ಉಡುಪಿ: ಹಿಜಾಬ್ ಧರಿಸುವುದಕ್ಕೆ ಅವಕಾಶ ಮಾಡಿಕೊಡಲು ವಿದ್ಯಾರ್ಥಿಗಳು ಮನವಿ ಮಾಡಿದ ಘಟನೆ ಉಡುಪಿಯ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ಇಲ್ಲಿ ನಡೆದಿದೆ. ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯರು ಹಿಜಾಬ್ ಧರಿಸಲು ಅವಕಾಶ ಮಾಡಿಕೊಡುವಂತೆ ಮನವಿ ಮಾಡಿದ್ದಾರೆ. ಇಲ್ಲಿನ ಪ್ರಾಂಶುಪಾಲರು ಹಿಜಾಬ್ ಧರಿಸದಂತೆ ಆದೇಶ ಮಾಡಿರುವುದು ತಿಳಿದುಬಂದಿದೆ. ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ರುದ್ರೇಗೌಡ ಎಂಬವರು ಹಿಜಾಬ್ ಧರಿಸದಂತೆ ಹೇಳಿದ್ದರು ಎಂದು ಮಾಹಿತಿ ಲಭ್ಯವಾಗಿದೆ.
ಹಿಜಾಬ್ ಹಾಕಿ ಬರುವ ವಿದ್ಯಾರ್ಥಿನಿಯರಿಗೆ ತರಗತಿ ಪ್ರವೇಶ ನಿರಾಕರಣೆ ಮಾಡಿ ಕಾಲೇಜು ಪ್ರಾಂಶುಪಾಲರಾದ ರುದ್ರೆಗೌಡ ಸೂಚನೆ ನೀಡಿದ್ದರು. ಈವರೆಗೆ ಹಿಜಾಬ್ ಹಾಕಿಕೊಂಡು ವಿದ್ಯಾರ್ಥಿನಿಯರು ತರಗತಿಗೆ ಬರುತ್ತಿರಲಿಲ್ಲ. ಕಳೆದ ಮೂರು ದಿನಗಳಿಂದ ಕೆಲವರು ಹಿಜಾಬ್ ಧರಿಸುತ್ತಿದ್ದಾರೆ. 60 ಮುಸ್ಲಿಮ್ ವಿದ್ಯಾರ್ಥಿನಿಯರಲ್ಲಿ ಕೆಲವು ಮಂದಿ ಮಾತ್ರ ಹಿಜಾಬ್ ಹಾಕಿಕೊಂಡು ಬರುತ್ತಿದ್ದಾರೆ. ಈ ಸಂಬಂಧ ಮನೆಯವರನ್ನು ಕರೆದು ಮಾತುಕತೆ ಮಾಡಿದ್ದೇವೆ. ಅವರೆಲ್ಲ ಅರ್ಥ ಮಾಡಿಕೊಂಡು ಒಪ್ಪಿದ್ದಾರೆ ಎಂದು ಪ್ರಾಂಶುಪಾಲರಿಂದ ಮಾಹಿತಿ ಲಭ್ಯವಾಗಿದೆ.
ಈ ಮಧ್ಯೆ, ವಿದ್ಯಾರ್ಥಿಗಳು, ನಮಗೆ ಕ್ಲಾಸ್ ಒಳಗೆ ಕೂರಲು ಬಿಡುತ್ತಿಲ್ಲ ಎಂದು ಹೇಳಿದ್ದಾರೆ. ಪೋಷಕರು ಬಂದು ಮಾತನಾಡಿದರೂ ನಮ್ಮ ಸಮಸ್ಯೆ ಬಗೆಹರಿದಿಲ್ಲ. ನಮ್ಮ ಕಲಿಕೆಗೆ ಇದರಿಂದ ತೊಂದರೆಯಾಗುತ್ತಿದೆ ಎಂದು ವಿದ್ಯಾರ್ಥಿನಿಯರು ದೂರಿದ್ದಾರೆ.
ಇದನ್ನೂ ಓದಿ: ಉಡುಪಿ ಕೃಷ್ಣಮಠದ ಸ್ವಾಧೀನಕ್ಕೆ ಯತ್ನಿಸಿತ್ತು ಸಿದ್ದರಾಮಯ್ಯ ಸರ್ಕಾರ: ಪ್ರಮೋದ್ ಮಧ್ವರಾಜ್