ಪ್ರಭು ಶ್ರೀರಾಮನನ್ನು ಕಾಣಲು ವ್ಹೀಲ್ ಚೇರ್​ನಲ್ಲಿ ಅಯೋಧ್ಯೆಗೆ ಹೊರಟ ಉಡುಪಿಯ ಮಂಜುನಾಥ್​​

| Updated By: ವಿವೇಕ ಬಿರಾದಾರ

Updated on: Dec 12, 2023 | 7:21 AM

ಅಯೋಧ್ಯೆಯಲ್ಲಿ ರಾಮಮಂದಿರ ಕಾಣುವ ಕೋಟ್ಯಾಂತರ ಜನರ ಬಯಕೆ ಈಡೇರುತ್ತಿದೆ. ಮಂದಿರದ ಕನಸು ಕಂಡ ವ್ಯಕ್ತಿಯೊಬ್ಬರು ತನ್ನ ಬಲಹೀನತೆಯನ್ನು ಕೂಡ ಲೆಕ್ಕಿಸದೆ ಅಯೋಧ್ಯೆಯ ಕಡೆ ಹೊರಟಿದ್ದಾರೆ. ಹೌದು ಸಿಂಧಗಿ ಮೂಲದವಾರದ ಮಂಜುನಾಥ್​​ ಅವರು ವ್ಹೀಲ್ ಚೇರ್​ನಲ್ಲಿ ತೀರ್ಥಯಾತ್ರೆಗೆ ಹೊರಟಿದ್ದಾರೆ.

ಪ್ರಭು ಶ್ರೀರಾಮನನ್ನು ಕಾಣಲು ವ್ಹೀಲ್ ಚೇರ್​ನಲ್ಲಿ ಅಯೋಧ್ಯೆಗೆ ಹೊರಟ ಉಡುಪಿಯ ಮಂಜುನಾಥ್​​
ಲೋಕ ಸಂಚಾರಿ ಮಂಜುನಾಥ್​
Follow us on

ಉಡುಪಿ, ಡಿಸೆಂಬರ್​ 12: ಅಯೋಧ್ಯೆಯಲ್ಲಿ (Ayodhye) ರಾಮಮಂದಿರ (Ram) ನಿರ್ಮಾಣವಾಗುತ್ತಿದ್ದು, ಜನವರೆ 22ರಂದು ಶ್ರೀ ರಾಮನ ವಿಗ್ರಹದ ಪ್ರಾಣ ಪ್ರತಿಷ್ಠಾಪನೆಯಾಗಲಿದೆ. ಈ ಮೂಲಕ ಅಯೋಧ್ಯೆಯಲ್ಲಿ ರಾಮಮಂದಿರ ಕಾಣುವ ಕೋಟ್ಯಾಂತರ ಜನರ ಬಯಕೆ ಈಡೇರುತ್ತಿದೆ. ಮಂದಿರದ ಕನಸು ಕಂಡ ವ್ಯಕ್ತಿಯೊಬ್ಬರು ತನ್ನ ಬಲಹೀನತೆಯನ್ನು ಕೂಡ ಲೆಕ್ಕಿಸದೆ ಅಯೋಧ್ಯೆಯ ಕಡೆ ಹೊರಟಿದ್ದಾರೆ. ಹೌದು ಸಿಂಧಗಿ (Sindagi) ಮೂಲದವಾರದ ಮಂಜುನಾಥ್​​ ಅವರು ವ್ಹೀಲ್ ಚೇರ್​ನಲ್ಲಿ ತೀರ್ಥಯಾತ್ರೆಗೆ ಹೊರಟಿದ್ದಾರೆ.

ಲೋಕಸಂಚಾರಿಯಾದ ಮಂಜುನಾಥ ಅವರಿಗೆ ಪ್ರವಾಸ ಮಾಡುವ ಹವ್ಯಾಸ. ತಿರುಗಾಟ ಇವರ ಹವ್ಯಾಸ, ಆಧ್ಯಾತ್ಮ ಇವರ ಹುಡುಕಾಟ. ಆದರೆ ಅದೊಂದು ಅವಘಡವೊಂದರಲ್ಲಿ ಮಂಜುನಾಥ ಅವರು ಕಾಲಿನ ಬಲ ಕಳೆದುಕೊಂಡರು. ಆದರೂ ಕೂಡ ಇವರ ತಿರುಗಾಟ ಮಾತ್ರ ನಿಂತಿಲ್ಲ. ಲೋಕ ಸಂಚಾರ ಮತ್ತಷ್ಟು ಹೆಚ್ಚಾಗಿದೆ. ಒಂದು ಕ್ಷಣವು ನಿಂತ ಊರಲ್ಲಿ ನಿಲ್ಲದೆ, ಊರೂರು ಅಲೆಯುತ್ತಿದ್ದಾರೆ. ಇದೀಗ ರಾಮ ಮಂದಿರ ಉದ್ಘಾಟನೆಯ ಸುದ್ದಿ ಕೇಳಿ ಮತ್ತೆ ಉತ್ತರ ಪ್ರದೇಶದತ್ತ ಹೊರಟಿದ್ದಾರೆ.

ವೀಲ್ಹ್​ ಚೇರ್​ನಲ್ಲಿ ಕುಳಿತುಕೊಂಡು, ಕೈಯಿಂದಲೇ ಅದನ್ನು ನಿಯಂತ್ರಿಸುತ್ತಾ, ಪ್ರತಿದಿನ ಹತ್ತಾರು ಕಿಲೋಮೀಟರ್ ಅಲೆದಾಡುವುದು ಸುಲಭದ ಮಾತಲ್ಲ. ಅದು ಕೂಡ ಒಬ್ಬಂಟಿಯಾಗಿ ತೀರ್ಥಕ್ಷೇತ್ರಗಳ ಸಂದರ್ಶನ ಮಾಡುತ್ತಾ ಉಡುಪಿಗೆ ಬಂದಿದ್ದ ಮಂಜುನಾಥ್ ತನ್ನ ಆಸೆ ಹೇಳಿಕೊಂಡರು. ಅಯೋಧ್ಯೆಗೆ ಹೊರಟಿದ್ದೇನೆ, ಉದ್ಘಾಟನೆಗೆ ತಲುಪುತ್ತೇನೋ ಇಲ್ಲವೋ ಗೊತ್ತಿಲ್ಲ, ಅಂತೂ ರಾಮನ ದರ್ಶನ ಮಾಡಿಯೇ ವಾಪಸ್ ಬರುವುದು ಎಂದು ಟಿವಿ9 ಎದುರು ತಮ್ಮ ಆಸೆಯನ್ನು ಹೇಳಿಕೊಂಡರು.

ಇದನ್ನೂ ಓದಿ: ಪ್ರಸ್ತುತ ಅಯೋಧ್ಯೆ ರಾಮ ಮಂದಿರದ ನಿರ್ಮಾಣ ಕಾರ್ಯ ಬಗ್ಗೆ ಫೋಟೋ ಹಂಚಿಕೊಂಡ ಬಿಜೆಪಿ

ಮಂಜುನಾಥ್ ಈ ಮೊದಲು ಕೂಡ ಅಯೋಧ್ಯೆಗೆ ಹೋಗಿದ್ದರು. ಆಗ ಅಲ್ಲಿ ಅವರ ಕನಸಿನ ರಾಮ ಇರಲಿಲ್ಲ. ಈಗ ಮತ್ತೆ ರಾಮ, ಹನುಮಾನ ಧ್ವಜ ಕಟ್ಟಿಕೊಂಡು ವ್ಹೀಲ್ ಚೇರ್​​ನಲ್ಲಿ ಉತ್ತರದತ್ತ ಮುಖ ಮಾಡಿದ್ದಾರೆ. ರಾಮಮಂದಿರಕ್ಕಾಗಿ ಕರಸೇವೆಯನ್ನು ಕೂಡ ಮಾಡಿದ್ದಾರಂತೆ. ಕೇವಲ ಅಯೋಧ್ಯೆ ಮಾತ್ರವಲ್ಲ ಈಗಾಗಲೇ ಮಥುರ, ಹರಿದ್ವಾರ, ಕಾಶಿ, ತಿರುಪತಿ ಸೇರಿದಂತೆ ದೇಶದ ಎಲ್ಲಾ ಸುಪ್ರಸಿದ್ಧ ಕ್ಷೇತ್ರಗಳಿಗೆ ಇವರು ಭೇಟಿ ಕೊಟ್ಟಿದ್ದಾರೆ.

ಬೈಕ್, ಸೈಕಲ್​ಗಳಲ್ಲಿ ದೇಶ ಸಂಚಾರ ನಡೆಸಿರುವ ಇವರು, ಕಾಲಿನ ಬಲ ಕಳೆದುಕೊಂಡ ನಂತರ ವೀಲ್ಹ್​ ಚೇರ್​ನಲ್ಲಿ ತೀರ್ಥಯಾತ್ರೆ ನಡೆಸುತ್ತಿದ್ದಾರೆ. ಕುಟುಂಬ ಸಂಸಾರ ಎಲ್ಲ ಇದ್ದರೂ ಬಾಲ್ಯದಲ್ಲೇ ಮಗನನ್ನು ಕಳೆದುಕೊಂಡಿರುವ ಮಂಜುನಾಥ್, ನೋವು ನುಂಗಿಕೊಂಡು ಬಿರು ಬಿಸಿಲನ್ನೂ ಲೆಕ್ಕಿಸದೆ ತನ್ನ ಗುರಿಯತ್ತ ವೇಗ ಹೆಚ್ಚಿಸಿಕೊಂಡಿದ್ದಾರೆ. ಹತ್ತಲಾಗದ ಬೆಟ್ಟಗಳು, ತಿಳಿಯಲಾಗದ ತಗ್ಗುಗಳು, ನಿರಂತರ ಸವಾಲೊಡ್ಡುತ್ತಿದ್ದರೂ ರಾಮ ಜಪಬಲದೊಂದಿಗೆ ಯಾತ್ರೆ ಮುಂದುವರೆಸಿದ್ದಾರೆ.

ಉಡುಪಿಗೆ ಬಂದ ಮಂಜುನಾಥ್ ರಥಬೀದಿಗೆ ಸುತ್ತು ಹಾಕಿ ಶ್ರೀ ಕೃಷ್ಣ ದರ್ಶನ ಮಾಡಿದರು. ಯಾರ ನೆರವನ್ನು ಯಾಚಿಸದೆ ಮುಂದುವರೆದಿರುವ ಇವರ ಸ್ವಾವಲಂಭಿ ಯಾತ್ರೆಗೆ ರಾಮ ಹನುಮರ ಅನುಗ್ರಹ ಸಿಗಲಿ ಅನ್ನೋದೆ ನಮ್ಮ ಆಶಯ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ