ಉಡುಪಿ: ಬೆಳಕಿನ ಹಬ್ಬ ದೀಪಾವಳಿಗೆ ದಿನಗಣನೆ ಶುರುವಾಗಿದೆ.ಅದರಲ್ಲೂ ದೀಪಾವಳಿಯ ಅಂದ ಹೆಚ್ಚಿಸುವುದು, ಚಂದದ ಹಣತೆಗಳು. ಹೀಗಾಗಿಯೇ ದೀಪಾವಳಿ ಹಬ್ಬ ಬರುತ್ತದೆ ಎನ್ನುವಾಗಲೇ ಹಣತೆ ತಯಾರಕರು ತಮ್ಮ ಕಾರ್ಯಕ್ಕೆ ವೇಗ ಹೆಚ್ಚಿಸುತ್ತಾರೆ. ಸದ್ಯ ಮಾರುಕಟ್ಟೆಯಲ್ಲಿ ಬೇಡಿಕೆ ಇರುವ ಬಣ್ಣದ ಹಣತೆಗಳನ್ನು ತಯಾರಿಸಿ, ವಿದ್ಯಾರ್ಥಿನಿಯೊಬ್ಬಳು ಮನೆಗೆ ಆಸೆರೆಯಾಗುತ್ತಿದ್ದಾಳೆ. ಈ ಸ್ಪೂರ್ತಿದಾಯಕ ಕಥೆ ಇಲ್ಲಿದೆ ನೋಡಿ.
ಬೆಳಕಿನ ಹಬ್ಬ ದೀಪಾವಳಿಗೆ ಕೆಲವೇ ದಿನಗಳಷ್ಟೇ ಬಾಕಿ ಇದೆ. ಹಬ್ಬದ ಅಂದವನ್ನು ಇಮ್ಮಡಿಗೊಳಿಸುವುದು ಬೆಳಕಿನ ಹಣತೆಗಳು. ಸದ್ಯ ಮಾರುಕಟ್ಟೆಯಲ್ಲಿ ಬಣ್ಣ ಬಣ್ಣದ ಹಣತೆಗಳಿಗೆ ಭಾರೀ ಬೇಡಿಕೆ ಶುರುವಾಗಿದೆ. ಹೀಗಾಗಿ ವಿದ್ಯಾರ್ಥಿನಿಯೊಬ್ಬಳು ಮನೆಯ ಬಡತನಕ್ಕೆ ನೆರವಾಗಬೇಕು, ತನ್ನ ವಿದ್ಯಾಭ್ಯಾಸಕ್ಕೆ ಸಹಕಾರಿ ಆಗಬೇಕು ಎಂದು ಸುಂದರ ಕನಸನ್ನು ಇಟ್ಟುಕೊಂಡು ಹಣತೆಗಳಿಗೆ ವಿವಿಧ ವಿಧವಾದ ಬಣ್ಣ ಬಳಿಯುತ್ತಿದ್ದಾಳೆ.
ಹಣತೆಗಳಿಗೆ ಬಣ್ಣಗಳ ಚಿತ್ತಾರ ಬಿಡಿಸುತ್ತಿರುವ ಈಕೆಯ ಹೆಸರು ರಕ್ಷಾ. ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಕೊಪ್ಪಲಂಗಡಿ ನಿವಾಸಿ. ಪ್ರಸ್ತುತ ಮೂಡಬಿದಿರೆಯ ಆಳ್ವಾಸ್ ಕಾಲೇಜಿನಲ್ಲಿ ಫೈನ್ ಆರ್ಟ್ಸ್ ಎರಡನೇ ವರ್ಷದ ವ್ಯಾಸಂಗ ಮಾಡುತ್ತಿರುವ ಈಕೆಗೆ ಬಾಲ್ಯದಿಂದಲೂ ಚಿತ್ರ ಬಿಡಿಸುವುದು ಎಂದರೆ ಪಂಚಪ್ರಾಣ. ಅಂಗವಿಕಲ ತಂದೆ, ಕೂಲಿ ಕೆಲಸ ಮಾಡುವ ತಾಯಿ. ಈ ನಡುವೆ ಕಾಲೇಜು ವ್ಯಾಸಂಗ ಮಾಡುವ ತಮ್ಮ ಇವರೊಂದಿಗೆ ಬಾಡಿಗೆ ಮನೆಯಲ್ಲಿ ಬಡತನ ಜೀವನ ನಡೆಸುವ ರಕ್ಷಾ, ತನ್ನ ವಿಶಿಷ್ಟ ಚಿತ್ರಕಲೆಯನ್ನೇ ಬಂಡವಾಳವಾಗಿಸಿ, ಹಣತೆಗಳಿಗೆ ಬಣ್ಣ ಬಳಿದು ಮಾರಾಟಕ್ಕೆ ಮುಂದಾಗಿದ್ದಾಳೆ.
ಬೆಂಗಳೂರಿನಿಂದ ಕಚ್ಚಾ ಮೆಟೀರಿಯಲ್ಸ್ ತರಿಸಿ, ಮನೆಯಲ್ಲೇ ಹಣತೆಗಳಿಗೆ ವಿವಿಧ ಬಣ್ಣ ಬಳಿದು, ಹಣತೆಗಳ ಮೆರಗನ್ನು ಹೆಚ್ಚಿಸುತ್ತಿದ್ದಾಳೆ. ಈಕೆಯ ಕೈ ಚಳಕದಿಂದ ಮೂಡಿ ಬರುವ ಬಣ್ಣ ಬಣ್ಣದ ಹಣತೆಗಳಿಗೆ, ಕರಾವಳಿ ಮಾತ್ರವಲ್ಲದೇ ಹೊರ ರಾಜ್ಯದಲ್ಲೂ ಬಾರೀ ಬೇಡಿಕೆ ಇದೆ. ಹೀಗಾಗಿ ರಕ್ಷಾ ಈಗ ಹಣತೆ ತಯಾರಿಯಲ್ಲಿ ನಿರತಳಾಗಿದ್ದಾಳೆ.
ರಕ್ಷಾಳಿಗೆ ಸ್ವಂತ ಸೂರು ಕಟ್ಟಿಕೊಳ್ಳಬೇಕು ಎಂಬ ಕನಸಿದೆ. ಜೊತೆಗೆ, ಸ್ನಾತಕೋತ್ತರ ವಿದ್ಯಾಭ್ಯಾಸ ಮಾಡಬೇಕು ಎಂಬ ಆಸೆ ಇದೆ. ಹೀಗಾಗಿ ರಾತ್ರಿ ಹಗಲೆನ್ನದೇ ಹಣತೆಗಳಿಗೆ ಚಿತ್ತಾರ ಬಿಡಿಸುತ್ತಿದ್ದಾರೆ ಇವರ ಶ್ರಮಕ್ಕೆ ಬೆನ್ನಬುಬಾಗಿ ಸ್ನೇಹಿತರು ಸಾಥ್ ನೀಡುತ್ತಿದ್ದಾರೆ ಎಂದು ಸಹೋದರ ಲೊಕೇಶ್ ಹೇಳಿದ್ದಾರೆ.
ಒಟ್ಟಾರೆ ವಿದ್ಯಾಭ್ಯಾಸ ಜೊತೆಗೆ, ತನ್ನ ವಿಶಿಷ್ಟ ಕಲೆಯನ್ನು ಬಳಸಿಕೊಂಡು ಮನೆಯವರಿಗೆ ನೆರವಾಗುವ ರಕ್ಷಾ ಇತರಿಗೂ ಮಾದರಿ. ದೀಪಾವಳಿಯಲ್ಲಿ ಬಣ್ಣ ಬಣ್ಣದ ಹಣತೆಗಳು ಬೆಳಗಿದಂತೆ, ಈಕೆಯ ಜೀವನವೂ ಬೆಳಗಲಿ, ಕಂಡ ಕನಸು ಕನಸಾಗಲಿ ಎನ್ನುವುದು ನಮ್ಮ ಆಶಯ.
ವರದಿ: ಹರೀಶ್ ಪಾಲೆಚ್ಚಾರ್
ಇದನ್ನೂ ಓದಿ:
ಬೀದರ್ ಜಿಲ್ಲೆಗೆ ಬಂದಿದೆ ತಹರೇವಾರಿ ಚೀನಿ ಹಣತೆಗಳು; ಮಣ್ಣಿನ ಹಣತೆ ತಯಾರಕರು ಕಂಗಾಲು