ಉಡುಪಿ: ಸತ್ಯವಾಯಿತು ದೈವದ ನುಡಿ, ಕೊಲೆ ಆರೋಪಿ ಶರಣಾಗತಿ

| Updated By: ವಿವೇಕ ಬಿರಾದಾರ

Updated on: May 29, 2024 | 1:57 PM

2023ರ ಫೆಬ್ರವರಿ 5 ರಂದು ಉಡುಪಿಯ ಕಾಪುವಿನ ಪಾಂಗಾಳದಲ್ಲಿ ಶರತ್ ಶೆಟ್ಟಿ ಎಂಬುವರನ್ನು ಆರೋಪಿ ಯೋಗೀಶ್ ಆಚಾರ್ಯ‌ ಎಂಬುವನು ಕೊಲೆ ಮಾಡಿ ಪರಾರಿಯಾಗಿದ್ದನು. ಕೊಲೆ ಆರೋಪಿಗಾಗಿ ಕೊಲೆಯಾದ ಶರತ್​ ಶೆಟ್ಟಿ ಕುಟುಂಬಸ್ಥರು ದೈವದ ಮೊರೆ ಹೋಗಿದ್ದರು. ಮುಂದೇನಾಯ್ತು ಈ ಸ್ಟೋರಿ ಓದಿ..

ಉಡುಪಿ: ಸತ್ಯವಾಯಿತು ದೈವದ ನುಡಿ, ಕೊಲೆ ಆರೋಪಿ ಶರಣಾಗತಿ
ಪಂಜುರ್ಲಿ ದೈವ, ಆರೋಪಿ ಯೋಗಿಶ್​ ಆಚಾರ್ಯ
Follow us on

ಉಡುಪಿ, ಮೇ 29: ಕೊಲೆ ಆರೋಪಿಯೊಬ್ಬ ಒಂದು ವರ್ಷದ ಬಳಿಕ ನ್ಯಾಯಾಲಯದಲ್ಲಿ (Court) ವಿಚಾರಣೆಗೆ ಹಾಜಾರಗಿದ್ದು, ಈ ಶರಣಾಗತಿಗೆ ದೈವದ ನುಡಿ ಕಾರಣ ಎಂಬ ಮಾತು ಕೇಳಿಬರುತ್ತಿವೆ. 2023ರ ಫೆಬ್ರವರಿ 5 ರಂದು ಉಡುಪಿಯ (Udupi) ಕಾಪುವಿನ ಪಾಂಗಾಳದಲ್ಲಿ ನಡೆಯುತ್ತಿದ್ದ ಕೋಲದಲ್ಲಿ ಶ್ರದ್ದಾಭಕ್ತಿಯಿಂದ ಊರವರು ಭಾಗವಹಿಸಿದ್ದರು. ಇತ್ತ ಹೆದ್ದಾರಿಯಲ್ಲೇ ಊರಿನ ಪ್ರಭಾವಿ ಯುವಕನನ್ನು ನಾಲ್ವರ ಗುಂಪೊಂದು ಡ್ಯಾಗರ್​ನಿಂದ ಇರಿದು ಹತ್ಯೆ ಮಾಡಿತ್ತು.

ಹೀಗೆ ಹತ್ಯೆಯಾದ ಯುವಕ ಶರತ್ ಶೆಟ್ಟಿ ಪಾಂಗಾಳ, ಕರಾವಳಿಯ ಭೂಗತ ಲೋಕ ಮತ್ತು ಪೊಲೀಸ್ ಇಲಾಖೆಯ ನಡುವಿನ ಸಂಪರ್ಕದ ಕೊಂಡಿಯಾಗಿದ್ದ ಎನ್ನಲಾಗಿದೆ. ಶರತ್‌ನ ಕೊಲೆಯ ಪ್ರಮುಖ ಆರೋಪಿ ಯೋಗಿಶ್ ಆಚಾರ್ಯ ಮೇ 23 ರಂದು ಉಡುಪಿಯ ಮೂರನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ಹಾಗೂ ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಗಳ ನ್ಯಾಯಾಲಯಕ್ಕೆ ತನ್ನ ವಕೀಲ ಕ್ಲಿಂಟನ್ ಡಿ.ಸಿಲ್ವ ಮೂಲಕ ಹಾಜರಾಗಿದ್ದಾನೆ. ನ್ಯಾಯಾಲಯವು 14 ದಿನಗಳ ನ್ಯಾಯಾಂಗ ಬಂಧನ ನೀಡಿದೆ. ಈತ ಒಂದು ವರುಷ ಮೂರು ತಿಂಗಳಿನಿಂದ ತಲೆಮರೆಸಿಕೊಂಡು ತಿರುಗಾಡುತ್ತಿದ್ದನು.

ಕಲಿ ಯೋಗಿಶ್ ಕೈವಾಡ

ಘಟನೆ ನಡೆದ ಸಂದರ್ಭದಲ್ಲಿ ಕಾಪು ವೃತ್ತ ನಿರೀಕ್ಷಕರಾಗಿದ್ದ ಪೂವಯ್ಯ, ನ್ಯಾಯಾಲಯಕ್ಕೆ ಸಲ್ಲಿಸಿರುವ ದೋಷಾರೋಪಣೆ ಪಟ್ಟಿಯಲ್ಲಿ ಕಲಿ ಯೋಗಿಶ್, ಶರತ್ ಶೆಟ್ಟಿ ಕೊಲೆಯ ರೂವಾರಿಯಾಗಿದ್ದು, ಯೋಗಿಶ್ ಆಚಾರ್ಯ, ದಿವೇಶ್, ಲಿಖಿತ್, ನಾಗರಾಜ್ ಕೊಲೆಗೈದಿದ್ದಾರೆ. ಆಕಾಶ್ ಕರ್ಕೇರಾ, ಮುಕೇಶ್, ಪ್ರಸನ್ನ ಶೆಟ್ಟಿ ಪಾಂಗಾಳ ಕೊಲೆಗೆ ಸಹಕರಿಸಿದ್ದರು ಎಂದು ಉಲ್ಲೇಖಿಸಿದ್ದಾರೆ.

ದೈವದ ಮೊರೆ ಹೋಗಿದ್ದ ಕುಟುಂಬಿಕರು

ಕೊಲೆ ನಡೆದ ಒಂದೂವರೆ ತಿಂಗಳ ಬಳಿಕ 2023 ಮಾರ್ಚ್ 24 ರಂದು ಪಾಂಗಾಳ ಶರತ್ ಶೆಟ್ಟಿಯ ಮನೆಯಲ್ಲಿ ಕುಟುಂಬಿಕರು ದೈವದ ನೇಮ ನಡೆಸಿದ್ದು, ತಲೆಮರೆಸಿಕೊಂಡಿದ್ದ ಆರೋಪಿಯ ಬಗ್ಗೆ ದೂರು ನೀಡಿ, ಅಳಲನ್ನು ತೋಡಿಕೊಂಡಿದ್ದರು. ದೈವವು ಕುಟುಂಬಕ್ಕೆ ಸೂಕ್ತ ನ್ಯಾಯ ದೊರಕಿಸಿಕೊಡುವ ಅಭಯವನ್ನು ನೀಡಿತ್ತು.

ಇದನ್ನೂ ಓದಿ: ಪ್ರೀತಿಸಿ ಮದುವೆಯಾಗಿದ್ದ ಹೆಂಡತಿ, ಕುಟುಂಬದಿಂದಲೇ ಕೊಲೆಗೆ ಯತ್ನ; ಪೊಲೀಸರ ಸಮಯ ಪ್ರಜ್ಞೆಯಿಂದ ಉಳಿತು ಜೀವ

ಕಾಪುವಿನ ಪಾಂಗಾಳದಲ್ಲಿ ನಡೆದ ಶರತ್ ಶೆಟ್ಟಿ ಹತ್ಯೆ ಪ್ರಮುಖ ಆರೋಪಿ ಯೋಗಿಶ್ ಆಚಾರ್ಯ ನ್ಯಾಯಾಲಯಕ್ಕೆ ಶರಣಾಗಿದ್ದಾನೆ. ಮುಂದಿನ ದಿನಗಳಲ್ಲಿ ಅವನನ್ನು ಪೋಲಿಸ್ ಕಸ್ಟಡಿಗೆ ಪಡೆದು ತನಿಖೆಯನ್ನು ಮುಂದುವರಿಸುತ್ತೇವೆ. ಪ್ರಕರಣ ನಡೆದ ಸಂದರ್ಭದಲ್ಲಿದ್ದ ಅಧಿಕಾರಿ ವರ್ಗಾವಣೆಯಾಗಿದ್ದರೆ, ಪ್ರಸ್ತುತ ಕಾಪುವಿನ ವೃತ್ತನೀರಿಕ್ಷಕಿ ತನಿಖಾಧಿಕಾರಿಯಾಗಿದ್ದಾರೆ. ಉಳಿದಂತೆ ಘಟನೆ ನಡೆದ ಸಂದರ್ಭದಲ್ಲಿದ್ದ ಅಧಿಕಾರಿಗಳನ್ನು ಜೋಡಿಸಿಕೊಂಡು ತನಿಖೆಯನ್ನು ಮುಂದುವರಿಸುತ್ತೇವೆ. ಆರೋಪಿಗೆ ತಲೆಮರೆಸಿಕೊಂಡಿರಲು ಸಹಾಯ ಮಾಡಿದವರನ್ನು ಪತ್ತೆಹಚ್ಚುತ್ತೇವೆ ಎಂದು ಉಡುಪಿ ಜಿಲ್ಲಾ ಎಸ್‌ಪಿ ಡಾ.ಅರುಣ್ ತಿಳಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 1:56 pm, Wed, 29 May 24