ಮಲ್ಪೆ ಬೀಚ್​ನಲ್ಲಿ ಸುಳಿಗೆ ಸಿಲುಕಿದ ಮೂವರು ಪ್ರವಾಸಿಗರು; ಓರ್ವ ಸಾವು, ಇಬ್ಬರು ಸುರಕ್ಷಿತ

| Updated By: ಕಿರಣ್ ಹನುಮಂತ್​ ಮಾದಾರ್

Updated on: Apr 18, 2024 | 7:40 PM

ಕರಾವಳಿಯಲ್ಲಿ ಹವಾಮಾನ ವೈಪರೀತ್ಯ ಉಂಟಾಗಿದೆ. ಮಳೆಯ ಮುನ್ಸೂಚನೆಯ ಬೆನ್ನಲ್ಲೇ ಕಡಲು ಆರ್ಭಟಿಸುತ್ತಿದೆ. ಅಲೆಗಳ ಆರ್ಭಟದ ಸುಳಿಗೆ ಮೂವರು ಪ್ರವಾಸಿಗರು ಸಿಲುಕಿದ ಘಟನೆ ಮಲ್ಪೆಯಲ್ಲಿ ನಡೆದಿದೆ. ಈ ಪೈಕಿ ಓರ್ವ ಮೃತನಾಗಿದ್ದರೆ, ಮತ್ತಿಬ್ಬರು ಚೇತರಿಸಿಕೊಂಡಿದ್ದಾರೆ.

ಮಲ್ಪೆ ಬೀಚ್​ನಲ್ಲಿ ಸುಳಿಗೆ ಸಿಲುಕಿದ ಮೂವರು ಪ್ರವಾಸಿಗರು; ಓರ್ವ ಸಾವು, ಇಬ್ಬರು ಸುರಕ್ಷಿತ
ಮಲ್ಪೆ ಬೀಚ್​ನಲ್ಲಿ ಸುಳಿಗೆ ಸಿಲುಕಿದ ಮೂವರು ಪ್ರವಾಸಿಗರು
Follow us on

ಉಡುಪಿ, ಏ.18: ಈ ಋತುಮಾನದಲ್ಲಿ ಮೊದಲ ಬಾರಿ ಕಡಲು ಅಬ್ಬರಿಸಿದ್ದು, ಮೊದಲ ಕಡಲಿನ ಅಬ್ಬರವೇ ಓರ್ವನನ್ನು ಬಲಿಪಡಿದಿದೆ. ಹೌದು, ಉಡುಪಿ ಜಿಲ್ಲೆಯ ಮಲ್ಪೆ ಬೀಚಿನಲ್ಲಿ(Malpe Beach) ಈ ದುರ್ಘಟನೆ ಸಂಭವಿಸಿದೆ. ದೂರದ ಹಾಸನದ ಬೇಲೂರಿನಿಂದ ಪ್ರವಾಸಕ್ಕೆ ಬಂದ ಕುಟುಂಬವೊಂದರ ಮೂವರು ನೀರಿಗೆ ಇಳಿದಿದ್ದರು. ಅಲೆಗಳ ಜೊತೆ ಆಟವಾಡುತ್ತಾ ತೀರದಿಂದ ಸಾಕಷ್ಟು ಮುಂದೆ ಹೋಗಿದ್ದರು. ಇದಕ್ಕಿದ್ದಂತೆ ಅಲೆಗಳ ಆರ್ಭಟ ಹೆಚ್ಚಿ, ಈ ಬಗ್ಗೆ ಅರಿವಿಲ್ಲದ ಮೂವರು ಪ್ರವಾಸಿಗರು ನೀರು ಪಾಲಾಗಿದ್ದರು. ಈ ವೇಳೆ ಬೀಚ್ ನಿರ್ವಹಣೆ ಮಾಡುವ, ಓಸಿಯನ್ ಅಡ್ವೆಂಚರ್ಸ್​ನವರು, ತಕ್ಷಣ ಜಾಗೃತರಾಗಿ ಕಾರ್ಯಚರಣೆ ನಡೆಸಿ, ಬೋಟುಗಳನ್ನು ಬಳಸಿಕೊಂಡು ಕಡಲಿಗಿಳಿದು ಇಬ್ಬರನ್ನು ರಕ್ಷಿಸಿದರು. ಆದರೆ, ಮೂರನೇ ವ್ಯಕ್ತಿ ನೀರಿನ ಅಲೆಗೆ ಸಿಲುಕಿರುವುದು ಅರಿವಿಗೆ ಬರುವುದು ತಡವಾಗಿದ್ದ ಹಿನ್ನಲೆ ಆತನನ್ನು ಮೇಲಕ್ಕೆತ್ತಿ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಯಿತು. ಅದಾಗಲೇ ಸಾಕಷ್ಟು ನೀರು ಕುಡಿದಿದ್ದ ಗಿರೀಶ್(26) ಎಂಬ ಪ್ರವಾಸಿಗ ಕೊನೆಯುಸಿರೆಳೆದಿದ್ದಾನೆ. ಇನ್ನುಳಿದ ಅನಂತ ಗೌಡ(42), ಸಂತೋಷ್ (27) ಪಾರಾಗಿದ್ದಾರೆ.

ಹಾಸನದ ಬೇಲೂರಿನಿಂದ ಎಂಟು ಮಂದಿಯ ಕುಟುಂಬ ಶೃಂಗೇರಿ ಮೂಲಕ ಮಲ್ಪೆ ಬೀಚ್​ಗೆ ಬಂದಿತ್ತು. ಈ ಪೈಕಿ 42 ವರ್ಷ ಪ್ರಾಯದ ಅನಂತ ಗೌಡ, 27 ವರ್ಷ ಪ್ರಾಯದ ಸಂತೋಷ್ ಹಾಗೂ 26 ವರ್ಷ ದ ಗಿರೀಶ್ ಎಂಬುವರು ನೀರಿನ ಸುಳಿಗೆ ಸಿಕ್ಕಿದರು. ಗಿರೀಶ್ ಮೃತರಾದರೆ ಮತ್ತೆ ಇಬ್ಬರು ಪ್ರಾಣಪಾಯದಿಂದ ಪಾರಾಗಿದ್ದಾರೆ. ಹವಾಮಾನ ವೈಪರಿತ್ಯ ಸಂಭವಿಸಿದಾಗ, ಕಡಲಿನ ಅಲೆಗಳು ಅಬ್ಬರಿಸುವುದು ಸಾಮಾನ್ಯ. ಸ್ಥಳೀಯವಾಗಿ ಇದನ್ನು ಮಾರಿಅಲೆ ಎಂದು ಕರೆಯುತ್ತಾರೆ. ಅಪಾಯದ ಅರಿವಿಲ್ಲದೆ ಪ್ರವಾಸಿಗರು, ನೀರಿಗಿಳಿದಾಗ ಇಂತಹ ದುರ್ಘಟನೆಗಳು ಪದೇಪದೇ ಸಂಭವಿಸುತ್ತಿದೆ.

ಇದನ್ನೂ ಓದಿ:ಕೊಡಗು: ನದಿಯಲ್ಲಿ ಈಜಲು ತೆರಳಿದ್ದ ಮೂವರು ನೀರುಪಾಲು; ಓರ್ವನ ಮೃತದೇಹ ಪತ್ತೆ

ಈ ಕುರಿತು ಎಷ್ಟೇ ಎಚ್ಚರಿಕೆಯ ಸೂಚನೆ ನೀಡಿದರೂ ಪ್ರವಾಸಿಗರು ಎಚ್ಚೆತ್ತುಕೊಳ್ಳದ ಕಾರಣ, ಸಾವು ನೋವು ಸಂಭವಿಸುತ್ತಿದೆ. ಸಾಮಾಜಿಕ ಕಾರ್ಯಕರ್ತ ಈಶ್ವರ ಮಲ್ಪೆ ಇಂದಿನ ದುರ್ಘಟನೆ ಸಂಭವಿಸಿದ ವೇಳೆ ಸಕಾಲದಲ್ಲಿ ಹಾಜರಿದ್ದು, ಆಂಬುಲೆನ್ಸ್ ಮೂಲಕ ನೀರುಪಾಲಾದ ಯುವಕರನ್ನು ಮಣಿಪಾಲಕ್ಕೆ ಕೊಂಡೊಯ್ದ ಪರಿಣಾಮ ಎರಡು ಜೀವಗಳು ಉಳಿದಿವೆ. ದುರಾದೃಷ್ಟವಶಾತ್ ಓರ್ವನನ್ನು ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ. ಇನ್ನು ಎರಡು ದಿನಗಳ ಕಾಲ ಮಳೆ ಹಾಗೂ ಅಲೆಗಳ ಆರ್ಭಟ ಮುಂದುವರೆಯುವ ಸಾಧ್ಯತೆ ಇದೆ. ಮಕ್ಕಳ ರಜೆ ಹಾಗೂ ವೀಕೆಂಡ್ ಮಸ್ತಿಯ ಕಾರಣಕ್ಕೆ ಕಡಲ ತೀರಗಳಿಗೆ ಬರುವ ರಾಜ್ಯದ ಇತರ ಮೂಲೆಗಳ ಪ್ರವಾಸಿಗರು ಎಚ್ಚರಿಕೆ ವಹಿಸುವುದು ಅಗತ್ಯ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ