ಉಡುಪಿ, ಸೆ.06: ಇಂದು ನಾಡಿನೆಲ್ಲೆಡೆ ಶ್ರೀ ಕೃಷ್ಣ ಜನ್ಮಾಷ್ಟಮಿ (Krishna Janmashtami) ಸಂಭ್ರಮ ಮನೆ ಮಾಡಿದೆ. ಅದರಂತೆ ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕೃಷ್ಣನಿಗೆ ಹಗಲಿಡಿ ಬಗೆಬಗೆಯ ಪೂಜೆ ನೆರವೇರಿದ್ದು, ಇಂದು ಮಧ್ಯರಾತ್ರಿ ಅರ್ಘ್ಯ ಪ್ರಧಾನ ನಡೆಯಲಿದೆ. ಕೃಷ್ಣನ ಆರಾಧನೆಯಲ್ಲಿ ಅರ್ಘ್ಯ ಪ್ರಧಾನಕ್ಕೆ ವಿಶೇಷ ಮಹತ್ವವಿದ್ದು, ಹಗಲಿಡಿ ಉಪವಾಸ ಇರುವ ಭಕ್ತರು, ಅರ್ಘ್ಯ ಪ್ರಧಾನ ಮಾಡಿ ಪ್ರಸಾದ ಸ್ವೀಕರಿಸುತ್ತಾರೆ. ಪರ್ಯಾಯ ಮಠಾಧೀಶರಿಂದ ಕೃಷ್ಣ ದೇವರಿಗೆ ಅರ್ಘ್ಯ ಅರ್ಪಣೆ ಆಗಲಿದೆ. ಇನ್ನು ಕೃಷ್ಣಾಪುರ ಮಠದ ಪರ್ಯಾಯ ಯತಿ ಶ್ರೀ ವಿದ್ಯಾ ಸಾಗರ ತೀರ್ಥ ಸ್ವಾಮೀಜಿಯವರು, ಹಾಲು ಮತ್ತು ನೀರನ್ನು ಬಳಸಿಕೊಂಡು ಕೃಷ್ಣ ಗುಡಿಯ ಮುಂಭಾಗದ ತುಳಸಿ ಕಟ್ಟೆಯಲ್ಲಿ ಅರ್ಘ್ಯ ಸಮರ್ಪಣೆ ಮಾಡಲಿದ್ದಾರೆ. ನಂತರ ಭಕ್ತರಿಗೂ ಅರ್ಘ್ಯ ಅರ್ಪಿಸಲು ಅವಕಾಶ ನೀಡಲಾಗಿದೆ.
ಇನ್ನು ಉಡುಪಿಯ ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಕೃಷ್ಣ ವೇಷದಾರಿಗಳೇ ತುಂಬಿ ತುಳುಕುತ್ತಿದ್ದರು. ಇಂದು ನಡೆದ ಮುದ್ದುಕೃಷ್ಣ, ಬಾಲಕೃಷ್ಣ ಹಾಗೂ ಕಿಶೋರ ಕೃಷ್ಣ ಸ್ಪರ್ಧೆಗಳು ಅಷ್ಟಮಿಯ ರಂಗನ್ನು ಹೆಚ್ಚಿಸಿದ್ದು, ಮುದ್ದು ಮಕ್ಕಳ ಕೃಷ್ಣನ ವಿವಿಧ ವೇಷಗಳು ಕಣ್ಮನ ಸೆಳೆದವು. ಮಠದ ರಾಜಾಂಗಣದಲ್ಲಿ ಮಕ್ಕಳ ಮುದ್ದು ಕೃಷ್ಣ ಸ್ಪರ್ಧೆಯಲ್ಲಿ ನೂರಕ್ಕೂ ಹೆಚ್ಚು ಚಿಣ್ಣರು ಭಾಗವಹಿಸಿದ್ದರು. ತಾಯಂದಿರು ತಮ್ಮ ಮಕ್ಕಳನ್ನು ಸ್ಪರ್ಧೆಗೆ ಅಣಿಗೊಳಿಸುವ ದೃಶ್ಯ ರಾಜಾಂಗಣದಲ್ಲಿ ಕಂಡು ಬಂದವು.
ಇದನ್ನೂ ಓದಿ:ಮಲ್ಲೇಶ್ವರಂನ ವೇಣುಗೋಪಾಲ ದೇವಸ್ಥಾನದಲ್ಲಿ ತೆಪ್ಪೋತ್ಸವ, ಅದ್ಧೂರಿ ಕೃಷ್ಣ ಜನ್ಮಾಷ್ಟಮಿ ಫೋಟೋಗಳು ಇಲ್ಲಿವೆ
ಅಷ್ಟಮಿಗೂ ಹುಲಿವೇಷಕ್ಕೂ ಅವಿನಾಭಾವ ಸಂಬಂಧ. ಹುಲಿವೇಷಧಾರಿಗಳು ಪೂಜೆ ಸಲ್ಲಿಸಿ ನಗರ ಸಂಚಾರ ನಡೆಸುವುದು ವಾಡಿಕೆ. ಹತ್ತಾರು ತಂಡಗಳು ಜಿಲ್ಲೆಯಾದ್ಯಂತ ಸಂಚರಿಸಿ ಜನರ ಕಣ್ಮನ ಸೆಳೆದರು. ಈ ಬಾರಿ ಹೆಣ್ಣುಹುಲಿಗಳು ಗಮನ ಸೆಳೆಯುತ್ತಿವೆ. ಕಾಡಬೆಟ್ಟುವಿನ ಅಶೋಕ್ ರಾಜ್ ಅವರ ಹುಲಿ ವೇಷಧಾರಿಗಳ ತಂಡ ಭರ್ಜರಿ ಪ್ರದರ್ಶನ ನಡೆಸುತ್ತಿದೆ. ಈ ಬಾರಿ ವಿಶೇಷ ಆಕರ್ಷಣೆ ಎನ್ನುವಂತೆ ಅಶೋಕ್ ರಾಜ್ ಹುಲಿ ವೇಷ ತಂಡದ ವತಿಯಿಂದ ಹೆಣ್ಣು ಹುಲಿಗಳು ಕೂಡ ಅಕಾಡಕ್ಕೆ ಇಳಿದಿವೆ. ಈ ಮೊದಲು ಅಶೋಕ್ ರಾಜ್ ಅವರ ಪುತ್ರಿ ಸುಷ್ಮಾ ರಾಜ್ ಅವರು ಹುಲಿ ವೇಷದ ಮೂಲಕ ಹುಡುಗಿಯರಲ್ಲೂ ಕೂಡ ಹುಲಿ ವೇಷದ ಕಿಚ್ಚು ಹಚ್ಚಿದರು. ನಂತರದ ವರ್ಷಗಳಲ್ಲಿ ನಿರಂತರವಾಗಿ ಉಡುಪಿಯ ಅಷ್ಟಮಿಗೆ ವಿಶೇಷ ಎನ್ನುವಂತೆ ಹೆಣ್ಣು ಹುಲಿಗಳು ಪ್ರದರ್ಶನ ನೀಡುತ್ತಾ ಬಂದಿದೆ.
ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ