ಉಡುಪಿ, ಮಾ.09: ಸಹಕಾರಿ ಸೊಸೈಟಿಯಲ್ಲಿ ಸದಸ್ಯತ್ವ ಮಾಡಿಸುತ್ತೇನೆ ಎಂದು ಹೇಳಿ ಅಮಾಯಕರ ಹೆಸರಲ್ಲಿ ಒಂದು ಕೋಟಿಗೂ ಅಧಿಕ ಸಾಲ ಪಡೆದು ವಂಚಿಸಿದ ಘಟನೆ ಉಡುಪಿ ಜಿಲ್ಲೆಯ ಬ್ರಹ್ಮಾವರ(Brahmavar) ತಾಲೂಕಿನಲ್ಲಿ ನಡೆದಿದೆ. ಈ ಹಿನ್ನಲೆ ನೊಂದ ಏಳು ಮಂದಿ ಯುವಕರು ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನದ ಮೊರೆ ಹೋಗಿದ್ದಾರೆ. ವಿದ್ಯಾಭ್ಯಾಸ ಇಲ್ಲದೆ ಕೂಲಿ ಕೆಲಸ ಮಾಡುವ ಯುವಕರನ್ನೇ ಟಾರ್ಗೆಟ್ ಮಾಡಿ ಬ್ರಹ್ಮಾವರದ ಸೈಂಟ್ ಮಿಲಾಗ್ರೀಸ್ ಕ್ರೆಡಿಟ್ ಸೌಹಾರ್ದ ಕೋ ಆಪರೇಟಿವ್ ಸೊಸೈಟಿಯಲ್ಲಿ ದೋಖಾ ಎಸಗಿದ್ದಾರೆ. ಈ ಖದೀಮರ ಕರಾಮತ್ತಿಗೆ ಬ್ಯಾಂಕು ಸಿಬ್ಬಂದಿ ಸಾಥ್ ಕೊಟ್ಟಿರುವ ಆರೋಪ ಕೂಡ ಕೇಳಿಬಂದಿದೆ.
2019 ರಲ್ಲೇ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದ್ದು, ಪ್ರಕರಣ ಸಂಬಂಧ ಬ್ಯಾಂಕ್ ಅಧಿಕಾರಿ, ಸಿಬ್ಬಂದಿ ಸಹಿತ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದೆ. ಉಡುಪಿ ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿದೆ. ಈ ನಡುವೆ ಸೊಸೈಟಿಯಿಂದ ಅಮಾನವೀಯ ವರ್ತನೆ ತೋರಿದ್ದಾರೆ. ಬೆಳಗಾವಿಯ ಸಹಕಾರಿ ಪಂಚಾಯಿತಿ ನ್ಯಾಯಾಲಯದಲ್ಲಿ ಸೊಸೈಟಿಯಿಂದ ಅಮಾಯಕರ ಮೇಲೆ ದಾವೆ ಹೂಡಲಾಗಿದೆ. ತನ್ನದೇ ಸೊಸೈಟಿಯ ಸಿಬ್ಬಂದಿಗಳಿಂದ ವಂಚನೆಯಾಗಿದ್ದರೂ ಕೂಡ ಗ್ರಾಹಕರಿಗೆ ಬರೆ ಎಳೆಯಲಾಗಿದೆ. ಇದೇ ಸಂದರ್ಭದಲ್ಲಿ ಅಮಾಯಕರ ಮೇಲೆ ದಾವೆ ಹೂಡಿರುವುದು ಎಷ್ಟು ಸರಿ ? ಎಂದು ಪ್ರತಿಷ್ಠಾನ ಪ್ರಶ್ನಿಸಿದೆ.
ಇದನ್ನೂ ಓದಿ:ಅರಣ್ಯ ಪ್ರವಾಸೋದ್ಯಮ ಟಿಕೆಟ್ ಬುಕ್ಕಿಂಗ್‍ನಲ್ಲೂ ಗೋಲ್‍ಮಾಲ್! ಚಾರಣಿಗರಿಂದ ಹಣ ಪಡೆದು ಇಲಾಖೆಗೆ ವಂಚನೆ
ಕುಂದಾಪುರ ತಾಲೂಕಿನ ಬೆಳ್ವೆ, ಹೆಂಗವಳ್ಳಿಯ ರಮೇಶ್ ನಾಯ್ಕ್ ಮತ್ತು ಗಣೇಶ್ ಕುಮಾರ್ ಎಂಬುವವರ ಜೊತೆಗೆ ಸಹಕರಿಸಿದ ಸೊಸೈಟಿಯ ಮ್ಯಾನೇಜರ್ ಭಾಗ್ಯಲಕ್ಷ್ಮಿ ಹಾಗೂ ಸಿಬ್ಬಂದಿ ನಿರಂಜನ, ಸೊಸೈಟಿಯಲ್ಲಿ ಸದಸ್ಯತ್ವ ಕೊಡಿಸುವುದಾಗಿ ರಮೇಶ ಹಾಗೂ ಗಣೇಶ ಗ್ರಾಮದ ಯುವಕರಿಂದ ಸಹಿ ಪಡೆದಿದ್ದರು. ಕೆಲವರಿಗೆ ಸಾಲ ಕೊಡಿಸುವುದಾಗಿ ಭರವಸೆ ಕೂಡ ನೀಡಿದ್ದರು. ಇನ್ನು ಕೆಲವರಿಗೆ ಸದಸ್ಯತ್ವ ಕೊಡಿಸುವುದಾಗಿ ಹೇಳಿದ್ದರು. ಬಳಿಕ ಈ ಖದೀಮರು, ಸುಳ್ಳು ಭರವಸೆಗಳನ್ನು ನೀಡಿ ದಾಖಲೆಗಳಿಗೆ ಸಹಿ ಪಡೆದು ಸಾಲ ಮಂಜೂರಾತಿ ಮಾಡಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ, ವಿಥ್ ಡ್ರಾ, ನೆಫ್ಟ್ ಪತ್ರ ಜೊತೆಗೆ ಸದಸ್ಯತ್ವದ ಅರ್ಜಿ ಬದಲಿಗೆ, ಖಾಲಿ ಸಾಲ ಪತ್ರದ ಮೇಲೆ ಸಹಿ ಪಡೆದು ತಮಗೆ ಬೇಕಾದಂತೆ ಬಳಸಿಕೊಂಡು ವ್ಯಾಪಾರ ಸಾಲ , ಕೃಷಿ ಸಾಲ ಪಡೆದು ವಂಚಿಸಿದ್ದರು.
ಅಮಾಯಕ ಯುವಕರ ಹೆಸರಲ್ಲಿ ಸಾಲ ಪಡೆದು ತಮ್ಮ ಖಾತೆಗೆ ವರ್ಗಾಯಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಸದಸ್ಯತ್ವಕ್ಕೆ ಅರ್ಜಿ ಹಾಕಿದವರಿಗೆ ಸಾಲದ ಹೊರೆ ಎದುರಾಗಿದೆ. ಅಮಾಯಕ ನಾಲ್ವರಿಗೆ ಸದ್ಯ ಜಪ್ತಿ ನೋಟಿಸ್ ನೀಡಲಾಗಿದೆ. ಇನ್ನು ಈ ಆರೋಪಿಗಳು ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಜೈಲು ಸೇರಿದ್ದರು. ಸದ್ಯ ಜಾಮೀನಿನ ಮೇಲೆ ಬಿಡುಗಡೆ ಹೊಂದಿ ಹೊರಬಂದಿದ್ದಾರೆ. ಕ್ರಿಮಿನಲ್ ಪ್ರಕರಣ ನಡೆಯುತ್ತಿರುವಾಗಲೇ ಇದೀಗ ಸಿವಿಲ್ ಪ್ರಕರಣ ಹಾಕಿ ಕಿರುಕುಳ ನೀಡುತ್ತಿದ್ದಾರೆ. ತಮಗೆ ಅರಿವಿಲ್ಲದಂತೆ ತಮ್ಮ ಹೆಸರಲ್ಲಿ ಸಾಲ ಮಾಡಿಕೊಂಡಿರುವ ಯುವಕರು, ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನದಿಂದ ಕಾನೂನು ನೆರವು ಕೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ