ಉಡುಪಿ: ಅಂತೂ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಚುರುಕು ಪಡೆಯಲು ಪ್ರಧಾನಿ ಮೋದಿಯೇ ಬರಬೇಕಾಯ್ತು!

ಪ್ರಧಾನಿ ಮೋದಿ ನವೆಂಬರ್ 28 ರಂದು ಉಡುಪಿ ಕೃಷ್ಣ ಮಠಕ್ಕೆ ಭೇಟಿ ನೀಡುವ ಹಿನ್ನೆಲೆಯಲ್ಲಿ ನಗರದ ರಸ್ತೆ ದುರಸ್ತಿ ಕಾರ್ಯ ವೇಗ ಪಡೆದಿದೆ. ಮಲ್ಪೆ-ಮೊಳಕಾಲ್ಮೂರು ಹೆದ್ದಾರಿ ಕಾಮಗಾರಿಯೂ ಚುರುಕುಗೊಂಡಿದೆ. ಆದರೆ, ಗಣ್ಯರ ಭೇಟಿಗಾಗಿ ಮಾತ್ರ ರಸ್ತೆ ದುರಸ್ತಿ ಮಾಡುವುದನ್ನು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ. ಮಳೆಯಿಂದ ಹದಗೆಟ್ಟ ಗ್ರಾಮೀಣ ರಸ್ತೆಗಳ ಬಗ್ಗೆ ಜಿಲ್ಲಾಡಳಿತದ ನಿರ್ಲಕ್ಷ್ಯದ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಉಡುಪಿ: ಅಂತೂ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಚುರುಕು ಪಡೆಯಲು ಪ್ರಧಾನಿ ಮೋದಿಯೇ ಬರಬೇಕಾಯ್ತು!
ನವೆಂಬರ್ 28ಕ್ಕೆ ಉಡುಪಿಯ ಕೃಷ್ಣ ಮಠಕ್ಕೆ ಭೇಟಿ ನೀಡಲಿರುವ ಪ್ರಧಾನಿ ಮೋದಿ
Updated By: Ganapathi Sharma

Updated on: Nov 14, 2025 | 12:31 PM

ಉಡುಪಿ, ನವೆಂಬರ್ 14: ಪ್ರಧಾನಿ ನರೇಂದ್ರ ಮೋದಿ (Narendra Modi) ನವೆಂಬರ್ 28ಕ್ಕೆ ಉಡುಪಿಯ (Udupi) ಕೃಷ್ಣ ಮಠಕ್ಕೆ ಭೇಟಿ ಕೊಡಲಿದ್ದಾರೆ. ಈ ಹಿನ್ನೆಲೆಯಲ್ಲಿ ನಗರದ ರಸ್ತೆಗಳ ದುರಸ್ತಿ ಕಾರ್ಯ ಜೋರಾಗಿದೆ. ಉಡುಪಿಗೆ ಬರಲಿರುವ ಪ್ರಧಾನಿ ಮೋದಿ, ಆದಿ ಉಡುಪಿಯ ಹೆಲಿಪ್ಯಾಡ್​ನಲ್ಲಿ‌ ಲ್ಯಾಂಡಿಂಗ್ ಮಾಡುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ, ಈವರೆಗೆ ಆಮೆಗತಿಯಲ್ಲಿ ಸಾಗುತ್ತಿದ್ದ ಮಲ್ಪೆ -ಮೊಳಕಾಲ್ಮೂರು ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಚುರುಕುಗೊಂಡಿದೆ. ಕರಾವಳಿ ಬೈಪಾಸ್ ಬಳಿ ಎಡಬಿಡದೆ ರಸ್ತೆ ದುರಸ್ತಿ ಕಾರ್ಯ ನಡೆಯುತ್ತಿದೆ. ಕೃಷ್ಣಮಠದವರೆಗೂ ರಾಷ್ಟ್ರೀಯ ಹೆದ್ದಾರಿಯಲ್ಲೇ ವಾಹನ ಸಂಚಾರಿಸಬೇಕಾಗಿದ್ದು, ಮಲ್ಪೆ ಮೊಳಕಾಲ್ಮೂರು ರಸ್ತೆ ಕಾಮಗಾರಿ ವೇಗ ಪಡೆದುಕೊಂಡಿದೆ.

ಇದೇ ವಿಚಾರ ಇದೀಗ ಜಿಲ್ಲೆಯ ಜನರ ಗಮನ ಸೆಳೆದಿದೆ. ಗಣ್ಯರು ಬರುವಾಗ ರಸ್ತೆ ದುರಸ್ತಿಯಾಗುತ್ತದೆ, ಆದರೆ ಗ್ರಾಮೀಣ ಭಾಗದ ಇತರ ರಸ್ತೆಗಳ ಪಾಡೇನು ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.

ಉಡುಪಿ ಜಿಲ್ಲೆಯಲ್ಲಿ ಈ ಬಾರಿ ದೇಶದಲ್ಲೇ ಅತಿ ಹೆಚ್ಚು ಮಳೆ ಸುರಿದಿದೆ. ಮೇ 20 ರಿಂದ ನಿರಂತರ ಮಳೆಯಾದ ಕಾರಣ ರಾಷ್ಟ್ರೀಯ ಹೆದ್ದಾರಿ ಮಾತ್ರವಲ್ಲ, ಲೋಕೋಪಯೋಗಿ ಹಾಗೂ ಗ್ರಾಮ ಪಂಚಾಯತ್ ರಸ್ತೆಗಳು ಕೂಡ ಸಂಚರಿಸಲಾರದಷ್ಟು ಹದಗೆಟ್ಟಿವೆ. ಈ ಬಗ್ಗೆ ಎಷ್ಟೇ ಕೇಳಿಕೊಂಡರು ಜಿಲ್ಲಾಡಳಿತ ಸ್ಪಂದಿಸಿಲ್ಲ. ಅಪಘಾತಗಳು ಹೆಚ್ಚಾಗಿದ್ದು, ಮೂಳೆಮುರಿತ, ವಾಹನ ಜಖಂ ಮಾಮೂಲಾಗಿದೆ. ಈಗ ಮಳೆಯ ಪ್ರಮಾಣ ಇಳಿಕೆಯಾಗಿದೆ, ಇನ್ನಾದರೂ ರಸ್ತೆ ಕಾಮಗಾರಿ ಮಾಡಬಾರದಾ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ. ಗಣ್ಯರು ಬರುವ ರಸ್ತೆಗಳಿಗೆ ಸಿಗುವ ದುರಸ್ತಿ ಭಾಗ್ಯ, ನಮ್ಮೂರಿನ ರಸ್ತೆಗಳಿಗೆ ಸಿಗುವುದು ಯಾವಾಗ ಎಂದು ಕೇಳುತ್ತಿದ್ದಾರೆ.

ಮಳೆ ಹಾನಿ ಪರಿಹಾರಕ್ಕೆ ಸಾಕಷ್ಟು ಹಣ ಇದೆ ಎಂದು ಜಿಲ್ಲಾಡಳಿತ ಹೇಳುತ್ತಿದೆ. ಆದರೆ ರಸ್ತೆ ಮಾತ್ರ ದುರಸ್ತಿ ಆಗುತ್ತಿಲ್ಲ, ಹೀಗ್ಯಾಕೆ ಎಂಬುದೇ ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.

ಪ್ರಧಾನಿ ಮೋದಿ ಉಡುಪಿ ಭೇಟಿಗೆ ಕಾರಣವೇನು?

ಉಡುಪಿ ಶ್ರೀಕೃಷ್ಣ ಮಠದ ಪರ್ಯಾಯ ಪುತ್ತಿಗೆ ಮಠದ ವತಿಯಿಂದ ನವೆಂಬರ್ 8 ರಿಂದ ಡಿಸೆಂಬರ್ 7 ರ ವರೆಗೆ ಬೃಹತ್ ಗೀತೋತ್ಸವ ನಡೆಯುತ್ತಿದೆ. ಈ ಕಾರ್ಯಕ್ರಮದ ಅಂಗವಾಗಿ ಪ್ರಧಾನಿಯವರು ಮಠಕ್ಕೆ ಭೇಟಿ ನೀಡಲಿದ್ದಾರೆ ಎಂದು ಪರ್ಯಾಯ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಶ್ರೀಪಾದರು ಇತ್ತೀಚೆಗೆ ತಿಳಿಸಿದ್ದಾರೆ.

ಇದನ್ನೂ ಓದಿ: ಭಕ್ತರೇ ಎಚ್ಚರ: ಕೊಲ್ಲೂರು ಮೂಕಾಂಬಿಕಾ ದೇಗುಲದ ಹೆಸರಿನಲ್ಲಿ ನಕಲಿ ವೆಬ್​ಸೈಟ್ ತೆರೆದು ವಂಚಿಸ್ತಿದ್ದಾರೆ ಸೈಬರ್ ವಂಚಕರು

ಕೃಷ್ಣ ಮಠದ ಸುವರ್ಣ ಮುಖಮಂಟಪ ಮತ್ತು ಕನಕನ ಕಿಂಡಿಯ ಸ್ವರ್ಣ ಕವಚವನ್ನು ಲೋಕಾರ್ಪಣೆಗೊಳಿಸಲಿರುವ ಪ್ರಧಾನಿ ಮೋದಿ ನಂತರ ಗೀತಾ ಮಂದಿರಕ್ಕೆ ಭೇಟಿ ನೀಡಲಿದ್ದಾರೆ ಎಂದು ಸುಗುಣೇಂದ್ರ ತೀರ್ಥ ಶ್ರೀಪಾದರು ತಿಳಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ