ಶಿಕ್ಷಕರ ನಿರ್ಲಕ್ಷ್ಯಕ್ಕೆ ಒಂದನೇ ತರಗತಿ ವಿದ್ಯಾರ್ಥಿನಿಯ ಬೆರಳುಗಳೇ ಕಟ್! ಬಿಇಓ ಸೇರಿ ನಾಲ್ವರ ವಿರುದ್ಧ ಎಫ್ಐಆರ್
ತುಮಕೂರು ಗ್ರಾಮಾಂತರ ಸರ್ಕಾರಿ ಶಾಲೆಯಲ್ಲಿ ಬಿಸಿಯೂಟದ ವೇಳೆ ವಿದ್ಯಾರ್ಥಿನಿ ಬೆರಳು ಕಳೆದುಕೊಂಡ ದುರಂತ ಸಂಭವಿಸಿದೆ. ಶಿಕ್ಷಕರು ನಿರ್ಲಕ್ಷ್ಯದಿಂದ ಬಾಲಕಿಗೆ ಪ್ರಥಮ ಚಿಕಿತ್ಸೆ ನೀಡದೆ ಮನೆಗೆ ಕಳುಹಿಸಿದ್ದು, ಕತ್ತರಿಸಿದ ಬೆರಳುಗಳು ಲಭ್ಯವಾಗಿಲ್ಲ ಎಂದು ಪೋಷಕರು ಆರೋಪಿಸಿದ್ದಾರೆ. ಬಿಇಒ ಸೇರಿ ನಾಲ್ವರ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ಸಂತ್ರಸ್ತ ವಿದ್ಯಾರ್ಥಿನಿಗೆ ನ್ಯಾಯ ದೊರಕಿಸಿಕೊಡುವಂತೆ ಆಗ್ರಹಿಸಲಾಗಿದೆ.

ತುಮಕೂರು, ಫೆಬ್ರವರಿ 13: ಜಿಲ್ಲೆಯ ತುಮಕೂರು (Tumkuru) ಗ್ರಾಮಾಂತರ ಪ್ರದೇಶದಲ್ಲಿ ಸರ್ಕಾರಿ ಶಾಲೆಯಲ್ಲಿ ನಡೆದ ದುರಂತ ಘಟನೆ ಪೋಷಕರಲ್ಲಿ ಆತಂಕ ಮೂಡಿಸಿದೆ. ಮಧ್ಯಾಹ್ನದ ಬಿಸಿಯೂಟ ಸಮಯದಲ್ಲಿ ಒಂದನೇ ತರಗತಿಯ ವಿದ್ಯಾರ್ಥಿನಿ ಚಿನ್ಮಯಿದೇವಿ ಬಲಗೈಯ ಎರಡು ಬೆರಳುಗಳನ್ನು ಕಳೆದುಕೊಂಡ ಘಟನೆ ಇದೇ ತಿಂಗಳ 9ರಂದು ಗೂಳೂರು ಗ್ರಾಮದ ಸರ್ಕಾರಿ ಶಾಲೆಯಲ್ಲಿ ನಡೆದಿದ್ದು, ಬಾಲಕಿಯ ಪೋಷಕರು ಆಕ್ರೋಶ ಹೊರಹಾಕಿದ್ದಾರೆ.
ಇನ್ನೋರ್ವ ವಿದ್ಯಾರ್ಥಿನಿ ಬಾಗಿಲು ತಳ್ಳಿದ ಆರೋಪ
ಮಧ್ಯಾಹ್ನ ಸುಮಾರು ಒಂದು ಗಂಟೆ ವೇಳೆ ಬಿಸಿಯೂಟಕ್ಕಾಗಿ ಕ್ಯೂನಲ್ಲಿ ನಿಂತಿದ್ದ ಬಾಲಕಿ ಮೂರನೇ ತರಗತಿ ಕೊಠಡಿಯ ಬಾಗಿಲಿಗೆ ಕೈ ಇಟ್ಟುಕೊಂಡಿದ್ದಾಗ, ಮತ್ತೊಬ್ಬ ವಿದ್ಯಾರ್ಥಿ ಬಾಗಿಲು ತಳ್ಳಿದ ಪರಿಣಾಮ ಆಕೆಯ ಬಲಗೈಯ ಎರಡು ಬೆರಳುಗಳು ಕಟ್ ಆಗಿವೆ ಎನ್ನಲಾಗಿದೆ. ಘಟನೆ ನಂತರ ಶಿಕ್ಷಕರು ಸಮರ್ಪಕ ಚಿಕಿತ್ಸೆ ನೀಡದೆ, ಗಾಯಗೊಂಡ ಸ್ಥಳಕ್ಕೆ ನೀರು ಸುರಿದು ಬ್ಯಾಂಡೇಜ್ ಹಾಕಿದ್ದಾರೆ ಎಂದು ಪೋಷಕರು ಆರೋಪ ಮಾಡಿದ್ದಾರೆ. ಇದಲ್ಲದೆ ಬಾಲಕಿಯ ಪೋಷಕರಿಬ್ಬರೂ ಗಾರೆ ಕೆಲಸ ಮಾಡುವವರಾಗಿದ್ದು, ಶಿಕ್ಷಕರಿಗೆ ಘಟನೆಯ ಬಗ್ಗೆ ಕೇಳಿದಾಗ ನಿರ್ಲಕ್ಷ್ಯ ತೋರಿದ್ದಲ್ಲದೆ ಪೋಷಕರಿಗೆ 2000 ರೂ.ಗಳನ್ನು ಫೋನ್ ಪೇ ಮೂಲಕ ಕಳುಹಿಸಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ ಹೊಸಕೋಟೆ: ಭೀಕರ ಸರಣಿ ಅಪಘಾತಕ್ಕೆ ಕಾರಣವಾಯ್ತು ಪಿಯು ವಿದ್ಯಾರ್ಥಿಗಳ ಜಾಲಿ ರೈಡ್! ಲಾಸ್ಟ್ ಡ್ರೈವ್ ಆದ ಲಾಂಗ್ ಡ್ರೈವ್
ನ್ಯಾಯ ಕೊಡಿಸುವಂತೆ ಪೋಷಕರ ಆಗ್ರಹ
ಪೋಷಕರು ಮಗಳನ್ನು ಜಿಲ್ಲಾ ಆಸ್ಪತ್ರೆಗೆ ಕರೆದೊಯ್ದಾಗ ವೈದ್ಯರು ಕಟ್ ಆದ ಬೆರಳುಗಳನ್ನು ತರಲು ಸೂಚಿಸಿದ್ದರು. ಆಗ ಮಾತ್ರ ಬೆರಳುಗಳನ್ನು ಮೊದಲಿಂತೆ ಕೂಡಿಸಬಹುದೆಂದು ಹೇಳಿದ್ದರು. ಆದರೆ ಶಿಕ್ಷಕರನ್ನು ಕೇಳಿದಾಗ ಶಾಲೆಯಲ್ಲಿ ಬಾಲಕಿಯ ಬೆರಳುಗಳು ಲಭ್ಯವಾಗಿಲ್ಲ ಎಂದು ಪೋಷಕರು ಆರೋಪಿಸಿದ್ದಾರೆ. ಈ ಕುರಿತು ಬಿಇಓ ಹನುಮಂತಪ್ಪ, ಮುಖ್ಯ ಶಿಕ್ಷಕ ನಾಗೇಶ್, ಶಿಕ್ಷಕಿ ರೇಣುಕಮ್ಮ ಹಾಗೂ ಸಿಆರ್‌ಪಿ ವೆಂಕಟೇಶ್ ವಿರುದ್ಧ ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಘಟನೆಗೆ ಸಂಬಂಧಿಸಿ ತನಿಖೆ ಮುಂದುವರಿದಿದ್ದು, ನ್ಯಾಯ ದೊರಕಬೇಕು ಎಂದು ವಿದ್ಯಾರ್ಥಿನಿಯ ತಾಯಿ ಅಂಬಿಕಾ ಆಗ್ರಹಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.