AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊಡಗಿನಲ್ಲಿ ಮುಂಗಾರು ಮಳೆ ಆರ್ಭಟ; ಅಪಾಯಕಾರಿ ರಸ್ತೆಯಲ್ಲೇ ವಾಹನಗಳ ಓಡಾಟ

ಕೊಡಗು ಜಿಲ್ಲೆಯಲ್ಲಿ ಭರ್ತಿ ಒಂದು ತಿಂಗಳ ಬಳಿಕ ಮುಂಗಾರು ಆರ್ಭಟಿಸಲಾರಂಭಿಸಿದೆ. ವರುಣಾರ್ಭಟದ ಮೊದಲ ದಿನವೇ ನದಿ ತೊರೆಗಳು ಉಕ್ಕಲಾರಂಭಿಸಿವೆ. ಅಲ್ಲಲ್ಲಿ ಮಳೆ ಸಂಬಂಧಿತ ಅನಾಹುತಗಳು ಸಂಭವಿಸುತ್ತಿವೆ. ಭಾಗಮಂಡಲ ತ್ರಿವೇಣಿ ಸಂಗಮ ಜಲಾವೃತವಾಗುತ್ತ ಸಾಗಿದೆ. ಮಡಿಕೇರಿಯಲ್ಲಿ ತಡೆಗೋಟೆ ಇಲ್ಲದೆ ಮುಖ್ಯರಸ್ತೆ ರಾಜಕಾಲುವೆಗೆ ಕುಸಿಯುವ ಭಿತಿ ಎದುರಾಗಿದೆ.

ಕೊಡಗಿನಲ್ಲಿ ಮುಂಗಾರು ಮಳೆ ಆರ್ಭಟ; ಅಪಾಯಕಾರಿ ರಸ್ತೆಯಲ್ಲೇ ವಾಹನಗಳ ಓಡಾಟ
ಕೊಡಗಿನಲ್ಲಿ ಮುಂಗಾರು ಮಳೆ ಆರ್ಭಟ
Gopal AS
| Updated By: ಕಿರಣ್ ಹನುಮಂತ್​ ಮಾದಾರ್|

Updated on:Jun 26, 2024 | 9:20 PM

Share

ಕೊಡಗು, ಜೂ.26: ಜಿಲ್ಲೆಯಲ್ಲಿ ಮಳೆ(Rain)ಗಾಲದ ಆರಂಭವಾಗುತ್ತಲೇ ಅನಾಹುತ ಎದುರಾಗುವ ಆತಂಕ ಎದುರಾಗಿದೆ. ಮಡಿಕೇರಿ ನಗರದ ಹೃದಯ ಭಾಗದಲ್ಲಿಯೇ ಮುಖ್ಯ ರಸ್ತೆಯೊಂದು ಕುಸಿಯುತ್ತಿದೆ. ಮಡಿಕೇರಿ(Madikeri)ಯಿಂದ ಗಾಳಿಬೀಡು, ಕಾಲೂರು, ಮೊಣ್ಣಂಗೇರಿ ಗ್ರಾಮಗಳಿಗೆ ಈ ರಸ್ತೆ ಸಂಪರ್ಕ ಕಲ್ಪಿಸುತ್ತದೆ. ಎರಡು ವರ್ಷಗಳ ಹಿಂದೆ ಮಳೆಗಾಲದಲ್ಲಿ ಈ ರಸ್ತೆ ಕುಸಿತವಾಗಿತ್ತು. ಇನ್ನು ರಸ್ತೆಯ ಕೆಳಭಾಗದಲ್ಲೇ ರಾಜಕಾಲುವೆ ಹರಿಯುತ್ತದೆ. ಈ ಹಿನ್ನಲೆ ಎರಡು ವರ್ಷಗಳ ಕಾಲ ತಡೆಗೋಡೆ ನಿರ್ಮಿಸಿದ ಜಿಲ್ಲಾಡಳಿತ, ಇದೀಗ ಮಳೆಗಾಲ ಶುರುವಾಗುತ್ತಲೇ ಒಂದು ಕೋಟಿ ರೂ. ವೆಚ್ಚದಲ್ಲಿ ತಡೆಗೋಡೆ ನಿರ್ಮಾಣಕ್ಕೆ ಮುಂದಾಗಿದೆ. ಆದರೆ, ಇದೇ ಈಗ ಮುಳುವಾಗಿದೆ.

ಭಾರೀ ವಾಹನ ಸಂಚಾರ ನಿಷೇಧ

ಹೌದು, ತಡೆಗೋಡೆಗೆಂದು ರಸ್ತೆಯ ಕೆಳಭಾಗದ ಹಿಟಾಚಿಯಿಂದ ಮಣ್ಣು ಕೊರೆದಿದೆ. ಹಾಗಾಗಿ ಮಳೆ ಬಂದಾಗ ರಸ್ತೆ ಕುಸಿಯಲಾರಂಭಿಸಿದೆ. ಯಾವುದೇ ಕ್ಷಣದಲ್ಲಿ ಇಡೀ ರಸ್ತೆಯೇ ಕುಸಿಯುವ ಭೀತಿ ಎದುರಾಗಿದೆ. ಹಾಗಾಗಿ ರಸ್ತೆಯಲ್ಲಿ ಭಾರೀ ವಾಹನ ಸಂಚಾರ ನಿಷೇಧಿಸಲಾಗಿದೆ. ಜೊತೆಗೆ ಪೊಲೀಸ್ ಸಿಬ್ಬಂದಿ ನಿಯೋಜಿಸಿ, ವಾಹನ ಸವಾರರ ಮೇಲೆ ನಿಗಾ ಇಡಲಾಗಿದೆ. ಕಾಮಗಾರಿಗಾಗಿ ರಾಜಕಾಲುವೆಯ ಧಿಕ್ಕನ್ನೇ ಬದಲಾಯಿಸಲಾಗಿದೆ. ಎರಡು ವರ್ಷಗಳ ಕಾಲ ಸುಮ್ಮನಿದ್ದ ಜಿಲ್ಲಾಡಳಿತ ಇದೀಗ ಕೇಂದ್ರದ ಮೂಲಕ ಮಳೆಗಾದಲ್ಲಿ ಕಾಮಗಾರಿ ಆರಂಭಿಸಿರುವುದು ಎಲ್ಲರ ಆಕ್ರೋಶಕ್ಕೆ ಕಾರಣವಾಗಿದೆ.

ಇದನ್ನೂ ಓದಿ:ಉಡುಪಿಯಲ್ಲಿ ಬಿರುಸುಗೊಂಡ ಮುಂಗಾರು ಮಳೆ; ಕಾಪು, ಮಲ್ಪೆ ಕಡಲ ಕಿನಾರೆ ಪ್ರಕ್ಷುಬ್ಧ

ಇನ್ನು ಮಳೆಯಿಂದಾಗಿ ಜಿಲ್ಲೆಯ ನದಿ ತೊರೆಗಳು ತುಂಬಲಾರಂಭಿಸಿವೆ. ಭಾಗಮಂಡಲ ತ್ರಿವೇಣಿ ಸಂಗಮದಲ್ಲಿ ನೀರಿನ ಮಟ್ಟ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ. ಮಳೆ ಹೀಗೆ ಮುಂದುವರೆದರೆ ನಾಳೆ ವೇಳೆಗೆ ಸಂಗಮ ಜಲಾವೃತವಾಗುವ ಸಾಧ್ಯತೆ ಇದೆ. ಹಾಗೆಯೇ ಮಡಿಕೇರಿ ತಾಲ್ಲೂಕಿನ ಮೂರ್ನಾಡು ಗ್ರಾಮದ ಬಲಮುರಿಯಲ್ಲಿ ಹಳೆಯ ಸೇತುವೆ ಮುಳಗಡೆಯಾಗಿದೆ. ಸಂಚಾರಕ್ಕೆ ಹೊಸ ಸೇತುವೆ ಇರುವುದರಿಂದ ಸಧ್ಯ ಜನರಿಗೆ ಯಾವುದೇ ಅಪಾಯವಿಲ್ಲ.

ಉಳಿದಂತೆ ಮಡಿಕೇರಿ ತಾಲ್ಲೂಕಿನ ಬೇಂಗೂರು, ಹೊದವಾಡ, ಕೊಟ್ಟಮುಡಿ, ಧೋನಿ ಕಡವು, ವಿರಾಜಪೇಟೆ ತಾಲ್ಲೂಕಿನ ಕರಡಿಗೋಡು, ಸಿದ್ದಾಪುರದಲ್ಲಿ ಕಾವೇರಿ ನದಿ ನೀರಿನ ಮಟ್ಟ ಏರಿಕೆಯಾಗುತ್ತಿದ್ದು, ಪ್ರವಾಹದ ಆತಂಕ ಶುರುವಾಗಿದೆ. ಹಾಗಾಗಿ ಜಿಲ್ಲಾಡಳಿತ ನದಿ ತೀರದ ನಿವಾಸಿಗಳಿಗೆ ಎಚ್ಚರಿಕೆಯಿಂದ ಇರುವಂತೆ ಮುನ್ನೆಚ್ಚರಿಕೆ ನೀಡಿದೆ. ನಾಳೆ ಮತ್ತು ನಾಡಿದ್ದು ಕೂಡ ಜಿಲ್ಲೆಯಲ್ಲಿ ಆರೇಂಜ್ ಅಲರ್ಟ್​ ಮುಂದುವರಿಯಲಿದ್ದು, ಕಟ್ಟೆಚ್ಚರ ವಹಿಸಲಾಗಿದೆ. ನದಿತೀರದ ನಿವಾಸಿಗಳಲ್ಲದೆ ಬೆಟ್ಟಗುಡ್ಡ ನಿವಾಸಿಗಳಿಗೂ ಎಚ್ಚರಿಕೆ ಇರುವಂತೆ ಸೂಚನೆ ನೀಡಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:18 pm, Wed, 26 June 24