೇರಿ ತಾಲ್ಲೂಕಿನ ಕೊಯನಾಡು ಗ್ರಾಮದಲ್ಲಿ ಶಾಲೆಯ ಹಿಂಬದಿ ಗುಡ್ಡ ಕುಸಿದಿದೆ. ಪರಿಣಾಮ ಕಟ್ಟಡದ ಗೋಡೆ ಮತ್ತು ಕಿಟಕಿಗೆ ಗಂಭೀರ ಹಾನಿಯಾಗಿದೆ. ಶಾಲೆಗೆ ರಜೆ ಇದ್ದಿದ್ದರಿಂದ ಹೆಚ್ಚಿನ ಅನಾಹುತ ಆಗಿಲ್ಲ. ಭಾರೀ ವರ್ಷಧಾರೆ ಪ್ರವಾಸೋಧ್ಯಮಕ್ಕೂ ಹೊಡೆತ ನೀಡಿದೆ. ಪ್ರಸಿದ್ಧ ದುಬಾರೆ ಪ್ರವಾಸಿ ತಾಣಕ್ಕೆ ಎಂಟ್ರಿ ನಿಷೇಧಿಸಲಾಗಿದೆ. ಕಾವೇರಿ ನದಿಯಲ್ಲಿ ನಿರಿನ ಮಟ್ಟ ಗಣನೀಯ ಏರಿಕೆಯಾಗಿರೋದ್ರಿಂದ ಪ್ರವಾಸಿಗರ ಸುರಕ್ಷತೆಗಾಗಿ ಈ ಕ್ರಮ ಕೈಗೊಳ್ಳಲಾಗಿದೆ.
ಇಂದು ಮಳೆ ಅಬ್ಬರ ಮಧ್ಯಾಹ್ನದ ಬಳಿಕ ಸ್ವಲ್ಪ ಇಳಿಕೆಯಾಗಿದೆ. ಆದರೂ ನದಿ ತೊರೆಗಳು ತುಂಬಿ ಹರಿಯುತ್ತಿವೆ. ಜಿಲ್ಲೆಯಾದ್ಯಂತ ಇಂದು ಅಂಗನವಾಡಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗೆ ರಜೆ ಘೋಷಿಸಲಾಗಿತ್ತು. ನಾಳೆ ಮತ್ತು ನಾಡಿದ್ದು ಜಿಲ್ಲೆಯಲ್ಲಿ ಆರೇಂಜ್ ಅಲರ್ಟ್ ಘೋಷಿಸಲಾಗಿದ್ದು, ಗುಡ್ಡ ಪ್ರದೇಶದ ಹಾಗೂ ನದಿ ತೀರದ ನಿವಾಸಿಗಳು ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ