ಉಡುಪಿ: ಇದೀಗ ನಡೆಯುತ್ತಿರುವ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಭಾರತ ದೇಶವನ್ನು ಪ್ರತಿನಿಧಿಸಿ 61 ಕೆಜಿ ವಿಭಾಗದ ವೇಟ್ ಲೆಫ್ಟಿಂಗ್ ನಲ್ಲಿ ಕಂಚಿನ ಪದಕ ಪಡೆದ ಗುರುರಾಜ್ ತವರಿಗೆ ವಾಪಾಸ್ ಆಗಿದ್ದಾರೆ. ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನವರಾದ ಗುರುರಾಜ್ ಎರಡನೇ ಬಾರಿಗೆ ಈ ಹೆಮ್ಮೆಯ ಸಾಧನೆ ಮಾಡಿದ್ದಾರೆ. ಈ ಹಿಂದೆ ಬೆಳ್ಳಿ ಪದಕ ಪಡೆದಿದ್ದ ಗುರುರಾಜ್ ಈ ಬಾರಿ ಕಂಚಿನ ಸಾಧನೆಯೊಂದಿಗೆ ಮರಳಿದ್ದಾರೆ. ಉಡುಪಿಗೆ ಆಗಮಿಸಿದ ವೇಳೆ ಅವರನ್ನು ಜಿಲ್ಲಾಡಳಿತದ ವತಿಯಿಂದ ಗೌರವಿಸಲಾಯಿತು.
ಇನ್ನು ತಮ್ಮ ತವರಿಗೆ ಮರಳಿದ ಗುರುರಾಜ್ ತಮ್ಮ ಸಂತಸ ಹಂಚಿಕೊಂಡಿದ್ದಾರೆ. ಕಂಚಿನ ಪದಕ ಗೆದ್ದಿರುವುದು ನನಗೆ ಹೆಮ್ಮೆ ಮೂಡಿಸಿದೆ. ಭಾರತಕ್ಕೆ ನಾನು ಎರಡನೇ ಪದಕ ತರಲು ಸಾಧ್ಯವಾಗಿದೆ. ನಾಲ್ಕು ವರ್ಷದಿಂದ ಈ ಪದಕಕ್ಕೆ ಪರಿಶ್ರಮ ಪಟ್ಟಿದ್ದೇನೆ. ಕೊನೆಗೂ ನನಗೆ ಯಶಸ್ಸು ಸಿಕ್ಕಿದೆ. ಕರಾವಳಿ ಜಿಲ್ಲೆಗಳಲ್ಲಿ ಕ್ರೀಡಾಪಟುಗಳು ಹೆಚ್ಚಿನ ಸಂಖ್ಯೆಯಲ್ಲಿ ಹೊರಹೊಮ್ಮುತ್ತಿದ್ದಾರೆ. ನನ್ನ ಜಿಲ್ಲೆಯಲ್ಲಿ ವೈಟ್ ಲಿಫ್ಟಿಂಗ್ ಅಭ್ಯಾಸಕ್ಕೆ ವ್ಯವಸ್ಥೆ ಇಲ್ಲ. ಮಕ್ಕಳಿಗೆ ತರಬೇತಿ ನೀಡಲು ಸೂಕ್ತ ವ್ಯವಸ್ಥೆ ಇಲ್ಲ. ನಾನು ಊರಿಗೆ ಬಂದಾಗ ಅಭ್ಯಾಸ ನಡೆಸಲು ಕಷ್ಟವಾಗುತ್ತಿತ್ತು. ಅಭ್ಯಾಸ ನಡೆಸಲು ನಾನು ದೂರದ ಉಜಿರೆಗೆ ಹೋಗಬೇಕು. ಉಡುಪಿಯಲ್ಲಿ ವೇಟ್ ಲಿಫ್ಟಿಂಗ್ ತರಬೇತಿಗೆ ಸುಸಜ್ಜಿತ ವ್ಯವಸ್ಥೆ ಸರಕಾರ ಮಾಡಬೇಕು. ಇದರಿಂದ ಕರಾವಳಿಯಲ್ಲಿ ಅಭ್ಯಾಸ ಮಾಡುವವರಿಗೆ ಅನುಕೂಲವಾಗುತ್ತೆ ಎಂದು ಗುರುರಾಜ್ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಹತ್ತು ದಿನಗಳ ಹಿಂದೆ ನನಗೆ ಜ್ವರ ಬಂದಿತ್ತು. ಎರಡು ಕೆಜಿ ದೇಹದ ತೂಕ ಇಳಿಸುವ ಸವಾಲಿತ್ತು. ಮೆಡಲ್ ಗೆಲ್ಲಲೇ ಬೇಕೆಂದು ಮಾನಸಿಕವಾಗಿ ಸಿದ್ಧನಾಗಿದ್ದೆ. ಹತ್ತು ದಿನ ಹಿಂದೆ ಜ್ವರ ಬಂದುದರಿಂದ ನಾನು ಮಾನಸಿಕವಾಗಿ ಕುಸಿದಿದ್ದೆ. ಈ ಬಾರಿ ನನಗೆ ಪದಕ ಗೆಲ್ಲಲು ಸಾಧ್ಯವಿಲ್ಲ ಎಂದು ಭಾವಿಸಿದ್ದೆ. ಜಾಯಿಂಟ್ ಪೇಯ್ನ್ ಕೂಡ ಜೋರಾಗಿತ್ತು. ಆದರೆ ಕೋಚ್ ಮತ್ತು ಮನೆಯವರು ಮಾನಸಿಕವಾಗಿ ಧೈರ್ಯ ತುಂಬಿದರು. ಕೋಚ್ ಮತ್ತು ಮನೆಯವರು ನನಗೆ ಪೂರ್ಣ ಸಹಕಾರ ನೀಡಿದರು. ಈ ಬಾರಿಯ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಭಾರತ ಉತ್ತಮ ಪ್ರದರ್ಶನ ತೋರುತ್ತಿದೆ. ಪದಕ ಪಟ್ಟಿಯಲ್ಲಿ ನಾವು ಉತ್ತಮ ಸ್ಥಾನ ಪಡೆದಿದ್ದೇವೆ. ಈ ಬಾರಿ ಇನ್ನೂ ಉತ್ತಮ ಸ್ಥಾನ ಪಡೆಯುತ್ತೇವೆ. ಈ ಬಾರಿ ಶೂಟಿಂಗ್ ಈವೆಂಟ್ ರದ್ದು ಮಾಡಿದ್ದಾರೆ. ಈ ಇವೆಂಟ್ ತೆಗೆದರೂ ಕೂಡ ನಾವು ಉತ್ತಮ ಪ್ರದರ್ಶನ ನೀಡುತ್ತಿದ್ದೇವೆ. ಇನ್ನೂ ಸಾಕಷ್ಟು ಪದಕಗಳು ಬರುವ ಅವಕಾಶ ಇದೆ. 50 ರಿಂದ 55 ಪದಕಗಳನ್ನು ನಾವು ಪಡೆಯುವ ಸಾಧ್ಯತೆ ಇದೆ. ಕೇಂದ್ರ ಸರಕಾರದಿಂದ ಕ್ರೀಡೆಗೆ ತುಂಬಾ ಸಹಕಾರ ಸಿಕ್ಕಿದೆ.
ಈ ಬಾರಿಯ ಪದಕವನ್ನು ನನ್ನ ಮಡದಿಗೆ ಡೆಡಿಕೇಟ್ ಮಾಡುವೆ
ಪ್ರಧಾನಿ ನರೇಂದ್ರ ಮೋದಿಯವರು ಉತ್ತಮ ಸಹಕಾರ ನೀಡಿದ್ದಾರೆ. ಉತ್ತಮ ಯೋಜನೆಗಳನ್ನು ಕ್ರೀಡಾಪಟುಗಳ ಅನುಕೂಲಕ್ಕೆ ಜಾರಿಗೊಳಿಸಿದ್ದಾರೆ. ಒಂದು ತಿಂಗಳು ಮುಂಚಿತವಾಗಿ ನಮಗೆ ತರಬೇತಿಗೆ ವ್ಯವಸ್ಥೆ ಮಾಡಿದ್ದರು. ಆದರೆ ರಾಜ್ಯ ಸರ್ಕಾರದ ಬಗ್ಗೆ ನನಗೆ ತುಂಬಾ ಬೇಸರವಿದೆ. ಕ್ರೀಡಾಪಟುಗಳಿಗೆ ಸೂಕ್ತ ಸಹಕಾರ ನೀಡುತ್ತಿಲ್ಲ. ಕಳೆದ ನಾಲ್ಕೈದು ವರ್ಷಗಳಿಂದ ಅಂತರಾಷ್ಟ್ರೀಯ ಪದಕ ಪಡೆದವರಿಗೆ ಬೆಂಬಲ ನೀಡಿಲ್ಲ. ಬೇರೆ ರಾಜ್ಯದಲ್ಲಿ ಪದಕ ಗೆದ್ದವರಿಗೆ ನಗದು ಪುರಸ್ಕಾರ ನೀಡಿ ಗೌರವಿಸಿದ್ದಾರೆ. ಕಳೆದ ವರ್ಷ ಪದಕ ಪಡೆದಾಗ 20 ಲಕ್ಷ ಘೋಷಣೆ ಮಾಡಿದ್ದರು. ಈ ಬಾರಿ ಕೇವಲ ಎಂಟು ಲಕ್ಷ ರೂಪಾಯಿ ಕೊಡುವುದಾಗಿ ಹೇಳಿದ್ದಾರೆ. ಹರಿಯಾಣ ಪಂಜಾಬ್ ರಾಜ್ಯಗಳಲ್ಲಿ ಕಂಚಿನ ಪದಕ ಗೆದ್ದವರಿಗೆ 40 ಲಕ್ಷ ನೀಡುತ್ತಾರೆ. ನಮ್ಮ ರಾಜ್ಯ ಸರ್ಕಾರದಿಂದ ಮತ್ತಷ್ಟು ಪ್ರೋತ್ಸಾಹದ ಅಗತ್ಯವಿದೆ. ಈ ಬಾರಿಯ ಪದಕವನ್ನು ನಾನು ಮಡದಿಗೆ ಡೆಡಿಕೇಟ್ ಮಾಡಿದ್ದೇನೆ. ನಾನು ಇತ್ತೀಚಿಗಷ್ಟೇ ಮದುವೆಯಾಗಿದ್ದೆ ಮಡದಿ ತುಂಬಾ ಸಹಕಾರ ನೀಡಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
Published On - 7:14 pm, Sun, 7 August 22