ಕೊಡಗು: ಕುಶಾಲನಗರ ಪಟ್ಟಣದಲ್ಲಿ ಉದ್ಯಮಿ ಮೇಲೆ ಗುಂಡಿನ ದಾಳಿ
ರಾಜ್ಯದಲ್ಲಿ ಗುಂಡಿನ ದಾಳಿ ಪ್ರಕರಣಗಳು ಹೆಚ್ಚಾಗತೊಡಗಿವೆ. ಕೆಲವು ದಿನಗಳ ಹಿಂದೆ ಹಾಸನದಲ್ಲಿ ವ್ಯಕ್ತಿಯೊಬ್ಬ ಗುಂಡಿಕ್ಕಿ ಮತ್ತೊಬ್ಬರನ್ನು ಕೊಲೆ ಮಾಡಿ ಬಳಿಕ ತಾನೂ ಗುಂಡಿಕ್ಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ. ಇದೀಗ ಕೊಡಗು ಜಿಲ್ಲೆಯ ಕುಶಾಲನಗರದಲ್ಲಿ ಕ್ಷುಲ್ಲಕ ಕಾರಣಕ್ಕೆ ಉದ್ಯಮಿಯೊಬ್ಬರ ಮೇಲೆ ಗುಂಡಿನ ದಾಳಿ ನಡೆದಿದೆ.
ಮಡಿಕೇರಿ, ಜೂನ್ 24: ಹಾಸನದಲ್ಲಿ ಕೆಲವು ದಿನಗಳ ಹಿಂದೆ ನಡೆದ ಗುಂಡಿನ ದಾಳಿಯ (Firing) ಕಹಿ ನೆನಪು ಮಾಸುವ ಮುನ್ನವೇ ಇದೀಗ ಕೊಡಗು (Kodagu) ಜಿಲ್ಲೆಯಲ್ಲಿ ಗುಂಡಿನ ಮೊರೆತ ಕೇಳಿದೆ. ಕೊಡಗು ಜಿಲ್ಲೆ ಕುಶಾಲನಗರ (Kushalanagar) ಪಟ್ಟಣದಲ್ಲಿ ಸೋಮವಾರ ಉದ್ಯಮಿ ಶಶಿಧರ್ ಎಂಬುವರ ಮೇಲೆ 8 ಸುತ್ತು ಗುಂಡಿ ದಾಳಿ ನಡೆಸಲಾಗಿದೆ. ಘಟನೆಯಲ್ಲಿ ಶಶಿಕುಮಾರ್ ಕಾಲಿಗೆ ಗಂಭೀರ ಗಾಯವಾಗಿದೆ. ಅನುದೀಪ್ ಎಂಬಾತನಿಂದ ದಾಳಿ ನಡೆದಿದೆ.
ಕ್ಷುಲ್ಲಕ ಕಾರಣಕ್ಕೆ ಅನುದೀಪ್ ಪಿಸ್ತೂಲ್ನಿಂದ ಉದ್ಯಮಿಯ ಮೇಲೆ ಗುಂಡು ಹಾರಿಸಿದ್ದಾನೆ ಎನ್ನಲಾಗಿದೆ. ಸದ್ಯ ಆರೋಪಿಯನ್ನು ಕುಶಾಲನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಶಶಿಧರ್ ತಮ್ಮ ಫಾರ್ಚೂನರ್ ಕಾರಿನಲ್ಲಿದ್ದಾಗ ಆರೋಪಿ ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾನೆ. 8 ಗುಂಡುಗಳು ಕಾರನ್ನು ಹೊಕ್ಕಿದ್ದು, ಶಶಿಧರ್ ಅವರ ಕಾಲಿಗೂ ಗುಂಡು ಹೊಕ್ಕಿದೆ.
ಇದನ್ನೂ ಓದಿ: ಎರಡೇ ತಿಂಗಳಲ್ಲಿ ನಾಲ್ವರು ವಿಐಪಿಗಳ ಬಂಧನ; ಕರ್ನಾಟಕಕ್ಕೆ ಶಾಕ್ ನೀಡಿದ ಘಟನೆಗಳಿವು
ಹಾಸನದ ಹೊಯ್ಸಳ ನಗರ ಬಡಾವಣೆಯಲ್ಲಿ ಜೂನ್ 20ರಂದು ಗುಂಡಿನ ದಾಳಿ ನಡೆದಿತ್ತು. ಓರ್ವ ವ್ಯಕ್ತಿಯನ್ನು ಗುಂಡಿಕ್ಕಿ ಹತ್ಯೆ ಮಾಡಿ ಮತ್ತೋರ್ವ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆಸ್ತಿ ವಿಚಾರಕ್ಕೆ ಕೊಲೆ ನಡೆದಿರುವ ಶಂಕೆ ಇದೆ ಎಂದು ಹಾಸನ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಸುಜೀತಾ ಮಾಹಿತಿ ನೀಡಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ