ಉಡುಪಿ: ಜಿಲ್ಲೆಯ ಬೈಂದೂರು ತಾಲೂಕಿನಲ್ಲಿ ನಗರ ಪ್ರದೇಶಗಳಿಗಿಂತ ಗ್ರಾಮೀಣ ಪ್ರದೇಶಗಳೆ ಹೆಚ್ಚು. ಹಾಗಾಗಿ ಗ್ರಾಮೀಣ ಭಾಗದ ಮಕ್ಕಳ ಕಲಿಕೆಗೆ ಪೂರಕವಾಗಿ ತಾಲೂಕಿನ ಗ್ರಾಮೀಣ ಭಾಗದಾದ್ಯಂತ ಸರಕಾರಿ ಶಾಲೆಗಳು ನಿರ್ಮಾಣವಾಗಿವೆ. ಪ್ರಾರಂಭವಾದ ಕೆಲವುಗಳ ವರ್ಷಗಳ ಕಾಲ ಉತ್ತಮ ಮಕ್ಕಳ ಸಂಖ್ಯೆಯೊಂದಿಗೆ ಗುಣ ಮಟ್ಟದ ಶಿಕ್ಷಣ ನೀಡುತ್ತಿದ್ದ ಶಾಲೆಗಳು ಇದೀಗ ಮುಚ್ಚುವ ಸ್ಥಿತಿಯಲ್ಲಿದ್ದರೆ, ಇನ್ನು ಕೆಲವು ಶಾಲೆಗಳು ಈಗಾಗಲೇ ಮುಚ್ಚಲಾಗಿದೆ. ಇನ್ನು ತಾಲೂಕಿನಾದ್ಯಂತ ಇರುವ ಒಟ್ಟು 16 ಶಾಲೆಗಳಲ್ಲಿ ಶೂನ್ಯ ಶಿಕ್ಷಕರಿದ್ದು, ಇರುವ ಬೆರಳೆಣಿಕೆ ಮಕ್ಕಳಿಗೆ ಪಾಠ ಪ್ರವಚನಗಳಿಗೆ ತಾತ್ಕಾಲಿಕ ಶಿಕ್ಷಕ ಮೊರೆ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಸರಕಾರಿ ಶಾಲೆಯ ಶಿಕ್ಷಕರು ನಿವೃತ್ತರಾದ ಬಳಿಕ ಬದಲಿ ಪೋಸ್ಟ್ ಮಾಡದೆ ಇರುವುದರಿಂದ ಈ ಸಮಸ್ಯೆ ಸೃಷ್ಟಿಯಾಗಿದೆ ಎನ್ನಲಾಗಿದೆ. ಸದ್ಯ ಈ ಸಮಸ್ಯೆಯ ಪರಿಹಾರಕ್ಕೆ ಪಕ್ಕದ ಸರಕಾರಿ ಶಾಲೆಯ ಶಿಕ್ಷಕರನ್ನು ಹೆಚ್ಚುಚರಿ ಶಿಕ್ಷಕರನ್ನಾಗಿ ನೇಮಿಸುವ ಕಾರ್ಯ 16 ಶಾಲೆಗಳಲ್ಲಿ ಮಾಡಿದ್ದರೂ ಕೂಡ ವಿದ್ಯಾರ್ಥಿಗಳಿಗೆ ಆಗುತ್ತಿರುವ ಸಮಸ್ಯೆ ಮಾತ್ರ ತಪ್ಪಿಲ್ಲ.
ಇನ್ನು ಕಳೆದ ಕೆಲವು ವರ್ಷಗಳಲ್ಲಿ ತಾಲೂಕಿನಾದ್ಯಂತ ಇರುವ ಗ್ರಾಮೀಣ ಸರಕಾರಿ ಪ್ರಾಥಮಿಕ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕುಸಿತದಿಂದಾಗಿ ಬಾಗಿಲು ಮುಚ್ಚುವಂತಾಗಿದೆ. ಮರವಂತೆಯ ಕರಾವಳಿ ಬಾಗಿಲು ಮುಚ್ಚಿ 3 ವರ್ಷಗಳು ಕಳೆದಿದ್ದು, ಶಾಲೆಯ ಗೋಡೆಗಳು ಕುಸಿಯುವ ಹಂತದಲ್ಲಿದೆ. ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲೆ ಇರುವ ಈ ಶಾಲೆ ಸದ್ಯ ಮಕ್ಕಳ ಉಪಯೋಗಕ್ಕೆ ಸಿಗದೆ ಹಾಳಾಗಿ ಹೋಗುತ್ತಿದೆ. ಇನ್ನು 2020-21 ಸಾಲಿನಲ್ಲಿ ಅರ್ಗೋಡು ಸರಕಾರಿ ಪ್ರಾಥಮಿಕ ಶಾಲೆ ಮತ್ತು ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಚುಂಗಿಗುಡ್ಡೆ ಶಾಲೆ ಕೂಡ ಮಕ್ಕಳ ಸಂಖ್ಯೆಯ ಕೊರತೆಯಿಂದಾಗಿ ಬಾಗಿಲು ಹಾಕಿಕೊಂಡಿವೆ. ಸದ್ಯ ಜಿಲ್ಲೆಯಲ್ಲಿ ಖಾಸಗಿ ಶಾಲೆಗಳು ನೀಡುತ್ತಿರುವ ಸೌಲಭ್ಯದ ಮುಂದೆ ಸರಕಾರಿ ಶಾಲೆಯ ಸೌಲಭ್ಯಗಳು ಗೌಣವಾಗುತ್ತಿರುವ ಹಿನ್ನಲೆಯಲ್ಲಿ ಪೋಷಕರು ಖಾಸಗಿ ಶಾಲೆಯತ್ತ ಮುಖ ಮಾಡುತ್ತಿದ್ದಾರೆ ಎನ್ನುತ್ತಿದ್ದಾರೆ ಇಲ್ಲಿನ ಸ್ಥಳೀಯರು.
ಇದನ್ನೂ ಓದಿ:ಚಿಕ್ಕಮಗಳೂರು: ಶಾಲೆ ಜಾಗ ಒತ್ತುವರಿ ಆರೋಪ; ಬಹಿಷ್ಕಾರ ಹಾಕಿದ ಗ್ರಾಮಸ್ಥರು
ಒಟ್ಟಾರೆಯಾಗಿ ಬೈಂದೂರು ತಾಲೂಕಿನಲ್ಲಿ ಸರಕಾರಿ ಶಾಲೆಗಳು ಬಹುತೇಕ ಬಾಗಿಲು ಮುಚ್ಚಿಕೊಳ್ಳುವ ಸ್ಥಿತಿಯಲ್ಲಿದ್ದು, ಖಾಸಗಿ ಕಾಲೇಜು ನಡೆಸುವ ಸ್ಥಳೀಯ ಶಾಸಕರು ಸದ್ಯ ಈ ವ್ಯವಸ್ಥೆಗೆ ತೇಪೆ ಹಚ್ಚುವ ಕಾರ್ಯವನ್ನ ನಿರಂತರವಾಗಿ ಮಾಡುತ್ತಾ ಬಂದಿದ್ದಾರೆ. ಆದರೆ ಖಾಸಗಿ ಶಾಲೆಗಳ ಪೈಪೋಟಿಗೆ ಸರಿಸಮಾನವಾಗಿ ಸರಕಾರಿ ಶಾಲೆಗಳಲ್ಲಿ ವ್ಯವಸ್ಥೆ ಕಲ್ಪಿಸದಿದ್ದಲ್ಲಿ ತಾಲೂಕಿನ ಅರ್ಧದಷ್ಟು ಶಾಲೆಗಳು ಮ್ಯೂಸಿಯಂ ಆಗುವುದಂತು ಸುಳ್ಳಲ್ಲ.
ವರದಿ: ದಿನೇಶ್ ಯಲ್ಲಾಪುರ್ ಟಿವಿ9 ಉಡುಪಿ
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ