ಪ್ರತ್ರೇಕ ಘಟನೆ: ಗಂಡ-ಹೆಂಡ್ತಿ ಜಗಳ ಕೊಲೆಯಲ್ಲಿ ಅಂತ್ಯ, ಪತ್ನಿಯನ್ನ ರಕ್ಷಿಸಲು ಹೋಗಿ ಪತಿ ನೀರುಪಾಲು
ಗಂಡ-ಹೆಂಡತಿ ನಡುವೆ ಮಾತಿನ ಚಕಮಕಿ ನಡೆದಿದೆ. ಬಳಿಕ ಬೆಂಗಳೂರಿನಿಂದ ಮಗ ಶಶಾಂಕ್ನನ್ನು ಕರೆಸಿಕೊಂಡ ಸವಿತಾ, ಇಬ್ಬರು ಸೇರಿಕೊಂಡು ರೀಪೀಸ್ ಪಟ್ಟಿಯಿಂದ ಉಮೇಶ್ ಮೇಲೆ ಹಲ್ಲೆ ಮಾಡಿದ್ದಾರೆ. ಪರಿಣಾಮ ಉಮೇಶ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಮಂಡ್ಯ, ಅ.20: ಗಂಡ-ಹೆಂಡತಿ ನಡುವೆ ಜಗಳ ನಡೆದು, ಕೊನೆಗೆ ತಾಯಿಯೊಟ್ಟಿಗೆ ಮಗನೂ ಸೇರಿಕೊಂಡು ಅಪ್ಪನನ್ನೇ ಕೊಂದ ಘಟನೆ ಮಂಡ್ಯ ಜಿಲ್ಲೆಯ ಮದ್ದೂರು(Maddur) ತಾಲ್ಲೂಕಿನ ಚಾಪುರದೊಡ್ಡಿ ಗ್ರಾಮದಲ್ಲಿ ನಡೆದಿದೆ. ಉಮೇಶ್ (45) ಮೃತ ದುರ್ದೈವಿ. ಇನ್ನು ಪತ್ನಿ ಸವಿತಾ ಮೂರು ತಿಂಗಳಿಂದ ಗಂಡನನ್ನು ತೊರೆದು ಬೆಂಗಳೂರಿನಲ್ಲಿ ಮಗನ ಜೊತೆ ವಾಸವಾಗಿದ್ದಳು. ನಿನ್ನೆ(ಅ.19) ರಾತ್ರಿ ಪಿತೃಪಕ್ಷ ಹಬ್ಬ ಮಾಡಲು ಊರಿಗೆ ಚಾಪುರದೊಡ್ಡಿ ಗ್ರಾಮಕ್ಕೆ ಬಂದಿದ್ದರು. ಈ ವೇಳೆ ದುರ್ಘಟನೆ ನಡೆದಿದೆ.
ಹೌದು, ಪತಿ ಉಮೇಶ್ ಅವರು ಪತ್ನಿ ಸವಿತಾ ಅವರನ್ನು ಮನೆಯೊಳಗೆ ಸೇರಿಸಿಲ್ಲ, ಈ ವಿಚಾರಕ್ಕೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಬಳಿಕ ಬೆಂಗಳೂರಿನಿಂದ ಮಗ ಶಶಾಂಕ್ನನ್ನು ಕರೆಸಿಕೊಂಡ ಸವಿತಾ, ಇಬ್ಬರು ಸೇರಿಕೊಂಡು ರೀಪೀಸ್ ಪಟ್ಟಿಯಿಂದ ಉಮೇಶ್ ಮೇಲೆ ಹಲ್ಲೆ ಮಾಡಿದ್ದಾರೆ. ಪರಿಣಾಮ ಉಮೇಶ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಇನ್ನು ಘಟನೆ ನಂತರ ಪತ್ನಿ ಸವಿತಾ, ಮಗ ಶಶಾಂಕ್ ಪರಾರಿಯಾಗಿದ್ದು, ಬೆಸಗರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:ಬೆಂಗಳೂರಿನ ನಾಗಸಂದ್ರ ಬಳಿ ನಡೆದ ಕಿಡ್ನಾಪ್ ಪ್ರಕರಣಕ್ಕೆ ಟ್ವಿಸ್ಟ್; ಕೊಲೆ ಹಿಂದೆ ಇದೆ ಪ್ರೇಮ ಕಹಾನಿ
ಬಟ್ಟೆ ತೊಳೆಯುವಾಗ ಕಾಲು ಜಾರಿ ನಾಲೆಗೆ ಬಿದ್ದು ದಂಪತಿ ಸಾವು
ಮೈಸೂರು: ಜಿಲ್ಲೆಯ ನಂಜನಗೂಡು ತಾಲೂಕಿನ ಹರತಲೆಯಲ್ಲಿ ಬಟ್ಟೆ ತೊಳೆಯುವಾಗ ಆಕಸ್ಮಿಕವಾಗಿ ನಾಲೆಗೆ ಬಿದ್ದು ದಂಪತಿ ಸಾವನ್ನಪ್ಪಿದ ಘಟನೆ ನಡೆದಿದೆ. ಹರತಲೆ ಗ್ರಾಮದ ನಿವಾಸಿಗಳಾದ ಶಂಕರ್ ಹಾಗೂ ಬೇಬಿ ದಂಪತಿ ಬಟ್ಟೆ ತೊಳೆಯಲು ನಾಲೆಗೆ ತೆರಳಿದ್ದಾರೆ. ಈ ವೇಳೆ ಕಾಲು ಜಾರಿ ನಾಲೆಗೆ ಬಿದ್ದ ಪತ್ನಿಯನ್ನು ರಕ್ಷಿಸಲು ನಾಲೆಗೆ ಇಳಿದಿದ್ದ ಶಂಕರ್ ಕೂಡ ಕೊನೆಯುಸಿರೆಳೆದಿದ್ದಾನೆ. ಕೊಚ್ಚಿ ಹೋದ ಮೃತದೇಹಕ್ಕಾಗಿ ಅಗ್ನಿಶಾಮಕ ದಳದವರು ಹುಡುಕಾಟ ನಡೆಸಿದ್ದು, ಇದೀಗ ಕಳಲೆ ಗ್ರಾಮದ ಬಳಿ ಮೃತದೇಹ ಪತ್ತೆಯಾಗಿದೆ. ಈ ಕುರಿತು ನಂಜನಗೂಡು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:45 am, Fri, 20 October 23