- TV9 Kannada Photo gallery Cricket photos Ajinkya Rahane's New Role: Commentary Debut for India-Sri Lanka Test Series
ವೃತ್ತಿಜೀವನದ 2ನೇ ಇನ್ನಿಂಗ್ಸ್ ಆರಂಭಿಸಿದ ಅಜಿಂಕ್ಯ ರಹಾನೆ
Ajinkya Rahane Begins Second Innings: ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದ ಅಜಿಂಕ್ಯ ರಹಾನೆ, ತಮ್ಮ ಎರಡನೇ ಇನ್ನಿಂಗ್ಸ್ ಅನ್ನು ವೀಕ್ಷಕ ವಿವರಣೆಗಾರನಾಗಿ ಆರಂಭಿಸಲು ಸಜ್ಜಾಗಿದ್ದಾರೆ. ಆಗಸ್ಟ್ 15 ರಿಂದ ನಡೆಯಲಿರುವ ಭಾರತ ಮತ್ತು ಶ್ರೀಲಂಕಾ ನಡುವಿನ ಟೆಸ್ಟ್ ಸರಣಿಯಲ್ಲಿ ರಹಾನೆ ಕಾಮೆಂಟರಿ ನೀಡಲಿದ್ದಾರೆ. ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ತಮ್ಮ ಚೊಚ್ಚಲ ಪ್ರವೇಶಕ್ಕೆ ಅವರು ಉತ್ಸುಕರಾಗಿದ್ದು, ಅಭಿಮಾನಿಗಳಿಗೆ ತಮ್ಮ ಅನುಭವಗಳನ್ನು ಹಂಚಿಕೊಳ್ಳಲಿದ್ದಾರೆ.
Updated on:Aug 12, 2026 | 4:22 PM

ಟೀಂ ಇಂಡಿಯಾ ಕ್ರಿಕೆಟಿಗ ಅಜಿಂಕ್ಯ ರಹಾನೆ ಕೆಲವೇ ದಿನಗಳ ಹಿಂದೆ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು. ಇದರೊಂದಿಗೆ ಭಾರತ ಕ್ರಿಕೆಟ್ನಲ್ಲಿ ಅವರ 18 ವರ್ಷಗಳ ಪ್ರಯಾಣ ಅಂತ್ಯವಾಗಿತ್ತು. ನಿವೃತ್ತಿಯ ಬಳಿಕ ರಹಾನೆ ವಿದೇಶಿ ಟಿ20 ಲೀಗ್ಗಳಲ್ಲಿ ಆಡಲು ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದರು. ಇದೀಗ ರಹಾನೆ ತಮ್ಮ ವೃತ್ತಿಜೀವನದ ಎರಡನೇ ಇನ್ನಿಂಗ್ಸ್ ಅನ್ನು ವೀಕ್ಷಕ ವಿವರಣೆಗಾರನಾಗಿ ಆರಂಭಿಸಲು ಸಜ್ಜಾಗಿದ್ದಾರೆ(PC-IPL).

ಆಗಸ್ಟ್ 15 ರಿಂದ 27 ರವರೆಗೆ ನಡೆಯಲಿರುವ ಭಾರತ ಹಾಗೂ ಶ್ರೀಲಂಕಾ ನಡುವಿನ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಅಜಿಂಕ್ಯ ರಹಾನೆ ಮೊದಲ ಬಾರಿಗೆ ಕಾಮೆಂಟರಿ ಮಾಡಲಿದ್ದಾರೆ. ತಾನು ವೀಕ್ಷಕ ವಿವರಣೆಗಾರನಾಗಿ ಕಾಣಿಸಿಕೊಳ್ಳುವುದನ್ನು ಸ್ವತಃ ಅಜಿಂಕ್ಯ ರಹಾನೆ ಅವರೇ ಖಚಿತಪಡಿಸಿದ್ದಾರೆ(PC-BCCI).

ರಹಾನೆ ನೀಡಿದ ಹೇಳಿಕೆಯಲ್ಲಿ, ‘ಭಾರತದ ಶ್ರೀಲಂಕಾ ಪ್ರವಾಸದ ಸಮಯದಲ್ಲಿ ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್ ಮತ್ತು ಸೋನಿ ಲಿವ್‌ನೊಂದಿಗೆ ನನ್ನ ಟೆಸ್ಟ್ ಕಾಮೆಂಟರಿಯ ಚೊಚ್ಚಲ ಪ್ರವೇಶ ಮಾಡಲು ನಾನು ತುಂಬಾ ಉತ್ಸುಕನಾಗಿದ್ದೇನೆ. ಟೆಸ್ಟ್ ಕ್ರಿಕೆಟ್ ನಮ್ಮ ಆಟದ ಅತಿದೊಡ್ಡ ಮತ್ತು ಅತ್ಯಂತ ಪ್ರತಿಷ್ಠಿತ ಸ್ವರೂಪವಾಗಿದೆ. ಹಲವು ವರ್ಷಗಳ ಕಾಲ ಈ ಸ್ವರೂಪದಲ್ಲಿ ಭಾರತವನ್ನು ಪ್ರತಿನಿಧಿಸಿದ ನಂತರ, ಆಟವನ್ನು ವಿಭಿನ್ನ ದೃಷ್ಟಿಕೋನದಿಂದ ವೀಕ್ಷಿಸಲು ಮತ್ತು ವಿವರಿಸಲು ಈಗ ಅವಕಾಶ ಸಿಕ್ಕಿರುವುದು ನನ್ನ ಅದೃಷ್ಟ’(PC-BCCI).

‘ನನ್ನ ಅನುಭವಗಳನ್ನು ಹಂಚಿಕೊಳ್ಳಲು, ಆಟದ ಸೂಕ್ಷ್ಮ ವ್ಯತ್ಯಾಸಗಳನ್ನು ಸರಳ ರೀತಿಯಲ್ಲಿ ವಿವರಿಸಲು ಮತ್ತು ಟೆಸ್ಟ್ ಪಂದ್ಯಗಳಲ್ಲಿನ ಪ್ರಮುಖ ನಿರ್ಧಾರಗಳು, ತಂತ್ರಗಳು ಮತ್ತು ಕ್ಷಣಗಳ ಬಗ್ಗೆ ಅಭಿಮಾನಿಗಳಿಗೆ ತಿಳಿಸಲು ನಾನು ಉತ್ಸುಕನಾಗಿದ್ದೇನೆ. ಅಭಿಮಾನಿಗಳಿಗೆ ವೀಕ್ಷಣಾ ಅನುಭವವನ್ನು ಹೆಚ್ಚಿಸಲು ಮತ್ತು ಮೈದಾನದಲ್ಲಿ ಏನಾಗುತ್ತದೆ ಎಂಬುದನ್ನು ಹೆಚ್ಚು ಆಳವಾಗಿ ಅರ್ಥಮಾಡಿಕೊಳ್ಳಲು ಸಹಾಯ ಮಾಡಲು ನಾನು ಶ್ರಮಿಸುತ್ತೇನೆ’ ಎಂದಿದ್ದಾರೆ(PC-IPL).

ಇನ್ನು ಅಜಿಂಕ್ಯ ರಹಾನೆ ಅವರ ವೃತ್ತಿಜೀವನದ ಬಗ್ಗೆ ಹೇಳುವುದಾದರೆ.. 37 ವರ್ಷದ ಅಜಿಂಕ್ಯ ರಹಾನೆ ಭಾರತದ ಪರ 85 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 12 ಶತಕಗಳು ಮತ್ತು 26 ಅರ್ಧಶತಕಗಳು ಸೇರಿದಂತೆ 38.46 ಸರಾಸರಿಯಲ್ಲಿ 5,077 ರನ್ ಗಳಿಸಿದ್ದಾರೆ. ಹಾಗೆಯೇ ರಹಾನೆ ನಾಯಕತ್ವದಲ್ಲಿ, ಭಾರತ 2020-21ರಲ್ಲಿ ಆಸ್ಟ್ರೇಲಿಯಾದಲ್ಲಿ ಟೆಸ್ಟ್ ಸರಣಿಯನ್ನು ಗೆದ್ದುಕೊಂಡಿತ್ತು. ಇದು ಒಂದು ಐತಿಹಾಸಿಕ ಸಾಧನೆಯಾಗಿತ್ತು(PC-BCCI).
Published On - 4:21 pm, Wed, 12 August 26




