ಉಡುಪಿ: ಉಡುಪಿಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಶ್ರೀಕೃಷ್ಣ ಮಠದ ಕೃಷ್ಣ ದೇವರಿಗೆ ಸಮರ್ಪಿಸಲು ಕಾಶೀ ಮಠ ಸಂಸ್ಥಾನದ ಶ್ರೀ ಸಂಯಮೀಂದ್ರತೀರ್ಥ ಶ್ರೀಪಾದರು ಕೊಡಮಾಡಿದ ಪಚ್ಚೆ ಕಲ್ಲಿನ ಸ್ವರ್ಣ ಹಾರವನ್ನು ಶುಕ್ರವಾರ ಗೌಡ ಸಾರಸ್ವತ ಸಮಾಜದ ದೇವಸ್ಥಾನಗಳ ಪ್ರಮುಖರು ಹಸ್ತಾಂತರಿಸಿದರು. ಪರ್ಯಾಯ ಅದಮಾರು ಮಠದ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಪಚ್ಚೆ ಕಲ್ಲಿನ ಸ್ವರ್ಣ ಹಾರವನ್ನು ಸ್ವೀಕರಿಸಿದರು.
ಪ್ರಪಂಚದ ಎಲ್ಲಾ ವಸ್ತುಗಳೂ ಭಗವಂತನ ಕೊಡುಗೆಗಳಾಗಿವೆ ಎಂಬ ಅನುಸಂಧಾನದ ಮೂಲಕ ದೇವರಿಗೆ ವಸ್ತುಗಳ ಸಮರ್ಪಣೆಯಾಗಬೇಕು ಎಂದು ಪರ್ಯಾಯ ಅದಮಾರು ಮಠದ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಆಶೀರ್ವಚಿಸಿದರು. ಶ್ರೀಕೃಷ್ಣನ ವಿಗ್ರಹದಲ್ಲಿ ದೇವರನ್ನು ನೋಡಿ ಈ ಹಾರವನ್ನು ಶ್ರೀಸಂಯಮೀಂದ್ರತೀರ್ಥ ಶ್ರೀಪಾದರು ಸಮರ್ಪಿಸುತ್ತಿದ್ದಾರೆ ಎಂದು ಅವರು ತಿಳಿಸಿದರು.
ಶ್ರೀಕೃಷ್ಣನ ಅಂತರಂಗದ ಭಕ್ತನಾಗಿದ್ದ ಉದ್ದವನಿಗೆ ಶ್ರೀಕೃಷ್ಣನ ಅಗಲುವಿಕೆ ತಾಳಲಾರದೆ ಹೋಯಿತು. ಆಗ ಶ್ರೀಕೃಷ್ಣ ತಾನು ಗ್ರಂಥದಲ್ಲಿ (ಶ್ರೀಮದ್ಭಾಗವತ) ಮತ್ತು ಜ್ಞಾನಿಗಳಲ್ಲಿರುವುದಾಗಿ ತಿಳಿಸಿದ. ಜ್ಞಾನವೆಂದರೆ ಯಾವುದನ್ನು ತಿಳಿದುಕೊಂಡರೆ ಭಗವಂತನನ್ನು ತಿಳಿಯಲಾಗುತ್ತದೋ ಅದು. ಮಧ್ವಾಚಾರ್ಯರು ಸ್ವತಂತ್ರ ತತ್ವ ಮತ್ತು ಅಸ್ವತಂತ್ರ ತತ್ವ ಎಂಬೆರಡು ಚಿಂತನೆಗಳನ್ನು ತಿಳಿಸಿದ್ದಾರೆ. ಸ್ವತಂತ್ರ ತತ್ವವೆಂದರೆ ಭಗವಂತನ ಅರಿವು. ಉಳಿದೆಲ್ಲವೂ ಭಗವಂತನ ಅಧೀನವಾದ ಅಸ್ವತಂತ್ರ ತತ್ವ. ಮಧ್ವಾಚಾರ್ಯರು ಭಗವಂತನ ವಿಶೇಷ ಸನ್ನಿಧಾನವಿರುವ ಶ್ರೀಕೃಷ್ಣನನ್ನು ಪ್ರತಿಷ್ಠಾಪಿಸಿ ಸಾಧಕರಿಗೆ ಅನುವು ಮಾಡಿಕೊಟ್ಟರು ಎಂದು ಅದಮಾರು ಶ್ರೀಪಾದರು ನುಡಿದರು.
ಶ್ರೀಸಂಯಮೀಂದ್ರತೀರ್ಥ ಶ್ರೀಪಾದರು ಇತ್ತೀಚಿಗೆ ಶ್ರೀಕೃಷ್ಣಮಠಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದ ದ್ಯೋತಕವಾಗಿ ಈ ಹಾರವನ್ನು ಶ್ರೀಕೃಷ್ಣದೇವರಿಗೆ ಸಮರ್ಪಿಸಲು ಕೊಟ್ಟಿದ್ದಾರೆಂದು ಜಿ.ಎಸ್.ಬಿ ದೇವಸ್ಥಾನಗಳ ಒಕ್ಕೂಟದ ಉಪಾಧ್ಯಕ್ಷ ದಿನೇಶ್ ಕಾಮತ್ ತಿಳಿಸಿದರು.
ಈ ಸಂದರ್ಭದಲ್ಲಿ ಶಾಸಕರಾದ ಶ್ರೀ ಕೆ ರಘುಪತಿ ಭಟ್, ನಗರಾಭಿವೃದ್ಧಿ ಪ್ರಾಧಿಕಾರದ ನಿಕಟಪೂರ್ವ ಅಧ್ಯಕ್ಷ ರಾಘವೇಂದ್ರ ಕಿಣಿ, ಕೋಟೇಶ್ವರ ಪಟ್ಟಾಾಭಿರಾಮಚಂದ್ರ ದೇವಸ್ಥಾನದ ಆಡಳಿತೆ ಮೊಕ್ತೇಸರ ಶ್ರೀಧರ ಕಾಮತ್, ಮಂಜೇಶ್ವರ ಅನಂತೇಶ್ವರ ದೇವಸ್ಥಾನದ ಆಡಳಿತೆ ಮೊಕ್ತೇಸರ ದಿನೇಶ್ ಕಾಮತ್, ಮಂಗಳೂರಿನ ನರೇಶ ಶೆಣೈ, ಮೂಲ್ಕಿ ವೆಂಕಟರಮಣ ದೇವಸ್ಥಾನದ ಮೊಕ್ತೇಸರ ಅತುಲ್ ಕುಡ್ವ, ಸೋಮೇಶ್ವರ ವೆಂಕಟರಮಣ ದೇವಸ್ಥಾನದ ಮೊಕ್ತೇಸರರಾದ ರಾಘವೇಂದ್ರ ಭಕ್ತ, ಮಾಧವ ಕಾಮತ್, ಉಡುಪಿ ವೆಂಕಟರಮಣ ದೇವಸ್ಥಾನದ ಆಡಳಿತೆ ಮೊಕ್ತೇಸರ ಪಿ. ವಿಟ್ಠಲದಾಸ ಶೆಣೈ, ಮೊಕ್ತೇಸರ ಎಂ. ವಿಶ್ವನಾಥ ಭಟ್ ಮೊದಲಾದವರು ಉಪಸ್ಥಿತರಿದ್ದರು.
ಇದನ್ನೂ ಓದಿ: ಹಿಜಾಬ್ ಧರಿಸುವುದಕ್ಕೆ ಅವಕಾಶ ಕೊಡಲು ವಿದ್ಯಾರ್ಥಿನಿಯರ ಮನವಿ; ಉಡುಪಿಯ ಸರ್ಕಾರಿ ಕಾಲೇಜೊಂದರಲ್ಲಿ ಘಟನೆ