ಉಡುಪಿ: ಹಿಜಾಬ್ ವಿವಾದ (Hijab Row) ಈಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರತಿಧ್ವನಿಸಿದೆ. ದೇಶ, ವಿದೇಶದ ಗಣ್ಯರು ಕರ್ನಾಟಕದಲ್ಲಿ ನಡೆಯುತ್ತಿರುವ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಇದೀಗ ಇಡೀ ಪ್ರಕರಣದ ಕುರಿತು ಮತ್ತಷ್ಟು ಒಳಸುಳಿಗಳು ಲಭ್ಯವಾಗಿದೆ. ಈ ಕುರಿತು ಶಾಸಕ ರಘುಪತಿ ಭಟ್ (Raghupati Bhat) ಕೂಡ ಮಾತನಾಡಿದ್ದಾರೆ. ಈ ಎಲ್ಲದರ ಡಿಟೇಲ್ಸ್ ಇಲ್ಲಿದೆ. ಸಂಘಟನೆಗಳ ರಾಜಕೀಯಕ್ಕೆ ಹಿಜಾಬ್ ವಿವಾದವನ್ನು ದೊಡ್ಡದು ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಎಬಿವಿಪಿ ಪ್ರತಿಭಟನೆಯಲ್ಲಿ 6 ಜನ ಮುಸ್ಲಿಂ ವಿದ್ಯಾರ್ಥಿನಿಯರು ಭಾಗಿಯಾಗಿದ್ದು ನೋಡಿ ಸಿಎಫ್ಐ ಸಂಘಟನೆ ಅವರನ್ನು ತನ್ನೆಡೆಗೆ ಸೇರಿಸಿಕೊಳ್ಳಲು ಯತ್ನಿಸಿದೆ. ಎಬಿವಿಪಿ ವಿದ್ಯಾರ್ಥಿ ಸಂಘಟನೆಯಲ್ಲ, ಒಂದು ಧರ್ಮದ ಪರವಾಗಿ ಕೆಲಸ ಮಾಡುತ್ತದೆ ಎಂದು ವಿದ್ಯಾರ್ಥಿನಿಯರನ್ನು ಮೊದಲು ಮನವೊಲಿಸಲಾಗಿತ್ತು. ಹಿಜಾಬ್ ನಮ್ಮ ಹಕ್ಕು, ಬಾಬ್ರಿ ಮಸೀದಿ ತೀರ್ಪು, ಆಜಾನ್ ಕೂಗುವ ವಿಚಾರ, ದೆಹಲಿ ದಂಗೆ ಬಗ್ಗೆ ವಿದ್ಯಾರ್ಥಿನಿಯರ ತಲೆಗೆ ತುಂಬಲಾಗಿತ್ತು. ಕ್ಲಾಸ್ ರೂಂನಲ್ಲಿ ಇತರೆ ವಿದ್ಯಾರ್ಥಿನಿಯರ ಒಗ್ಗೂಡಿಸುವಿಕೆ ತಯಾರಿ ನಡೆದಿತ್ತು. 6 ಜನರು ವಿರೋಧ ಮಾಡಿದ್ದನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದು ಇತರೆ ವಿದ್ಯಾರ್ಥಿನಿಯರಿಗೂ ಪ್ರಚೋದನೆ ನೀಡಿದ್ದರು. ಮೌಖಿಕವಾಗಿ ಒಂದು ಬಾರಿ, ಲಿಖಿತ ಲೆಟರ್ ಜೊತೆ ಡಿ.27 ರಂದು ಭೇಟಿ ಮಾಡಿದ್ದರು. ಪೋಷಕರಿಗೆ ಸಂಘಟನೆಗಳು ಮನವೊಲಿಸಿ ಪ್ರತಿಭಟನೆ ಮಾಡುವ ಹುನ್ನಾರ ಮಾಡಲಾಯಿತು ಎನ್ನುವ ಮಾಹಿತಿಗಳು ಲಭ್ಯವಾಗಿವೆ.
ಹಿಜಾಬ್ ವಿವಾದದ ಕುರಿತು ಶಾಸಕ ರಘುಪತಿ ಭಟ್ ಬಿಚ್ಚಿಟ್ಟ ಹಲವು ಮಾಹಿತಿಗಳು ಇಲ್ಲಿವೆ:
ಹಿಜಾಬ್ ವಿವಾದಕ್ಕೂ ಮೊದಲೇ ಮತ್ತೊಂದು ವಿವಾದಕ್ಕೆ ಯತ್ನ ಮಾಡಲಾಗಿತ್ತು ಎಂಬುದರ ಕುರಿತು ಶಾಸಕ ರಘುಪತಿ ಭಟ್ ಸ್ಫೋಟಕ ವಿಚಾರ ಹಂಚಿಕೊಂಡಿದ್ದಾರೆ. ಉಡುಪಿಯ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಆರಂಭಿಕ ಹಂತದಲ್ಲಿ ಮಾತೃಭಾಷೆ ವಿವಾದಕ್ಕೆ ಯತ್ನಿಸಲಾಗಿತ್ತು. ಬ್ಯಾರಿ ಭಾಷೆ ವಿಚಾರವಾಗಿ ವಿವಾದ ಮಾಡಲು ವಿದ್ಯಾರ್ಥಿನಿಯರು ಯತ್ನಿಸಿದ್ದರು. ಇವರ ಬಳಿ ಭಾಷೆ ವಿವಾದ ಮಾಡಲು ಸಂಘಟನೆಯೊಂದು ಒತ್ತಡ ಹಾಕಿತ್ತು. ಈ ಬಗ್ಗೆ ಸಹ ವಿದ್ಯಾರ್ಥಿನಿಯರ ಬಳಿ 6 ವಿದ್ಯಾರ್ಥಿನಿಯರು ಪ್ರಸ್ತಾಪ ಮಾಡಿದ್ದರು. ಆದರೆ ಸಹ ವಿದ್ಯಾರ್ಥಿಗಳು ಇದಕ್ಕೆ ಒಪ್ಪಿರಲಿಲ್ಲ. ಕಾಲೇಜಿನಲ್ಲಿ ಬ್ಯಾರಿ, ತುಳು, ಉರ್ದು ಮಾತನಾಡಲು ಅವಕಾಶ ಕೊಟ್ಟಿದ್ದಾರಲ್ಲ ಎಂದು ಇತರ ವಿದ್ಯಾರ್ಥಿನಿಯರು ಹೇಳಿದ್ದರು. ಇದರಿಂದ ವಿವಾದದ ಯತ್ನ ವಿಫಲವಾಗಿತ್ತು.
ಈ ಬಗ್ಗೆ ಟಿವಿ9 ಗೆ ಶಾಸಕ ರಘುಪತಿ ಭಟ್ ಹೇಳಿಕೆ ನೀಡಿದ್ದು, ಶಾಸಕ ರಘುಪತಿ ಭಟ್ಗೆ ಈ ವಿಚಾರವನ್ನು ಸಹ ವಿದ್ಯಾರ್ಥಿನಿ ತಿಳಿಸಿದ್ದಾಳೆ. ಮುಸ್ಲಿಂ ಧರ್ಮದ ವಿದ್ಯಾರ್ಥಿನಿ ತಂದೆಯೊಂದಿಗೆ ಶಾಸಕರನ್ನು ಭೇಟಿ ಮಾಡಿದ್ದರು. ಈ ವೇಳೆ ಅಂದು 6 ವಿದ್ಯಾರ್ಥಿನಿಯರು ಭಾಷೆ ವಿವಾದ ಹುಟ್ಟು ಹಾಕಲು ಯತ್ನಿಸಿದ್ದ ಬಗ್ಗೆ ಮಾಹಿತಿ ನೀಡಲಾಗಿದೆ. ವಿದ್ಯಾರ್ಥಿನಿಯರ ಹಿಂದೆ ಇರುವವರ ಷಡ್ಯಂತ್ರ ಎಂದು ರಘುಪತಿ ಭಟ್ ಈ ವಿವಾದದ ಬಗ್ಗೆ ಆರೋಪ ಮಾಡಿದ್ದಾರೆ.
ವಿದ್ಯಾರ್ಥಿನಿಯರು ಮುಗ್ಧರು. ಅವರ ಮೇಲೆ ಷಡ್ಯಂತ್ರ ನಡೆದಿದೆ ಎಂದು ಟಿವಿ9 ಗೆ ಶಾಸಕ ರಘುಪತಿ ಭಟ್ ಹೇಳಿಕೆ ನೀಡಿದ್ದು, ವಿವಾದವಾಗಬೇಕು ಎಂದು ಈ ವಿದ್ಯಾರ್ಥಿನಿಯರನ್ನ ಬಳಸಿಕೊಳ್ಳಲಾಗಿದೆ. ಈಗಲೂ ಅವರು ಕಾಲೇಜಿಗೆ ಬರಲಿ. ಅವರಿಗೆ ಯಾರ ಒತ್ತಡ, ಬೆದರಿಕೆ ಇದ್ದರೂ ಅದನ್ನು ನಾವು ನೋಡಿಕೊಳ್ಳುತ್ತೇವೆ. ಅವರಿಗೆ ಎಲ್ಲಾ ರೀತಿಯ ಶಿಕ್ಷಣದ ವ್ಯವಸ್ಥೆ ಮಾಡುತ್ತೇವೆ. ಅವರು ಕಾಲೇಜಿಗೆ ಬಂದು ವಿದ್ಯಾಭ್ಯಾಸ ಮಾಡಲಿ ಎಂದು ಹೇಳಿದ್ದಾರೆ.
ಕಳೆದ ಒಂದೆರಡು ತಿಂಗಳಿಂದ ವಿದ್ಯಾರ್ಥಿನಿಯರ ಮೇಲೆ ಕಾಣದ ಕೈಗಳಿಂದ ಷಡ್ಯಂತ್ರ ನಡೆದಿದೆ. ವಿದ್ಯಾರ್ಥಿನಿಯರಿಗೆ ಧಾರ್ಮಿಕ ಹಕ್ಕು ಬೇಕಿದ್ದರೆ ಅದನ್ನು ಕೇಳುವ ರೀತಿಯಲ್ಲಿ ಕೇಳುತ್ತಿದ್ದರು. ಡಿ.27ಕ್ಕೆ ಮನವಿಯನ್ನು ಕೊಟ್ಟು, ಡಿ.29 ಕ್ಕೆಲ್ಲಾ ವಿವಾದ ಶುರು ಮಾಡಿದ್ದಾರೆ. ಈ ಬಗ್ಗೆ ತಂದೆ ತಾಯಿಯಿಂದ ಕೂಡ ಮಾತನಾಡಿಸಿಲ್ಲ. ಆದ್ದರಿಂದ ಇದು ವಿವಾದ ಮಾಡುವ ಉದ್ದೇಶದಿಂದ ನಡೆದ ಹುನ್ನಾರ ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ.
ಇದನ್ನೂ ಓದಿ:
‘ಹಿಜಾಬಿನ ಮರೆಯಲ್ಲಿ ಕಣ್ಣೀರು ಕರೆಯದಿರು ಮಗಳೇ’; ರಂಗಕರ್ಮಿ ಪ್ರಸನ್ನ ಭಾವನಾತ್ಮಕ ಪತ್ರ