ಉಡುಪಿ: ಪ್ರವಾಸಿಗರಿಗೆ ಶಾಕ್ ನೀಡಿದ ಜಿಲ್ಲಾಡಳಿತ; ಸೆಪ್ಟೆಂಬರ್ 15 ರವರೆಗೆ ಸಮುದ್ರದ ಅಲೆಗಳ ಜತೆ ಆಟವಾಡಲು ನಿರ್ಬಂಧ

| Updated By: preethi shettigar

Updated on: Aug 08, 2021 | 9:08 AM

ಸಮುದ್ರದ ಅಲೆಗಳ ನಡುವೆ ಆಟವಾಡುವ ಜನರನ್ನು ನಿಯಂತ್ರಿಸಲು ಮುಂದಾದ ಜಿಲ್ಲಾಡಳಿತ, ಬಲೆಗಳಿಂದ ಬೇಲಿ ಹಾಕಿ ಮುಂದಕ್ಕೆ ಹೋಗದಂತೆ ಎಚ್ಚರಿಕೆ ಬೋರ್ಡ್ ಹಾಕಿದೆ.

ಉಡುಪಿ: ಪ್ರವಾಸಿಗರಿಗೆ ಶಾಕ್ ನೀಡಿದ ಜಿಲ್ಲಾಡಳಿತ; ಸೆಪ್ಟೆಂಬರ್ 15 ರವರೆಗೆ ಸಮುದ್ರದ ಅಲೆಗಳ ಜತೆ ಆಟವಾಡಲು ನಿರ್ಬಂಧ
ಸಮುದ್ರದ ಬಳಿ ಬಲೆ ಹಾಕಿ ಕಟ್ಟೆಚ್ಚರ
Follow us on

ಉಡುಪಿ: ಒಂದೆಡೆ ಕೊರೊನಾ ಮೂರನೇ ಅಲೆಯ ಆತಂಕ, ಇನ್ನೊಂದೆಡೆ ಪ್ರವಾಹ ಭೀತಿ ಜನರನ್ನು ಇನ್ನಿಲ್ಲದ ಸಂಕಷ್ಟಕ್ಕೆ ನೂಕಿದೆ. ಆದರೆ ಕೆಲವು ಪ್ರವಾಸಿಗರು ಮಾತ್ರ ಇದ್ಯಾವುದನ್ನು ಲೆಕ್ಕಿಸದೆ ಸುರಿಯುತ್ತಿರುವ ಮಳೆಯಲ್ಲಿಯೇ ಪ್ರವಾಸಿ ತಾಣಗಳಿಗೆ ಭೇಟಿ ನೀಡುತ್ತಿದ್ದಾರೆ. ಹೀಗಾಗಿ ಜನರನ್ನು ಅಪಾಯದಿಂದ ಕಾಪಾಡಲು ಜಿಲ್ಲಾಡಳಿತವೇ ಒಂದು ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಉಡುಪಿ ಜಿಲ್ಲೆಯ ಸಮುದ್ರ ತೀರಕ್ಕೆ(Beach) ಪ್ರವಾಸಕ್ಕಾಗಿ ಆಗಮಿಸುವ ಜನರಿಗೆ ಜಿಲ್ಲಾಡಳಿತ ನಿರ್ಬಂಧ ಹೇರಿದ್ದು, ಸಮುದ್ರಕ್ಕೆ ಇಳಿಯದಂತೆ ಬೇಲಿ ನಿರ್ಮಿಸಿದೆ.

ಸಮುದ್ರದ ಅಲೆಗಳ ಅಬ್ಬರ  ಇತ್ತೀಚೆಗೆ ಜೋರಾಗಿದ್ದು, ಒಂದು ರೀತಿಯಲ್ಲಿ ಮಲ್ಪೆ ಸಮುದ್ರ ಅಪಾಯದ ಹಾಟ್​ಸ್ಪಾಟ್​ ಆಗಿ ಮಾರ್ಪಟ್ಟಿದೆ. ಇತ್ತೀಚಿಗೆ ಇದೇ ಮಲ್ಪೆ ಸಮುದ್ರದಲ್ಲಿ 4 ಜನ ಪ್ರವಾಸಿಗರು ಕೊಚ್ಚಿ ಹೋಗಿದ್ದು, ಕೊನೆಗೆ ಮೂವರು ಬದುಕುಳಿದು ಓರ್ವ ಯುವತಿ ಸಾವನ್ನಪ್ಪಿದ್ದಳು. ಇದು ಈ ಭಾಗದ ಜನರಲ್ಲಿ ಆತಂಕ ಸೃಷ್ಟಿಸಿದ್ದು, ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿತ್ತು. ಆದರೆ ಇದನ್ನು ಪ್ರವಾಸಿಗರು ಗಮನಕ್ಕೆ ತೆಗೆದುಕೊಳ್ಳುತ್ತಿರಲಿಲ್ಲ. ಹೀಗಾಗಿ ಜಿಲ್ಲಾಡಳಿತವೇ ಈ ಬಗ್ಗೆ ಕ್ರಮ ತೆಗೆದುಕೊಂಡಿದೆ.

ಸಮುದ್ರದ ಅಲೆಗಳ ನಡುವೆ ಆಟವಾಡುವ ಜನರನ್ನು ನಿಯಂತ್ರಿಸಲು ಮುಂದಾದ ಜಿಲ್ಲಾಡಳಿತ, ಬಲೆಗಳಿಂದ ಬೇಲಿ ಹಾಕಿ ಮುಂದಕ್ಕೆ ಹೋಗದಂತೆ ಎಚ್ಚರಿಕೆ ಬೋರ್ಡ್ ಹಾಕಿದೆ. ಸೂಚನೆ ಹೊರತಾಗಿಯೂ ಸಮುದ್ರಕ್ಕೆ ಇಳಿದರೆ 500 ರೂಪಾಯಿ ದಂಡ ವಿಧಿಸುವುದಾಗಿ ಎಚ್ಚರಿಸಿದೆ. ಮುಖ್ಯವಾಗಿ ಈ ಆದೇಶ ಸೆಪ್ಟೆಂಬರ್ 15 ವರೆಗೂ ಮುಂದುವರಿಯಲಿದೆ.

ಮುಂದಕ್ಕೆ ಹೋಗದಂತೆ ಎಚ್ಚರಿಕೆ ಬೋರ್ಡ್

ಉಡುಪಿ ಜಿಲ್ಲಾಡಳಿತದ ಈ ಏಕಾಏಕಿ ಆದೇಶದ ಬಗ್ಗೆ ಪ್ರವಾಸಿಗರು ಮಾತ್ರ ಬೇಸರಗೊಂಡಿದ್ದಾರೆ. ಸಮುದ್ರದ ಅಲೆಗಳ ಜೊತೆಗೆ ಆಟವಾಡಬೇಕು ಎಂದು ದೂರದಿಂದ ಬಾಡಿಗೆ ವಾಹನ ಮಾಡಿಕೊಂಡು ಬಂದ ಸಾವಿರಾರು ಪ್ರವಾಸಿಗರು ಸಮುದ್ರಕ್ಕೆ ಇಳಿಯಲು ಆಗದೇ ದೂರದಿಂದಲೇ ನೋಡಿಕೊಂಡು ದಡದಲ್ಲೇ ಕುಳಿತುಕೊಂಡಿದ್ದಾರೆ.

ಒಟ್ಟಾರೆ ಕರಾವಳಿ ಪ್ರವಾಸದ ಯೋಚನೆ ಸದ್ಯಕ್ಕೆ ಕೈ ಬಿಡುವುದು ಉತ್ತಮ. ಏಕೆಂದರೆ ಅತ್ತ ಧರ್ಮಸ್ಥಳ ಮುಂತಾದ ಪವಿತ್ರ ಕ್ಷೇತ್ರಗಳಲ್ಲೂ ಕೊರೊನಾ ಕಾರಣದಿಂದ ಪ್ರವೇಶಕ್ಕೆ ನಿರ್ಬಂಧ ಹೇರಿದೆ. ಇತ್ತ ಸಮುದ್ರಕ್ಕೂ ಇಳಿಯಲು ಜಿಲ್ಲಾಡಳಿತ ನಿರ್ಬಂಧ ವಿಧಿಸಿದೆ. ಹೀಗಾಗಿ ಸಾರ್ವಜನಿಕರು ಸರ್ಕಾರಿ ನಿಯಮವನ್ನು ಅನುಸರಿಸುವತ್ತ ಗಮನಹರಿಸುವುದು ಸೂಕ್ತ.

ಇದನ್ನೂ ಓದಿ:
ಉಡುಪಿಯಲ್ಲಿ ಐದು ದಿನ ಆರೆಂಜ್ ಅಲರ್ಟ್; ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಜಿಲ್ಲಾಧಿಕಾರಿ ಸೂಚನೆ

Greenland Ice Melt: ಕರಗಿ ಕರಗಿ ಸಮುದ್ರ ಸೇರುತ್ತಿವೆ ಬಿಲಿಯನ್​ ಟನ್ ಪ್ರಮಾಣದ ಹಿಮ; ಕಾದಿದೆ ಅಪಾಯ