Udupi News: ಜಿಲ್ಲಾಸ್ಪತ್ರೆಯಲ್ಲಿ ಅಗತ್ಯ ಸೌಕರ್ಯಗಳಿಲ್ಲದೆ ಜನ ಕಂಗಾಲು; ಆಕ್ರೋಶಗೊಂಡ ರೋಗಿಗಳಿಂದ ಆಸ್ಪತ್ರೆಯ ಮುಂದೆ ಪ್ರತಿಭಟನೆ
ಉಡುಪಿ ಜಿಲ್ಲೆಯೆಂದು ಘೋಷಣೆಯಾಗಿ 25 ವರ್ಷ ಕಳೆದರೂ ಜಿಲ್ಲಾಸ್ಪತ್ರೆಯಲ್ಲಿ ಮಾತ್ರ ಸಮಸ್ಯೆಗಳ ಆಗರವಾಗಿದೆ. ಆರೋಗ್ಯ ಸಮಸ್ಯೆಯ ಸುಳಿಯಲ್ಲಿ ಸಿಲುಕಿರುವ ರೋಗಿಗಳ ಸಹನೆಯ ಕಟ್ಟೆ ನಿನ್ನೆ(ಮೇ.29) ಒಡೆದಿತ್ತು. ಅಕ್ರೋಶಗೊಂಡಿದ್ದ ರೋಗಿಗಳು ಆಸ್ಪತ್ರೆಯ ಎದುರು ದಿಕ್ಕಾರ ಕೂಗಿ ಪ್ರತಿಭಟನೆ ನಡೆಸಿದ್ರು.
ಉಡುಪಿ: ಜಿಲ್ಲಾಸ್ಪತ್ರೆಯಲ್ಲಿ ರೋಗಿಗಳ ನರಳಾಟ ಮುಂದುವರೆದಿದೆ. 25 ವರ್ಷಗಳ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯಿಂದ ಬೇರ್ಪಟ್ಟು ಉಡುಪಿ(Udupi) ಪ್ರತ್ಯೇಕ ಜಿಲ್ಲೆಯೆಂದು ಘೋಷಣೆಯಾಗಿದೆ. ತಾಲೂಕು ಆಸ್ಪತ್ರೆಯ ಬೋರ್ಡ್ ತೆಗೆದು ಜಿಲ್ಲಾಸ್ಪತ್ರೆ ಎಂದು ಬರೆಸಲಾಗಿತ್ತು. ಇವತ್ತಿಗೂ ಜಿಲ್ಲಾಸ್ಪತ್ರೆಯ ಸೌಕರ್ಯಗಳ ಮಟ್ಟ ಏರಿಕೆಯಾಗಿಲ್ಲ. ಸಾಕಷ್ಟು ದಿನಗಳಿಂದ ಅಧಿಕಾರಿಗಳ ಗಮನಕ್ಕೆ ತಂದರು ಸರಿಯಾದ ಉತ್ತರ ಸಿಗದ ಹಿನ್ನಲೆ, ನಿನ್ನೆ(ಮೇ.29) ಕಿಡ್ನಿ ಸಮಸ್ಯೆಯಿರುವ ರೋಗಿಗಳು ಜಿಲ್ಲಾಸ್ಪತ್ರೆ ಮುಂಭಾಗದಲ್ಲಿ ಅಸಮಾಧಾನ ವ್ಯಕ್ತಪಡಿಸಿ ಪ್ರತಿಭಟಿಸಿದರು.
ಕಳೆದ ಒಂದು ವರ್ಷದಿಂದ ಸಂಜೀವಿನಿ ಸಂಸ್ಥೆ ಗುತ್ತಿಗೆ ಪಡೆದು ಡಯಾಲಿಸಿಸ್ ಯಂತ್ರಗಳ ನಿರ್ವಹಣೆ ಮಾಡುತ್ತಿದೆ. ಈಗಿರುವ 10 ಡಯಾಲಿಸೀಸ್ ಯಂತ್ರದ ಪೈಕಿ ಆರು ಯಂತ್ರಗಳಲ್ಲಿ ಸಮಸ್ಯೆಯಿದೆ. ಒಂದು ವರ್ಷದಲ್ಲಿ 30ಕ್ಕೂ ಹೆಚ್ಚು ರೋಗಿಗಳು ಸಾವನ್ನಪ್ಪಿದ್ದಾರೆ. ಇಲ್ಲಿ ಚಿಕಿತ್ಸೆ ಸರಿಯಿಲ್ಲ ಎಂದು ಖಾಸಗಿ ಆಸ್ಪತ್ರೆಗೆ 20ಕ್ಕೂ ಹೆಚ್ಚು ರೋಗಿಗಳು ಬೇರೆ ಆಸ್ಪತ್ರೆಗೆ ಹೋಗಿದ್ದಾರೆ. ಡಯಾಲಿಸಿಸ್ ಯಂತ್ರ, ಕೆಮಿಕಲ್, ಎಸಿ, ಆಮ್ಲಕನಕ ಸಿಲಿಂಡರ್, ಸೂಕ್ತ ಚುಚ್ಚುಮದ್ದು, ರೆಫ್ರಿಜರೇಟರ್, ತಜ್ಞ ಸಿಬ್ಬಂದಿಯಿಲ್ಲದೆ ರೋಗಿಗಳು ಬೇಸತ್ತಿದ್ದಾರೆ.
ಇದನ್ನೂ ಓದಿ:Shivamogga News: ಮೆಗ್ಗಾನ್ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಒಳರೋಗಿ ಆಸ್ಪತ್ರೆ ಆವರಣದಲ್ಲಿ ಸಾವು
ಶಾಸಕ ಯಶ್ ಪಾಲ್ ಸುವರ್ಣ ಸ್ಥಳಕ್ಕೆ ಆಗಮಿಸಿ ವೈದ್ಯರ ಜೊತೆ ಸಭೆ ನಡೆಸಿ, ಡಯಾಲಿಸಿಸ್ ಕೇಂದ್ರಕ್ಕೆ ತೆರಳಿ ಪರಿಶೀಲನೆ ಮಾಡಿದ್ದಾರೆ. ಸಂಜೀವಿನಿ ಸಂಸ್ಥೆಯ ಬಗ್ಗೆ ತನಿಖೆ ನಡೆಸಲು ಜಿಲ್ಲಾಧಿಕಾರಿಗೆ ಸೂಚಿಸಿದ್ದಾರೆ. ಇನ್ನು ಈ ಹಿಂದೆ ಬಿ ಆರ್ ಶೆಟ್ಟಿ ಸಂಸ್ಥೆ, ರಾಜ್ಯದ ಎಲ್ಲಾ ಸರಕಾರಿ ಆಸ್ಪತ್ರೆಗಳಲ್ಲಿ ಡಯಾಲಿಸಿಸ್ ಕೇಂದ್ರಗಳ ನಿರ್ವಹಣೆ ಮಾಡುತ್ತಿತ್ತು. ಈಗಿರುವ ಸಂಜೀವಿನಿ ಸಂಸ್ಥೆ ಸಿಬ್ಬಂದಿಗಳಿಗೂ ಎರಡು ತಿಂಗಳಿಂದ ಸಂಬಳ ಕೊಟ್ಟಿಲ್ಲ ಎಂಬ ದೂರು ಕೇಳಿ ಬಂದಿದೆ. ಬಡ ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡುವುದು ಸರಕಾರದ ಜವಾಬ್ದಾರಿಯಾಗಿದ್ದು ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಬೇಕಾಗಿದೆ.
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ