ಉಡುಪಿ: ಸಾವು ಯಾವಾಗ ಹೇಗೆ ಬರುತ್ತೆ ಅಂತಾ ಹೇಳೋಕ್ಕಾಗಲ್ಲ. ಇದಕ್ಕೆ ಉದಾಹರಣೆ ಉಡುಪಿಯಲ್ಲಿ ನಡೆದ ದುರ್ಘಟನೆ. ಹೌದು ಕಾರಿನಲ್ಲಿ ಹೋಗುತ್ತಿದ್ದ ವ್ಯಕ್ತಿಯೋರ್ವ, ಕಾರು ಕೆರೆಗೆ ಬಿದ್ದು ಸಾವನ್ನಪ್ಪಿದ ಘಟನೆ ಉಡುಪಿಯ ಬಾರ್ಕೂರಿನಲ್ಲಿ ಸಂಭವಿಸಿದೆ.
ಉಡುಪಿ ಜಿಲ್ಲೆ ಬ್ರಹ್ಮಾವರ ತಾಲೂಕಿನ ಬಾರ್ಕೂರು ಗ್ರಾಮದ ಪ್ಲೈವುಡ್ ಅಂಗಡಿ ಮಾಲೀಕ ಸಂತೋಷ ಶೆಟ್ಟಿ ಮೃತ ದುರ್ದೈವಿ. ಬಾರ್ಕೂರಿನಿಂದ ಸಾಯ್ಬರ ಕಟ್ಟೆ ಮಾರ್ಗದಲ್ಲಿ ಕಾರಿನಲ್ಲಿ ಹೋಗುತ್ತಿದ್ದಾಗ ಚೌಳಿಕೆರೆ ಬಳಿ ನಿಂಯತ್ರಣ ತಪ್ಪಿದ ಕಾರು ಪಕ್ಕದ ಕೆರೆಯಲ್ಲಿ ಬಿದ್ದಿದೆ. ತಕ್ಷಣವೇ ಸ್ಥಳದಲ್ಲಿದ್ದ ಕೆಲವರು ಅವರನ್ನು ರಕ್ಷಿಸುವ ಪ್ರಯತ್ನ ಮಾಡಿದ್ರು. ಆದರೆ ಅಷ್ಟರೊಳಗಾಗಿ ನೀರಲ್ಲಿ ಮುಳುಗಿದ್ದರಿಂದ ಅವರ ಪ್ರಾಣಪಕ್ಷಿ ಹಾರಿಹೋಗಿತ್ತು.
ರಸ್ತೆಗೆ ಹತ್ತಿಕೊಂಡೇ ಇರುವ ಚೌಳಿಕೆರೆಗೆ ಯಾವುದೇ ತಡೆಗೋಡೆಗಳು ಇಲ್ಲ. ಜೊತೆಗೆ ಈ ಕೆರೆ ರಸ್ತೆಯ ತಿರುವಿನಲ್ಲಿದೆ. ಹೀಗಾಗಿ ಕಾರು ಚಾಲನೆ ತಪ್ಪಿದಾಗ ಇದ್ದ ವೇಗದಲ್ಲಿಯೇ ಕೆರೆಗೆ ಬಿದ್ದಿದೆ. ಈ ಘಟನೆಯ ಸಂಬಂಧ ಉಡುಪಿ ಜಿಲ್ಲೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸಿದ್ದಾರೆ.