ಹಿಜಾಬ್-ಕೇಸರಿಶಾಲು ವಿವಾದದ ಕೇಂದ್ರ ಬಿಂದು ಕುಂದಾಪುರ ಕಾಲೇಜಿಗೆ ನಾಳೆ ರಜೆ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Feb 04, 2022 | 6:18 PM

ಧರಣಿ ಕುಳಿತಿದ್ದ ಸ್ಕಾರ್ಫ್​ಧಾರಿ ವಿದ್ಯಾರ್ಥಿನಿಯರ ಬಳಿ ಸೇರಿದ್ದ ಗುಂಪುಗಳನ್ನು ಪೊಲೀಸರು ಚೆದುರಿಸಿದರು. ಕಾಲೇಜು ಬಿಡುತ್ತಿದ್ದಂತೆಯೇ ವಿದ್ಯಾರ್ಥಿಗಳ ಬಳಿ ಎರಡು ಗುಂಪುಗಳ ಜಮಾವಣೆ ಆಗಿದ್ದವು.

ಹಿಜಾಬ್-ಕೇಸರಿಶಾಲು ವಿವಾದದ ಕೇಂದ್ರ ಬಿಂದು ಕುಂದಾಪುರ ಕಾಲೇಜಿಗೆ ನಾಳೆ ರಜೆ
ಹಿಜಾಬ್ ಧರಿಸಿರುವ ವಿದ್ಯಾರ್ಥಿನಿಯರು
Follow us on

ಉಡುಪಿ: ಸರ್ಕಾರಿ ಕಾಲೇಜುಗಳಲ್ಲಿ ಹಿಜಾಬ್, ಕೇಸರಿ ಶಾಲು ವಿವಾದದ ಕೇಂದ್ರಬಿಂದು ಎನಿಸಿರುವ ಹಾಗೂ ಇದೇ ಕಾರಣಕ್ಕೆ ರಾಷ್ಟ್ರಮಟ್ಟದ ಸುದ್ದಿಯಾಗಿರುವ ಕುಂದಾಪುರ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ನಾಳೆ (ಫೆ.5) ರಜೆ ಘೋಷಿಸಲಾಗಿದೆ. ತಮಗೆ ಒಳಪ್ರವೇಶಿಸಲು ಅವಕಾಶ ನಿರಾಕರಿಸಿದ್ದನ್ನು ವಿರೋಧಿಸಿ ವಿದ್ಯಾರ್ಥಿನಿಯರು ಇಂದು ಮಧ್ಯಾಹ್ನ 3.30ರವರೆಗೆ ಧರಣಿ ನಡೆಸಿದರು. ನಾಳೆ ಕಾಲೇಜಿಗೆ ಆಡಳಿತ ಮಂಡಳಿ ರಜೆ ಘೋಷಿಸಿರುವ ಹಿನ್ನೆಲೆಯಲ್ಲಿ ಸೋಮವಾರದಿಂದ ಮತ್ತೆ ಪ್ರತಿಭಟನೆ ಮುಂದುವರಿಯುವ ಸಾಧ್ಯತೆಯಿದೆ. ಧರಣಿ ಕುಳಿತಿದ್ದ ಸ್ಕಾರ್ಫ್​ಧಾರಿ ವಿದ್ಯಾರ್ಥಿನಿಯರ ಬಳಿ ಸೇರಿದ್ದ ಗುಂಪುಗಳನ್ನು ಪೊಲೀಸರು ಚೆದುರಿಸಿದರು. ಕಾಲೇಜು ಬಿಡುತ್ತಿದ್ದಂತೆಯೇ ವಿದ್ಯಾರ್ಥಿಗಳ ಬಳಿ ಎರಡು ಗುಂಪುಗಳ ಜಮಾವಣೆ ಆದವು. ಜಮಾವಣೆಯಾಗಿದ್ದ ಗುಂಪುಗಳೊಂದಿಗೆ, ಪೇಟೆಯಲ್ಲಿ ಸೇರಿದ್ದ ಜನರನ್ನೂ ಪೊಲೀಸರು ಚದುರಿಸಿದರು.

ಹಿಜಾಬ್ ನಿಷೇಧಕ್ಕೆ ಆಗ್ರಹ
ಕುಂದಾಪುರ ಸರ್ಕಾರಿ ಕಾಲೇಜಿನ ಹಿಜಾಬ್ ವಿವಾದ ರಾಜ್ಯ ಹಲವೆಡೆ ಪ್ರತಿಧ್ವನಿಸಿದೆ. ಚಿಕ್ಕಮಗಳೂರಿನಲ್ಲಿ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳು ಹಿಜಾಬ್ ನಿಷೇಧಿಸುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಬಜರಂಗದಳ ಪದಾಧಿಕಾರಿಗಳೊಂದಿಗೆ ಜಿಲ್ಲಾಧಿಕಾರಿ ಕಚೇರಿಗೆ ಬಂದ ವಿದ್ಯಾರ್ಥಿಗಳು ಡಿಸಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಹಿಜಾಬ್​ನಿಂದ ಧಾರ್ಮಿಕ ಭಾವನೆಗಳಿಗೆ ಧಕ್ಕೆಯುಂಟಾಗುತ್ತಿದೆ. ಶಾಲೆ-ಕಾಲೇಜುಗಳಲ್ಲಿ ಹಿಜಾಬ್ ನಿಷೇಧಿಸಬೇಕೆಂದು ಮನವಿ ಮಾಡಿದರು.

ಹಿಜಾಬ್ ವಿವಾದ ಕುರಿತು ಮಾಹಿತಿ ಪಡೆದ ಡಿಕೆಶಿ
ಬೆಂಗಳೂರು:
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಿಜಾಬ್ ವಿವಾದ ಕುರಿತು ಕರಾವಳಿ ಭಾಗದ ಸ್ಥಳೀಯ ಕಾಂಗ್ರೆಸ್ ‌ಮುಖಂಡರಿಂದ ಮಾಹಿತಿ ಪಡೆದರು. ಈ ಗಲಾಟೆಗೆ ಎಸ್​ಡಿಪಿಐ ಕಾರಣ ಎಂದು ಹಲವಾರು ನಾಯಕರು ತಿಳಿಸಿದರು. ಉಡುಪಿ, ಕುಂದಾಪುರದಲ್ಲಿನ ಈ ಗಲಾಟೆ ಹಿಂದೆ ಎಸ್​ಡಿಪಿಐ ಒತ್ತಡವಿದೆ. ಅವರ ಒತ್ತಡದಿಂದಾಗಿ ವಿದ್ಯಾರ್ಥಿಗಳು ಧರಣಿ ಮಾಡುತ್ತಿದ್ದಾರೆ. 15 ದಿನಗಳ ಹಿಂದೆ ಈ ಪ್ರದೇಶದಲ್ಲಿ ಎಸ್​ಡಿಪಿಐ ಬೆಂಬಲಿತ ವಿದ್ಯಾರ್ಥಿಗಳು ಕಾಲೇಜು ಆಡಳಿತ ಮಂಡಳಿ ಜೊತೆ ಗಲಾಟೆ ಮಾಡಿಕೊಂಡಿದ್ದರು. ಅವರ ಬೇಡಿಕೆ ನಿರಾಕರಿಸಿದ್ದಕ್ಕಾಗಿ ಈ ರೀತಿ ವಿವಾದ ಸೃಷ್ಟಿಸಲಾಗಿದೆ ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ: ಕೇಸರಿ ಶಾಲು, ಹಿಜಾಬ್ ಧರಿಸಲು ಇಲ್ಲ ಅವಕಾಶ: ಕರ್ನಾಟಕ ಸರ್ಕಾರದಿಂದ ಕಟ್ಟುನಿಟ್ಟಿನ ಸೂಚನೆ
ಇದನ್ನೂ ಓದಿ: ಕರಾವಳಿಯಿಂದ ಬೆಳಗಾವಿ ಜಿಲ್ಲೆಗೆ ವ್ಯಾಪಿಸಿದ ಹಿಜಾಬ್ ವಿವಾದ; ಕೇಸರಿ ಶಾಲು ಧರಿಸಿ ಕಾಲೇಜಿಗೆ ಬಂದ ಪಿಯು ವಿದ್ಯಾರ್ಥಿಗಳು